ದಕ್ಷಿಣ ಆಫ್ರಿಕಾದ ನೈತಿಕ ದಿಕ್ಸೂಚಿ: ಡೆಸ್ಮಂಡ್ ಟುಟು

Update: 2021-12-27 19:30 GMT
Editor : ಕೆ.ಎಂ.

ಹಾಸ್ಯ ಪ್ರಜ್ಞೆ

ಅಷ್ಟೇನೂ ಎತ್ತರ ಇರದಿದ್ದರೂ ಟುಟು ದಕ್ಷಿಣ ಆಫ್ರಿಕಾದ ರಾಜಕೀಯ ವಲಯದಲ್ಲಿ ದೈತ್ಯಶಕ್ತಿ ಯಾಗಿದ್ದರು. ವಿಶೇಷವಾಗಿ ತಮ್ಮ ಹಾಸ್ಯಪ್ರಜ್ಞೆ, ನಯವಾಗಿ ಕುಟುಕುವ ಚಾಟೂಕ್ತಿಗಳಿಂದ ವರ್ಣಭೇದ ಪ್ರತಿಪಾದಕರಿಗೆ ಮಗ್ಗುಲ ಮುಳ್ಳಾಗಿ ಕಾಡಿದ್ದರು. ‘‘ಬಿಳಿಯರೊಂದಿಗೆ ಯಾವಾಗಲೂ ಒಳ್ಳೆಯವರಾಗಿರಿ. ಯಾಕೆಂದರೆ ಅವರ ಮಾನವೀಯತೆಯನ್ನು ಮರುಶೋಧಿಸಲು ನಿಮ್ಮ ಅಗತ್ಯ ಅವರಿಗೆ ಬರಬಹುದು’’ ಎಂದು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಅವರು ಆಗಾಗ ಹೇಳುತ್ತಿದ್ದರು.


