ಚೀನಾಕ್ಕೆ ಹೊಸ ರಾಯಭಾರಿ ರಾವತ್‌ಗೆ ಬೆಟ್ಟದಷ್ಟು ಸವಾಲು

Update: 2021-12-30 09:14 GMT

ಭಾರತ-ಚೀನಾ ಸಂಬಂಧಗಳು ತೀರಾ ತಳಮಟ್ಟದಲ್ಲಿರುವ ಸಂದರ್ಭದಲ್ಲಿಯೇ ಆ ದೇಶಕ್ಕೆ ಭಾರತದ ಹೊಸ ರಾಯಭಾರಿಯಾಗಿ ಪ್ರದೀಪ್ ಕುಮಾರ್ ರಾವತ್ ಅವರು ನೇಮಕಗೊಂಡಿದ್ದಾರೆ. ಸದ್ಯ ನೆದರ್‌ಲ್ಯಾಂಡಿನಲ್ಲಿ ಭಾರತದ ರಾಯಭಾರಿಯಾಗಿರುವ ರಾವತ್, 1990ರ ತಂಡದ ಇಂಡಿಯನ್ ಫಾರಿನ್ ಸರ್ವಿಸ್ ಅಧಿಕಾರಿ. ಅವರು ಚೀನಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅತ್ಯಂತ ತಜ್ಞ ಮತ್ತು ಅನುಭವಿ ರಾಜತಾಂತ್ರಿಕ ಅಧಿಕಾರಿಯಾಗಿದ್ದರೂ, ಲಡಾಖ್ ಮತ್ತು ಈಶಾನ್ಯ ಗಡಿಗಳಲ್ಲಿನ ಮಿಲಿಟರಿ ಬಿಕ್ಕಟ್ಟು ಮತ್ತು ಚಕಮಕಿಗಳ ಸಂದರ್ಭದಲ್ಲಿ ನೇಮಕವಾಗಿರುವ ಅವರ ಮುಂದಿರುವ ಸವಾಲು ಬೆಟ್ಟದಷ್ಟಿದೆ.

ಮೂರು ವರ್ಷಗಳ ಅವಧಿಯಲ್ಲಿ ಒಂದು ದಿನವೂ ಸಮಾಧಾನದಿಂದ ಕಾಲ ಕಳೆಯಲು ಸಾಧ್ಯವಾಗದ ವಿಕ್ರಮ್ ಮಿಸ್ರಿಯವರ ಸ್ಥಾನದಲ್ಲಿ ಅವರು ನೇಮಕಗೊಂಡಿದ್ದಾರೆ. ಗಡಿ ಬಿಕ್ಕಟ್ಟು ಮಾತ್ರವಲ್ಲ; ಅಫ್ಘಾನಿಸ್ಥಾನದ ಬಿಕ್ಕಟ್ಟು, ಈ ಸಂದರ್ಭದಲ್ಲಿ ಪಾಕಿಸ್ತಾನದ ಜೊತೆ ಹೆಚ್ಚುತ್ತಿರುವ ಚೀನಾ ನಂಟು, ತೈವಾನ್ ಕುರಿತ ಭಾರತದ ನಿಲುವಿನ ಕುರಿತು ಚೀನಾಕ್ಕೆ ಇರುವ ತೀವ್ರ ಅಸಮಾಧಾನ, ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹಿಂದುತ್ವದ ಹುಸಿ ರಾಷ್ಟ್ರೀಯವಾದಿಗಳು ಜಾಗಟೆ ಬಾರಿಸಿದುದರ ಹೊರತಾಗಿಯೂ ಚೀನಾದ ವಸ್ತುಗಳ ಆಮದಿನಲ್ಲಿ ಅತಿರೇಕ ಹೆಚ್ಚಳವಾಗಿ ಎರಡು ದೇಶಗಳ ವ್ಯಾಪಾರದಲ್ಲಿ ಭಾರತವು ಅಸಾಧಾರಣ ಕೊರತೆಯಲ್ಲಿರುವುದು- ಮುಂತಾದ ನೂರಾರು ಸಮಸ್ಯೆಗಳನ್ನು ಅವರು ಎದುರಿಸಬೇಕಾಗಿದೆ.

