​ಕುಂದಾಪುರ ರೈಲು ನಿಲ್ದಾಣದಲ್ಲಿ ಪಿಆರ್‌ಎಸ್ ಟಿಕೇಟ್ ಬುಕ್ಕಿಂಗ್ ಸೌಲಭ್ಯ

Update: 2021-12-24 14:00 GMT

ಉಡುಪಿ: ಕುಂದಾಪುರದ ಮೂಡ್ಲಕಟ್ಟೆಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಪಿಆರ್‌ಎಸ್ ಟಿಕೇಟ್ ಸೌಲಭ್ಯ ಬೇಕೆಂಬ ಸುದೀರ್ಘ ಕಾಲದ ಸಾರ್ವಜನಿಕರ ಬೇಡಿಕೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ.

ಈ ಕುರಿತು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನಡೆಸಿದ ಪ್ರಯತ್ನ ಸಫಲವಾಗಿದ್ದು, ಸಚಿವರ ಮನವಿಯ ಮೇರೆಗೆ ಹೆಚ್ಚುವರಿಯಾಗಿ ಕುಂದಾಪುರ ನಿಲ್ದಾಣದಲ್ಲಿಯೇ ಹೊಸ ಪಿಆರ್‌ಎಸ್ ವ್ಯವಸ್ಥೆ ಪ್ರಾರಂಭಿಸಲು ರೈಲ್ವೇ ಮಂಡಳಿ ಕೊಂಕಣ ರೈಲ್ವೆಗೆ ಸೂಚನೆ ನೀಡಿದೆ.

ಪ್ರಸ್ತುತ ಕುಂದಾಪುರ ಪೋಸ್ಟ್ ಆಫೀಸ್‌ನಲ್ಲಿರುವ ಪಿಆರ್‌ಎಸ್‌ನ ತಾಂತ್ರಿಕ ಸಮಸ್ಯೆಗಳು, ರಜಾ ದಿನಗಳ ಅಲಭ್ಯತೆ, ಇತರ ಟಿಕೇಟ್ ಸಂಬಂಧಿ ಕೆಲಸಗಳಾದ ರದ್ದತಿ, ಬದಲಾವಣೆ ಇತ್ಯಾದಿ ಚಟುವಟಿಕೆಗಳ ಕೊರತೆ ನೀಗಿಸಲು ರೈಲ್ವೆ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದರು.

ಉದ್ಯೋಗ ಹಾಗು ಉದ್ಯಮದ ಕೆಲಸಗಳಿಗೆ ಮಹಾರಾಷ್ಟ್ರ, ಗೋವಾ ರಾಜ್ಯ ಗಳಿಗೆ ತೆರಳುವ ಪ್ರಯಾಣಿಕರ ಜೊತೆಗೆ ಕೊಲ್ಲೂರು, ಆನೆಗುಡ್ಡೆ, ಮಾರಣಕಟ್ಟೆ ಯಂಛ ಪ್ರಸಿದ್ದ ತೀರ್ಥಕ್ಷೇತ್ರಗಳಿಗೆ ಹತ್ತಿರದ ಕುಂದಾಪುರ ರೈಲು ನಿಲ್ದಾಣಕ್ಕೆ ಬರುವ ದೂರ ಪ್ರಯಾಣಿಕರಿಗೂ ವಾರದ ಎಲ್ಲಾ ದಿನ ಟಿಕೇಟ್ ರೈಲ್ವೆ ನಿಲ್ದಾಣದಲ್ಲಿಯೇ ಸಿಗಬೇಕಾದ ಅನಿವಾರ್ಯತೆ ಇತ್ತು.

ಇದರ ಜೊತೆಗೆ ಪಿಆರ್‌ಎಸ್ ಬಂದರೆ, ರೈಲ್ವೆ ನಿಲ್ದಾಣದಲ್ಲಿಯೇ ಜೀವನೋ ಪಾಯ ಹೊಂದಿರುವ ಅಟೋರಿಕ್ಷಾ, ಅಂಗಡಿ, ಕ್ಯಾಂಟೀನ್‌ಗಳಿಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆ ಇದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಚಿವೆ ಶೋಭಾ ಕರಂದ್ಲಾಜೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗು ರೈಲು ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕುಂದಾಪುರ ನಿಲ್ದಾಣದಲ್ಲಿಯೇ ಪಿಆರ್‌ಎಸ್ ಪ್ರಾರಂಬಿಸಲು ಮನವಿ ಮಾಡಿದ್ದರು.

ಕೊಂಕಣ ರೈಲ್ವೆಯು ತಕ್ಷಣದಲ್ಲಿಯೇ ಪಿಆರ್‌ಎಸ್ ವ್ಯವಸ್ಥೆಯನ್ನು ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಲಿದೆ ಎಂದು ಈ ಬಗ್ಗೆ ಮಾಹಿತಿ ನೀಡಿರುವ ಸಚಿವೆ ಶೋಭಾ ಇದಕ್ಕಾಗಿ ರೈಲು ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News