ಆಲೂರು: ಕೊರಗ ಕಾಲನಿಗೆ ಯೋಜನಾ ಸಮನ್ವಯ ಅಧಿಕಾರಿಗಳ ಭೇಟಿ

Update: 2021-12-29 14:22 GMT

ಕುಂದಾಪುರ, ಡಿ.29: ಆಲೂರಿನಲ್ಲಿ ಬೆಂಕಿಗೆ ಆಹುತಿಯಾಗಿರುವ ಕೊರಗ ಸಮುದಾಯದ ಮನೆಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಅಜಲು ಚಾಕರಿಗೆ ಒಳಪಟ್ಟು ಒಡೆಯರ ಭೂಮಿಯಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ಆಲೂರು ಗ್ರಾಮದ ಕೊರಗ ಗುಂಪಿನ ಭೂರಹಿತ ಕೊರಗ ಸಮುದಾಯದ ಅಹವಾಲುಗಳನ್ನು ಅವರು ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಹಾಗೂ ಸಹ ಸಂಚಾಲಕ ಗಣೇಶ ಆಲೂರು ಇವರ ನೇತೃತ್ವದಲ್ಲಿ ಲಿಖಿತ ಮನವಿ ಪತ್ರ ಸಲ್ಲಿಸಿ ವಸತಿ ಸೌಲಭ್ಯ, ಭೂರಹಿತ ಕುಟುಂಬಗಳಿಗೆ ಮಹಮ್ಮದ್ ಪೀರ್ ವರದಿ ಪ್ರಕಾರ ಭೂಮಿ ನೀಡಲು ಮತ್ತು ಮೂಲಭೂತ ಸೌಕರ್ಯಗಳು ಒದಗಿಸಲು ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಅಧಿಕಾರಿಗಳು ಇಲ್ಲಿನ ಕೊರಗ ಸಮುದಾಯದ ಕುಟುಂಬಗಳಿಗೆ ಸ್ವಂತ ಭೂಮಿ ಮತ್ತು ನಿವೇಶನವಿಲ್ಲ. ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯಲು ಪಹಣಿ ಅಗತ್ಯವಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಕೂಡಲೇ ಇಲ್ಲಿನ ಸ್ಥಿತಿ ಮನವರಿಕೆ ಮಾಡಿ 20 ಕುಟುಂಬ ಗಳಿಗೆ ಮೊದಲು ಮಹಮ್ಮದ್ ಪೀರ್ ವರದಿ ಪ್ರಕಾರ ಭೂಮಿ ನೀಡಲು ವರದಿ ಸಲ್ಲಿಸುತ್ತೇವೆ. ಜಿಲ್ಲಾಧಿಕಾರಿಗಳ ಶಿಫಾರಸು ಮೂಲಕ ಭೂಮಿ, ವಸತಿ ಇತರೆ ಸೌಲಭ್ಯ ಒದಗಿಸುವ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಾರಾಯಣ, ರೇವತಿ ಆಲೂರು, ಸುರೇಂದ್ರ ಹೆರೂರು, ಕೊರಗ ನಾರ್ಕಳಿ, ನಾಗೇಶ ಬಾರಂದಾಡಿ ಹಾಗೂ ಇತರರು ಉಪಸ್ಥಿತರಿದ್ದರು.

ಕೇವಲ ಪೊಲೀಸ್ ಅಮಾನತು ಪರಿಹಾರವಲ್ಲ

ಕೋಟತಟ್ಟು ಗ್ರಾಮದ ಬಾರಿಕೆರೆಯಲ್ಲಿ ಕೊರಗರ ಮೇಲೆ ದಾಳಿ ನಡೆಸಿದ ಪೊಲೀಸ್ ಉಪನಿರೀಕ್ಷಕ ಬಿ.ಪಿ. ಸಂತೋಷ್ ಎನ್ನುವವ ರನ್ನು ಅಮಾನತುಗೊಳಿಸಿ, ಐವರು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸ್ವಾಗತಿಸುತ್ತದೆ. ಆದರೆ ಅಮಾನತು ಮಾಡಿದಾಕ್ಷಣ ಅವರಿಗೆ ಶಿಕ್ಷೆ ಆಗಿದೆ ಎಂದು ಅರ್ಥವಲ್ಲ. ಸಂಬಂಧಿಸಿದ ಪೊಲೀಸರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಸಮಿತಿ ಒತ್ತಾಯಿಸುತ್ತದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಪ್ಪಿತಸ್ಥ ಪೊಲೀಸರ ಮೇಲೆ ಕೈಗೊಂಡಿರುವ ಈ ಕ್ರಮ ರಾಜ್ಯಾದ್ಯಂತ ಬಂದಿರುವ ಆಕ್ರೋಶ ಮತ್ತು ಪ್ರತಿರೋಧದ ಭಾಗವಾಗಿ ನಡೆದಿದೆ ಎಂದ ಅವರು, ಉಡುಪಿ ಡಿವೈಎಸ್ಪಿ ಅವರು ಸ್ವಯಂಪ್ರೇರಿತರಾಗಿ ಅಟ್ರಾಸಿಟಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು. ನೊಂದ ಕೊರಗ ಸಮುದಾಯದ ಬಂಧುಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದರೊಂದಿಗೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳು ಇಡೀ ಕೊರಗ ಸಮುದಾಯದ ಕ್ಷಮೆ ಕೇಳಬೇಕು. ಮುಖ್ಯವಾಗಿ ಈ ಘಟನೆ ಹಿಂದೆ ಕೊರಗರ ಕುರಿತು ಅಸೂಯೆ ಮತ್ತು ಕೀಳು ಮನೋಭಾವ ಹೊಂದಿರುವ ಕಾಣದ ಕೈ ಕುರಿತು ತನಿಖೆ ಆಗಬೇಕು. ಅವರಿಗೂ ಶಿಕ್ಷೆ ಆಗಬೇಕು ಎಂದು ಸಮಿತಿ ಒತ್ತಾಯಿಸುತ್ತದೆ. ನ್ಯಾಯ ಸಿಗುವವರೆಗೆ ನಮ್ಮ ಸಮುದಾಯದ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News