ಮೊದಲಿಗೆ ರಾವತ್ ಅವರ ಹಿನ್ನೆಲೆಯನ್ನು ಸ್ವಲ್ಪನೋಡಬೇಕು. 2017ರಿಂದ 2020ರ ತನಕ ಅವರು ಇಂಡೋನೇಶ್ಯ ಮತ್ತು ತಿಮೋರ್-ಲೆಸ್ತೆಯಲ್ಲಿಯೂ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ, ಈಗ ಮುಖ್ಯವೆನಿಸುವುದು, 1990ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದಂದಿನಿಂದ ಅವರು ಹೆಚ್ಚಿನ ಸಮಯ ಕಳೆದಿರುವುದು ಚೀನಾ ವ್ಯವಹಾರಗಳಿಗೆ ಸಂಬಂಧಿಸಿದ ವಿಭಾಗದಲ್ಲಿಯೇ. ಚೀನಾದ ಆಡಳಿತ ಭಾಷೆಯಾದ ಮ್ಯಾಂಡರಿನ್‌ನಲ್ಲಿ ನಿರರ್ಗಳವಾಗಿ ಮಾತನಾಡುವಷ್ಟು ಪರಿಣತಿ ಹೊಂದಿರುವ ಅವರು, ಒಂದಲ್ಲ ಒಂದು ಹುದ್ದೆಯಲ್ಲಿ ಇದ್ದುಕೊಂಡು, ಸುಮಾರು 20 ವರ್ಷಗಳ ಕಾಲ ಚೀನಾದ ವ್ಯವಹಾರಗಳನ್ನೇ ಅಧ್ಯಯನ ಮಾಡಿದವರು. ನೆದರ್‌ಲ್ಯಾಂಡ್‌ನಲ್ಲಿ ಇದ್ದ ಅಲ್ಪಾವಧಿಯಲ್ಲಿಯೂ ಅವರು ಲೈಡನ್ ವಿಶ್ವವಿದ್ಯಾನಿಲಯದ ದಕ್ಷಿಣ ಏಶ್ಯನ್ ಮತ್ತು ಟಿಬೆಟಿಯನ್ ಅಧ್ಯಯನ ಸಂಸ್ಥೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರಂತೆ.

ಇಂಜಿನಿಯರ್ ಆಗಲು ಹೊರಟು 1982ರಿಂದ 1987ರ ತನಕ ಕುರುಕ್ಷೇತ್ರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದ ಯುವಕ, ಚೀನಾದ ರಾಯಭಾರಿಯಂತಹ ಮಹತ್ವದ ಹುದ್ದೆ ಪಡೆಯುವುದು ಬಹುದೊಡ್ಡ ಸಾಧನೆಯೇ. ಸ್ವಲ್ಪ ಕಾಲ ಅವರು ದಿಲ್ಲಿಯ ಸೌತ್ ಏಶ್ಯನ್ ಯುನಿವರ್ಸಿಟಿಯಲ್ಲಿ ಕಲಿಸುತ್ತಲೂ ಇದ್ದರು. ವಿಷಯ: ಅದೇ ಚೀನಾ ವ್ಯವಹಾರ.

ಗಾಲ್ವಾನ್ ಗಡಿ ಚಕಮಕಿಯಲ್ಲಿ 20 ಭಾರತೀಯ ಸೈನಿಕರು ಮೃತರಾದ ಘಟನೆಯು- 2017ರಲ್ಲಿ ಡೊಕ್ಲಾಮ್‌ನಲ್ಲಿ ನಡೆದ 73 ದಿನಗಳ ಮುಖಾಮುಖಿಯ ಉದ್ರಿಕ್ತತೆಯನ್ನು ನಂತರದ ಮೂರು ವರ್ಷಗಳಲ್ಲಿ ಉಲ್ಬಣಗೊಳ್ಳಲು ಬಿಟ್ಟದ್ದರ ಪರಿಣಾಮ. ಅದರೆ, 2014ರಿಂದ 2017ರ ತನಕ ಜಂಟಿ ಕಾರ್ಯದರ್ಶಿ (ಪೂರ್ವ ಏಶ್ಯ) ಹುದ್ದೆಯಲ್ಲಿದ್ದು, ಡೊಕ್ಲಾಮ್ ಮುಖಾಮುಖಿ ಉಲ್ಬಣಗೊಳ್ಳದಂತೆ ಮಾಡುವಲ್ಲಿ, ಕೊನೆಗೆ ಅದನ್ನು ಮಾತುಕತೆಯ ಮೂಲಕ ಪರಿಹರಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ರಾವತ್. ಈಗ ಮತ್ತೆ ಅದೇ ರೀತಿಯ ಮುಖಾಮುಖಿ ಉಂಟಾಗಿದೆ. ಆದುದರಿಂದಲೇ ಅದನ್ನು ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ನೋಡುವುದು ರಾವತ್ ಅವರಿಗೆ ಸಾಧ್ಯವಿದೆ.

