ಮುಲ್ಕಿಯಲ್ಲಿ ಉದ್ಯಮಿಯ ಕೊಲೆ ಪ್ರಕರಣ: ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣು

Update: 2021-12-16 17:00 GMT

ಮಂಗಳೂರು, ಡಿ.16: ಮುಲ್ಕಿಯ ಬ್ಯಾಂಕೊಂದರ ಮುಂದೆ ಜೂನ್ 5, 2020ರ ಹಾಡುಹಗಲೇ ಸುಳ್ಯ ಮೂಲದ ಉದ್ಯಮಿ ಅಬ್ದುಲ್ಲತೀಫ್‌ರ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಇತ್ತೀಚೆಗೆ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದರೆ, ಮೂವರು ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಪೊಲೀಸರಿಂದ ಬಂಧಿಸಲ್ಪಟ್ಟ ಮತ್ತು ನ್ಯಾಯಾಲಯಕ್ಕೆ ಶರಣಾದ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳಾದ ಉಲ್ಲಂಜೆ ನಿವಾಸಿ ಮುಹಮ್ಮದ್ ವಫಾ ಯಾನೆ ಮುಸ್ತಫಾನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರೆ, ಕಾರ್ನಾಡ್ ನಿವಾಸಿ ಮುಹಮ್ಮದ್ ರಾಝಿಮ್, ಬಪ್ಪನಾಡು ನಿವಾಸಿ ಮುಹಮ್ಮದ್ ಹಾಶಿಮ್, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕರ್ ಸಿದ್ದೀಕ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಆರೋಪಿಗಳಾದ ರಿಯಾಝ್ ಯಾನೆ ನಿಸಾರ್ ಎಂಬಾತ ಈಗಾಗಲೆ ನ್ಯಾಯಾಂಗ ಬಂಧನದಲ್ಲಿದ್ದರೆ, ಕಾಪಿಕಾಡ್‌ನ ಮಯ್ಯದ್ದಿ ಮತ್ತು ಪಕ್ಷಿಕೆರೆಯ ಬಶೀರ್ ಹುಸೈನ್ ತಲೆಮರೆಸಿಕೊಂಡಿದ್ದಾರೆ. ಕಾರ್ನಾಡಿನ ದಾವೂದ್ ಹಕೀಂ, ಮುಹಮ್ಮದ್ ಬಾವಾ ಯಾನೆ ಟಿಂಬರ್ ಬಾವ, ಪಕ್ಷಿಕೆರೆಯ ಮುಸ್ತಫಾರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸುವಂತೆ ಕೊಲೆಯಾದ ಅಬ್ದುಲ್ಲತೀಫ್‌ರ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಅದಿನ್ನೂ ವಿಚಾರಣೆಗೆ ಬಾಕಿ ಇದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಪೊಲೀಸರಿಂದ ಬಂಧಿಸಲ್ಟಟ್ಟಿದ್ದ ಆರೋಪಿಗಳಾದ ರಾಝಿಮ್, ಹಾಶಿಮ್, ಅಬೂಬಕರ್ ಸಿದ್ದೀಕ್, ಮುಹಮ್ಮದ್ ವಫಾ ಯಾನೆ ಮುಸ್ತಫಾ, ಮಯ್ಯದ್ದಿ, ಬಶೀರ್ ಹುಸೈನ್‌ರಿಗೆ ದ.ಕ. ಜಿಲ್ಲಾ ಮತ್ತು 6ನೆ ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಅದನ್ನು ನ್ಯಾಯವಾದಿ ಮುಬೀನಾ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳ ಜಾಮೀನನ್ನು ರದ್ದುಗೊಳಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲು ಆದೇಶಿಸಿದ್ದರು. ಅದರಂತೆ ಒಬ್ಬನ ಬಂಧನವಾಗಿದ್ದರೆ, ಮೂವರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಮಯ್ಯದ್ದಿ ಮತ್ತು ಬಶೀರ್ ಹುಸೈನ್‌ರನ್ನು ಮತ್ತೊಮ್ಮೆ ಬಂಧಿಸಲು ಪೊಲೀಸರು ಶೋಧ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News