ಉಡುಪಿ: ಅಣ್ಣಾಲು ಸರಕಾರಿ ಶಾಲೆಗೆ ಖಾಯಂ ಶಿಕ್ಷಕರೇ ಇಲ್ಲ !

Update: 2021-12-21 15:12 GMT

ಉಡುಪಿ, ಡಿ.21: ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದ 60 ಸಂವತ್ಸರ ಕಂಡ ಉಡುಪಿ ತಾಲೂಕಿನ ಪೆರ್ಡೂರು ಸಮೀಪದ ಬೈರಂಪಳ್ಳಿ ಗ್ರಾಪಂ ವ್ಯಾಪ್ತಿಯ ದೂಪದಕಟ್ಟೆ ಅಣ್ಣಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೀಗ ಖಾಯಂ ಶಿಕ್ಷಕರಿಲ್ಲದೆ ಸೊರಗುತ್ತಿದೆ.

ಹಳೆ ವಿದ್ಯಾರ್ಥಿ ಸಂಘ ಹಾಗೂ ವಾರ್ಷಿಕೋತ್ಸವ ಸಮಿತಿಯ ಪ್ರಯತ್ನದಿಂದ ಈ ಶಾಲೆಯಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿದ್ದರೂ ಸರಿಯಾದ ಶಿಕ್ಷಕರಿಲ್ಲದೆ ಇಲ್ಲಿನ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆತಂಕಿತರಾಗಿದ್ದು, ಮಕ್ಕಳ ಭವಿಷ್ಯದ ದೃಷ್ಠಿಯಿಂದ ಕೂಡಲೇ ಇಲ್ಲಿಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.

ಶಾಲೆಯ ಇತಿಹಾಸ: 1961ರಲ್ಲಿ ಮಂಜೂರಾದ ಈ ಶಾಲೆಯು ಆರಂಭದಲ್ಲಿ ಕಂದಲಬೆಟ್ಟುವಿನ ಉಪೇಂದ್ರ ಪೈ ಎಂಬವರ ಮನೆಯಲ್ಲಿ ಮೂರು ವರ್ಷಗಳ ಕಾಲ ತಾತ್ಕಾಲಿಕವಾಗಿ ಮುಂದುವರಿಯಿತು. ಬಳಿಕ ಅಣ್ಣಾಲು ಸರಕಾರಿ ಜಾಗದಲ್ಲಿ ತಲೆ ಎತ್ತಿದ ಈ ಶಾಲೆಯು ಇದೀಗ 60ನೇ ವರ್ಷಕ್ಕೆ ಕಾಲಿರಿಸಿದೆ.

ಸುಮಾರು 1.40 ಎಕರೆ ವಿಶಾಲ ಜಾಗದಲ್ಲಿರುವ ಈ ಶಾಲೆಯಲ್ಲಿ ಶೌಚಾ ಲಯ, ಸುಸಜ್ಜಿತ ಕಟ್ಟಡ, ವಿದ್ಯುತ್, ಭೋಜನ ಕೊಠಡಿ, ಬಾಲವನ, ಮೈದಾನ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿವೆ. ಸದ್ಯ ಈ ಶಾಲೆಗೆ ಸುತ್ತಮುತ್ತಲಿನ ಸುಮಾರು ನಾಲ್ಕು ಕಿ.ಮೀ. ವ್ಯಾಪ್ತಿಯ ವಜ್ಡೆ, ಅಣ್ಣಾಲು, ಕುತ್ಯಾರು ಗ್ರಾುಗಳಿಂದ ಮಕ್ಕಳು ಬರುತ್ತಿದ್ದಾರೆ.

ಶಾಲೆಯಲ್ಲಿ 29 ಮಕ್ಕಳು: ಸದ್ಯ ಈ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಐವರು, ಎರಡರಲ್ಲಿ ಎಂಟು, ಮೂರಲ್ಲಿ ನಾಲ್ಕು, ನಾಲ್ಕರಲ್ಲಿ ಆರು ಮತ್ತು ಐದನೇ ತರಗತಿಯಲ್ಲಿ ಆರು ಮಂದಿ ಮಕ್ಕಳು ಕಲಿಯುತ್ತಿದ್ದಾರೆ. ಅಲ್ಲೇ ಸಮೀಪ ಇರುವ ಅಂಗನವಾಡಿಯಲ್ಲಿ ಸುಮಾರು 24 ಮಂದಿ ಪುಟಾಣಿಗಳಿದ್ದಾರೆ.

ಈ ಶಾಲೆ ಬಿಟ್ಟರೆ ಮಕ್ಕಳು, ಇಲ್ಲಿಂದ ಸುಮಾರು 4ಕಿ.ಮೀ. ದೂರದಲ್ಲಿರುವ ದೂಪದಕಟ್ಟೆ ಅಥವಾ 4.5 ಕಿ.ಮೀ. ದೂರದಲ್ಲಿರುವ ಪೆರ್ಡೂರು ಸರಕಾರಿ ಶಾಲೆಗೆ ಹೋಗಬೇಕಾಗಿದೆ. ಈ ಪರಿಸರದಲ್ಲಿ ಬಹುತೇಕರು ಬಡವರಾಗಿದ್ದು, ತಮ್ಮ ಮಕ್ಕಳನ್ನು ದೂರದ ಶಾಲೆಗಳಿಗೆ ಕಳುಹಿಸಲು ಅಶಕ್ತರಾಗಿದ್ದಾರೆ. ಆದುದ ರಿಂದ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬುದು ಮಕ್ಕಳ ಪೋಷಕರ ಕಾಳಜಿ.