ಇದಕ್ಕೂ ಮೊದಲು, ಬ್ರಿಟನ್ ಹಾಂಕಾಂಗನ್ನು ಚೀನಾಕ್ಕೆ ಮರಳಿಸುವ ಕ್ಷೋಭೆ ಮತ್ತು ತೀವ್ರ ಚೌಕಾಸಿಯ ವರ್ಷಗಳಲ್ಲಿ ಮೊದಲು ಹಾಂಕಾಂಗ್‌ನಲ್ಲಿ, ನಂತರ ಬೀಜಿಂಗ್‌ನಲ್ಲಿಯೇ 1992ರಿಂದ 1997ರ ತನಕ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ. ಅವರು ಮತ್ತೆ ಮೂರು ವರ್ಷಗಳ ಕಾಲ ಇಲ್ಲಿಯೇ ಪೂರ್ವ ಏಶ್ಯ ವಿಭಾಗದಲ್ಲಿಯೇ ಕಾರ್ಯನಿರ್ವಹಿಸಿದರು. ನಂತರ 2003ರಲ್ಲಿ ಎರಡನೇ ಬಾರಿಗೆ ನಾಲ್ಕು ವರ್ಷಗಳ ಅವಧಿಗೆ ಬೀಜಿಂಗ್‌ಗೆ ಹೋದರು- ಮೊದಲಿಗೆ ಸಲಹೆಗಾರರಾಗಿ ಮತ್ತು ನಂತರ ಉಪರಾಯಭಾರಿಯಾಗಿ. ಈ ಅವಧಿಯು ಗಡಿ ಪ್ರಶ್ನೆಯಲ್ಲಿ ಎರಡು ಸಫಲತೆಗಳನ್ನು ಕಂಡಿತ್ತು. 2003ರಲ್ಲಿ ಗಡಿ ಪ್ರಶ್ನೆಗಳ ಚರ್ಚೆಗೆ ವಿಶೇಷ ಪ್ರತಿನಿಧಿಗಳ ನೇಮಕಾತಿ ಕುರಿತ ಒಪ್ಪಂದ ಆಗಿತ್ತು. 2005ರಲ್ಲಿ ಗಡಿ ಪ್ರಶ್ನೆ ಇತ್ಯರ್ಥಕ್ಕೆ ರಾಜಕೀಯ ಮಾನದಂಡ ಮತ್ತು ಮಾರ್ಗದರ್ಶಿ ಸೂತ್ರಗಳ ಕುರಿತ ಒಪ್ಪಂದ ಆಗಿತ್ತು.

ತೈವಾನ್ ಪ್ರಶ್ನೆ

ಎರಡು ವರ್ಷಗಳ ಬಳಿಕ ಅವರು ಭಾರತ-ತೈಪೆ ಅಸೋಸಿಯೇಷನ್‌ನ ಮುಖ್ಯಸ್ಥರಾಗಿ, ಅಥವಾ ಸಂಪೂರ್ಣವಾಗಿ ಅಂತರ್‌ರಾಷ್ಟ್ರೀಯ ಮನ್ನಣೆ ಪಡೆಯದಿರುವ, ಚೀನಾ ತನ್ನದೇ ಎಂದು ಹೇಳಿಕೊಳ್ಳುತ್ತಿರುವ ತೈವಾನಿಗೆ ತೆರೆಮರೆಯ ರಾಯಭಾರಿಯಾಗಿ ಹೋದರು. ಈ ಹಿನ್ನೆಲೆಯಲ್ಲಿ ಅವರ ಅನುಭವ ವಿಶೇಷವಾದುದು. ಯಾಕೆಂದರೆ, ಈ ತನಕ ಬೀಜಿಂಗ್‌ಗೆ ರಾಯಭಾರಿಯಾಗಿ ಹೋದ ಯಾವುದೇ ಭಾರತೀಯ ರಾಜತಾಂತ್ರಿಕರಿಗೆ ತೈವಾನಿನ ಅನುಭವವಿರಲಿಲ್ಲ. ಭಾರತವು ಒಂದು ಪ್ರಮುಖ ಉತ್ಪಾದಕ ದೇಶವಾದ ತೈವಾನ್ ಜೊತೆ ಹಂತಹಂತವಾಗಿ ಸಂಬಂಧ ಹೆಚ್ಚಿಸಿಕೊಳ್ಳುತ್ತಿರುವ ಮತ್ತು ಚೀನಾ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆಯುತ್ತದೆ.

