ಕುಂದಾಪುರ: ಫಿಡೆ ರೇಟೆಡ್ ಚೆಸ್ ಟೂರ್ನಿಗೆ ಚಾಲನೆ

Update: 2021-12-12 13:13 GMT

ಕುಂದಾಪುರ, ಡಿ.12: ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ, ಅಖಿಲ ಭಾರತ ಚೆಸ್ ಸಂಸ್ಥೆ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್ ಅಂಗವಾಗಿ ಕುಂದಾಪುರ ಹರಿಪ್ರಸಾದ್ ಹೊಟೇಲ್‌ನ ಆತಿಥ್ಯ ಸಭಾಗಂಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಅಖಿಲ ಭಾರತ ಟಾರ್ಪೆಡೊಸ್ ರಶ್ಮೀ ಶೆಟ್ಟಿ ಸ್ಮಾರಕ ಫಿಡೆ ರೇಟೆಡ್ ಚೆಸ್ ಟೂರ್ನಿಗೆ ಶನಿವಾರ ಚಾಲನೆ ನೀಡಲಾಯಿತು.

ಟೂರ್ನಿಯನ್ನು ಉದ್ಘಾಟಿಸಿದ ಚೆಸ್ ತಜ್ಞ, ಮುಂಬಯಿಯ ಡಿಜಿ ಫ್ಲಿಕ್ ಇನ್ಷುರೆನ್ಸ್ ನಿರ್ದೇಶಕ ರಂಜನ್ ನಾಗರಕಟ್ಟೆ ಮಾತನಾಡಿ, ವಿದ್ಯಾರ್ಥಿಗಳ ಬದುಕು ಕೇವಲ ಓದಿಗೆ ಮೀಸಲು ಆಗಬಾರದು. ಕ್ರೀಡೆಯಿಂದಲೂ ಜಾಗತಿಕ ಮಟ್ಟದಲ್ಲಿ ಮಿಂಚಬಹುದು ಮತ್ತು ಬದುಕನ್ನು ಕಟ್ಟಿಕೊಳ್ಳಬಹುದು. ಒಲಿಂಪಿಕ್ಸ್ ನಲ್ಲಿ ಭಾರತ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಾದರೆ ಪೋಷಕರು ಓದಿನ ಜತೆಯಲ್ಲಿ ತಮ್ಮ ಮಕ್ಕಳನ್ನು ಕ್ರೀಡೆಯಲ್ಲೂ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ವಸಂತ್ ಬಿ.ಎಚ್., ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಅಮಿತ್ ಕುಮಾರ್ ಶೆಟ್ಟಿ, ಟಾಟಾ ಎಕನಾಮಿಕ್ ಕನ್ಸಲ್ಟೆನ್ಸಿ ಸರ್ವಿಸಸ್‌ನ ಮಾಜಿ ಉಪಾಧ್ಯಕ್ಷ ರಮೇಶ್ ನಾಗಪ್ಪಶೆಟ್ಟಿ, ನಾಗರತ್ನ ನಾಗರಕಟ್ಟೆ, ರಾಷ್ಟ್ರೀಯ ಚೆಸ್ ತೀರ್ಪುಗಾರ ಬಾಬು ಪೂಜಾರಿ ಉಪಸ್ಥಿತರಿದ್ದರು.

ಮಂಗಳೂರಿನ ಅಂತಾರಾಷ್ಟ್ರೀಯ ಮಾಸ್ಟರ್ ವಿಯಾನಿ ಡಿಕುನಾ, ಅಂತಾ ರಾಷ್ಟ್ರೀಯ ತೀರ್ಪುಗಾರ ವಸಂತ್ ಬಿ.ಎಚ್., ವಿಶೇಷ ಚೇತನ ಚೆಸ್‌ಪಟು ಬಸ್ರೂರಿನ ಸಮರ್ಥ್ ಜೆ.ರಾವ್ ಅವರನ್ನು ಸನ್ಮಾನಿಸಲಾಯಿತು. ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾಂಕ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

ಟೂರ್ನಿಯಲ್ಲಿ ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ಡೆಲ್ಲಿ, ಹೈದರಾಬಾದ್ ಹಾಗೂ ಆತಿಥೇಯ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 268 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News