ಮೆಹಂದಿ ಪ್ರಕರಣ; ತಪ್ಪಿತಸ್ಥ ಪೊಲೀಸರನ್ನು ಸೇವೆಯಿಂದಲೇ ವಜಾಗೊಳಿಸಿ: ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ಆಗ್ರಹ

Update: 2021-12-29 15:41 GMT

ಉಡುಪಿ, ಡಿ.29: ಕೋಟ ಬಾರಿಕೆರೆಯ ಕೊರಗ ಸಮುದಾಯ ಮೆಹಂದಿ ಕಾರ್ಯಕ್ರಮಕ್ಕೆ ಡಿಜೆ ಬಳಸಿದ್ದಾರೆ ಎಂದು ಅವರ ಮೇಲೆ ಅಮಾನುಷ ದೌರ್ಜನ್ಯ ಎಸಗಿದ ಪೊಲೀಸರನ್ನು ಕೇವಲ ಅಮಾನತು ಅಥವಾ ವರ್ಗಾವಣೆ ಮಾಡಿದರೆ ಸಾಲದು, ಬದಲಾಗಿ ಅವರನ್ನು ಸೇವೆಯಿಂದಲೇ ವಜಾ ಮಾಡಬೇಕು. ಅಲ್ಲದೇ ಕೂಡಲೇ ಅವರನ್ನು ಬಂಧಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಕರ್ನಾಟಕ- ಕೇರಳ ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಅಮ್ಮಣ್ಣಿ ಬೆಳ್ವೆ, ನಮ್ಮ ಸಮುದಾಯ ಬಲು ಪುರಾತನ ಕಾಲದಿಂದಲೂ ಅಜಲು, ಅಸ್ಪಶ್ಯತೆಯ ಕಾರಣದಿಂದ ಈಗಲೂ ಬಹಳ ಹಿಂದುಳಿದಿದ್ದು, ಈ ಕಾಲಘಟ್ಟದಲ್ಲೂ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟಿದೆ. ಈಗ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿರುವ ಈ ಸಮುದಾಯದ ಮೇಲೆ ಪೊಲೀಸರ ಇಂಥ ದೌರ್ಜನ್ಯ, ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.

ಸರಕಾರ ನಮ್ಮ ಸಮುದಾಯವನ್ನು ಪಿವಿಟಿಜಿ ಎಂದು ಗುರುತಿಸಿದೆ.ನಾವು ಹಿಂದಿನಿಂದಲೂ ಶೋಷಣೆಗೆ ಒಳಗಾಗುತ್ತಾ ಬಂದಿದ್ದೇವೆ. ಒಂದು ಕಡೆ ಆರೋಗ್ಯದ ಸಮಸ್ಯೆಯಿಂದಲೂ ಕೂಡಾ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಿರುವಾಗ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದವರು ಮದುವೆ ಮೆಹೆಂದಿ ಕಾರ್ಯಕ್ರಮ ದಲ್ಲಿ ಧ್ವನಿವರ್ಧಕ ಹಾಕಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಒಂಭತ್ತು ಮಂದಿ ಸಿಬ್ಬಂದಿಗಳು ಮೆಹಂದಿ ನಡೆಯುತಿದ್ದ ಮನೆಗೆ ನುಗ್ಗಿ ನಮ್ಮ ಸಮುದಾಯದವರನ್ನು ಮನುಷ್ಯರು ಎಂದು ನೋಡದೆ ಮಹಿಳೆಯರು, ಮಕ್ಕಳು, ಹಿರಿಯರು ಎಂದು ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೆಲಕ್ಕೆ ಉರುಳಿಸಿ ಬೂಟು ಕಾಲಿನಿಂದ ಒದ್ದು ಲಾಟಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೈ, ಕಾಲು ಬೆನ್ನಿನಲ್ಲಿ ತಲೆಯಲ್ಲಿ ಬಾಸುಂಡೆ ಬರುವಂತೆ ಭಾರಿಸಿದ್ದಾರೆ. ಸರಕಾರ ನಮ್ಮ ಸಮುದಾಯವನ್ನು ಪಿವಿಟಿಜಿ ಎಂದು ಗುರುತಿಸಿದೆ. ನಾವು ಹಿಂದಿನಿಂದಲೂ ಶೋಷಣೆಗೆ ಒಳಗಾಗುತ್ತಾ ಬಂದಿದ್ದೇವೆ. ಒಂದು ಕಡೆ ಆರೋಗ್ಯದ ಸಮಸ್ಯೆಯಿಂದಲೂ ಕೂಡಾ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿದೆ. ನಂತರ 4 ಮಂದಿ ನಮ್ಮ ಯುವಕರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ ಹಾಕಿದ ಬಟ್ಟೆಯನ್ನು ಬಿಚ್ಚಲು ಹೇಳಿ ಲಾಟಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಾಗಾದರೆ ನಮ್ಮವರು ಮಾಡಿದ ತಪ್ಪಾದರೂ ಏನು? ನಮ್ಮ ಸಮುದಾಯದವರೆಂದರೆ ಅಷ್ಟೊಂದು ತಾತ್ಸಾರವೇ? ನಮ್ಮ ಸಮುದಾಯ ದವರೆಂದರೆ ಪ್ರಾಣಿಗಳಿಗಿಂತಲೂ ಹೀನವೇ? ಎಂದವರು ಭಾವೋದ್ವೇಗದಿಂದ ಪ್ರಶ್ನಿಸಿದರು.

