ಗಮಕ ಎಂಬುದು ಅತೀ ಪ್ರಾಚೀನ ಕಲೆ: ಗಣೇಶ್ ಉಡುಪ

Update: 2021-12-22 14:30 GMT

ಕುಂದಾಪುರ, ಡಿ.22: ಗಮಕ ಎಂಬುದು ಅತೀ ಪ್ರಾಚೀನ ಕಲೆ. ಕವಿ ರಚಿತ ಕಾವ್ಯಗಳು ಸಾಹಿತ್ಯದ ಅರ್ಥ ಕೆಡದಂತೆ ಪದ ವಿಂಗಡನೆ ಮಾಡಿ ರಾಗ - ಭಾವ, ಪದ -ಭಾವ ಸಮನ್ವಯಗೊಳಿಸಿ ಸಂಗೀತದ ವಿವಿಧ ರಾಗಗಳನ್ನು ಅಳವಡಿಸಿ ಹಾಡುವ ಕ್ರಮವೇ ಗಮಕ ಎಂದು ಹಾಸನ ಜಿಲ್ಲೆಯ ಗಮಕಕಲಾ ಪರಿಷತ್ತಿನ ಅಧ್ಯಕ್ಷ ಕರ್ನಾಟಕ ಕಲಾಶ್ರೀ ಗಣೇಶ ಉಡುಪ ಹೇಳಿದ್ದಾರೆ.

ಬಿದ್ಕಲ್ಕಟ್ಟೆಯ ಕರ್ನಾಟಕ ಪ್ರೌಢ ಶಾಲೆಯ ಪಬ್ಲಿಕ್ ಸ್ಕೂಲ್‌ನಲ್ಲಿ ಗಮಕ ಕಲಾ ಪರಿಷತ್ತು 66ನೇ ರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಡಿ.20 ರಂದು ಆಯೋಜಿಸಲಾದ ಪಠ್ಯಾಧಾರಿತ ಗಮಕವಾಚನ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ಕವಿ, ಗಮಕಿ, ವಾದಿ, ವಾಗ್ಮಿ ಇವರುಗಳು ಸಾಹಿತ್ಯ ಚತರ್ಮುಖಿರೆಂದೇ ಪ್ರತೀತಿ. ಕವಿಗೆ ಮೊದಲ ಸ್ಥಾನವಾದರೆ ಗಮಕಿಗೆ ಎರಡನೇ ಸ್ಥಾನ. ರಸ ಭಾವ ಗಳಿಗೆ ಅನುಗುಣವಾಗಿ ರಾಗಗಳು ಸೇರಿದರೆ ಸಾಹಿತ್ಯದ ಮೌಲ್ಯ ಹೆಚ್ಚುತ್ತದೆ ಮತ್ತು ಹೃದಯಕ್ಕೆ ಹತ್ತಿರವಾಗುತ್ತದೆ. ಗಮಕ ಕಲೆ ಉಳಿದು ಬೆಳೆಯುವುದಕ್ಕೆ ಶಾಲಾ ಕಾಲೇಜುಗಳಲ್ಲಿ ಗಮಕ ಕಲೆಯ ಅಧ್ಯಯನ ಯಶಸ್ಸಿನ ಮೆಟ್ಟಿಲು ಎಂದು ಅವರು ತಿಳಿಸಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸ್ಕೂಲ್‌ನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ವಿಘ್ನೇಶ್ವರ ಭಟ್ ವಹಿಸಿದ್ದರು. ಕುಂದಾಪುರ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಗಮಕಿ ಸುಜಯೀಂದ್ರ ಹಂದೆ ಶುಭ ಹಾರೈಸಿದರು.

ಉಪ ಪ್ರಾಂಶುಪಾಲ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಸುಜಾತ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಶಿಕ್ಷಕಿ ಭಗವತಿ ವಂದಿಸಿದರು. ಅಧ್ಯಾಪಕ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಸಿದರು. ಈ ಸಂದರ್ಭದಲ್ಲಿ 8, 9, 10 ನೇ ತರಗತಿಗಳ ಕನ್ನಡ ಪಠ್ಯ ಭಾಗದ ಹಳೆಗನ್ನಡ ನಡುಗನ್ನಡಗಳ ಕಾವ್ಯ ಭಾಗಗಳ ಗಮಕ ವಾಚನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News