ಉಡುಪಿ: ಡಿ.25ರಂದು ‘ಅಟಲ್ ಟ್ರೋಫಿ’ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

Update: 2021-12-11 13:03 GMT

ಉಡುಪಿ: ಬಿಜೆಪಿ ಉಡುಪಿ ನಗರ ಆಶ್ರಯದಲ್ಲಿ ಯುವ ಮೋರ್ಚಾ ಉಡುಪಿ ನಗರ ಮತ್ತು ವಾಲಿಬಾಲ್ ಫ್ರೆಂಡ್ಸ್ ಹನುಮಂತನಗರ ಇವುಗಳ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಅಟಲ್ ಟ್ರೋಫಿಯನ್ನು ನಿಟ್ಟೂರು ಸಿಲಾಸ್ ಇಂಟರ್ ನ್ಯಾಷನಲ್ ಶಾಲೆಯ ಮೈದಾನದಲ್ಲಿ ಡಿ.25ರಂದು ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ರಾತ್ರಿ 8ಗಂಟೆಗೆ ಪಂದ್ಯಕೂಟವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿರುವರು. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಭಾಗವಹಿಸಲಿರುವರು. ಪಂದ್ಯಾಕೂಟದಲ್ಲಿ ತೆಲಂಗಾಣ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಒಟ್ಟು 9 ಆಹ್ವಾನಿತ ತಂಡಗಳು ಭಾಗವಹಿಸಲಿವೆ ಎಂದರು.

ಪ್ರಥಮ ಬಹುಮಾನ 50ಸಾವಿರ ರೂ. ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 30ಸಾವಿರ ರೂ. ಹಾಗೂ ಟ್ರೋಫಿ, ತೃತೀಯ ಬಹುಮಾನ 15ಸಾವಿರ ರೂ. ಹಾಗೂ ಟ್ರೋಫಿ ನೀಡಲಾಗುವುದು. ಅದೇ ರೀತಿ ಮಹಿಳಾ ಮತ್ತು 22ರ ವಯೋಮಿತಿಯ ಜಿಲ್ಲಾ ಮಟ್ಟದ ವಾಲಿಬಾಲ್ ಪ್ರದರ್ಶನ ಪಂದ್ಯಗಳು ಆಹ್ವಾನಿತ ತಂಡಗಳ ನಡುವೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಮಂಜುನಾಥ್ ಮಣಿಪಾಲ್, ರೋಷನ್ ಶೆಟ್ಟಿ, ಸಂತೋಷ್ ಜತ್ತನ್, ದಿನೇಶ್ ಕುಂದರ್, ವಿಶ್ವನಾಥ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News