ಆದುದರಿಂದಲೇ ನಮ್ಮ ಸಮುದಾಯದವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಕೋಟ ಪೋಲಿಸ್ ಠಾಣೆಯ ಸಿಬ್ಬಂದಿಗಳನ್ನು ಈ ಕೂಡಲೇ ಕೆಲಸದಿಂದ ಖಾಯಂ ವಜಾ ಮಾಡಬೇಕು ಹಾಗೂ ಹಲ್ಲೆ ನಡೆಸಿದ ಪಿಎಸ್‌ಐ ಹಾಗೂ ಸಿಬ್ಬಂದಿಗಳನ್ನು ಬಂಧಿಸಿ, ತನಿಖೆಗೆ ಒಳಪಡಿಸಬೇಕೆಂಬುದು ನಮ್ಮ ಪ್ರಧಾನ ಬೇಡಿಕೆಯಾಗಿದೆ. ಇದರೊಂದಿಗೆ ಹಲ್ಲೆಗೊಳಗಾದ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಮುಂದಿನ 7 ದಿನಗಳ ಒಳಗೆ ಧರಣಿ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.

ಜಿಲ್ಲೆಯಲ್ಲಿ ಮೂರನೇ ಘಟನೆ: ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಶೀಲ ನಾಡ ಮಾತನಾಡಿ, ಮೆಹಂದಿ ಮನೆಯಲ್ಲಿ ಮದುಮಗನ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣ ದಾಖಲಿಸಿದರೆ ಮದುವೆ ನಡೆಯಲು ಕೂಡ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ. ಇದರಿಂದ ಹೆದರಿರುವ ನಮ್ಮ ಮುಗ್ದ ಸಮುದಾಯದ ಮಂದಿ ಪ್ರಕರಣದ ಬಗ್ಗೆ ದೂರು ದಾಖಲಿಸಲು ಕೂಡಾ ಹೆದರಿದ್ದಾರೆ. ಹೀಗಾಗಿ ಸಂತ್ರಸ್ಥರ ಕಡೆಯಿಂದ ಪ್ರಕರಣದ ಬಗ್ಗೆ ಇನ್ನೂ ದೂರು ದಾಖಲಾಗಿಲ್ಲ ಎಂದರು.

ಉಡುಪಿ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಮೇಲೆ ನಡೆಯುತ್ತಿರುವ ಮೂರನೇ ಹಲ್ಲೆ ಇದಾಗಿದೆ. ಈ ಹಿಂದೆ ಮೊವಾಡಿಯಲ್ಲಿ ನಮ್ಮ ಸಮುದಾಯ ದವರ ಮೆಹಂದಿ ಕಾರ್ಯಕ್ರಮದಲ್ಲಿ ದನದ ಮಾಂಸ ಮಾಡಿದ್ದಾರೆ ಎಂದು ಆರೋಪಿಸಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇನ್ನೊಮ್ಮೆ ಕೊಲ್ಲೂರಿನಲ್ಲಿ ಆಮೆಯನ್ನು ಬೇಟೆಯಾಡಿದ್ದಾರೆ ಎಂದು ಹೇಳಿ ಹಲ್ಲೆ ನಡೆಸಿದ್ದರು. ಈಗ ಕೋಟದಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಬಂದು ದೌರ್ಜನ್ಯ ನಡೆಸುತ್ತಿರುವುದು ನೋಡಿದರೆ ನಮ್ಮ ಸಮುದಾಯದವರನ್ನು ಉದ್ದೇಶಪೂರ್ವಕ ವಾಗಿ ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಧಮನಿಸಲು ನಡೆಸುತ್ತಿರುವ ಸಂಚು ಇದು ಎಂಬ ಭಾವನೆ ನಮಗೆ ಬರುತ್ತಿದೆ ಎಂದರು.

