​ಜ.3ರಿಂದ ದ.ಕ.ಜಿಲ್ಲೆಯ 1,01,549 ಮಕ್ಕಳಿಗೆ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2021-12-29 14:16 GMT
ಡಾ.ರಾಜೇಂದ್ರ

ಮಂಗಳೂರು, ಡಿ. 29: ದ.ಕ.ಜಿಲ್ಲೆಯ 15ರಿಂದ 18 ವರ್ಷ ಪ್ರಾಯದೊಳಗಿನ 1,01,549 ಮಕ್ಕಳಿಗೆ ಜ.3ರಿಂದ ಕೋವಿಡ್ ಲಸಿಕೆ ನೀಡಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ಲಸಿಕೆ ನೀಡಲು ಪಟ್ಟಿ ಸಿದ್ಧಪಡಿಸಿ ಶಿಬಿರ ಆಯೋಜಿಸಲು ಜಿಲ್ಲಾ ಆರೋಗ್ಯ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದರು.

15ರಿಂದ 18 ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುವುದು. ಆಯಾ ಶಾಲಾ ಕಾಲೇಜುಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ತಂಡದ ಮೂಲಕ ಲಸಿಕೆಯನ್ನು ನೀಡಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಡಿಸಿ ಸೂಚಿಸಿದರು.

ಮಕ್ಕಳು ಶಿಕ್ಷಣ ಪಡೆಯುತ್ತಿರುವ ಶಾಲೆಗಳು, ಕಾಲೇಜುಗಳು, ಐಟಿಐಗಳು, ಪಾಲಿಟೆಕ್ನಿಕ್ ಹಾಗೂ ಇತರೆ ಸಂಸ್ಥೆವಾರು ಮಕ್ಕಳ ಪಟ್ಟಿ ಮಾಡಿ ಕ್ರಿಯಾ ಯೋಜನೆ ತಯಾರಿಸಿ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಶಿಬಿರಗಳನ್ನು ಆಯೋಜಿಸುವಂತೆ ಡಿಸಿ ತಿಳಿಸಿದರು.

ಮಕ್ಕಳ ಕೋವಿಡ್ ಲಸಿಕೆಯ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕ ಸಮಿತಿಯ ಸಭೆ ಕರೆದು ಮಾಹಿತಿ ನೀಡುವಂತೆಯೂ ಡಿಸಿ ಸೂಚಿಸಿದರು.

ಜಿಪಂ ಸಿಇಒ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಮಲ್ಲೆಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News