ಸುರತ್ಕಲ್ ತಾತ್ಕಾಲಿಕ ಟೋಲ್ಗೇಟ್‌ನಲ್ಲಿ ಅಕ್ರಮ ಟೋಲ್ ಸಂಗ್ರಹ ನಿಲ್ಲಿಸಿ: ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹ

Update: 2021-12-28 15:12 GMT

ಮಂಗಳೂರು, ಡಿ.28: ಕೆಲವು ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆ, ಭರವಸೆಗಳ ಹೊರತಾಗಿಯೂ ಸುರತ್ಕಲ್ (ಎನ್‌ಐಟಿಕೆ) ತಾತ್ಕಾಲಿಕ ಟೋಲ್ಗೇಟ್ ಅಕ್ರಮವಾಗಿ ಮುಂದುವರಿದಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿಯ ಭರವಸೆಯ ಹೊರತಾಗಿಯೂ ಮತ್ತೆ ತಾತ್ಕಾಲಿಕ ನೆಲೆಯಲ್ಲಿ ಮೂರು ತಿಂಗಳ ಅವಧಿಗೆ ಟೆಂಡರ್ ಕರೆದು ಟೋಲ್ ಸಂಗ್ರಹ ಗುತ್ತಿಗೆ ನವೀಕರಿಸಲಾಗಿದೆ. ಪದೇ ಪದೇ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹ ಗುತ್ತಿಗೆಯು ನವೀಕರ ಣಗೊಳ್ಳುತ್ತಿರುವುದು ಜನಪ್ರತಿನಿಧಿಗಳು ಈ ವಂಚನೆಯಲ್ಲಿ ಶಾಮೀಲಾಗಿರುವ ಅನುಮಾನ ಕಾಡುತ್ತಿದೆ. ಹಾಗಾಗಿ ಈಗಿನ ಗುತ್ತಿಗೆ ಅವಧಿ ಮುಕ್ತಾಯದ ನಂತರ ಯಾವುದೇ ಕಾರಣಕ್ಕೂ ನವೀಕರಣಗೊಳಿಸದೆ ಸುರತ್ಕಲ್ ಟೋಲ್ ಕೇಂದ್ರವನ್ನು ತೆರವುಗೊಳಿಸ ಬೇಕು ಎಂದು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುರತ್ಕಲ್ ಟೋಲ್ಗೇಟ್ ಆರು ವರ್ಷದ ಹಿಂದೆ ಆರಂಭ ಗೊಳ್ಳುವಾಗ ಒಂಬತ್ತು ಕೀ.ಮೀ. ಅಂತರದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರ ಕಾರ್ಯಾರಂಭ ಗೊಂಡ ತಕ್ಷಣ ಅದರೊಂದಿಗೆ ವಿಲೀನಗೊಳಿಸುವ ವಾಗ್ದಾನ ನೀಡಲಾಗಿತ್ತು. ಸರಕಾರಕ್ಕೂ ಲಿಖಿತವಾಗಿ ವಿಲೀನದ ಪ್ರಸ್ತಾಪ ಮುಂದಿಟ್ಟು ಆರು ತಿಂಗಳ ಅವಧಿಗೆ ಟೋಲ್ ಸಂಗ್ರಹಿಸಲು ತಾತ್ಕಾಲಿಕ ನೆಲೆಯಲ್ಲಿ ಅನುಮತಿ ಪಡೆಯಲಾಗಿತ್ತು. ಆದರೆ ಆರು ತಿಂಗಳಲ್ಲಿ ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರ ಆರಂಭಗೊಂಡರೂ ಸುರತ್ಕಲ್ ಟೋಲ್ ಕೇಂದ್ರವನ್ನು ಅದರೊಂದಿಗೆ ವಿಲೀನಗೊಳಿಸದೆ ವಂಚಿಸಲಾಯಿತು. ಆದರೆ ಬೇರೆ ಬೇರೆ ಹಿತಾಸಕ್ತಿಗಳ ಕಾರಣ ವಿಲೀನ ನಿರ್ಧಾರ ನಾಲ್ಕು ವರ್ಷಗಳ ದೀರ್ಘ ಅವಧಿಯಿಂದ ನಿಯಮಗಳಿಗೆ ವಿರುದ್ದವಾಗಿ ಬಾಕಿ ಉಳಿದಿದೆ. ನಂತರವೂ ತಾತ್ಕಾಲಿಕ ನೆಲೆಯಲ್ಲಿ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹ ಗುತ್ತಿಗೆಯನ್ನು ತಾತ್ಕಾಲಿಕ ನೆಲೆಯಲ್ಲಿ ನವೀಕರಿಸುತ್ತಾ ಬರಲಾಯಿತು. ಈ ಅನ್ಯಾಯ, ಅಕ್ರಮ ಟೋಲ್ ಸಂಗ್ರಹದ ವಿರುದ್ದ ಪರಿಸರದ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಹಲವು ಹಂತದ ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ ಎಂದರು.