ದಕ್ಷಿಣ ಆಫ್ರಿಕಾದ ಅಲ್ಪಸಂಖ್ಯಾತ ಬಿಳಿಯರ ಆಳ್ವಿಕೆಯನ್ನು ಖಂಡಿಸಿದ ಕ್ರೈಸ್ತ ಧರ್ಮಗುರುವಾಗಿ ಪ್ರಾಮುಖ್ಯತೆ ಪಡೆದ ಡೆಸ್ಮಂಡ್ ಟುಟು, ವರ್ಣಭೇದ ನೀತಿ ಯುಗದ ಬಳಿಕದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ) ಆಡಳಿತಗಾರರು ಕಪ್ಪುವರ್ಣೀಯ ಬಡಜನರಿಗೆ ನ್ಯಾಯ ಒದಗಿಸಲು ವಿಫಲವಾದಾಗ ಅವರನ್ನೂ ಟೀಕಿಸಲು ಹಿಂಜರಿಯಲಿಲ್ಲ. ಜೊತೆಗೆ ಹಾಸ್ಯಮಿಶ್ರಿತ ಚಡಿಯೇಟಿನ ಟೀಕಾಪ್ರಹಾರವನ್ನು ದಕ್ಷಿಣ ಆಫ್ರಿಕಾದ ಗಡಿಯಾಚೆಗೂ ಮುಂದುವರಿಸಿದ್ದರು. ಫೆಲೆಸ್ತೀನೀಯರ ವಿಷಯದಲ್ಲಿ ಇಸ್ರೇಲ್‌ನ ವರ್ತನೆ, ಇರಾಕ್‌ನಲ್ಲಿ ಅಮೆರಿಕ ನೇತೃತ್ವದ ಯುದ್ಧ, ಚರ್ಚ್‌ಗಳಲ್ಲಿರುವ ತೀವ್ರವಾದಿಗಳನ್ನು ತರಾಟೆಗೆತ್ತಿಕೊಂಡರು. ಶಾಂತಿಯ ಅನ್ವೇಷಣೆ ಅವರನ್ನು ಸಿಪ್ರಸ್, ಉತ್ತರ ಐರ್‌ಲ್ಯಾಂಡ್, ಕೆನ್ಯಾ ದೇಶಗಳವರೆಗೂ ಕೊಂಡೊಯ್ಯಿತು. ಟುಟು ದಕ್ಷಿಣ ಆಫ್ರಿಕಾದ ನೈತಿಕ ದಿಕ್ಸೂಚಿಯಾಗಿದ್ದರು, ವರ್ಣಭೇದ ನೀತಿಯ ಸರಕಾರದ ತಾರತಮ್ಯ ನೀತಿಯನ್ನು ವಿರೋಧಿಸಿ ಮಗ್ಗುಲ ಮುಳ್ಳಾಗಿ ಕಾಡಿದ್ದರು ಹಾಗೂ ವರ್ಣಭೇದ ಯುಗದ ಬಳಿಕದ ಸರಕಾರದ ಭ್ರಷ್ಟಾಚಾರ, ಚೀನಾದೊಂದಿಗೆ ಸ್ನೇಹ ಹೊಂದುವ ನಿಲುವಿನ ವಿರುದ್ಧ ವಾಗ್ದಾಳಿ ನಡೆಸಿದರು. ಅವರೊಬ್ಬ ನೇರ ನುಡಿಯ ಆದರ್ಶವಾದಿ, ಎಷ್ಟೇ ಕಷ್ಟವಾದರೂ ಯಾವತ್ತೂ ನ್ಯಾಯದ ಪರ ನಿಲ್ಲುವವರು. ದಶಕಗಳ ಪ್ರಕ್ಷುಬ್ಧ ಬದಲಾವಣೆಯ ಸಮಯದಲ್ಲಿ ನೆಲ್ಸನ್ ಮಂಡೇಲಾ ಹಾಗೂ ಟುಟು ದಿಕ್ಸೂಚಿಯಾಗಿ ನಿಂತಿದ್ದವರು. ಈಗ ಇಬ್ಬರೂ ನಮ್ಮನ್ನು ಅಗಲಿದ್ದಾರೆ, ದಕ್ಷಿಣ ಆಫ್ರಿಕಾಕ್ಕೆ ಮಾರ್ಗದರ್ಶನ ನೀಡುವವರು ಯಾರು ಎಂಬ ಪ್ರಶ್ನೆ ಇದೀಗ ಮೂಡಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸಿದ್ದ ವಿದ್ವಾಂಸ ಸ್ಕಾಟ್ ಫಿರ್ಸಿಂಗ್ ಹೇಳಿದ್ದಾರೆ. 1931ರಲ್ಲಿ ಕ್ಲರ್ಕ್ಸ್‌ಡಾರ್ಪ್ ಎಂಬ ಚಿನ್ನದ ಗಣಿಯ ನಾಡಲ್ಲಿ ಜನಿಸಿದ ಟುಟು ಅವರ ತಂದೆ ಝಕರಿಯಾ ಓರ್ವ ಶಿಕ್ಷಕ, ತಾಯಿ ಅಲೆಟ್ಟಾ ಮನೆಗೆಲಸ ಮಾಡುತ್ತಿದ್ದವರು. ತಂದೆಯ ಮಾರ್ಗದಲ್ಲಿ ಸಾಗಿದ ಟುಟು ಆರಂಭದಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದರೂ, ಶಾಲೆಯಲ್ಲಿ ಕಪ್ಪು ವರ್ಣೀಯ ಮಕ್ಕಳಿಗೆ ಸರಕಾರ ನಿಷೇಧ ಹೇರಿರುವುದನ್ನು ವಿರೋಧಿಸಿ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. ಬಿಷಪ್ ಟ್ರೆವರ್ ಹಡ್ಲ್‌ಸ್ಟನ್ ಸೇರಿದಂತೆ ವರ್ಣಭೇದ ನೀತಿ ವಿರೋಧಿಸುತ್ತಿದ್ದ ಬಿಳಿಯ ಕ್ರೈಸ್ತ ಧರ್ಮಗುರುಗಳ ಪ್ರಭಾವದಿಂದ 1961ರಲ್ಲಿ ಕೈಸ್ತ ಪಾದ್ರಿಯಾದರು ಮತ್ತು 1975ರಲ್ಲಿ ಜೊಹಾನ್ಸ್‌ಬರ್ಗ್‌ನ ಡೀನ್ ಆಗುವ ಮೂಲಕ ಈ ಪದವಿಗೇರಿದ ಪ್ರಥಮ ಕಪ್ಪು ವರ್ಣದ ವ್ಯಕ್ತಿ ಎನಿಸಿಕೊಂಡರು. ಮಂಡೇಲಾರನ್ನು ಜೈಲಿಗಟ್ಟಿದ ಬಳಿಕ ಟುಟು ಹಾಗೂ ಇತರ ಕೆಲವರು ಬದಲಾವಣೆಗಾಗಿ ಆಗ್ರಹಿಸುವ ಅಭಿಯಾನದ ನೇತೃತ್ವ ವಹಿಸಿದರು.

