ತೃಪ್ತಿ, ಮಾನವೀಯತೆಯಿಂದ ಸಮಾಜ ಸುಧಾರಣೆ ಸಾಧ್ಯ: ನ್ಯಾ.ಸಂತೋಷ್ ಹೆಗ್ಡೆ

Update: 2021-12-26 16:41 GMT

ಬ್ರಹ್ಮಾವರ, ಡಿ.26: ಪ್ರತಿಯೊಬ್ಬ ವ್ಯಕ್ತಿ ತೃಪ್ತಿ ಹಾಗೂ ಮಾನವೀಯ ಗುಣ ಬೆಳೆಸಿಕೊಂಡಾಗ ಮಾತ್ರ ಸಮಾಜ ಸುಧಾರಣೆ ಯಾಗಲು ಸಾಧ್ಯ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ರವಿವಾರ ಬ್ರಹ್ಮಾವರ ಬಂಟರ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಕುಂದಪ್ರಭದ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಯು.ಎಸ್ ಶೆಣೈ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಹಗರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿದ್ದರಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿದೆ. ವ್ಯಕ್ತಿಗೆ ಪ್ರೋತ್ಸಾಹ ನೀಡದೇ ಸಮಾಜಕ್ಕೆ ಪ್ರೋತ್ಸಾಹ ನೀಡ ಬೇಕು. ವೌಲ್ಯಯುತವಾದ ಸಮಾಜ ಹಣ ಮೊದಲಾದ ದುರಾಸೆಯಿಂದ ಹಾಳಾಗಿದೆ. ರಾಜಕೀಯ ಸೇವೆಯ ಬದಲು ವೃತ್ತಿಯಾಗಿರುವುದೇ ಸಮಾಜದ ಅಧಃಪತನಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸೇವೆ ಆಗಬೇಕು. ಆಗ ಮಾತ್ರ ದೇಶದಲ್ಲಿ ಪರಿರ್ತನೆ ಸಾಧ್ಯವಾಗುತ್ತದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಯು.ಎಸ್.ಶೆಣೈ ಮಾತನಾಡಿ, ವಡ್ಡರ್ಸೆ ಅವರು ಆರ್ಥಿಕವಾಗಿ ಅಸರ್ಮಥರಾದವರಿಗೆ ನ್ಯಾಯ ದೊರಕಿಸಿಕೊಟ್ಟರಲ್ಲದೇ, ಅನೇಕ ಯುವ ಪತ್ರಕರ್ತರಿಗೆ ದಾರಿ ದೀಪವಾಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕೋಟದ ಉದ್ಯಮಿ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ವಹಿಸಿದ್ದರು. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಉಡುಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News