ಚುನಾವಣೆ ಹತ್ತಿರವಾಗುತ್ತಿದ್ದಂತೆ ಧರ್ಮ, ಮತಾಂತರ ಹೆಸರಲ್ಲಿ ಕೋಮು ಸಂಘರ್ಷದ ಉರಿ ಹಚ್ಚುವ ಬಿಜೆಪಿ: ಬಿಪಿನ್ ಚಂದ್ರಪಾಲ್

Update: 2021-12-16 16:18 GMT

ಕಾರ್ಕಳ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ  ಧರ್ಮ, ಮತಾಂತರ, ಆಹಾರದ ಹೆಸರಲ್ಲಿ  ಕೋಮು ಸಂಘರ್ಷದ ಉರಿ ಹಚ್ಚಿ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ  ಹಳೆಯ ಛಾಳಿಯನ್ನು ಬಿಜೆಪಿ ಮತ್ತೆ ಮುನ್ನಲೆಗೆ ತರುವ ಹುನ್ನಾರ ಮಾಡುತ್ತಿದೆ.  ಈ ಬಗ್ಗೆ ಜನ ಜಾಗೃತರಾಗ ಬೇಕು‌. ಶಾಂತಿ ಸೌಹಾರ್ದತೆಯ ವಿಶ್ವಕುಟುಂಬ ಚಿಂತನೆ ಇಂದಿನ ಆಧ್ಯತೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಕಾರ್ಕಳ ತಿಳಿಸಿದರು.

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಆರ್ಥಿಕ ಮತ್ತು ಸಾಮಾಜಿಕ ಅರಾಜಕತೆ ಜನರ ನೆಮ್ಮದಿ ಕೆಡಿಸಿದೆ. 40 ಪರ್ಸೆಟ್ ಕಮಿಷನ್ ದಂದೆಯ ಆರೋಪ ಹೊತ್ತಿರುವ ಈ ಸರಕಾರ ಆಡಳಿತ ಯೋಗ್ಯವಲ್ಲ. ಇತ್ತೀಚೆಗೆ ಸರಕಾರದ ವಿವಿಧ  ಇಲಾಖೆಗಳ ಅಧಿಕಾರಿಗಳ ಮನೆಯ ಮೇಲೆ  ನಡೆದ ಎಸಿಬಿ ದಾಳಿಯ ವೇಳೆ 72 ಕೋಟಿಗೂ ಅಧಿಕ ಮೌಲ್ಯದ ಅನಧಿಕೃತ  ಆಸ್ಥಿ ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸುರಿದ ಅಕಾಲೀಕ ಮಳೆಯಿಂದ ಸುಮಾರು 6.50 ಲಕ್ಷ ಎಕ್ರೆ  ಪ್ರದೇಶದ ಬೆಳೆ ಹಾನಿಯಾಗಿದ್ದು ಸುಮಾರು 500 ಕೋ.ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಸರಕಾರ 130ಕೋ.ರೂ. ಪರಿಹಾರ ಧನ ಘೋಷಿಸುವ ನಾಟಕ ಮಾಡಿದೆಯೇ ಹೊರತು ಹಣ ಬಿಡುಗಡೆಯಾಗಿಲ್ಲ. ಖಜಾನೆಯಲ್ಲಿ  ಹಣದ ಕೊರತೆ, ಆಧಿಕಾರಿವರ್ಗದ ನಿರ್ಲಿಪ್ತತೆ, ಭೂದಾಖಲೆಗಳ ಕಾನೂನಾತ್ಮಕ ತೊಡಕುಗಳ ಕಾರಣವನ್ನು ಮುಂದಿಟ್ಟು ಯಾವೊಬ್ಬ ಸಂತೃಸ್ತ ರೈತನಿಗೂ ಪರಿಹಾರ ದೊರಕಿಲ್ಲ. ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲವಾಗಿರುವ  ಈ ಸರಕಾರವನ್ನು ಮಾನ್ಯ ರಾಜ್ಯಪಾಲರು ವಜಾಗೊಳಿಸಿ ಮಧ್ಯಂತರ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಪಿನ್ ಚಂದ್ರಪಾಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News