ಸಿಪಿಐ 97ನೆ ಸಂಸ್ಥಾಪನಾ ದಿನಾಚರಣೆ

Update: 2021-12-28 17:19 GMT

ಮಂಗಳೂರು, ಡಿ.28: ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಅದರ ರಕ್ಷಣೆಗಾಗಿ ಹೋರಾಡುವುದು, ಜಾತ್ಯತೀತತೆಗೆ ಅಪಾಯ ಬಂದಾಗ ಅದನ್ನು ವಿರೋಧಿಸಿ ಕೋಮು ಸಾಮರಸ್ಯ ಕಾಪಾಡುವುದು, ಸಮಾಜವಾದಕ್ಕೆ ಕುತ್ತು ಬಂದಾಗ ಜನಪರ ಚಳವಳಿಯಿಂದ ಸಮಾನತೆ ಕಾಪಾಡುವುದು, ದುಡಿಯುವ ವರ್ಗವನ್ನು ಕಡೆಗಣಿಸಿದಾಗ ಅವರ ಹಕ್ಕು ಭಾದ್ಯತೆಗಳ ರಕ್ಷಣೆಗಾಗಿ ನಿರಂತರ ಚಳವಳಿ ರೂಪಿಸುವುದು. ಮುಂತಾದ ಹಲವು ಕಮ್ಯುನಿಸ್ಟ್ ಅಥವಾ ಸಮಾಜಪರ ಚಳವಳಿಯಿಂದಾಗಿ ದೇಶದ ಸಂವಿಧಾನ ಉಳಿದಿದಿಎ ಮತ್ತು ಬೆಳೆದಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ ರಾಜ್ಯ ಮಂಡಳಿ ಸದಸ್ಯ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯರ್ಶಿ ವಿ. ಕುಕ್ಯಾನ್ ಅಭಿಪ್ರಾಯ ಪಟ್ಟರು.

ಭಾರತ ಕಮ್ಯುನಿಸ್ಟ್ ಪಕ್ಷದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ನಗರದ ಕಾ. ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನಡೆದ ಪಕ್ಷಕ್ಕೆ 97ನೆ ಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭಾರತ ಕಮ್ಯುನಿಸ್ಟ್ ಪಕ್ಷವು 1925ರಲ್ಲಿ ಜನ್ಮ ತಳೆದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ವಿದ್ಯಾರ್ಥಿ-ಯುವಜನರನ್ನು, ರೈತ-ಕಾರ್ಮಿಕರನ್ನು, ಕಲಾವಿದ-ಬರಹಗಾರರನ್ನು, ಮಹಿಳೆಯರನ್ನು, ದಲಿತ-ಆದಿವಾಸಿಗಳನ್ನು ಸಂಘಟಿಸಿ ದೇಶದ ಮೋಚನಾ ಚಳವಳಿಯಲ್ಲಿ ತೊಡಗಿಸಿತು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟದಲ್ಲಿ ಕಮ್ಯುನಿಸ್ಟ್ ನಾಯಕರು ಅನೇಕ ಪಿತೂರಿ ಮೊಕದ್ದಮೆಗಳನ್ನು ಎದುರಿಸಿ ವರ್ಷಗಟ್ಟಲೆ ಸೆರೆಮನೆವಾಸವನ್ನು ಅನುಭವಿಸಿದರು. ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡಿರುವ ಸಮರಶೀಲ ಚರಿತ್ರೆ ಹೊಂದಿದ ಭಾರತ ಕಮ್ಯುನಿಸ್ಟ್ ಪಕ್ಷ ರೈತ ಚಳವಳಿ, ಭೂ ಹೋರಾಟ, ಕಾರ್ಮಿಕರ ಸಂಘಟನೆಯಲ್ಲಿ ನಿರತವಾಯಿತು. ಇಂತಹ ಕಮ್ಯುನಿಸ್ಟ್ ಚಳವಳಿಯನ್ನು ಉಳಿಸಿ ಬೆಳೆಸಬೇಕೆಂದು ಅವರು ಕರೆ ನೀಡಿದರು.

ಸಿಪಿಐ ಜಿಲ್ಲಾ ಕೋಶಾಧಿಕಾರಿ ಎ. ಪ್ರಭಾಕರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷ ಹೆಚ್.ವಿ.ರಾವ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ ಮಾತನಾಡಿದರು. ಹಿರಿಯ ಸದಸ್ಯ ಡಿ. ಬುಜಂಗ ಕೋಡಿಕಲ್ ಪಕ್ಷದ ಬೆಳವಣಿಗೆಯ ಅನುಭವ ಹಂಚಿಕೊಂಡರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಆರ್.ಡಿ ಸೋನ್ಸ್, ಎಐವೈಎಫ್ ನಾಯಕರಾದ ಕೃಷ್ಣಪ್ಪ ವಾಮಂಜೂರು, ರಘು ಕಲ್ಲಗುಡ್ಡೆ, ಎನ್‌ಎಫ್‌ಐಡಬ್ಲ್ಯು ನಾಯಕಿಯರಾದ ರೂಪಾ ಸಿದ್ದಾರ್ಥನಗರ, ವಾರಿಜಾ ಬಜ್ಪೆ ಉಪಸ್ಥಿತರಿದ್ದರು.

ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ. ಕರುಣಾಕರ್ ಸ್ವಾಗತಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News