ಇಬ್ಬರು ಭಾರತೀಯ ಸಂಸತ್ ಸದಸ್ಯರಾದ ಮೀನಾಕ್ಷಿ ಲೇಖಿ ಮತ್ತು ರಾಹುಲ್ ಕಸ್ವಾನ್ ತೈವಾನ್ ಅಧ್ಯಕ್ಷ ತ್ಸಾಯ್ ಇಂಗ್‌ವೆನ್ ಅವರ ವರ್ಚುವಲ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ, ಭಾರತದ ವಿದೇಶಾಂಗ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹೇಳಿಕೆ ನೀಡಿ, ಭಾರತಕ್ಕೆ ತೈವಾನ್ ಜೊತೆ ಅಧಿಕೃತ ರಾಜತಾಂತ್ರಿಕ ಸಂಬಂಧ ಇಲ್ಲವೆಂದೂ, ಕೇವಲ ವಾಣಿಜ್ಯ ಮತ್ತು ಜನರ ಜೊತೆ ಸಂಬಂಧ ಮಾತ್ರವೇ ಇದೆ ಎಂದೂ ಹೇಳಿಕೆ ನೀಡಿದ್ದರು. ತಾನೊಂದು ಸ್ವಾಯತ್ತ ರಾಷ್ಟ್ರ ಎಂದು ತೈವಾನ್ ಹೇಳುತ್ತಿದ್ದರೂ, ಚೀನಾ ಮಾತ್ರ ಈ ದ್ವೀಪವು ತನ್ನ ಒಂದು ಪ್ರಾಂತವೆಂದೇ ಹೇಳಿಕೊಳ್ಳುತ್ತಿದೆ. ಈ ವಿಷಯದಲ್ಲೇ ಅದು ಕೆರಳಿ, ಇತ್ತೀಚೆಗೆ ಯುಎಸ್‌ಎಗೆ ನೇರ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಈ ಸೂಕ್ಷ್ಮ ವಿಷಯವನ್ನು ನಾಜೂಕಾಗಿ ಪರಿಹರಿಸುವ ಸವಾಲು ರಾವತ್ ಅವರ ಮುಂದಿದೆ.

