ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಪುಂಜಾಲಕಟ್ಟೆಯ ಯುವಕನ ಅಂಗಾಂಗ ದಾನ

Update: 2021-12-29 10:52 GMT

ಮಂಗಳೂರು, ಡಿ.29: ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಮೂರ್ಜೆ ನಿವಾಸಿ ಯುವಕ ಸತೀಶ್ ಎಂಬವರ ಅಂಗಾಂಗ ದಾನ ಮಾಡಲಾಗಿದೆ.

ಪುಂಜಾಲಕಟ್ಟೆ ಬಳಿ ರವಿವಾರ ನಡೆದಿದ್ದ ದ್ವಿಚಕ್ರ ವಾಹನ ಅಪಘಾತವೊಂದರಲ್ಲಿ ಸತೀಶ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಆಸ್ಪತ್ರೆಯ ವೈದ್ಯರು ಮಂಗಳವಾರ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸತೀಶ್ ಅವರ ಅಂಗಾಂಗ ದಾನಕ್ಕೆ ನಿರ್ಧರಿಸಿದರು.

ಅದರಂತೆ ಇಂದು ಬೆಳಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಂಗಾಂಗ ದಾನದ ಸಕಲ ಪ್ರಕ್ರಿಯೆಗಳ ಬಳಿಕ ಹೃದಯವನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ, ಲಿವರ್ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಪೂರ್ವಾಹ್ನ 11:30ರ ಸುಮಾರಿಗೆ ಹೃದಯ ಮತ್ತು ಲಿವರ್ ಹೊತ್ತ ಆ್ಯಂಬುಲೆನ್ಸ್ ಝೀರೊ ಟ್ರಾಫಿಕ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿತು. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ರವಾನೆಗೊಂಡಿತು.

 ಒಂದು ಕಿಡ್ನಿಯನ್ನು ಉಡುಪಿ ಮಣಿಪಾಲ್ ಆಸ್ಪತ್ರೆಗೆ ಹಾಗೂ ಇನ್ನೊಂದು ಕಿಡ್ನಿಯನ್ನು ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರವಾನೆ ಮಾಡಲಾಯಿತು.

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೋ, ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಕೆಲ್ವಿನ್ ಪಾಯಸ್, ಎಸಿಪಿ ನಟರಾಜ್ ಸ್ಥಳದಲ್ಲಿದ್ದು ಸಹಕರಿಸಿದರು.

ಮಂಗಳೂರು ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆ ಮೂಲಕ ಆ್ಯಂಬುಲೆನ್ಸ್ ನಲ್ಲಿ ಅಂಗಾಂಗ ಸಾಗಿಸಲು ವ್ಯವಸ್ಥೆ ಮಾಡಿದರು.


ನಾಲ್ವರ ಬಾಳಿಗೆ ಬೆಳಕಾಗಲಿ

ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ಆತನ ಅಂಗಾಂಗಗಳಾದರೂ ನಾಲ್ಕು ಜನರ ಬಾಳಿಗೆ ಬೆಳಕಾಗಲಿ ಎಂದು ಈ ನಿರ್ಧಾರ ಮಾಡಿದ್ದೇವೆ ಎಂದು ಸತೀಶ್ ಅವರ ತಂದೆ ಜಾರಪ್ಪ ಹಾಗೂ ಮಾವ ವಿಠಲ ಪ್ರತಿಕ್ರಿಯಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News