ಉಡುಪಿ: ಇಬ್ಬರು ಹಿರಿಯರಲ್ಲಿ ಒಮೈಕ್ರಾನ್ ಸೋಂಕು ಪತ್ತೆ

Update: 2021-12-20 14:04 GMT

ಉಡುಪಿ, ಡಿ.20: ವಿಶ್ವದಾದ್ಯಂತ ಸಂಚಲನ ಉಂಟು ಮಾಡಿರುವ ಕೋವಿಡ್-19ರ ರೂಪಾಂತರಿತ ತಳಿ ಒಮೈಕ್ರಾನ್ ಉಡುಪಿಯ ವೃದ್ಧ ದಂಪತಿಗಳಲ್ಲಿ ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಉಡುಪಿ ನಗರ ವ್ಯಾಪ್ತಿಯ ನಿವಾಸಿಗಳಾದ 82 ವರ್ಷ ಪ್ರಾಯದ ಪುರುಷ ಹಾಗೂ 73 ವರ್ಷದ ಮಹಿಳೆಯೂ ಸೇರಿದಂತೆ ರಾಜ್ಯದ ಐದು ಮಂದಿಯಲ್ಲಿ ಒಮೈಕ್ರಾನ್ ಸೋಂಕು ಹೊಸದಾಗಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಕೆ. ಇಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.

ಉಡುಪಿಯ ಐವರು ಸದಸ್ಯರ ಕುಟುಂಬದಲ್ಲಿ ನಾಲ್ವರು ಕೋವಿಡ್‌ಗೆ ಪಾಸಿಟಿವ್ ಬಂದಿದ್ದು, ಇವರಲ್ಲಿ ಹಿರಿಯ ಇಬ್ಬರು ಸದಸ್ಯರಲ್ಲಿ ಒಮೈಕ್ರಾನ್ ಕಂಡುಬಂದಿದೆ. 11 ವರ್ಷದ ಬಾಲಕಿಯೂ ಸೇರಿದಂತೆ ಯಾರಲ್ಲೂ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಕುಟುಂಬದ 11 ವರ್ಷದ ಬಾಲಕಿ, ಶಾಲೆಗೆ ಹಾಜರಾಗಲು ತೆರಳುವ ಮುನ್ನ ಕೋವಿಡ್ ಪರೀಕ್ಷಾ ವರದಿಗಾಗಿ ನಗರದ ಖಾಸಗಿ ಆಸ್ಪತ್ರೆಗೆ ನ.26ರಂದು ತೆರಳಿದ್ದಾಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕಿತರಾದ ಮನೆಯಲ್ಲಿದ್ದ ಉಳಿದ ನಾಲ್ವರನ್ನು ನ.30ರಂದು ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಡಿ.2ರಂದು ಮೂವರ ವರದಿ ಪಾಸಿಟಿವ್ ಬಂದಿತ್ತು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಇವರಲ್ಲಿ ಕ್ಯಾನ್ಸರ್‌ನಿಂದ ಬಳಲುತಿದ್ದ ಮಹಿಳೆ ಸೇರಿದಂತೆ ಹಿರಿಯರಿಬ್ಬರ ಗಂಟಲು ದ್ರವದ ಮಾದರಿಯನ್ನು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿಗೆ ಕಳುಹಿಸಿದ್ದು, ಡಿ.19ರಂದು ಇವರಿಬ್ಬರಲ್ಲೂ ಒಮೈಕ್ರಾನ್ ಪತ್ತೆಯಾಗಿತ್ತು ಎಂದವರು ತಿಳಿಸಿದರು. ಆದರೆ ಇವರೂ ಸೇರಿದಂತೆ ಕುಟುಂಬದ ಯಾರಲ್ಲೂ ರೋಗ ಲಕ್ಷಣ ಕಂಡುಬಂದಿಲ್ಲ ಎಂದವರು ಹೇಳಿದರು.

ಒಮೈಕ್ರಾನ್ ವೈರಸ್ ಪತ್ತೆಯಾದ ಇಬ್ಬರೂ ಕಳೆದ ಮಾ.15ರಂದು ಮೊದಲ ಹಾಗೂ ಮೇ 8ರಂದು ಎರಡನೇ ಕೋವಿಶೀಲ್ಡ್ ಲಸಿಕೆಯನ್ನು ಸ್ವೀಕರಿಸಿದ್ದರು. ಹೀಗಾಗಿ ಒಮೈಕ್ರಾನ್ ವೈರಸ್ ಪತ್ತೆಯಾದರೂ ಇಬ್ಬರಲ್ಲೂ ರೋಗಲಕ್ಷಣ ಕಂಡು ಬಂದಿಲ್ಲ ಎಂದವರು ಅಭಿಪ್ರಾಯಪಟ್ಟರು.

