ಉಪ್ಪಿನಂಗಡಿ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಮಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Update: 2021-12-15 07:31 GMT

ಮಂಗಳೂರು, ಡಿ.15: ಮೂವರು ಪಿಎಫ್ ಐ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

 ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸಿರಾಜ್ ಮಂಗಳೂರು, ಉಪ್ಪಿನಂಗಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರ. ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ. ಹೀಗೆ ಮುಂದುವರಿದರೆ ರಾಜ್ಯದಲ್ಲಿ ಪೊಲೀಸರಿಂದಲೇ ಅವರ ನಡೆಯಿಂದಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದರು.

ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮಾತನಾಡಿ, ಜಿಲ್ಲೆಯ ಶಾಂತಿ ಕದಡಲು ಸಂಘ ಪರಿವಾರ ವಿದ್ಯಾರ್ಥಿಗಳನ್ನು ಉಪಯೋಗಿಸುತ್ತಿದೆ, ತ್ರಿಶೂಲ ವಿತರಣೆ ಮಾಡುತ್ತಿದೆ, ಬಹಿರಂಗವಾಗಿ ಜಿಲ್ಲಾಧಿಕಾರಿಗಳಿಗೆ, ಪೋಲಿಸ್ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರಾದರೂ ಚಲಾವಣೆಯಾಗದ ಲಾಠಿಗಳು, ಬೂಟುಗಳು ಇಂದು ಮುಸಲ್ಮಾನ ಶಾಂತಿಯತ ಪ್ರತಿಭಟನಾಕಾರರ ಮೇಲೆ ಪ್ರಯೋಗವಾಗಿದೆ. ಇದರ ಒಳಮರ್ಮ ಚೆನ್ನಾಗಿ ಜಿಲ್ಲೆಯ ಜನತೆಗೆ ಮನದಟ್ಟಾಗಿದೆ, ಇದಕ್ಕೆ ತಕ್ಕ ಉತ್ತರ ಜಿಲ್ಲೆಯ ಜನತೆ ನೀಡಲಿದ್ದಾರೆ ಎಂದರು.

ಜಿಲ್ಲಾ ನಾಯಕಿ ಅಶ್ಫಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು, ನಗರ ಕಾರ್ಯದರ್ಶಿ ಹಫೀಝ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಕಾರ್ಯದರ್ಶಿ ಸರ್ಫರಾಝ್, ಬಂಟ್ವಾಳ ಅಧ್ಯಕ್ಷ ಅಶ್ಫಕ್ ಉಪಸ್ಥಿತರಿದ್ದರು.

ಜಿಲ್ಲಾ ಮುಖಂಡ ಶಂಸುದ್ದೀನ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News