ಅತ್ತಾವರ: ಶ್ರೀಕೊರಗಜ್ಜ ಕ್ಷೇತ್ರದಲ್ಲಿ ಬಳಸಿದ ಕಾಂಡೋಮ್‌ ಪತ್ತೆ; ಆರೋಪ

Update: 2021-12-28 16:01 GMT

ಮಂಗಳೂರು, ಡಿ.28: ನಗರದ ಅತ್ತಾವರ ಬಳಿಯ ನಂದಿಗುಡ್ಡೆ ಶ್ರೀಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿಯಲ್ಲಿ ಬಳಸಿದ ಕಾಂಡೋಮ್‌ ಪತ್ತೆಯಾಗಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ.

ಕಾಂಡೋಮ್‌ನ್ನು ರಟ್ಟಿನ ತುಂಡಿನಲ್ಲಿ ಕಟ್ಟಿ ಕಾಣಿಕೆ ಡಬ್ಬಿಯ ಪಕ್ಕ ಇಡಲಾಗಿತ್ತು ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ಕೊರಗಜ್ಜನ ಗುಡಿಗೆ ಬಂದವರು ಇದನ್ನು ಗಮನಿಸಿದ್ದು, ವಿಷಯ ತಿಳಿದೊಡನೆ ಸ್ಥಳೀಯ ಜನಪ್ರತಿನಿಧಿಗಳು, ಭಕ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯಗಳು ನಗರದ ಹಲವೆಡೆ ಮರುಕಳಿಸುತ್ತಿದ್ದು ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗಿನ ಅವಧಿಯಲ್ಲಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗುಡಿಯಲ್ಲಿ ಸಿಸಿ ಕ್ಯಾಮರಾವಿದ್ದು ಅದರ ಪುಟೇಜ್ ನೆರವಿನಲ್ಲಿ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ನಾಲ್ಕು ತಿಂಗಳ ಹಿಂದೆ ಇದೇ ರೀತಿ ಮಂಗಳೂರಿನ ಕೆಲವು ಕಡೆ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯ ಒಳಗಡೆ ಬಳಸಿದ ಕಾಂಡೋಮ್ ಪತ್ತೆಯಾಗಿತ್ತು. ಇದರ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಾಗಿರಲಿಲ್ಲ. ಅಲ್ಲದೆ ಮಂಗಳೂರಿನ ಸುರತ್ಕಲ್‌ ಮತ್ತು ಇನ್ನೊಂದು ಕಡೆಯಲ್ಲಿ ನಾಗನ ಕಟ್ಟೆಗೆ ಹಾನಿ ಎಸಗಿದ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದರು.

ನಂದಿಗುಡ್ಡೆ ಶ್ರೀಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿಯಲ್ಲಿ ಬಳಸಿದ ಕಾಂಡೋಮ್‌ ಪತ್ತೆಯಾಗಿರುವ ಘಟನೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಖಂಡಿಸಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News