2 ವರ್ಷಗಳಿಂದ ಶಿಕ್ಷಕರಿಲ್ಲ: ಈ ಶಾಲೆಯಲ್ಲಿ ಎರಡು ಖಾಯಂ ಹುದ್ದೆ ಗಳಿದ್ದು, 2018ರಲ್ಲಿ ಈ ಶಾಲೆಯ ಖಾಯಂ ಶಿಕ್ಷಕರೊಬ್ಬರು ನಿವೃತ್ತಿಯಾದ ಬಳಿಕ ಶಿಕ್ಷಣ ಇಲಾಖೆ ಈವರೆಗೆ ಇಲ್ಲಿಗೆ ಖಾಯಂ ಶಿಕ್ಷಕನ್ನು ನೇಮಕ ಮಾಡಿಲ್ಲ.

ಇಲ್ಲಿಗೆ ನೇಮಕಗೊಂಡ ಖಾಯಂ ಶಿಕ್ಷಕಿಯೊಬ್ಬರು ಅನಾರೋಗ್ಯದ ಕಾರಣ ಮತ್ತು ನಿವೃತ್ತಿಗೆ ಒಂದೇ ವರ್ಷ ಇರುವುದರಿಂದ ಶಾಲೆ ಬರುತ್ತಿಲ್ಲ. ಬಳಿಕ ಗ್ರಾಮಸ್ಥರೇ ಸೇರಿ ಇಲ್ಲಿಗೆ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳಲಾಯಿತು. ಮೊದಲು ಇವರಿಗೆ ಗ್ರಾಪಂ ಉಪಾಧ್ಯಕ್ಷರು ಸಂಬಳ ನೀಡಿದರೆ, ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಬಳ ನೀಡಲಾಗುತ್ತಿದೆ.

ಅದೇ ರೀತಿ ಇತ್ತೀಚೆಗೆ ಅತಿಥಿ ಶಿಕ್ಷಕರನ್ನು ಸರಕಾರ ಇಲ್ಲಿಗೆ ನಿಯೋಜಿಸಿತು. ದೂರದ ಊರಿಂದ ಬರುವ ಈ ಶಿಕ್ಷಕಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಲಾಭಿವೃದ್ಧಿ ಹಾಗೂ ಮೇಲ್ತುವಾರಿ ಸಮಿತಿ ಅಧ್ಯಕ್ಷೆ ಶಕುಂತಳ ತಿಳಿಸಿದ್ದಾರೆ.

ಹೆಚ್ಚುವರಿ ಶಿಕ್ಷಕ ನೇಮಕ: ಈ ಹಿಂದೆ ಅಣ್ಣಾಲು ಶಾಲೆಗೆ ಶಿರೂರು ಕಲ್ಲಾಲ ಶಾಲೆಯ ಶಿಕ್ಷಕರೊಬ್ಬರನ್ನು ಹೆಚ್ಚುವರಿಯಾಗಿ ಇಲಾಖೆ ನೇಮಿಸಿತು. ಆದರೆ ಕೆಲವು ಸಮಯಗಳ ಹಿಂದೆ ಕಲ್ಲಾಲ ಶಾಲೆಯ ಮೂವರು ಶಿಕ್ಷಕರು ವರ್ಗಾ ವಣೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಅಲ್ಲೇ ಉಳಿಸಿಕೊಳ್ಳ ಬೇಕಾಯಿತು.

ಇದೀಗ ಈ ಶಾಲೆಗೆ ಬೆಳ್ಳರ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸುರೇಶ್ ನಾಯ್ಕಾ ಅವರನ್ನು ಹೆಚ್ಚುವರಿ ಶಿಕ್ಷಕರಾಗಿ ನೇಮಕ ಮಾಡ ಲಾಗಿದೆ. ಇವರು ವಾರದಲ್ಲಿ ಎರಡು ದಿನ ಆಗಮಿಸಿ ಪಾಠ ಮಾಡುತ್ತಿದ್ದಾರೆ. ಇವರನ್ನೇ ಇಲ್ಲಿ ಖಾಯಂ ಶಿಕ್ಷಕರಾಗಿ ಉಳಿಸಿಕೊಳ್ಳಬೇಕು ಎಂಬುದು ಪೋಷಕರ ಆಗ್ರಹವಾಗಿದೆ.

