ಉಪ್ಪಿನಂಗಡಿ ಅಶಾಂತಿ ಪ್ರಕರಣ; ಪಿಎಫ್‌ಐ, ಸಂಘ ಪರಿವಾರ, ಪೊಲೀಸ್ ಇಲಾಖೆ ಸಮಾನ ಹೊಣೆಗಾರರು: ಸಿಪಿಎಂ ಆರೋಪ

Update: 2021-12-18 11:46 GMT
ಫೈಲ್ ಫೋಟೊ

ಮಂಗಳೂರು : ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಇತ್ತೀಚೆಗೆ ನಡೆದ ಲಾಠಿಚಾರ್ಜ್ ಮತ್ತು ಅಶಾಂತಿಯ ಪ್ರಕರಣಗಳಿಗೆ ಸಂಘ ಪರಿವಾರ, ಪಿಎಫ್‌ಐ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.

ಈ ಸಂಘಟನೆಗಳು ಸಂಯೋಜಿಸಿ ನಿರ್ದೇಶಿಸುತ್ತಿರುವ ಮತೀಯ ಹುನ್ನಾರ ಮತ್ತು ಕೋಮು ಗಲಭೆಗೆ ವೇದಿಕೆ ನಿರ್ಮಿಸುವ ಪೂರ್ವ ಯೋಜಿತ ಕೃತ್ಯಗಳ ಮುಂದುವರಿದ ಭಾಗವೇ ಉಪ್ಪಿನಂಗಡಿ ಘಟನೆಯಾಗಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ, ಭಿನ್ನ ಧರ್ಮಿಯ ಸಹಭೋಜನ ಮತ್ತು ಸಹಕೂಟಗಳ ಮೇಲೆ ಗುಂಪು ಹಲ್ಲೆ, ಪರಸ್ಪರ ವ್ಯಾಪಾರ-ವ್ಯವಹಾರಗಳ ಮೇಲೆ ದಾಂಧಲೆ, ಲವ್ ಜಿಹಾದ್ ಕಟ್ಟುಕತೆಗಳು, ದನ ಕಳ್ಳತನ ಮತ್ತು ನಾಗಬನ ಧ್ವಂಸದ ಪ್ರಕರಣ ಹಾಗೂ ಪೂಜಾ ಸ್ಥಳಗಳ ಅಪವಿತ್ರ ಇತ್ಯಾದಿ ಸಮಾಜ ಬಾಹಿರ ಕೃತ್ಯಗಳು ಒಂದಾದ ಮೇಲೆ ಒಂದರಂತೆ ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ಇವುಗಳ ಹಿಂದೆ ಸಂಘ ಪರಿವಾರದ ಸಂಘಟನೆಗಳ ಸಿದ್ಧಾಂತ ಮತ್ತು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಅದಕ್ಕೆ ಪ್ರತಿಯಾಗಿ ಪಿಎಫ್‌ಐ ಸಿದ್ಧಾಂತದಿಂದ ಪ್ರಭಾವಿತರಾದ ಕಾರ್ಯಕರ್ತರು ಕ್ರಿಯೆಗೆ ಪ್ರತಿಕ್ರಿಯೆ ಎಂಬ ನೆಲೆಯಲ್ಲಿ ಸಕ್ರಿಯವಾಗಿ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿ ಕಾನೂನನ್ನು ಕೈಗೆತ್ತಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನನ್ನು ಎತ್ತಿ ಹಿಡಿದು ಕಾನೂನಿನನ್ವಯ ಕಾರ್ಯಪ್ರವೃತ್ತರಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಈ ಸಂಘಟನೆಗಳ ನಾಯಕರೊಂದಿಗೆ ಒಪ್ಪಂದ ನಡೆಸಿ ಅಪರಾಧಿಗಳನ್ನು ಹಸ್ತಾಂತರ ಮತ್ತು ಕೆಲವು ಘಟನೆಗಳಲ್ಲಿ ಅಪರಾಧಿಗಳ ಅದಲು ಬದಲಿನಂತಹ ಪರಸ್ಪರ ಸಂಯೋಜನೆಯನ್ನು ರೂಪಿಸುವ ಮೂಲಕ ಸಂಘ ಪರಿವಾರ ಮತ್ತು ಪಿಎಫ್‌ಐನಂತಹ ಸಮಾಜಬಾಹಿರ ಸಂಘಟನೆಗಳಿಗೆ ಕುಮ್ಮಕ್ಕು ನೀಡಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಆಪಾದಿಸಿದ್ದಾರೆ.

ಸಂಘ ಪರಿವಾರ ಹಾಗೂ ಪಿಎಫ್‌ಐ ಇತ್ತೀಚೆಗೆ ಪೊಲೀಸ್ ಠಾಣೆಗಳ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಭಜನೆ, ನಮಾಝ್ ನಂತಹ ಪವಿತ್ರ ಧಾರ್ಮಿಕ ಆಚರಣೆಗಳನ್ನು ಬಳಕೆ ಮಾಡಿರುವುದು ಸಮಾಜದಲ್ಲಿ ಮತೀಯ ಧ್ರುವೀಕರಣ ಮತ್ತಷ್ಟು ಆಳಗೊಳಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಇಂತಹ ಅಪಾಯಕಾರಿ ಬೆಳವಣಿಗೆಗಳನ್ನು ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೂದಿಮುಚ್ಚಿದ ಕೆಂಡದಂತಿರುವ ಕೋಮು ಉದ್ವಿಘ್ನತೆಯ ಸಮಯದಲ್ಲಿ ಎರಡು ತಿಂಗಳ ಹಿಂದೆ ನೀಡಿರುವ ಹೇಳಿಕೆಯು ಸಮಾಜ ಬಾಹಿರ ಕೃತ್ಯಗಳಲ್ಲಿರುವ ಸಂಘ ಪರಿವಾರದ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಮತ್ತು ಬಿಜೆಪಿ ಪಕ್ಷದ ಸಂಸದರು, ಶಾಸಕರು ಮತ್ತು ನಾಯಕರುಗಳು ಪೊಲೀಸ್ ಇಲಾಖೆಯ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಆಚರಣೆಯು ಸಂಘ ಪರಿವಾರದ ಡ್ರೆಸ್ ಕೋಡಿನೊಂದಿಗೆ ನಡೆದಿದೆ. ಇದನ್ನು ಬಲವಾಗಿ ಉನ್ನತ ಪೊಲೀಸರು ಬೆಂಬಲಿಸಿ ಪ್ರತಿಪಾದಿಸಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ.

ಕೊರೋನ ಸಾಂಕ್ರಮಿಕದಿಂದ ಮತ್ತು ಕೇಂದ್ರ, ರಾಜ್ಯ ಸರಕಾರದ ತಪ್ಪು ಆರ್ಥಿಕ ನೀತಿ, ಕೈಗಾರಿಕಾ ನೀತಿಯಿಂದ ವ್ಯಾಪಕ ಬಡತನ, ಹಸಿವು, ಬೆಲೆ ಏರಿಕೆ, ನಿರುದ್ಯೋಗದಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯರ ಮೇಲೆ, ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಸಂಘ ಪರಿವಾರದ ಸಂಘಟನೆಗಳು ಮತ್ತು ಪಿಎಫ್‌ಐ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯಲು ಕೋಮು ದ್ವೇಷದ ವಿಷ ಪ್ರಸರಿಸುತ್ತಿರುವುದು ಖಂಡನೀಯ ಎಂದು ಕೆ.ಯಾದವ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News