ರಾಷ್ಟ್ರೀಯ ಸಮಸ್ಯೆಗಳಿಗೆ ಸಮಾಜವಾದ, ಜಾತ್ಯತೀತ ಸಿದ್ಧಾಂತವೇ ಕಾರಣ: ಸಂಸದ ತೇಜಸ್ವಿ ಸೂರ್ಯ

Update: 2021-12-25 11:54 GMT

ಉಡುಪಿ, ಡಿ.25: ದೇಶದ ರಾಷ್ಟ್ರೀಯ ಸಮಸ್ಯೆಗಳಿಗೆ ಮೂಲ ಕಾರಣ ಸಮಾಜವಾದ ಮತ್ತು ಜಾತ್ಯತೀತ ಸಿದ್ಧಾಂತ. ಈ ಹಿಂದೆ ರಾಮ ಮಂದಿರದಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೂ ಧೈರ್ಯದಿಂದ ತೀರ್ಪು ಕೊಡುವಂತಹ ಪರಿಸ್ಥಿತಿ ಕೂಡ ಈ ದೇಶದಲ್ಲಿ ಇರಲಿಲ್ಲ. ನರೇಂದ್ರ ಮೋದಿ ಸರಕಾರ ಬಂದ ನಂತರ ಅತ್ಯಂತ ದೊಡ್ಡ ಪರಿವರ್ತನೆ ಆಗಿದೆ ಮತ್ತು ಹಿಂದೂ ಪುನರುತ್ಥಾನ ಇಡೀ ದೇಶದಲ್ಲಿ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾ, ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಉಡುಪಿ ನಗರ ಬಿಜೆಪಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮಣಿಪಾಲದ ಕಂಟ್ರಿ ಇನ್ ಹೊಟೇಲಿನಲ್ಲಿ ಹಮ್ಮಿಕೊಳ್ಳಲಾದ ಪ್ರಧಾನಿ ನರೇಂದ್ರ ಮೋದಿ ಸರಕಾರದ ಸುಶಾಸನ ಕುರಿತು ಪ್ರಬುದ್ಧ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶವನ್ನು ಇಷ್ಟು ವರ್ಷ ಬಡತನದಲ್ಲಿ ಇರಿಸಿದ್ದು ಇದೇ ಉಪಯೋಗಕ್ಕೆ ಬಾರದ ಸಮಾಜವಾದ ಎಂಬ ಆರ್ಥಿಕ ಸಿದ್ಧಾಂತ. ಅದೇ ರೀತಿ ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳ ಹೊಡೆತದಿಂದ ಹಿಂದೂಗಳು ತಮ್ಮ ಬಗ್ಗೆ ಅಭಿ ಮಾನ ಕಳೆದುಕೊಳ್ಳುವಂತೆ ಮಾಡಿರುವುದು ಜಾತ್ಯತೀತತೆ ಎಂಬ ವಾದ. ಈ ದೇಶಕ್ಕೆ ಹೊರಗಡೆಯಿಂದ ಬಂದ ಈ ಎರಡು ಸಿದ್ಧಾಂತಗಳನ್ನು ಕಾಂಗ್ರೆಸ್ ನಾಯಕತ್ವದ ಆಡಳಿತ ಯಂತ್ರಕ್ಕೆ ತುರುಕಿಸಲಾಯಿತೆಂದು ಅವರು ದೂರಿದರು.

ಸಮಾಜವಾದ ಸಿದ್ಧಾಂತದಿಂದ ಹೊಸ ಉದ್ಯಮಶೀಲತೆ ಸೃಷ್ಠಿಯಾಗದಂತೆ ಮಾಡಿದೆ. ಗ್ರಾಮಗಳು ಇನ್ನೂ ಕುಗ್ರಾಮಗಳಾಗಿ ಹಾಗೂ ರೈತರು ಬಡವ ರಾಗಿಯೇ ಉಳಿಯಲು ಇದೇ ಸಮಾಜವಾದ ಸಿದ್ಧಾಂತವೇ ಕಾರಣ. ಯಾರು ಕೂಡ ಶ್ರೀಮಂತರಾಗದೇ ಬಡವರಾಗಿಯೇ ಇರಬೇಕು ಎಂಬುದು ಕಮ್ಯುನಿಸ್ಟ್ ಹಾಗೂ ಸಮಾಜವಾದದ ಉದ್ದೇಶಾಗಿದೆ ಎಂದು ಅವರು ಆರೋಪಿಸಿದರು.

ಸಮಾಜವಾದದಿಂದಾಗಿಯೇ ದೇಶದಲ್ಲಿ ಕಪ್ಪು ಹಣ ಹಾಗೂ ಕಪ್ಪು ಆರ್ಥಿಕತೆ ಸೃಷ್ಠಿಯಾದವು. ಸಮಾಜವಾದ ಪಕ್ಷಗಳು ಸಮಾಜವಾದದ ಜೊತೆ ಪರಿವಾರ ವಾದವನ್ನು ಕೂಡ ಅಳವಡಿಸಿಕೊಂಡು ಬಂದವು. ಜಾತ್ಯತೀತ ಹಾಗೂ ಸಮಾಜ ವಾದದಿಂದ ಈ ದೇಶದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗೀಯ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ಶಾಸಕ ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಸ್ವಾಗತಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

‘ಮತಾಂತರ ನಿಷೇಧ ಕಾಯಿದೆ ವಿರೋಧಿಸಲು ಇಟಲಿಯಿಂದ ಆದೇಶ’

ಮತಾಂತರ ನಿಷೇಧ ಕಾಯಿದೆಯನ್ನು ವಿರೋಧಿಸುವಂತೆ ಸಿದ್ದರಾಮಯ್ಯಗೆ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕಿಯಿಂದ ಆದೇಶ ಬಂದರೆ, ಅವರಿಗೆ ಇಟಲಿಯಿಂದ ಈ ಆದೇಶ ಬಂದಿದೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.

ಒಬ್ಬ ಹಿಂದೂ ಮತಾಂತರಗೊಂಡರೆ ಹಿಂದೂ ಸಂಖ್ಯೆ ಕಡಿಮೆ ಆಗುವುದು ಮಾತ್ರವಲ್ಲ, ಒಬ್ಬ ಹಿಂದೂ ಶತ್ರು ಸೃಷ್ಠಿಯಾದಂತೆ ಎಂಬ ವಿವೇಕಾನಂದರ ಮಾತನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಭಾರತ ಭಾರತವಾಗಿ ಉಳಿಯ ಬೇಕಾದರೆ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕು. ಹಿಂದೂಗಳು ಬಹು ಸಂಖ್ಯಾತರಾಗಿದ್ದಾಗ ಮಾತ್ರ ಸಂವಿಧಾನಕ್ಕೆ ಗೌರವ ಇರುತ್ತದೆ. ಆ ಕಾರಣಕ್ಕೆ ಮತಾಂತರ ನಿಷೇಧ ಕಾಯಿದೆ ಅಗತ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News