ಮಕ್ಕಳಿಗೆ ಬಾಂಡ್ ವ್ಯವಸ್ಥೆ

ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಮನಗಂಡ ಇಲ್ಲಿನ ಹಳೆವಿದ್ಯಾರ್ಥಿ ಸಂಘ ಹಾಗೂ ವಾರ್ಷಿಕೋತ್ಸವ ಸಮಿತಿಯವರು ಮಕ್ಕಳ ಹೆಸರಿನಲ್ಲಿ ಬಾಂಡ್ ವ್ಯವಸ್ಥೆಯನ್ನು ಈ ವರ್ಷದಿಂದ ಆರಂಭಿಸಿದ್ದಾರೆ.

ಈ ಶಾಲೆಗೆ ಸೇರ್ಪಡೆಗೊಂಡ ಒಂದನೇ ತರಗತಿಯ ಪ್ರತಿ ಮಕ್ಕಳ ಹೆಸರಿನಲ್ಲಿ ಮೂರು ಸಾವಿರ ರೂ. ಠೇವಣಿ ಇಡಲಾಗುತ್ತದೆ. ಆ ಹಣ ಅವರಿಗೆ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ ಪಿಯುಸಿಗೆ ತೆರಳುವ ಸಂದರ್ಭದಲ್ಲಿ 5000ರೂ.ನಂತೆ ದೊರೆಯುತ್ತದೆ. ಇದರ ಪರಿಣಾಮ ಈ ವರ್ಷ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಕೃಷ್ಣ ಕುಲಾಲ್.

''ನಮ್ಮ ಶಾಲೆಗೆ ಖಾಯಂ ಶಿಕ್ಷಕರಿಲ್ಲದೆ ಸರಿಯಾದ ಪಾಠಗಳು ನಡೆಯುತ್ತಿಲ್ಲ. ಈ ಶಾಲೆ ಬಿಟ್ಟರೆ ಬೇರೆ ಶಾಲೆ ದೂರದಲ್ಲಿದೆ. ಅಲ್ಲಿಗೆ ಕಾಲುದಾರಿಯಲ್ಲಿ ಹೋಗ ಬೇಕು. ಆದುದರಿಂದ ನಮಗೆ ಸರಿಯಾದ ಶಿಕ್ಷಣ ಪಡೆಯಲು ಕೂಡಲೇ ಖಾಯಂ ಶಿಕ್ಷಕರನ್ನು ನೇಮಿಸಬೇಕು''.

-ಸೌಪರ್ಣಿಕ, ಶ್ರೀಯಾನ್, ಸೃಜನ್, 4ನೆ ತರಗತಿಯ ವಿದ್ಯಾರ್ಥಿಗಳು

''ಗ್ರಾಮೀಣ ಪ್ರದೇಶದ ಶಾಲೆಗಳ ಬಗ್ಗೆ ಇಲಾಖಾಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ಪೋಷಕರ ಆತಂಕ ಅವರಿಗೆ ಅರ್ಥವಾಗುತ್ತಿಲ್ಲ. ಸರಿಯಾದ ಶಿಕ್ಷಕರಿಲ್ಲದೆ ಮಕ್ಕಳ ನಿರಂತರ ಕಲಿಕೆಗೆ ಸಮಸ್ಯೆಯಾಗುತ್ತಿದೆ. ದೂರದ ಶಾಲೆಗೆ ಹೋಗಲು ವಾಹನದ ವ್ಯವಸ್ಥೆ ಇಲ್ಲ. ಖಾಸಗಿ ಶಾಲೆಗಳಿಗೆ ಕಳುಹಿಸಲು ನಮ್ಮಲ್ಲಿ ಹಣಕಾಸು ಇಲ್ಲ. ಇಲ್ಲಿ ಬಹುತೇಕ ಬಡವರ ಮಕ್ಕಳೇ ಕಲಿಯುತ್ತಿದ್ದಾರೆ.

-ಸುಪ್ರಿಯಾ ಕುಲಾಲ್, ಪೋಷಕರು

''ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆ ಸುತ್ತಮುತ್ತಲಿನ ಮಕ್ಕಳಿಗೆ ಅಗತ್ಯವಾಗಿದೆ. ಇಲ್ಲಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಇಲಾಖಾಧಿಕಾರಿ ಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಕೇವಲ ಮತ ಕೇಳಲು ಬರುವುದಲ್ಲ, ಶಾಲೆಯ ಬಗ್ಗೆಯೂ ಕಾಳಜಿ ವಹಿಸಬೇಕು''.

- ಶ್ರೀನಿವಾಸ ಪೈ, ಗ್ರಾಮಸ್ಥರು

''ಅಣ್ಣಾಲು ಶಾಲೆಗೆ ಶಿಕ್ಷಕರ ಕೊರತೆ ಇಲ್ಲ. ಇಲ್ಲಿಗೆ ಖಾಯಂ ಶಿಕ್ಷಕರೊಬ್ಬರನ್ನು ನೇಮಿಸಲಾಗಿತ್ತು. ಆದರೆ ಅವರು ಅನಾರೋಗ್ಯದ ಕಾರಣ ಶಾಲೆಗೆ ಬರುತ್ತಿಲ್ಲ. ಆದುದರಿಂದ ಈ ಬಗ್ಗೆ ಕೂಡಲೇ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗುವುದು''.
-ಎನ್.ಎಚ್.ನಾಗೂರ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News