ಗಡಿ ಪ್ರಶ್ನೆ

2020ರ ಗಡಿ ಚಕಮಕಿಯ ನಂತರ ಭಾರತ ಮತ್ತು ಚೀನಾ ಸಂಘರ್ಷವನ್ನು ದ್ವಿಪಕ್ಷೀಯ ಸಂಬಂಧಗಳ ಇತರ ಕ್ಷೇತ್ರಗಳಿಗೆ ನಿಧಾನವಾಗಿ ವಿಸ್ತರಿಸುತ್ತಿವೆ. ಈ ಕ್ರಮಗಳು ತಮ್ಮತಮ್ಮ ದೃಢ ಸಂಕಲ್ಪ ಮತ್ತು ಸಮಸ್ಯೆ ಉಲ್ಬಣಗೊಂಡರೆ ತೆರಬೇಕಾದ ಬೆಲೆಯ ಕುರಿತು ಪರಸ್ಪರರಿಗೆ ಸೂಚನೆ ನೀಡಲು ನಡೆಯುತ್ತವೆ. 2020ರಲ್ಲಿ ಭಾರತವು ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧ ನೌಕೆಯನ್ನು ನಿಯೋಜಿಸಿದ್ದು, ಚೀನಾ ತಕ್ಷಣವೇ ಅದಕ್ಕೆ ಆಕ್ಷೇಪಿಸಿದ್ದು, ನಿಯಂತ್ರಣ ರೇಖೆಯ ಬಳಿ ವಿವಾದಿತ ಪ್ರದೇಶಗಳಲ್ಲಿ ಚೀನಾದಿಂದ ರಸ್ತೆಗಳು ಮತ್ತು ಹಳ್ಳಿಗಳ ನಿರ್ಮಾಣ, ಭಾರತದಿಂದ ಟಿಕ್‌ಟಾಕ್ ಮುಂತಾದ ಚೀನಿ ಆ್ಯಪ್‌ಗಳ ನಿಷೇಧ, ಹೆದ್ದಾರಿ ನಿರ್ಮಾಣದಂತಹ ಹಲವಾರು ಮೂಲಸೌಕರ್ಯ ಕ್ಷೇತ್ರದಲ್ಲಿ ಚೀನಾದ ಕಂಪೆನಿಗಳ ಭಾಗವಹಿಸುವಿಕೆಗೆ ಹೆಚ್ಚಿನ ಅಡೆತಡೆಗಳು, 2020ರ ಜೂನ್‌ನಲ್ಲಿ ಚೀನಾದ ಹ್ಯಾಕರ್‌ಗಳು ಸೈಬರ್ ದಾಳಿಯ ಮೂಲಕ ಮುಂಬೈಯ ವಿದ್ಯುತ್ ಪೂರೈಕೆಯನ್ನು ಕೆಲಕಾಲ ಸ್ಥಗಿತಗೊಳಿಸಿದ್ದು- ಇತ್ಯಾದಿಗಳನ್ನು ಈ ಪಟ್ಟಿಗೆ ಸೇರಿಸಬಹುದು. ಆದುದರಿಂದ, ಜಟಿಲಗೊಳ್ಳುತ್ತಿರುವ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವುದು ರಾವತ್ ಅವರ ಮುಂದಿರುವ ದೊಡ್ಡ ತಲೆನೋವಿನ ಕೆಲಸ.

ಅಫ್ಘಾನಿಸ್ತಾನ, ಮ್ಯಾನ್ಮಾರ್

ಚುಟುಕಾಗಿ ಹೇಳುವುದಾದರೆ, ಅಫ್ಘಾನಿಸ್ತಾನವು ತಾಲಿಬಾನಿನ ನಿಯಂತ್ರಣಕ್ಕೆ ಬಂದ ಬಳಿಕ ನೆರೆಹೊರೆಯ ಬಹುತೇಕ ಎಲ್ಲಾ ದೇಶಗಳಿಗೆ ತಲೆನೋವು ಉಂಟಾಗಿದೆ. ಅಫ್ಘಾನಿಸ್ತಾನದ ಅಪಾರ ಮತ್ತು ಇನ್ನೂ ಉಪಯೋಗಿಸದ ಖನಿಜ ಸಂಪತ್ತಿನ ಮೇಲೆ ಎಲ್ಲರ ಕಣ್ಣಿದೆ. ಚೀನಾ ಅಲ್ಲಿನ ಖನಿಜ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ. ಅಲ್ಲಿ ಭಾರತದ ಹೂಡಿಕೆಯೂ ಇದೆ. ತಾಲಿಬಾನ್, ಪಾಕಿಸ್ತಾನ, ಚೀನಾ ನಂಟು ಭಾರತದ ಮೇಲಿನ ಒತ್ತಡವನ್ನು ಹೆಚ್ಚು ಮಾಡುವ ಎಲ್ಲಾ ಸಾಧ್ಯತೆಗಳಿವೆ. ಇನ್ನೊಂದು ಕಡೆಯಲ್ಲಿ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತಕ್ಕೆ ಚೀನಾದ ಬೆಂಬಲ ಮತ್ತು ಅಲ್ಲಿನ ರೋಹಿಂಗ್ಯಾ ಜನಾಂಗದ ಮೇಲೆ ಸೇನೆಯ ಅತ್ಯಾಚಾರ ಎಲ್ಲರಿಗೂ ಗೊತ್ತಿರುವ ವಿಷಯ. ಮ್ಯಾನ್ಮಾರ್ ಗಡಿಯ ಈಶಾನ್ಯದ ರಾಜ್ಯಗಳಲ್ಲಿ ಬಂಡುಕೋರರ ಸಮಸ್ಯೆಯೂ ಹಳೆಯದು. ಈ ನಿಟ್ಟಿನಲ್ಲಿ ಎದುರಾಗಬಹುದಾದ- ನಿರಾಶ್ರಿತರು ಸೇರಿದಂತೆ ಹಲವಾರು ಸಮಸ್ಯೆಗಳನ್ನು ತಟಸ್ಥಗೊಳಿಸಬೇಕಾದ ಸವಾಲೂ ರಾವತ್ ಅವರ ಮೇಲಿದೆ.