ಹೆದ್ದಾರಿ ಪ್ರಾಧಿಕಾರ ವಿಲೀನ ತೀರ್ಮಾನವನ್ನು ಜಾರಿಗೊಳಿಸದೆ ಮೂರು, ಆರು ತಿಂಗಳ ಸಣ್ಣ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹ ಗುತ್ತಿಗೆಯನ್ನು ನವೀಕರಿಸುತ್ತಲೇ ಮುಂದುವರಿದುದರ ವಿರುದ್ದ ಹೋರಾಟ ಸಮಿತಿ ಹನ್ನೊಂದು ದಿನಗಳ ದೀರ್ಘ ಅವಧಿಯ ಹಗಲು ರಾತ್ರಿ ಧರಣಿ, ಪಾದಯಾತ್ರೆಯ ಸಹಿತ ಹಲವು ಹೋರಾಟಗಳನ್ನು ನಡೆಸಿದೆ. ಈ ಸಂದರ್ಭ ಸುರತ್ಕಲ್ ಟೋಲ್ ಗೇಟ್ ಎತ್ತಂಗಡಿಯ ಕುರಿತು ಸಂಸದರು, ಶಾಸಕರು ಹಲವು ಭರವಸೆಗಳನ್ನು ನೀಡಿ ವಂಚಿಸಿದ್ದಾರೆ. ಇದೀಗ ಮತ್ತೆ ಮೂರು ತಿಂಗಳ ಅವಧಿಗೆ ಟೋಲ್ ಸಂಗ್ರಹ ಗುತ್ತಿಗೆಯು ತಾತ್ಕಾಲಿಕ ನೆಲೆಯಲ್ಲಿ ನವೀಕರಣಗೊಂಡಿದೆ. ಇದಕ್ಕೆ ಸಂಸದ, ಶಾಸಕರೇ ನೇರ ಹೊಣೆಗಾರರು ಎಂದು ಆಪಾದಿಸಿದರು.

ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಗುತ್ತಿಗೆಯನ್ನು ನವೀಕರಿಸಬಾರದು. ಇಲ್ಲದಿದ್ದಲ್ಲಿ ಮತ್ತೊಮ್ಮೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಹೋರಾಟವನ್ನು ಪುನರಾರಂಭಿಸುವುದು ಅನಿವಾರ್ಯವಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳೂರು ಭೇಟಿಯ ಸಂದರ್ಭ ಸುರತ್ಕಲ್ ತಾತ್ಕಾಲಿಕ ಟೋಲ್ಗೇಟ್ ತೆರವು ಕುರಿತು ಸಭೆ ಏರ್ಪಡಿಸಿ ಸಮಸ್ಯೆ ಇತ್ಯರ್ಥ ಪಡಿಸಲಿ. ಇಲ್ಲದಿದ್ದಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಯ ಕರ್ನಾಟಕ ಸುರತ್ಕಲ್ ಅಧ್ಯಕ್ಷ ರಾಘವೇಂದ್ರ ರಾವ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ದ.ಕ.ಜಿಲ್ಲಾಧ್ಯಕ್ಷ ದಿನೇಶ್ ಕುಂಪಲ, ಯುವ ಕಾಂಗ್ರೆಸ್ ರಾಜೇಶ್ ಪೂಜಾರಿ ಕುಳಾಯಿ, ಹೋರಾಟ ಸಮಿತಿಯ ಮುಖಂಡರಾದ ರಾಜೇಶ್ ಶೆಟ್ಟಿ ಪಡ್ರೆ, ಅಜ್ಮಲ್ ಕಾನ, ನ್ಯಾಯವಾದಿ ಜೀಷನ್ ಅಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News