ಗುರುತು ಪರಿಚಯದ ಪೊಲೀಸರೇ ದೌರ್ಜನ್ಯ ಎಸಗಿದರು: ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಅಳಲು

Update: 2021-12-15 17:31 GMT
ಫೈಲ್ ಫೋಟೊ

‘ಪ್ರತಿಭಟನಾಕಾರರನ್ನು ಚದುರಿಸುವ ಉದ್ದೇಶವಷ್ಟೇ ಇದ್ದಂತಿರಲಿಲ್ಲ’

ಮಂಗಳೂರು, ಡಿ.15: ‘‘ಪ್ರತಿಭಟನಾನಿರತ ಕಾರ್ಯಕರ್ತರನ್ನು ಚದುರಿಸುವ ಉದ್ದೇಶ ಪೊಲೀಸರಿಗೆ ಇದ್ದಂತಿರಲಿಲ್ಲ. ನಮಗೆ ಹೊಡೆದು ಅಶಾಂತಿ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಲಾಠಿ ಬೀಸಿ ಚದುರಿಸುವ ಬದಲು ತಲೆಯನ್ನೇ ಗುರಿಯಾಗಿಸಿಕೊಂಡು ಹೊಡೆದಿದ್ದಾರೆ. ಮೊಳೆ ಜೋಡಿಸಿಟ್ಟಿದ್ದ ಯಾವುದೋ ವಸ್ತುವಿನಿಂದ ಮತ್ತು ರೀಪುವಿನಿಂದಲೂ ಹಲ್ಲೆ ನಡೆಸಿದ್ದಾರೆ. ಬೂಟುಗಾಲಿನಿಂದಲೂ ತುಳಿದಿದ್ದಾರೆ. ಬ್ಯಾರಿಗಳಿಗೆ ಭಾರೀ ಅಹಂಕಾರ ಎಂದು ನಿಂದಿಸುತ್ತಿದ್ದರು. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದರು. ಹೀಗೆ ಹೊಡೆದು, ಬೈದು, ನಿಂದಿಸಿ, ತುಳಿದವರು ಅಪರಿಚಿತ ಪೊಲೀಸರಲ್ಲ. ಪರಿಚಿತರೇ ಆದ ನಾಗರಾಜ್, ಇರ್ಶಾದ್, ನಂದಕುಮಾರ್, ಬಸಪ್ಪ, ಪ್ರಸನ್ನ, ಉದಯ ಎಂಬವರು ದೌರ್ಜನ್ಯ ಎಸಗಿದ್ದಾರೆ..’’

ಇದು ಉಪ್ಪಿನಂಗಡಿ ಪೊಲೀಸ್ ಠಾಣೆಯೆದುರು ಮಂಗಳವಾರ ನಡೆದ ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಅಳಲು.

‘‘ನಾನು ಧರ್ಮಸ್ಥಳದಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದವ ದಾರಿಮಧ್ಯೆ ಉಪ್ಪಿನಂಗಡಿಯ ಮಸೀದಿಗೆ ಹೋಗಿದ್ದೆ. ನಮಾಝ್ ಮುಗಿಸಿ ಹೊರಗೆ ಬರುತ್ತಿದ್ದಂತೆ ಪೊಲೀಸರು ಲಾಠಿಯಿಂದ ತಲೆಗೆ ಬಲವಾಗಿ ಹೊಡೆದರು. ಬೂಟುಗಾಲಿನಿಂದ ತುಳಿದರು’’ ಎಂದು ಸುಳ್ಯದ ತಾಹಿರ್ ಅಳಲು ತೋಡಿಕೊಂಡಿದ್ದಾರೆ.

‘‘ನಮ್ಮ ನಾಯಕರನ್ನು ಅಕ್ರಮ ಬಂಧನದಲ್ಲಿಟ್ಟ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ನಮ್ಮನ್ನು ಚದುರಿಸುವ ನೆಪದಲ್ಲಿ ಲಾಠಿಯಿಂದ ತಲೆಯನ್ನು ಗುರಿಯಾಗಿಸಿಕೊಂಡು ಹೊಡೆದರು. ಒಬ್ಬೊಬ್ಬರಿಗೆ ಹತ್ತಾರು ಪೊಲೀಸರು ಹೊಡೆಯುತ್ತಿದ್ದರು. ರಕ್ತ ಸುರಿಯುತ್ತಿದ್ದರೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸದೆ ಪೊಲೀಸರು ದೌರ್ಜನ್ಯ ನಡೆಸುತ್ತಲೇ ಇದ್ದರು’’ ಎಂದು ಫಯಾಝ್ ದೊಡ್ಡಮನೆ ಆರೋಪಿಸಿದ್ದಾರೆ.

‘‘ಮೀನು ವ್ಯಾಪಾರಿಯಾದ ನಾನು ನೆಕ್ಕರೆಯಲ್ಲಿರುವ ನಾದಿನಿಯ ಮನೆಗೆ ಹೊರಟಿದ್ದೆ. ಉಪ್ಪಿನಂಗಡಿ ಮಸೀದಿಗೆ ತೆರಳಿ ಬರುವಾಗ ಪೊಲೀಸರು ‘ನೀನು ಮುಸ್ಲಿಂ ಅಲ್ವಾ? ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ’ ಎಂದು ಹೇಳಿ ಹಲ್ಲೆ ನಡೆಸಿದರು. ಹೊಡೆದ ಪೊಲೀಸರೆಲ್ಲಾ ಗುರುತು ಪರಿಚಯದವರೇ ಆಗಿದ್ದಾರೆ’’ ಎಂದು ಅಬೂಬಕರ್ ಸಿದ್ದೀಕ್ ಎಂಬವರು ದೂರಿದ್ದಾರೆ.

‘‘ಏಕಾಏಕಿ ಲಾಠಿಯಿಂದ ಹೊಡೆಯುತ್ತಾ ಬಂದ ಪೊಲೀಸರು ನಾನು ಕೆಳಗೆ ಬಿದ್ದರೂ ಮೇಲೇಳಲು ಅವಕಾಶ ನೀಡದೆ ಬೂಟುಗಾಲಿನಿಂದ ಹೊಡೆದರು’’ ಎಂದು ಇಮ್ರಾನ್ ಎಂಬವರು ಹೇಳಿದ್ದಾರೆ.

‘‘ಗುಜರಿ ವ್ಯಾಪಾರಿಯಾದ ನಾನು ಉಪ್ಪಿನಂಗಡಿಗೆ ಗುಜುರಿಗಾಗಿ ಹೋಗಿದ್ದೆ. ರಾತ್ರಿ ಸುಮಾರು 8:45ಕ್ಕೆ ಪೊಲೀಸರು ಲಾಠಿಯಿಂದ ಹೊಡೆಯುತ್ತಾ ಬಂದರು’’ ಎಂದು ಬೋಳಿಯಾರ್‌ನ ಅಶ್ರಫ್ ಎಂಬವರು ತಿಳಿಸಿದ್ದಾರೆ.

ಪೊಲೀಸರು ಲಾಠಿ ಮಾತ್ರವಲ್ಲ, ರೀಪಿನಿಂದಲೂ ಹೊಡೆದಿದ್ದಾರೆ. ಬ್ಯಾರಿಗಳಿಗೆ ಭಾರೀ ಅಹಂಕಾರ ಎಂದು ನಿಂದಿಸಿದರು ಎಂದು ಅಶ್ರಫ್ ಕಲ್ಲೇರಿ ದೂರಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News