ಕೊರಗ ಸಮುದಾಯವನ್ನು ಹೊರತು ಪಡಿಸಿ ಉಳಿದ ಯಾವುದೇ ಸಮಾಜದ ಮೆಹಂದಿ ಕಾರ್ಯಕ್ರಮದ ಮೇಲೆ ಈ ರೀತಿ ದೌರ್ಜನ್ಯ ನಡೆಸಿದ ಉದಾಹರಣೆ ಇಲ್ಲ. ಇವೆಲ್ಲವೂ ವ್ಯವಸ್ಥಿತ ರೀತಿಯಲ್ಲೇ ನಡೆಯುತ್ತಿದೆ ಎಂದು ಆರೋಪಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪುತ್ರ ಮಾತನಾಡಿ, 40 ವರ್ಷಗಳ ಬಳಿಕ ಕೋಟತಟ್ಟು ಭಾಗದಲ್ಲಿ ಕೊರಗ ಸಮುದಾಯದಲ್ಲಿ ಇಂತಹ ಒಂದು ವಿಜೃಂಭಣೆ ಕಾರ್ಯಕ್ರಮ ನಡೆಯುತ್ತಿದ್ದು, ಪೊಲೀಸರು ಬಂದು ಸಮುದಾಯ ದ ಜನರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕಂಡಾಗ ನಾವು ಉತ್ತರಪ್ರದೇಶದಲ್ಲಿ ವಾಸಿಸುತಿದ್ದೇವೆಯೇ ಎಂಬ ಭಾವನೆ ಬರುತ್ತಿದೆ. ಇಂತಹ ಮೃಗೀಯ ವರ್ತನೆ ತೋರಿದವರ ಮೇಲೆ ಸಮಾಜ ಕಲ್ಯಾಣ ಇಲಾಖೆ ಇನ್ನೂ ಕೂಡ ಸ್ವಯಂಪ್ರೇರಿತ ದೂರು ದಾಖಲಿಸದೇ ಇರುವುದು ಬೇಸರದ ಸಂಗತಿ. ಸಚಿವರ ಮನೆಯ ಅನತಿ ದೂರದಲ್ಲೇ ಘಟನೆ ನಡೆದರೂ ಕೂಡ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದಾಗ ಇಡೀ ಘಟನೆಯ ಹಿಂದೆ ಯಾರೋ ಪ್ರಭಾವಿಗಳ ಒತ್ತಡ ಇರಬೇಕು ಎಂಬ ಸಂಶಯ ನಮೆ ಬಲವಾಗಿ ಕಂಡುಬರುತ್ತಿದೆ ಎಂದರು.

ಕರಾವಳಿಯ ಮೂಲನಿವಾಸಿಗರಾದ, ಈಗಲೂ ತೀರಾ ಹಿಂದುಳಿದ ಸಮುದಾಯವಾಗಿರುವ ಕೊರಗರು ಅಭಿವೃದ್ಧಿ ಹೊಂದಬಾರದು ಎಂಬ ದುರುದ್ದೇಶದಿಂಲೇ ಪೊಲೀಸರು ಇಂತಹ ವರ್ತನೆ ತೋರುತಿದ್ದಾರೆ ಎಂದು ನಮಗೆ ಸಂಶಯವಿದೆ. ಕೊರಗ ಸಮುದಾಯ ಎಂದೂ ಪೊಲೀಸರ ವಿರುದ್ಧ ಮಾತನಾಡಿದ ಉದಾಹರಣೆ ಇಲ್ಲ. ಹೀಗಾಗಿ ಮೆಹಂದಿಯಲ್ಲಿ ಡಿಜೆ ಶಬ್ದ ಹೆಚ್ಚಾಗಿದ್ದರೆ, ತಿಳಿಹೇಳುವ ಬದಲು ಹಲ್ಲೆ ನಡೆಸಿರುವುದು ಖಂಡನೀಯ ಎಂದರು.

ಘಟನೆಯಲ್ಲಿ ಸಮುದಾಯದ ನಾಯಕ ಗಣೇಶ್ ಕೊರಗ ಅವರ 20 ಗ್ರಾಂನ ಚಿನ್ನದ ಸರ ಕಳವಾಗಿದ್ದು ಇದರ ಬಗ್ಗೆ ಮಾಹಿತಿ ಕೇಳಿದರೆ ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಕೋಟ ಠಾಣೆಯ ಪಿಎಸ್‌ಐ ಹಾಗೂ ಇತರ ಐವರು ಪೊಲೀಸರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಖಾಯಂ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಹಲ್ಲೆಗೊಳ ಗಾದವರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಈ ಮೂಲಕ ದನಿ ಇಲ್ಲದವರಿಗೆ ಸರಕಾರ ಬೆಂಬಲ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ನಾಯಕರಾದ ಸತೀಶ್ ಪೆರ್ಡೂರು, ಬೋಗ್ರಣ್ಣ, ಸಂಜೀವ ಬಾರಕೂರು ಹಾಗೂ ದಿವಾಕರಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News