ಮಂಗಳೂರು: ಪಿಎಫ್ ಕಚೇರಿಯ ಧರಣಿ ಸತ್ಯಾಗ್ರಹ

Update: 2021-12-28 15:07 GMT

ಮಂಗಳೂರು, ಡಿ.28: ಕೆವೈಸಿ ಹಾಗೂ ಇ ನೋಮಿನೇಷನ್‌ಗಾಗಿ ದಾಖಲೆ ಒದಗಿಸುವ ನೆಪದಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಭವಿಷ್ಯನಿಧಿ ಕಚೇರಿಯ ಅಧಿಕಾರಿಗಳ ದುರ್ವರ್ತನೆಗಳ ವಿರುದ್ಧ ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದ ಭವಿಷ್ಯನಿಧಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ಕೇಂದ್ರ ಸರಕಾರ ಹಾಗೂ ಪಿಎಫ್ ಕಚೇರಿಯ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಒಳ್ಳೆಯ ದಿನಗಳನ್ನು ತರುವುದಾಗಿ ಪೊಳ್ಳು ಭರವಸೆ ನೀಡಿದ ಕೇಂದ್ರದ ನರೇಂದ್ರ ಮೋದಿ ಸರಕಾರವು ನಿತ್ಯ ನಿರಂತರವಾಗಿ ದುಡಿಯುವ ವರ್ಗವನ್ನು ಶೋಷಿಸುತ್ತಾ ಬಂದಿದೆ. ಅಲ್ಲದೆ ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಿ ಅವುಗಳನ್ನು ಸಂಹಿತೆಗಳನ್ನಾಗಿ ರೂಪಿಸಿ ಕಾರ್ಮಿಕ ವರ್ಗವನ್ನು ಮತ್ತೆ ಜೀತದಾಳುಗಳನ್ನಾಗಿ ಪರಿವರ್ತಿಸಲು ಹುನ್ನಾರ ನಡೆಸುತ್ತಿದೆ. ತಮ್ಮ ದುಡಿಮೆಯ ಪಾಲನ್ನು ಭವಿಷ್ಯದ ಜೀವನಕ್ಕಾಗಿ ಮೀಸಲಿರಿಸಿದ ಭವಿಷ್ಯ ನಿಧಿಯನ್ನು ದಾಖಲೆ ನೀಡುವ ನೆಪದಲ್ಲಿ ಕಾರ್ಮಿಕರಿಗೆ ನೀಡದೆ ಸತಾಯಿಸುತ್ತಿದೆ. ಇದರ ವಿರುದ್ಧ ಜನಾಂದೋಲನ ರೂಪಿಸಬೇಕಾಗಿದೆ ಎಂದು ಹೇಳಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್,ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ರಾಜ್ಯ ನಾಯಕಿಯರಾದ ಪದ್ಮಾವತಿ ಶೆಟ್ಟಿ, ರಮಣಿ ಮೂಡುಬಿದಿರೆ, ಜಯಂತಿ ಶೆಟ್ಟಿ ಮಾತನಾಡಿದರು.

ಧರಣಿ ಸತ್ಯಾಗ್ರಹದಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಜಯಂತ ನಾಯಕ್,ರಾಧಾ ಮೂಡುಬಿದಿರೆ, ನೋಣಯ್ಯ ಗೌಡ, ಯೋಗಿಶ್ ಜಪ್ಪಿನಮೊಗರು, ಭಾರತಿ ಬೋಳಾರ, ಬಾಬು ದೇವಾಡಿಗ, ಬಾಬು ಪಿಲಾರ್, ವಸಂತಿ ಕುಪ್ಪೆಪದವು, ವಿಲಾಸಿನಿ, ಜಯಲಕ್ಷ್ಮಿ, ಸುಂದರ ಕುಂಪಲ, ಭವಾನಿ ವಾಮಂಜೂರು, ಲೋಲಾಕ್ಷಿ, ಗಿರಿಜಾ ಮೂಡುಬಿದಿರೆ, ಜಿಲ್ಲಾ ಕಾರ್ಮಿಕ ನಾಯಕರಾದ ಸದಾಶಿವದಾಸ್, ಸುಕುಮಾರ್ ತೊಕ್ಕೊಟ್ಟು, ಬೀಡಿ ಕಂಟ್ರಾಕ್ಟರ್ ದಾರರ ಸಂಘದ ನಾಯಕರಾದ ಕೃಷ್ಣಪ್ಪ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News