ಕೊರಗ ಕುಟುಂಬದ ಮನೆ ಬೆಂಕಿಗೆ ಆಹುತಿ: ಪರಿಹಾರಕ್ಕೆ ಆಗ್ರಹಿಸಿ ಮನವಿ

Update: 2021-12-25 11:43 GMT

ಕುಂದಾಪುರ, ಡಿ.25: ತಾಲೂಕಿನ ಆಲೂರು ಗ್ರಾಮದ ಬಚ್ಚಿ ಕೊರಗ ಎಂಬವರ ಮನೆಯು ಇಂದು ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋಗಿರುವ ಬಗ್ಗೆ ವರದಿಯಾಗಿದೆ.

ಬೆಂಕಿಯಿಂದಾಗಿ ಮನೆಯ ಚಾವಡಿ ಸಂಪೂರ್ಣ ಸಟ್ಟು ಹೋಗಿದ್ದು, ನಡುಮನೆ ಬೀಳುವ ಹಂತದಲ್ಲಿ ಇದೆ. ಈ ಕುಟುಂಬವು ಆಲೂರು ಗ್ರಾಮದ ಶ್ರೀನಿವಾಸ ಜೊಯಿಸ್‌ರ ತಂದೆ ಕಾಲದಿಂದ ಅವರ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ. ಈ ಕುಟುಂಬಕ್ಕೆ ಕೂಡಲೇ ಹೊಸ ಮನೆ ಮಂಜೂರು ಮಾಡಿ ವಸತಿ ಸೌಲಭ್ಯ ಒದಗಿಸಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಮಿತಿ ಒತ್ತಾಯಿಸಿದೆ.

ಅಜಲು ಚಾಕರಿಯಲ್ಲಿ ವಾಸ

ಈ ಕುಟುಂಬ ಸಮೇತ ಇನ್ನೂ ಹಲವು ಕುಟುಂಬಗಳು ಒಡೆಯರ ಭೂಮಿ ಯಲ್ಲಿ ಅಜಲು ಚಾಕರಿ ಮಾಡಿಕೊಂಡು ವಾಸಿಸುತ್ತಿವೆ. ಈವರೆಗೆ ಅವರ ಹೆಸರಿಗೆ ಯಾವುದೇ ರೀತಿಯಲ್ಲಿ ಭೂಮಿ ಮಂಜೂರು ಮಾಡಿಲ್ಲ. ಇದರಿಂದ ಇವರು ಸರಕಾರದ ಎಲ್ಲ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಆಲೂರು ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಭೂ ರಹಿತ 20 ಕೊರಗ ಕುಟುಂಬಗಳಿಗೆ ಮಹಮ್ಮದ್ ಪೀರ್ ವರದಿ ಪ್ರಕಾರ ಪ್ರತಿ ಕುಟುಂಬಕ್ಕೆ ಒಂದು ಎಕರೆ ಭೂಮಿ, ವಸತಿ, ಮೂಲಭೂತ ಸೌಕರ್ಯಗಳು ಒದಗಿಸಬೇಕು ಎಂದು ಕುಂದಾಪುರ ತಹಶೀಲ್ದಾರ ಹಾಗೂ ತಮ್ಮ ಇಲಾಖೆಗೆ ಮನವಿ ಸಲ್ಲಿಸಿದರು ಇದುವರೆಗೆ ಯಾವುದೇ ಕ್ರಮ ವಹಿಸಲಿಲ್ಲ ಎಂದು ಸಮಿತಿ ಆರೋಪಿಸಿದೆ.

ಆದುದರಿಂದ ಸರಕಾರ ಕೂಡಲೇ ಆಲೂರು ಗ್ರಾಮದಲ್ಲಿ ವಾಸ್ತವ್ಯ ಇರುವ ಕೊರಗ ಸಮುದಾಯದ ಕುಟುಂಬಗಳನ್ನು ಅಜಲು ಮುಕ್ತಗೊಳಿಸಿ, ನಿವೇಶನ ಮಂಜೂರಾತಿ ಮಂಜೂರು ಮಾಡಬೇಕು. ಇಲ್ಲಿನ 20 ಭೂರಹಿತ ಕೊರಗ ಕುಟುಂಬಗಳಿಗೆ ಕೂಡಲೇ ಕನಿಷ್ಠ 1 ಎಕರೆಯಂತೆ ಪ್ರತಿ ಕುಟುಂಬಕ್ಕೆ ಮಹಮ್ಮದ್ ಪೀರ್ ವರದಿ ಪ್ರಕಾರ ಭೂಮಿ ನೀಡಬೇಕು ಎಂದು ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಹಾಗೂ ಸಹ ಸಂಚಾಲಕ ಗಣೇಶ್ ಆಲೂರು ಉಡುಪಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯ ಅಧಕಾರಿಗಳಿಗೆ ಇಂದು ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News