1976ರಲ್ಲಿ ಸೊವೆಟೊದಲ್ಲಿ ಪೊಲೀಸರು ಕಪ್ಪುವಿದ್ಯಾರ್ಥಿಗಳ ಪ್ರತಿಭಟನೆಯನ್ನು ಕ್ರೂರ ರೀತಿಯಲ್ಲಿ ಹತ್ತಿಕ್ಕಿದಾಗ ಅಲ್ಪಸಂಖ್ಯಾತ ಬಿಳಿಯರ ಸರಕಾರ ಜನಾಂಗ ಪಕ್ಷಪಾತ ತೋರುತ್ತಿದೆ ಮತ್ತು ದೇವರ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತಿದೆ ಎಂದು ಟುಟು ಆಕ್ರೋಶ ಹೊರಹಾಕಿದರು. ಅವರ ಸ್ಪಷ್ಟವಾದ ಪರಿಕಲ್ಪನೆ ಮತ್ತು ಭೀತಿಯಿಲ್ಲದ ನಿಲುವು ಅವರನ್ನು ಆಫ್ರಿಕಾ ಸ್ವಾತಂತ್ರ್ಯ ಹೋರಾಟವನ್ನು ಏಕೀಕರಿಸುವ ಸಂಕೇತವನ್ನಾಗಿಸಿದೆ ಎಂದು 1984ರಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಿದ ನೊಬೆಲ್ ಪ್ರತಿಷ್ಠಾನ ಬಣ್ಣಿಸಿದೆ. ಅವರು ದಕ್ಷಿಣ ಆಫ್ರಿಕಾದ ಮಾರ್ಟಿನ್ ಲೂಥರ್ ಕಿಂಗ್. ಜನಾಂಗೀಯ ನ್ಯಾಯ ಮತ್ತು ಸಮಾನತೆಗಾಗಿ ಅಹಿಂಸಾತ್ಮಕವಾಗಿ ಹೋರಾಡಿದ ಕ್ರೈಸ್ತ ಧರ್ಮಗುರು. ತಮ್ಮಾಂದಿಗೆ ಕೆಟ್ಟದಾಗಿ ನಡೆದುಕೊಂಡವರನ್ನೂ ಅವರು ದ್ವೇಷಿಸಲಿಲ್ಲ ಮತ್ತು ಮಾತುಕತೆಯಲ್ಲಿ ಮತ್ತು ಜನತೆಯ ನೈತಿಕ ಆತ್ಮಸಾಕ್ಷಿಯಲ್ಲಿ ವಿಶ್ವಾಸ ಇರಿಸಿಕೊಂಡಿದ್ದರು ಎಂದು ಟುಟು ಜೀವನಚರಿತ್ರೆಯ ಲೇಖಕ ಸ್ಟೀವನ್ ಗಿಷ್ ಹೇಳಿದ್ದಾರೆ. 1986ರಲ್ಲಿ ಕೇಪ್‌ಟೌನ್‌ನ ಆರ್ಚ್ ಬಿಷಪ್ ಆಗಿ ಆಯ್ಕೆಗೊಂಡರೂ ಬಿಳಿಯರ ಆಡಳಿತವನ್ನು ವಿರೋಧಿಸುತ್ತಲೇ ಬಂದರು. 1989ರಲ್ಲಿ ಆಗಿನ ಅಧ್ಯಕ್ಷ ಎಫ್‌ಡಬ್ಲ್ಯೂ ಡಿ ಕ್ಲರ್ಕ್ ನಡೆಸಿದ ಉದಾರೀಕರಣದ ಪ್ರಯತ್ನಗಳ ಫಲವಾಗಿ ಮಂಡೇಲಾ ಜೈಲಿನಿಂದ ಬಿಡುಗಡೆಗೊಂಡರು ಹಾಗೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮೇಲಿನ ನಿಷೇಧ ತೆರವಾಯಿತು.

