ಪುತ್ತೂರು: ಜ.1ರಂದು ದೇಶಭಕ್ತ ಎನ್.ಎಸ್.ಕಿಲ್ಲೆ ಮಹಾದ್ವಾರ ಲೋಕಾರ್ಪಣೆ

Update: 2021-12-29 09:35 GMT

ಪುತ್ತೂರು, ಡಿ.29: ನಗರಸಭಾ ಕಚೇರಿಯ ಮುಂಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್.ಎಸ್.ಕಿಲ್ಲೆ ಮೈದಾನದಲ್ಲಿ ನಗರಸಭೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾದ ಮಹಾದ್ವಾರದ ಲೋಕಾರ್ಪಣಾ ಕಾರ್ಯಕ್ರಮ ಜ. 1ರಂದು ನಡೆಯಲಿದೆ ಎಂದು ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಎನ್.ಎಸ್.ಕಿಲ್ಲೆಯವರ ಸೋದರಳಿಯ ಕಡಮಜಲು ಸುಭಾಷ್ ರೈ ತಿಳಿಸಿದ್ದಾರೆ.

ಅವರು ಬುಧವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ, ಕಿಲ್ಲೆ 120ನೇ ಜನ್ಮ ವರ್ಷಾಚರಣೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಹಾದ್ವಾರ ಲೋಕಾರ್ಪಣೆ ಮಾಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಜಯಪ್ರಕಾಶ್ ಪುತ್ತೂರು ರಚಿಸಿರುವ ‘ಕಿಲ್ಲೆ ಮತ್ತು 60 ಸಾಮಾನ್ಯರು’ ಕೃತಿಯನ್ನು ಸಂಸದ ನಳಿನ್ ಕುಮಾರ್ ಕಟೀಲು ಬಿಡುಗಡೆ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಕಾರ್ಕಳ ಉದ್ಘಾಟಿಸಲಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮತ್ತು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆಯಲ್ಲಿ ‘ಕಿಲ್ಲೆ ಬದುಕು-ಬರಹ, ಅರ್ಥಗಾರಿಕೆ’ ವಿಚಾರಗೋಷ್ಠಿ ನಡೆಯಲಿದೆ. ಪ್ರೊ. ವರದರಾಜ ಚಂದ್ರಗಿರಿ, ಪ್ರೊ.ವಿ.ಬಿ.ಅರ್ತಿಕಜೆ, ಡಾ.ತುಕಾರಾಮ ಪೂಜಾರಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಿಲ್ಲೆ ಪ್ರತಿಷ್ಠಾನದ ಕಾರ್ಯದರ್ಶಿ ಮುಂಡಾಳಗುತ್ತು ಪ್ರಶಾಂತ್ ರೈ, ಖಜಾಂಚಿ ಚಂದ್ರಹಾಸ ಬಲ್ಲಾಳ್, ಸದಸ್ಯರಾದ ಮುಂಡಾಳಗುತ್ತು ಮೋಹನ ಆಳ್ವ ಮತ್ತು ಉದಯಶಂಕರ ರೈ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News