​ಗ್ರಾಹಕರು ಹಕ್ಕುಗಳ ಬಗ್ಗೆ ತಿಳಿದು ಸಬಲರಾಗಬೇಕು: ಉಡುಪಿ ಜಿಲ್ಲಾಧಿಕಾರಿ

Update: 2021-12-24 15:28 GMT

ಉಡುಪಿ: ಪ್ರತಿಯೊಬ್ಬ ಸಾರ್ವಜನಿಕ ಸಹ ಯಾವುದಾದರೂ ವಸ್ತುಗಳ ಖರೀದಿ ಮಾಡುವ ಹಾಗೂ ವಿವಿಧ ಸೇವೆಗಳನ್ನು ಪಡೆಯುವ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ಎಲ್ಲಾ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದು ಸಬಲರಾಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಶುಕ್ರವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನ್ಯಾಯಾಲಯ ಗ್ರಾಹಕ ಕಾಯಿದೆಯ ಮೂಲಕ ಗ್ರಾಹಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ಸಾರ್ವಜನಿಕರು ತಿಳಿದುಕೊಂಡು ಅವುಗಳನ್ನು ಚಲಾಯಿಸುವ ಮೂಲಕ ಉತ್ತಮ ಗುಣಮಟ್ಟದ ವಸ್ತು ಮತ್ತು ಸೇವೆಗಳನ್ನು ಪಡೆಯಬೇಕು. ತಾವು ಪಡೆಯುವ ವಸ್ತು ಮತ್ತು ಸೇವೆಗಳಲ್ಲಿ ನ್ಯೂನತೆ ಕಂಡು ಬಂದಲ್ಲಿ ಸೂಕ್ತ ಪರಿಹಾರ ಪಡೆಯಲೂ ಸಹ ಸಾಧ್ಯವಿದ್ದು, ಕಾಯಿದೆ ಪ್ರಯೋಜನ ಪಡೆದು ಸಬಲರಾಗಬೇಕು ಎಂದು ಕೂರ್ಮರಾವ್ ಎಂ ಹೇಳಿದರು.

ಜಿಲ್ಲೆಯ ಜನತೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪಡೆಯುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಆಹಾರ ತಯಾರಿಕಾ ಉದ್ಯಮ ಗಳು, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಕಡ್ಡಾಯವಾಗಿ ಸುರಕ್ಷತಾ ಪ್ರಮಾಣಪತ್ರ ಪಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈಗಾಗಲೇ ಇರುವ ಆಹಾರ ತಯಾರಿಕಾ ಉದ್ಯಮಗಳು ಪ್ರಮಾಣಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಅಲ್ಲಿನ ಆಹಾರ ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವಂತೆ ಸಹ ಸೂಚನೆ ನೀಡಲಾಗಿದೆ ಎಂದರು.

ಸರಕು ಮತ್ತು ಸೇವೆಗಳ ಬೇಡಿಕೆ ಮತ್ತು ಪೂರೈಕೆಗಳ ನಡುವೆ ವ್ಯತ್ಯಾಸವಾದಲ್ಲಿ ಬೆಲೆ ಹೆಚ್ಚಳದ ಹೊರೆ ಗ್ರಾಹಕನಿಗೆ ಬೀಳಲಿದ್ದು, ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಸ್ಯಾನಟೈಸರ್, ರೆಮಿಡೆಸಿವರ್ ಔಷಧ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಅತ್ಯಾವಶ್ಯಕ ವಸ್ತುಗಳನ್ನು ಕೊರೆತೆಯಾಗುವ ಮುನ್ನವೇ ಖರೀದಿಸುವುದು ಉತ್ತಮವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್-19 ಸಂಭಾವ್ಯ ಅಲೆಯನ್ನು ಎದುರಿಸಲು ಅಗತ್ಯವಿರುವ ಎಲ್ಲಾ ಅಗತ್ಯ ವಸ್ತುಗಳನ್ನು ಸಿದ್ಧವಾ ಗಿಟ್ಟುಕೊಳ್ಳಲಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಸಹ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ,ಗ್ರಾಹಕರು ಮಾರಾಟಗಾರರು ನೀಡುವ ಯಾವುದೇ ಆಮಿಷಗಳಿಗೆ, ಜಾಹೀರಾತುಗಳ ಮೋಡಿಗೆ ಸಿಲುಕದೇ ತಮ್ಮ ಆಯ್ಕೆಯ ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕು. ಖರೀದಿಸಿದ ವಸ್ತುಗಳಲ್ಲಿ ದೋಷ ಕಂಡು ಬಂದಲ್ಲಿ, ಸಂಬಂದಪಟ್ಟ ವಸ್ತುಗಳ ಉತ್ಪಾದಕ ರಿಂದ/ ಮಾರಾಟಗಾರರಿಂದ ಸೂಕ್ತ ಪರಿಹಾರ ಪಡೆಯಬಹುದು ಎಂದರು.

ಗ್ರಾಹಕರು ಮತ್ತು ರಕ್ಷಣೆ ಕುರಿತು ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಎ.ಪಿ.ಕೊಡಂಚ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಗ್ರಾಹಕರಿಗೆ ಕಾನೂನಿನಲ್ಲಿ 8 ವಿವಿಧ ಬಗೆಯ ಹಕ್ಕುಗಳನ್ನು ನೀಡಿದ್ದು, ಗ್ರಾಹಕರು ತಮ್ಮ ಆಯ್ಕೆ ವಸ್ತುಗಳನ್ನು ಖರೀದಿಸಲು, ಅವುಗಳಲ್ಲಿನ ದೋಷಗಳನ್ನು ಪ್ರಶ್ನಿಸಲು, ಸೂಕ್ತ ಪರಿಹಾರ ಪಡೆಯಲು ಸಾಧ್ಯವಿದೆ. ದೋಷಪೂರಿತ ವಸ್ತು ಹಾಗೂ ಸೇವೆಗಳ ಕುರಿತು ದೇಶದ ಯಾವುದೇ ಭಾಗದಲ್ಲಿ ಪ್ರಕರಣ ದಾಖಲಿಸ ಬಹುದಾಗಿದ್ದು, ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ 1 ಕೋಟಿ ರೂ. ವರೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಹೈಕೋರ್ಟ್ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ದೂರು ನೀಡಬಹುದು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ವಹಿಸಿದ್ದರು. ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರೇಮಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಗಜೇಂದ್ರ ಉಪಸ್ಥಿತರಿದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಹಮದ್ ಇಸಾಕ್ ಸ್ವಾಗತಿಸಿದರು. ಬಳಕೆದಾರರ ವೇದಿಕೆ ಸಂಚಾಲಕ ನಾರಾಯಣನ್ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀಬಾಯಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News