ವರ್ಣಭೇದ ಯುಗದ ಸಂದರ್ಭದಲ್ಲಿ ನಡೆದ ಅಪರಾಧ ಕೃತ್ಯಗಳು ಹಾಗೂ ಸಂತ್ರಸ್ತರ ವಿವರ ಮತ್ತು ಪುರಾವೆ ಸಂಗ್ರಹಿಸುವ ಉದ್ದೇಶದಿಂದ 1995ರ ನವೆಂಬರ್‌ನಲ್ಲಿ ಆಗಿನ ಅಧ್ಯಕ್ಷ ಮಂಡೇಲಾ ನೇಮಿಸಿದ ಸತ್ಯ ಮತ್ತು ನ್ಯಾಯ ಪರಿಹಾರ ಸಮಿತಿಯ(ಟಿಆರ್‌ಸಿ) ಅಧ್ಯಕ್ಷರಾಗಿ ಟುಟು ಆಯ್ಕೆಗೊಂಡರು. ದಕ್ಷಿಣ ಆಫ್ರಿಕಾದ ಹಲವು ಮಾಜಿ ಬಿಳಿಯ ಮುಖಂಡರು ಆಯೋಗಕ್ಕೆ ಸುಳ್ಳು ಹೇಳುತ್ತಿರುವುದಾಗಿ ತನಿಖೆಯ ವರದಿಯಲ್ಲಿ ಟುಟು ಉಲ್ಲೇಖಿಸಿದ್ದರು. ಆದರೆ ವರ್ಣಭೇದ ವಿರೋಧಿ ಪ್ರತಿಭಟನೆ ಸಂದರ್ಭ ಹಿಂಸಾ ಮಾರ್ಗ ತುಳಿದ ಹಲವು ಕಪ್ಪುವರ್ಣೀಯ ಮುಖಂಡರ (ವಿನ್ನೀ ಮಂಡೇಲಾ ಹಾಗೂ ಇತರರು) ವಿರುದ್ಧ ಮೃದು ಧೋರಣೆ ತಳೆದ ಆರೋಪ ಟುಟು ವಿರುದ್ಧ ಕೇಳಿಬಂದಿತ್ತು. ಜಾಗತಿಕ ವಿಷಯಗಳ ಬಗ್ಗೆಯೂ ಟುಟು ಗಮನ ಹರಿಸಿದ್ದರು. ಝಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ದೇಶದ ಸ್ಥಿತಿಯನ್ನು ಹದಗೆಡಿಸಿದರು ಎಂದು ಅವರನ್ನು ‘ಕಾರ್ಟೂನ್ ಫಿಗರ್’ ಎಂದು ಟೀಕಿಸಿದರು. ದಲಾಯಿ ಲಾಮಾಗೆ ವೀಸಾ ನಿರಾಕರಿಸಿದ ಚೀನಾದ ಬಗ್ಗೆ ಕಟು ಟೀಕೆ ಮಾಡಿದರು. 2007ರಲ್ಲಿ ನೂತನವಾಗಿ ರಚಿಸಿದ ಪ್ರಬುದ್ಧ ರಾಜಕಾರಣಿಗಳ ತಂಡಕ್ಕೆ ಸೇರ್ಪಡೆಗೊಂಡರು. ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಕೋಫಿ ಅನ್ನಾನ್, ಮೇರಿ ರಾಬಿನ್ಸನ್ ಹಾಗೂ ಇತರರು ಇದ್ದ ಈ ತಂಡ ಅದೇ ವರ್ಷ ಸುಡಾನ್‌ನ ದರ್ಫುರ್ ಪ್ರಾಂತಕ್ಕೆ ಭೇಟಿ ನೀಡಿತು.