2700 ಮಂದಿ ಪರೀಕ್ಷೆ: ಕುಟುಂಬದಲ್ಲಿ ನಾಲ್ವರಲ್ಲಿ ಪಾಸಿಟಿವ್ ಕಂಡುಬಂದ ತಕ್ಷಣ ಅವರ ಮನೆಯನ್ನು ಸೀಲ್‌ಡೌನ್ ಮಾಡಿ, ಆಸುಪಾಸಿನ 2700 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.

ಒಮೈಕ್ರಾನ್ ವೈರಸ್ ಪತ್ತೆಯಾದ ಇಬ್ಬರು ವೃದ್ಧರು ಸೇರಿದಂತೆ ಕುಟುಂಬದ ಯಾರಲ್ಲೂ ವಿದೇಶವೂ ಸೇರಿದಂತೆ ಇತ್ತೀಚೆಗೆ ಎಲ್ಲಿಗೂ ಪ್ರಯಾಣಿಸಿದ ಮಾಹಿತಿಗಳಿಲ್ಲ. ಹೀಗಾಗಿ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಒಮೈಕ್ರಾನ್ ಕುರಿತಂತೆ ಜನತೆಗೆ ಆತಂಕವಾಗಲೀ, ಭಯವಾಗಲೀ ಬೇಕಾಗಿಲ್ಲ. ಈ ತಳಿಯ ವೈರಸ್ ಮಾರಕವೇನಲ್ಲ. ಕೋವಿಡ್ ಲಸಿಕೆ ಪಡೆದವರ ಮೇಲೆ ಇದೂ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಅದು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಸಂಶೋಧನೆಗಳಿಂದ ಖಚಿತವಾಗಿದೆ. ಹೀಗಾಗಿ ಕೋವಿಡ್‌ಗೆ ಇರುವ ಎಲ್ಲಾ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸುವಂತೆ ಅವರು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮುಂತಾದವರು ಉಪಸ್ಥಿತರಿದ್ದರು.

167 ಸ್ಯಾಂಪಲ್‌ಗಳು ಬೆಂಗಳೂರಿಗೆ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದವರಲ್ಲಿ ಒಮೈಕ್ರಾನ್ ವೈರಸ್‌ನ ಪತ್ತೆಗಾಗಿ ರ್ಯಾಂಡಮ್ ಆಗಿ ಗಂಟಲು ದ್ರವ ಮಾದರಿಯ ಸ್ಯಾಂಪಲ್‌ಗಳನ್ನು ಜೆನೊಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತಿದ್ದು, ಜಿಲ್ಲೆಯಿಂದ ಈವರೆಗೆ ಒಟ್ಟು 167 ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದೆ.

ಇವುಗಳಲ್ಲಿ 33ರ ಪರೀಕ್ಷಾ ವರದಿ ಬಂದಿದ್ದು, ವೃದ್ಧ ದಂಪತಿಗಳಲ್ಲಿ ಮಾತ್ರ ಒಮೈಕ್ರಾನ್ ವೈರಸ್ ಪತ್ತೆಯಾಗಿದೆ. ಉಳಿದ 144 ಸ್ಯಾಂಪಲ್‌ಗಳ ವರದಿ ಇನ್ನಷ್ಟೇ ಬರಬೇಕಿದೆ ಎಂದು ಕೂರ್ಮಾರಾವ್ ತಿಳಿಸಿದರು.

ಪಾಸಿಟಿವ್ ಬಂದವರಲ್ಲಿ ವಿದೇಶ ಹಾಗೂ ಹೊರರಾಜ್ಯದ ಪ್ರಯಾಣದ ಇತಿಹಾಸ ಹೊಂದಿರುವವರ, ಹೈರಿಸ್ಕ್ ಪ್ರದೇಶದಿಂದ ಬಂದವರ ಹಾಗೂ ಇತರ ಮಾರ್ಗಸೂಚಿಗಳ ಆಧಾರದಲ್ಲಿ ನಿರ್ದಿಷ್ಟ ಮಾದರಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ ಎಂದವರು ಹೇಳಿದರು.

ವಿದೇಶ ಪ್ರಯಾಣದ ಮಾಹಿತಿ ಇಲ್ಲ

ಒಮೈಕ್ರಾನ್ ವೈರಸ್ ಪತ್ತೆಯಾಗಿರುವ ಇಬ್ಬರೂ ವಿದೇಶಕ್ಕೆ ಪ್ರಯಾಣಿಸಿದ ಮಾಹಿತಿ ಇಲ್ಲ. ಇತರ ಪ್ರಯಾಣದ ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಅವರಿಗೆ ಸೋಂಕಿನ ಮೂಲ ಹಾಗೂ ಇವರ ಪ್ರಾಥಮಿಕ ಹಾಗೂ ಇತರ ಸಂಪರ್ಕಿತರ ವಿವರ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News