ಡಿ. 21 ರಿಂದ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ

Update: 2021-12-19 16:24 GMT

ಸುಳ್ಯ: ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನೂತನ ಶಿಲಾಮಯ ಗುಡಿಯಲ್ಲಿ ಶ್ರೀ ದುರ್ಗಾದೇವಿ ಪ್ರತಿಷ್ಠೆ ಮತ್ತು ಶ್ರೀ ಚೆನ್ನಕೇಶವ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಡಿ. 21 ರಿಂದ 26ರ ತನಕ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಡಾ.ಹರಪ್ರಸಾದ್ ತುದಿಯಡ್ಕ ತಿಳಿಸಿದ್ದಾರೆ.

ದೇವಸ್ಥಾನದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದದೊಂದಿಗೆ ವೇದಮೂರ್ತಿ ಆರೋತ್ ದಾಮೋದರ ತಂತ್ರಿಗಳ ನೇತೃತ್ವದಲ್ಲಿ 21 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಡಿ. 26 ರಂದು ಪೂ.10.15ರಿಂದ 10.45ರ ಕುಂಭ ಲಗ್ನ ಸುಮುಹೂರ್ತದಲ್ಲಿ ದುರ್ಗಾದೇವಿ ಪ್ರತಿಷ್ಠೆ, ಪರಿಕಲಶಾಭಿಷೇಕ ನಡೆಯಲಿದೆ. 11.15ರಿಂದ 1.25ರ ಮೀನಲಗ್ನ ಸುಮೂರ್ತದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಬಳಿಕ ಮಹಾಪೂಜೆ, ಶ್ರೀಭೂತಬಲಿ ನಡೆಯಲಿದೆ ಎಂದು ಅವರು ತಿಳಿಸಿದರು. ಡಿ.21ರಂದು ಬೆಳಿಗ್ಗೆ 10ಕ್ಕೆ ಉಗ್ರಾಣ ತುಂಬಿಸುವುದು. ಬೆಳಿಗ್ಗೆ 10ಕ್ಕೆ ವಿಷ್ಣು ಸರ್ಕಲ್ ಮತ್ತು ಶಾಸ್ತ್ರಿ ವೃತ್ತದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದೆ.

ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಡಿ.21 ರಂದು ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ವಹಿಸುವರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಡಿ.24ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಆಶೀರ್ವಚನ ನೀಡುವರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಬಿ. ರಮಾನಾಥ ರೈ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಂ ಭಟ್, ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬ್ರಹ್ಮಕಲಶಾಭಿಷೇಕದ ಪ್ರಯುಕ್ತ 21 ರಿಂದ 24 ರವರೆಗೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದೆ. 21 ರಂದು ರಾತ್ರಿ 8 ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ , 22 ರಂದು ಸಂಜೆ 6.30ಕ್ಕೆ ಯಕ್ಷಕಥಾಗಾನ, 8 ರಿಂದ ಸಂಗೀತ ಗಾನ ಸಂಭ್ರಮ, 23 ರಂದು ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ‘ಶುಕ್ರನಂದನೆ’, 24 ರಂದು ರಾತ್ರಿ 8 ರಿಂದ ತುಳು ನಾಟಕ ‘ಕುರೆಪಟ್’ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಎನ್.ಜಯಪ್ರಕಾಶ್ ರೈ, ಲಿಂಗಪ್ಪ ಗೌಡ ಕೇರ್ಪಳ, ಬ್ರಹ್ಮಕಲಶಾಭಿಷೇಕದ ಆರ್ಥಿಕ ಸಮಿತಿ ಸಂಚಾಲಕರಾದ ಶ್ರೀಕೃಷ್ಣ ಎಂ.ಎನ್, ದಾಮೋದರ ನಾರ್ಕೋಡು, ಸಭಾ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕ ಕೆ.ಟಿ.ವಿಶ್ವನಾಥ, ಪ್ರಚಾರ ಸಮಿತಿ ಸಂಚಾಲಕ ಗಂಗಾಧರ ಮಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News