ಆರ್ಥಿಕ ಸವಾಲುಗಳು

ಚೀನಾದ ಆರ್ಥಿಕತೆಯು ಭಾರತಕ್ಕಿಂತ ಐದು ಪಟ್ಟು ದೊಡ್ಡದು. ಅಲ್ಲಿಯ ಸೇನೆಯೂ ಬಹಳಷ್ಟು ದೊಡ್ಡದು ಮತ್ತು ತಂತ್ರಜ್ಞಾನದಲ್ಲಿಯೂ ಹೆಚ್ಚು ಆಧುನಿಕ. ಎರಡೂ ಪರಮಾಣು ಅಸ್ತ್ರಗಳನ್ನು ಹೊಂದಿರುವ ದೇಶಗಳು. ಭಾರತದ ಮಿಲಿಟರಿ ವೆಚ್ಚ 71 ಬಿಲಿಯನ್ ಡಾಲರ್‌ಗಳಾದರೆ, ಚೀನಾದ ಮಿಲಿಟರಿ ವೆಚ್ಚ 261 ಬಿಲಿಯನ್ ಡಾಲರ್‌ಗಳು. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಒಣ ಕೂಗಾಟ ಮತ್ತು ಚೀರಾಟಗಳ ಹೊರತಾಗಿಯೂ ಎರಡೂ ದೇಶಗಳ ವ್ಯಾಪಾರದ ಪ್ರಮಾಣ ಹೆಚ್ಚಾಗಿದೆ. ಆದರೆ, ಭಾರತ ಮತ್ತು ಚೀನಾದ ಆಮದು-ರಫ್ತು ವ್ಯತ್ಯಾಸವು ದಂಗುಬಡಿಸುವ ಪ್ರಮಾಣದಲ್ಲಿದೆ. ಇದು 47 ಬಿಲಿಯನ್ ಡಾಲರ್‌ಗಳಾಗಿದ್ದು, ಭಾರತವು ಜಗತ್ತಿನ ಯಾವುದೇ ದೇಶದೊಂದಿಗೆ ಹೊಂದಿರುವ ಕೊರತೆಗಿಂತ ಹೆಚ್ಚು. ಚೀನಾಕ್ಕೆ ಭಾರತವು ಅತೀದೊಡ್ಡ ಮಾರುಕಟ್ಟೆಗಳಲ್ಲಿ ಒಂದು. ಅದನ್ನು ಕಳೆದುಕೊಳ್ಳಲು ಅದು ಇಷ್ಟಪಡಲಾರದು.

ಯಾವುದೇ ದೇಶಗಳ ನಡುವಿನ ಯುದ್ಧ, ಶಾಂತಿ, ಸ್ನೇಹ ಸಂಬಂಧಗಳು- ಹುಸಿ ಕೂಗುಮಾರಿ ರಾಷ್ಟ್ರೀಯವಾದಿಗಳು ಯೋಚಿಸುವಂತೆ ಭಾವನಾತ್ಮಕ, ಕಾಲ್ಪನಿಕ ವಿಷಯಗಳ ಮೇಲೆ ನಿಂತಿರುವುದಿಲ್ಲ. ಅವು ವಾಣಿಜ್ಯ ಮತ್ತು ವ್ಯೆಹಾತ್ಮಕ ಹಿತಾಸಕ್ತಿಗಳ ಮೇಲೆ ನಿಂತಿದೆ. ಇಂದಿನ ನ್ಯೂಕ್ಲಿಯರ್ ಯುಗದಲ್ಲಿ ಯುದ್ಧವು ವಿನಾಶಕಾರಿಯಾಗಬಹುದು. ಈ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಮಾತುಕತೆ ಮತ್ತು ಚೌಕಾಸಿಯೇ ಏಕೈಕ ಪರಿಹಾರ. ಈ ಹಿನ್ನೆಲೆಯಲ್ಲಿ ಪ್ರದೀಪ್ ಕುಮಾರ್ ರಾವತ್ ಅವರ ಹೆಗಲೇರಿರುವ ಹೊಣೆಗಾರಿಕೆ ಅಗಾಧವಾದದ್ದು.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News