ಫೆಲೆಸ್ತೀನೀಯರನ್ನು ಇಸ್ರೇಲ್ ನಡೆಸಿಕೊಳ್ಳುವ ರೀತಿಯನ್ನು ವರ್ಣಭೇದ ಯುಗದ ಆಫ್ರಿಕಾದ ಸ್ಥಿತಿಗೆ ಹೋಲಿಸಿದರು. ಇರಾಕ್‌ನಲ್ಲಿ ಅನೈತಿಕ ಯುದ್ಧದ ಮೂಲಕ ತಾವು ತಪ್ಪು ಎಸಗಿರುವುದನ್ನು ಒಪ್ಪಿಕೊಳ್ಳುವಂತೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್, ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ರನ್ನು ಆಗ್ರಹಿಸಿದರು. ತಾವು ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಚರ್ಚ್‌ಗಳಲ್ಲಿ ನಡೆಯುವ ಅನ್ಯಾಯವನ್ನೂ ವಿರೋಧಿಸಿ ಟೀಕಿಸಲು ಹಿಂಜರಿಯಲ್ಲ. ಇಂಗ್ಲೆಂಡಿನ ಚರ್ಚ್‌ಗಳಲ್ಲಿ ಸಲಿಂಗಕಾಮಿ ಬಿಷಪರ ವಿವಾದದ ಮಧ್ಯೆಯೇ, ಬಡತನದೊಂದಿಗಿನ ಯುದ್ಧವನ್ನು ಹಳಿ ತಪ್ಪಿಸುತ್ತಿರುವ ಪಾದ್ರಿಗಳ ಸಲಿಂಗ ಕಾಮದ ಗೀಳನ್ನೂ ಟೀಕಿಸಿದರು. 1990ರಲ್ಲಿ ಕ್ಯಾನ್ಸರ್ ರೋಗಕ್ಕೆ ಒಳಗಾದ ಟುಟು, ದೀರ್ಘಕಾಲದ ಅಸೌಖ್ಯದ ಬಳಿಕ 90ನೇ ವಯಸ್ಸಿನಲ್ಲಿ ನಿಧನರಾದರು. ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರ ಅಗಲುವಿಕೆಯಿಂದಾಗಿ ವಿಮೋಚನೆಗೊಂಡ ದಕ್ಷಿಣ ಆಫ್ರಿಕಾ ನಮಗೆ ನೀಡಿದ ಮಹೋನ್ನತ ಮುಖಂಡರ ಪೀಳಿಗೆಯಿಂದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಅವರು ಪಂಥೀಯವಲ್ಲದ, ಸಾರ್ವತ್ರಿಕ ಮಾನವ ಹಕ್ಕುಗಳ ಚಾಂಪಿಯನ್ ಎಂದು ಗುರುತಿಸಿಕೊಂಡವರು ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸಾ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

Writer - ಕೆ.ಎಂ.

contributor

Editor - ಕೆ.ಎಂ.

contributor

Similar News