ಡ್ರಗ್ಸ್ ನೀಡಿ ಮಗಳಿಗೆ ಲೈಂಗಿಕ ದೌರ್ಜನ್ಯ ಆರೋಪ: ಪೊಲೀಸ್ ಆಯುಕ್ತರಿಗೆ ದೂರು

Update: 2021-12-27 10:11 GMT
 ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಮಂಗಳೂರು, ಡಿ.27: ಪದವೀಧರೆಯಾಗಿರುವ ತನ್ನ ಮಗಳಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ತನಗೆ ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಬಿಜೈ ನಿವಾಸಿ ಮಹಿಳೆಯೊಬ್ಬರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವಿಚಾರವಾಗಿ ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿರುವ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ತನ್ನ ಮಗಳಿಗೆ ಅನ್ಯಾಯವಾಗಿದ್ದು, ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು. ಇಲ್ಲವಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಜೈ ನಿವಾಸಿ ಗ್ರೇಸಿ ಪಿಂಟೋ ಎಂಬವರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎದುರು ಕಣ್ಣೀರು ಹಾಕಿದ್ದಾರೆ.

ತನ್ನ 27ರ ಹರೆಯದ ಪುತ್ರಿಯನ್ನು ಸುರತ್ಕಲ್‌ನ ಮುಹಮ್ಮದ್ ಶರೀಫ್ ಸಿದ್ದೀಕ್ ಎಂಬಾತ ಕಳೆದ ನಾಲ್ಕು ವರ್ಷಗಳಿಂದ ಪುಸಲಾಯಿಸಿ ಆಕೆಗೆ ಅಮಲು ಬರಿಸುವ ಪದಾರ್ಥಗಳನ್ನು ನೀಡಿ ಲೈಂಗಿಕವಾಗಿ ಉಪಯೋಗಿಸಿಕೊಂಡಿದ್ದಾನೆ. ಇದೇ ಕಾರಣದಿಂದ ಮನನೊಂದ ತನ್ನ ಪತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಕಾಲೇಜಿಗೆ ಹೋಗುತ್ತಿದ್ದಾಗ ಫೇಸ್‌ಬುಕ್ ಮೂಲಕ ಪರಿಚಯವಾದ ಆ ವ್ಯಕ್ತಿ ಮಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಆತ ಮದುವೆಯಾಗಿದ್ದಾನೆ ಎಂದು ಹೇಳುತ್ತಿದ್ದು, ಆದರೆ ಯಾವುದೇ ರೀತಿಯ ಸಾಕ್ಷವನ್ನು ನೀಡಿಲ್ಲ. ಮಗಳನ್ನು ಪುಸಲಾಯಿಸಿ ಕರೆದೊಯ್ದಿರುವ ಬಗ್ಗೆ ಮೂರು ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆಕೆ ಈಗಲೂ ಆತನ ಪರ ವಹಿಸಿಯೇ ಮಾತನಾಡುತ್ತಾಳೆ ಎಂದು ಗ್ರೇಸಿ ಪಿಂಟೋ ಹೇಳಿದ್ದಾರೆ.

ತಾಯಿಯ ಮಾತುಗಳನ್ನು ಆಲಿಸಿದ ಪೊಲೀಸ್ ಆಯುಕ್ತರು, ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.


 ‘‘ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಗೂ ತನ್ನ ಪುತ್ರಿಗೆ ಕಳೆದ ನಾಲ್ಕು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಹಾಗೂ ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ತನ್ನ ಮಗಳಿಗೆ ಡ್ರಗ್ಸ್ ಚಟಕ್ಕೆ ಬೀಳಿಸಿರುವುದಾಗಿ ಆಕೆ ಆರೋಪಿಸಿದ್ದಾರೆ.

 ಸುರತ್ಕಲ್ ಕೃಷ್ಣಾಪುರ ನಿವಾಸಿಯಾಗಿರುವ ಆರೋಪಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮುಂಬೈ, ಗೋವಾದಲ್ಲಿ ಪತ್ನಿಯರಿದ್ದು, ಸುರತ್ಕಲ್‌ನಲ್ಲಿ ಪ್ರಸಕ್ತ ಆತ ಇನ್ನೊಂದು ಪತ್ನಿ ಜತೆ ವಾಸವಾಗಿರುವುದು ಹಾಗೂ ಈ ಯುವತಿ ಜತೆಯೂ ಹಲವು ವರ್ಷಗಳಿಂದ ಸಂಪರ್ಕದಲ್ಲಿರುವುದು ದೂರು ಹಾಗೂ ಸದ್ಯದ ತನಿಖೆ ವೇಳೆ ಕಂಡುಬಂದಿದೆ. ಆರೋಪಿ ಮೇಲೆ ಈ ಹಿಂದೆ ಸುರತ್ಕಲ್ ಠಾಣೆಯಲ್ಲಿ ಸಿಂಥೆಟಿಕ್ ಡ್ರಗ್ ಎಂಡಿಎಂಎ ಮಾರಾಟ ಮಾಡುವ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದು, ಇದು ಮೂರನೇ ಪ್ರಕರಣವಾಗಿದೆ. ಯುವತಿಗೆ ದೌರ್ಜನ್ಯ ಆಗಿರುವ ಬಗ್ಗೆ ಆಕೆಯಿಂದ ಮಾಹಿತಿ ಪಡೆಯಬೇಕಾಗಿದೆ. ಯುವತಿಗೆ ಸದ್ಯ ಸಮಾಲೋಚನಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಆಕೆಯಿಂದ ಹೇಳಿಕೆ ಪಡೆದು ಸಾಕ್ಷಾಧ್ಯಾರಗಳನ್ನು ಪಡೆದು ಸಮಗ್ರ ತನಿಖೆ ನಡೆಸಲು ತನಿಖಾಧಿಕಾರಿಗೆ ಸೂಚನೆ ನೀಡಲಾಗಿದೆ. ಪ್ರಸಕ್ತ ಯುವತಿಯ ತಾಯಿ ಜತೆ ಆರೋಪಿ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು. ಮತ್ತೆ ಆತನನ್ನು ಪೊಲೀಸ್ ವಶಕ್ಕೆ ಪಡೆದು ಆತನ ಸಮಗ್ರ ವಿಚಾರಣೆ ನಡೆಯಲಿದೆ. ಆತನಿಂದ ಇನ್ಯಾರಾದರೂ ಯುವತಿಯರು ವಂಚನೆಗೊಳಗಾಗಿದ್ದಾರೆಯೇ? ಆತ ಈಗಲೂ ಡ್ರಗ್ಸ್ ಪೂರೈಕೆ ದಂಧೆ ಮುಂದುವರಿಸಿದ್ದಾನೆಯೇ? ಎಂಬ ಎಲ್ಲಾ ನೆಲೆಯಲ್ಲಿಯೂ ತನಿಖೆ ನಡೆಸಲಾಗುವುದು’’.

-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News