ಅತಿಥಿ ಉಪನ್ಯಾಸಕರ ಸೇವೆ ವಿಲೀನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

Update: 2021-12-22 14:19 GMT

ಉಡುಪಿ, ಡಿ.22: ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸುವಂತೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿ ಉಡುಪಿ ಜಿಲ್ಲಾ ಘಟಕ ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾಧ್ಯಕ್ಷೆ ಡಾ.ಶಾಹಿದಾ ಜಹಾನ್, ಕರ್ನಾಟಕ ನಾಗರಿಕ ಸೇವೆ 1(3)(2) ಮತ್ತು ನಿಯಮ 14ರ ಅಡಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಾತ್ಕಾಲಿಕ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸಬೇಕು. ಈ ವಿಚಾರವನ್ನು ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರ ಸೇವಾ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಿಯಮ ಬಾಹಿರ 2021ರ ಸಹಾಯಕ ಪ್ರಾಧ್ಯಪಕರ ನೇಮಕಾತಿ ಅಧಿಸೂಚನೆ ಯನ್ನು ತಡೆಹಿಡಿಯಬೇಕೆಂದು ಅವರು ಆಗ್ರಹಿಸಿದರು.

ಒಕ್ಕೂಟದ ಪ್ರಮುಖ ಮಣಿಕಂಠ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಒಟ್ಟು 552 ಅತಿಥಿ ಉಪನ್ಯಾಸಕರು ವಿವಿಧ ಕಾಲೇಜುಗಳಲ್ಲಿ ದುಡಿಯುತ್ತಿದ್ದಾರೆ. ಈ ಬೇಡಿಕೆ ಈಡೇರಿಸುವಂತೆ ಕಳೆದ 15 ದಿನಗಳಿಂದ ಯಾರು ಕೂಡ ತರಗತಿಗೆ ಹೋಗದೆ ಮುಷ್ಕರ ನಡೆಸುತ್ತಿದ್ದಾರೆ. ಮುಂದೆ ಆಯಾ ಕಾಲೇಜುಗಳ ಎದುರು ಧರಣಿ ನಡೆಸಲಾಗುವುದು. ಕೇವಲ ಬಾಯಿ ಮಾತಿನಲ್ಲಿ ಅಲ್ಲ, ಲಿಖಿತ ರೂಪದಲ್ಲಿ ಭರವಸೆ ನೀಡುವವರೆಗೆ ಹೋರಾಟ ಮುಂದು ವರೆಸಲಾಗುವುದು ಎಂದು ತಿಳಿಸಿದರು.

ಆರು ದಿನಗಳಲ್ಲಿ ಕೇವಲ ಮೂರು ದಿನಗಳ ಕಾಲ ಮಾತ್ರ ಕೆಲಸ ನೀಡುವ ಮೂಲಕ ಆರು ತಿಂಗಳಿಗೆ 11ಸಾವಿರ ರೂ. ಸಂಬಳ ನೀಡಲಾಗುತ್ತದೆ. ಈ ಮೂಲಕ ಅತಿಥಿ ಉಪನ್ಯಾಸಕರನ್ನು ಸರಕಾರ ಅಡ್ಡ ಕತ್ತರಿಯಲ್ಲಿರಿಸಿದೆ. ಕಳೆದ ಆಗಷ್ಟ್ ತಿಂಗಳಿಂದ ಯಾವುದೇ ಅತಿಥಿ ಉಪನ್ಯಾಸಕನಿಗೆ ಸಂಬಳ ಆಗಿಲ್ಲ. ವೇತನ ರಹಿತ ಹೆರಿಗೆ ರಜೆಯನ್ನು ನೀಡಲಾಗುತ್ತದೆ. ಬೇರೆ ಸಮಯದಲ್ಲಿ ರಜೆ ಕೇಳಿದರೆ ಕೊಡುತ್ತಿಲ್ಲ. ಫಿಎಫ್, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳು ನಮಗೆ ಇಲ್ಲ. ಮಕ್ಕಳ ಭವಿಷ್ಯ ರೂಪಿಸುವ ನಮಗೆಯೇ ಭವಿಷ್ಯ ಇಲ್ಲವಾಗಿದೆ ಎಂದು ಅವರು ದೂರಿದರು.

ಬಳಿಕ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಕಾರ್ಯದರ್ಶಿ ಡಾ.ಸುಬ್ರಮಣಿ, ಸಿಐಟಿಯು ಮುಖಂಡರಾದ ಶಶಿಧರ್ ಗೊಲ್ಲ, ಕವಿರಾಜ್, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಿರುದ್ಯೋಗ ಸೃಷ್ಠಿ!

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಾಮರ್ಸ್ ವಿಭಾಗದ ಅರ್ಥಶಾಸ್ತ್ರ ವನ್ನು ತೆಗೆದುಹಾಕಲಾಗಿದೆ. ಇದರಿಂದ ಅರ್ಥಶಾಸ್ತ್ರ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಆರ್ಥಿಕತೆಯ ಜ್ಞಾನ ಇಲ್ಲದಂತೆ ಮಾಡಲಾಗು ತ್ತದೆ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದರು.

ಅದೇ ರೀತಿ ಕನ್ನಡವನ್ನು ಕಡ್ಡಾಯಗೊಳಿಸಿ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಯ ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಎಲ್ಲರು ಇಂಗ್ಲಿಷ್ ಭಾಷೆಯನ್ನೇ ಆಯ್ಕೆ ಮಾಡುವುದರಿಂದ ಹಿಂದಿ, ಸಂಸ್ಕೃತಕ್ಕೆ ವಿದ್ಯಾರ್ಥಿಗಳು ಇಲ್ಲ ದಂತಾಗಿದೆ. ಆದುದರಿಂದ ಆ ಭಾಷಾ ಉಪನ್ಯಾಸಕರು ಕೂಡ ಕೆಲಸ ಕಳೆದು ಕೊಳ್ಳಬೇಕಾಗಿದೆ. ಸರಕಾರ ಉದ್ಯೋಗ ಸೃಷ್ಠಿ ಮಾಡುವ ಬದಲು ಹೆಚ್ಚು ಹೆಚ್ಚು ನಿರುದ್ಯೋಗಿಗಳನ್ನು ಸೃಷ್ಠಿ ಸುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News