ಉಪ್ಪಿನಂಗಡಿ: ಪೂರ್ವ ಸೂಚನೆ ನೀಡದೇ ದೈವದ ಗುಡಿಯ ತೆರವು; ಆರೋಪ

Update: 2021-12-24 17:28 GMT

ಉಪ್ಪಿನಂಗಡಿ, ಡಿ.24: ಗಿರಿಜನರು ಆರಾಧಿಸಿಕೊಂಡು ಬರುತ್ತಿದ್ದ ಮಹಾಮಾಯಿ ಹಾಗೂ ಬೈರವ ದೈವದ ಗುಡಿಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಯಾವುದೇ ಪೂರ್ವ ಸೂಚನೆ ನೀಡದೇ ತೆರವುಗೊಳಿಸಿದ್ದಾರೆನ್ನಲಾದ ಘಟನೆ ಬೆಳ್ತಂಗಡಿ ತಾಲೂಕು ಉರುವಾಲು ಪದವು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಹತ್ತು ವರ್ಷಗಳಿಂದ ಸಣ್ಣ ಗುಡಿಯೊಂದಿಗೆ ಪೂಜಾ ಕಾರ್ಯ ನಡೆಸಲಾಗುತ್ತಿದ್ದ ಈ ಗುಡಿಯನ್ನು ದಶಮಾನೋತ್ಸವದ ಕಾರ್ಯಕ್ರಮ ನಡೆಸುವ ಸಲುವಾಗಿ ನವೀಕರಣಗೊಳಿಸಲಾಗಿತ್ತು. ಇದರ ಬಗ್ಗೆ ಮೌಖಿಕ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಇಲಾಖಾ ಹಾಗೂ ಗೇರು ಅಭಿವೃದ್ಧಿ ನಿಗಮದ ಸಿಬ್ಬಂದಿ ಯಾವುದೇ ಲಿಖಿತ ಸೂಚನೆ ನೀಡದೆ ಗುಡಿಯನ್ನು ತೆರವುಗೊಳಿಸಿದ ಬಗ್ಗೆ ಗಿರಿಜನ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಬೆಳ್ತಂಗಡಿ ತಾಲೂಕು ಗಿರಿಜನ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಲಿಂಗಪ್ಪ, ಸರ್ವೆ ನಂಬ್ರ 244ರಲ್ಲಿನ ಸರಕಾರಿ ಭೂಮಿಯಲ್ಲಿ ನಮ್ಮ ಸಮುದಾಯದ ಆರಾಧನಾ ಕೇಂದ್ರವಿದ್ದು, ಅದು ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿರಲಿಲ್ಲ. ಸದ್ರಿ ಭೂಮಿ ಸರಕಾರಿ ಭೂಮಿಯಾಗಿರುವುದರಿಂದ ನಮ್ಮ ಆರಾಧನಾ ಕೇಂದ್ರಕ್ಕೆ ಮುಂಜೂರುಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯ ಪ್ರಕಾರ ಅಳತೆ ಕಾರ್ಯ ಮುಗಿದಿದ್ದು, ಕಡತ ಬೆಳ್ತಂಗಡಿ ತಹಶೀಲ್ದಾರ್ ರವರ ಕಚೇರಿಯಲ್ಲಿದೆ. ಈ ಮಧ್ಯೆ ದಶಮಾನೋತ್ಸವದ ಅಂಗವಾಗಿ ಅಭಿವೃದ್ಧಿ ಪಡಿಸಿದ ಬಗ್ಗೆ ಅರಣ್ಯ ಇಲಾಖಾ ಸಿಬ್ಬಂದಿ ಮೌಖಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಗುಡಿಯನ್ನು ಉಳಿಸಬೇಕಾದರೆ ಹಣದ ಬೇಡಿಕೆ ಮುಂದಿರಿಸಿದ್ದರು. ಅದನ್ನು ಒಪ್ಪದ ಕಾರಣ ಯಾರಿಗೂ ತಿಳಿಸದೆ ಗುಡಿ ತೆರವುಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಗಿರಿಜನರ ಆರಾಧನಾ ಕೇಂದ್ರಗಳ ರಕ್ಷಣೆಗಾಗಿ ಸರಕಾರವೇ ಕಾನೂನು ಜಾರಿಗೊಳಿಸಿದ್ದರೂ, ಭೂಮಿಯ ಮಂಜೂರಾತಿಗಾಗಿ ಕಡತಗಳು ವಿಲೇವಾರಿ ಹಂತದಲ್ಲಿದ್ದರೂ, ಮೇಲಾಗಿ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಇಲ್ಲದ ಭೂಮಿಯಲ್ಲಿರುವ ನಮ್ಮ ಆರಾಧನಾ ಗುಡಿಯನ್ನು ತೆರವುಗೊಳಿಸಿರುವುದು ಬೇಸರ ತಂದಿದೆ. ಪ್ರಕರಣವನ್ನು ಬೆಳ್ತಂಗಡಿ ಶಾಸಕರ ಹಾಗೂ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನ್ಯಾಯ ದೊರಕುವ ಭರವಸೆ ಇದೆ. ದೊರಕದೇ ಇದ್ದರೆ ಹೋರಾಟ ಅನಿವಾರ್ಯವೆಂದು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್, ಗುಡಿ ತೆರವು ಮಾಡಿರುವ ಬಗ್ಗೆ ದೂರು ಬಂದಿದೆ. ಅರಣ್ಯ ಇಲಾಖಾ ಭೂಮಿಯ ಅತಿಕ್ರಮಣವನ್ನು ತಡೆಗಟ್ಟುವುದು ಕಾನೂನು ಸಮ್ಮತ ನಡೆ. ಆದರೆ ಗುಡಿ ಇರುವ ಭೂಮಿ ಅರಣ್ಯ ಇಲಾಖಾ ವ್ಯಾಪ್ತಿಗೆ ಸೇರಿದಲ್ಲ ಎಂಬ ಆಪಾದನೆಯ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವೇ ಪ್ರತಿಕ್ರಿಯಿಸುವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News