ಉಪ್ಪಿನಂಗಡಿಯಲ್ಲಿ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಸಿಎಫ್‌ಐ ಪ್ರತಿಭಟನೆ

Update: 2021-12-15 13:57 GMT

ಮಂಗಳೂರು, ಡಿ.15: ಉಪ್ಪಿನಂಗಡಿಯಲ್ಲಿ ಮಂಗಳವಾರ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಸಿಎಫ್‌ಐ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ನಗರದ ಕ್ಲಾಕ್‌ ಟವರ್ ಬಳಿ ಪ್ರತಿಭಟನೆ ನಡೆಯಿತು.

ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಸಿರಾಜ್ ಮಂಗಳೂರು ಮಾತನಾಡಿ 'ಉಪ್ಪಿನಂಗಡಿಯಲ್ಲಿ ಅಕ್ರಮವಾಗಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದ ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರದ ಘಟನೆಯು ಪೊಲೀಸ್ ರಾಜ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ ಪರಂಪರೆಗೆ ಕಪ್ಪುಚುಕ್ಕೆಯಾಗಿದೆ ಎಂದರು.

ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಮಾತನಾಡಿ ಜಿಲ್ಲೆಯ ಶಾಂತಿ ಕದಡಲು ಸಂಘಪರಿವಾರ ವಿದ್ಯಾರ್ಥಿಗಳನ್ನು ಉಪಯೋಗಿಸುತ್ತಿದೆ, ತ್ರಿಶೂಲ ವಿತರಣೆ ಮಾಡುತ್ತಿದೆ, ಬಹಿರಂಗವಾಗಿ ಜಿಲ್ಲಾಧಿಕಾರಿಗೆ, ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಆವಾಗ ಚಲಾವಣೆಯಾಗದ ಲಾಠಿ-ಬೂಟುಗಳು ಮುಸ್ಲಿಮರು ನಡೆಸುವ ಪ್ರತಿಭಟನೆಗಳ ಮೇಲೆ ಪ್ರಯೋಗವಾಗುತ್ತಿರುವುದು ಗಮನಾರ್ಹ ಎಂದರು.

ಜಿಲ್ಲಾ ನಾಯಕಿ ಅಶ್ಫಿ ಮಾತನಾಡಿದರು. ಈ ಸಂದರ್ಭ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯೆ ಮುರ್ಶಿದಾ ಮಂಗಳೂರು, ನಗರ ಕಾರ್ಯದರ್ಶಿ ಹಫೀಝ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಕಾರ್ಯದರ್ಶಿ ಸರ್ಫರಾಝ್, ಬಂಟ್ವಾಳ ಅಧ್ಯಕ್ಷ ಅಶ್ಫಕ್ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಶಂಸುದ್ದೀನ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News