ಬೆಳಗಾವಿ ಘರ್ಷಣೆ; ಮಾತುಕತೆಗೆ ಹಿರಿಯರ ಸಮಿತಿ ರಚನೆ: ಮಹೇಶ್ ಜೋಶಿ

Update: 2021-12-20 12:32 GMT
ಡಾ. ಮಹೇಶ್ ಜೋಶಿ

ಉಡುಪಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಕೃತ್ಯ ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಹೋಗುತ್ತಿದ್ದೇನೆ. ಸಂಘರ್ಷಕ್ಕಿಂತ ಸೌಹಾರ್ದತೆ ಮತ್ತು ಸಮನ್ವಯತೆ ಮೇಲೆ ನಂಬಿಕೆ ಇಟ್ಟುಕೊಂಡಿರುವುದರಿಂದ ಎರಡು ಕಡೆಯವರನ್ನು ಕರೆದು ಮಾತುಕತೆ ನಡೆಸಲು ಸಾಮರ್ಥ್ಯ ಇರುವ ಹಿರಿಯ ಸಮಿತಿಯನ್ನು ರಚಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಹಾಗೂ ಮರಾಠಿ ಭಾಷೆ ಬಲ್ಲ ನ್ಯಾಯಮೂರ್ತಿ ಎಸ್.ಆರ್.ಬನ್ನೂರು ಮಠ ಹಾಗೂ ಲೆಫ್ಟಿನೆಂಟ್ ಜನರಲ್ ರಮೇಶ್ ಸೇರಿದಂತೆ ಪ್ರಮುಖರ ಸಮಿತಿ ರಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಇದರ ಅರ್ಥ ಅವರು ಮಾಡಿರುವ ತಪ್ಪು ಒಪ್ಪಿಕೊಳ್ಳುತ್ತೇವೆ ಎಂದಲ್ಲ. ಮುಂದೆ ಇಂತಹ ಘಟನೆ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಈ ಬಗ್ಗೆ ಸರಕಾರದ ಮೇಲೂ ಒತ್ತಡ ತರಲಾಗುವುದು ಎಂದರು.

ಕಳೆದ ಐದು ವರ್ಷಗಳಲ್ಲಿ ಎಂಇಎಸ್‌ನವರು ಎರಡು ಬಾರಿ ಮಾತ್ರ ಗಲಾಟೆ ಮಾಡುತ್ತಾರೆ. ಒಂದು ರಾಜ್ಯೋತ್ಸವ ಮತ್ತೊಂದು ಬೆಳಗಾವಿ ಅಧಿವೇಶನದ ಸಮಯದಲ್ಲಿ. ಆದುದರಿಂದ ಆ ಸಂದರ್ಭದಲ್ಲಿ ಸರಕಾರ ಮುಂಜಾಗ್ರತೆ ತೆಗೆದುಕೊಂಡರೆ ಇದಕ್ಕೆಲ್ಲ ಕಡಿವಾಣ ಹಾಕಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಯಾವುದೇ ಒಬ್ಬ ಕನ್ನಡಿಗನ ಮೇಲೆ ಹಲ್ಲೆ ನಡೆದರೂ ಅದು ಇಡೀ ಕನ್ನಡಿಗರ ಮೇಲಿನ ಹಲ್ಲೆ ಎಂಬುದಾಗಿ ಭಾವಿಸಬೇಕಾಗಿದೆ. ನಮ್ಮ ಅಸ್ಮಿತೆ, ಧೈರ್ಯ ಹಾಗೂ ಸಂಸ್ಕೃತಿಯ ಸಂಕೇತವಾಗಿರುವ ಕನ್ನಡ ಭಾವುಟವನ್ನು ಸುಟ್ಟಿರುವುದು ಘೋರ ಅಪರಾಧವಾಗಿದೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದರು.

ಶಿವಾಜಿ ಮಹಾರಾಜರು ಮರಾಠಿಗಳಿಗೆ ಸೀಮಿತರಲ್ಲ. ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನ ಮಾಡಿರುವುದು ಸ್ವಾತಂತ್ರ ಹೋರಾಟಗಾರರಿಗೆ ಮಾಡಿ ರುವ ಅಗೌರವವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಮತ್ತು ಘೋರ ವಾಗಿ ಖಂಡಿಸಲೇ ಬೇಕು. ಮುಂದೆ ಇಂತಹ ಘಟನೆ ಎಂದಿಗೂ ನಡೆಯ ಬಾರದು. ಈ ನಿಟ್ಟಿನಲ್ಲಿ ಎಲ್ಲರನ್ನು ಸೇರಿಸಿ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.

‘ಸರಕಾರದ ಮೌನವನ್ನು ಸಹಿಸುವುದಿಲ್ಲ’

ಬೆಳಗಾವಿ ಘರ್ಷಣೆ ಹಿನ್ನೆಲೆಯಲ್ಲಿ ಸರಕಾರ ಇನ್ನು ಮುಂದೆ ಕಠಿಣವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸರಕಾರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಕೈಜೋಡಿಸುತ್ತದೆ. ಸರಕಾರದ ಕೈ ಬಲಪಡಿಸುವ ಕಾರ್ಯ ಮಾಡುತ್ತದೆ. ಆದರೆ ಸರಕಾರ ಮೌನ ವಹಿಸಬಾರದು. ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಡಾ.ಮಹೇಶ್ ಜೋಶಿ ತಿಳಿಸಿದರು.

ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಸಮಸ್ಯೆ ಪರಿಹಾರವಾಗ ಬೇಕಾದರೆ ಚಟು ವಟಿಕೆಯಿಂದ ಕೂಡಿದ ಸರಕಾರ ಇರಬೇಕು. ಸರಕಾರದ ಮೌನವನ್ನು ಸಹಿಸುವು ದಿಲ್ಲ. ಸಮಸ್ಯೆ ಉಂಟಾದ ಸಂದರ್ಭದಲ್ಲಿ ಸಮಸ್ಯೆಯನ್ನು ಬಗ್ಗೆ ಹರಿಸಬೇಕು. ಕಬ್ಬಿಣ ಕಾದಿರುವಾಗಲೇ ಹೊಡೆಯುವ ಕೆಲಸ ಆಗಬೇಕು. ಕನ್ನಡ, ಕನ್ನಡಿಗರಿಗೆ, ಕರ್ನಾಟಕಕ್ಕೆ ಯಾವುದೇ ರೀತಿ ಧಕ್ಕೆಯಾದರೆ ಕನ್ನಡ ಪರಿಷತ್ ಬೀದಿಗೆ ಇಳಿದು ಹೋರಾಟ ನಡೆಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News