ಪೊಲೀಸ್ ದೌರ್ಜನ್ಯ ನಡೆದ ಕೊರಗ ಕಾಲನಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಭೇಟಿ

Update: 2021-12-30 07:31 GMT

ಕೋಟ : ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಚಿಟ್ಟಿಬೆಟ್ಟು ಕೊರಗ ಸಮುದಾಯದವರ ಮೇಲೆ ಪೊಲೀಸ್ ದೌರ್ಜನ್ಯ ನಡೆದ ಕೊರಗ ಕಾಲನಿಗೆ ಬುಧವಾರ ರಾತ್ರಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿದರು.

ಘಟನೆ ಕುರಿತು ಮನಸ್ಸಿಗೆ ತುಂಬಾ ನೋವಾಗಿದೆ ಎಲ್ಲವನ್ನೂ ಮರೆತು ನೆಮ್ಮದಿಯಿಂದಿರಿ. ಸರ್ಕಾರ ನಿಮ್ಮ ಜೊತೆಗಿದೆ. ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೇಳಿರುವಂತೆ ಪಿಎಸ್ಐ ಅವರನ್ನು ಅಮಾನತಗೊಳಿಸಿ ಉಳಿದ ಏಳು ಮಂದಿ ಸಿಬ್ಬಂದಿಯನ್ನು ವರ್ಗಾವಣೆ ಗೊಳಿಸಲಾಗಿದೆ. ಜೊತೆಯಲ್ಲಿ ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಲು ಸೂಚಿಸಿದ್ದೇನೆ. ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗಿದ್ದು  ನಿಮ್ಮೊಂದಿಗೆ  ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಜಿಲ್ಲೆಯ ಅಧಿಕಾರಿಗಳಿಂದ ತನಿಖೆಗೆ ಅಗ್ರಹ : 

ಈ ಸಂದರ್ಭದಲ್ಲಿ ದೌರ್ಜನ್ಯ ಪ್ರಕರಣವನ್ನು ಹೊರ ಜಿಲ್ಲೆಯ ಅಧಿಕಾರಿಗಳಿಂದ ತನಿಖೆಗೆ ಅಗ್ರಹಿಸಿ  ಸಾರ್ವಜನಿಕರು ಒತ್ತಾಯಿಸಿದರು. ಅದಕ್ಕೆ ಒಪ್ಪಿದ ಸಚಿವರು ನಿಮ್ಮೆಲ್ಲರ ಒತ್ತಾಯದಂತೆ ಈ ಪ್ರಕರಣವನ್ನು ಹೊರಗಿನ ಅಧಿಕಾರಿಗಳಿಂದ ತನಿಖೆ  ಮಾಡಲು ಅದರ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು  ಹೇಳಿದರು.

ಕೊರಗ ಕುಟುಂಬಗಳ ಮೂಲ  ಸೌಕರ್ಯಗಳ  ಅಭಿವೃದ್ಧಿಯಾಗಬೇಕು ಎನ್ನುವ ಬಹಳ ದಿನಗಳ ಬೇಡಿಕೆಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಲಾಗುವುದು. ಎಲ್ಲಾ ಕುಟುಂಬಗಳಿಗೆ ಹಕ್ಕುಪತ್ರ ವಿಚಾರದಲ್ಲಿ ಸಮಸ್ಯೆ ಇದ್ದು ನಾಲ್ಕು ಜನರಿಗೆ ಕೂಡಲೇ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಉಳಿದ  ಐದು ಕುಟುಂಬಗಳಿಗೆ ಸಂಬಂಧಪಟ್ಟ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಅದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇಂತಹ ಕುಟುಂಬಗಳ ಮೇಲೆ ದೌರ್ಜನ್ಯ ನಡೆದಿರುವುದು ನೋವು ತಂದಿದೆ ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಈ ಕುಟುಂಬಗಳಿಗೆ ಅಗತ್ಯ ಭದ್ರತೆ ನೀಡಲು ಗೃಹ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಬ್ರಹ್ಮಾವರ ತಹಶೀಲ್ದಾರ್  ರಾಜಶೇಖರಮೂರ್ತಿ, ಕೋಟ ಗ್ರಾ. ಪಂ ಅಧ್ಯಕ್ಷ ಅಜಿತ್ ದೇವಾಡಿಗ, ಕೋಟತಟ್ಟು ಗ್ರಾ. ಪಂ. ಅಧ್ಯಕ್ಷೆ ಅಶ್ವಿನಿದಿನೇಶ್, ಕೋಡಿ ಗ್ರಾ. ಪಂ. ಅಧ್ಯಕ್ಷ ಪ್ರಭಾಕರ್ ಮೆಂಡನ್, ಕೋಟ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ ಕುಂದರ್, ಮುಸ್ಲಿಂ ಒಕ್ಕೂಟದ ಸದಸ್ಯ ಸಿರಾಜ್ ಸಾಹೇಬ್ ಬಾರಿಕೆರೆ, ಕೋಟ ಗ್ರಾಮ ಲೆಕ್ಕಿಗಾಧಿಕಾರಿ ಚಲುವರಾಜ್, ಕೋಟತಟ್ಟು ಗ್ರಾ.ಪಂ ಸದಸ್ಯರಾದ ಪ್ರಮೋದ್ ಹಂದೆ, ಪ್ರಕಾಶ ಹಂದಟ್ಟು, ಸತೀಶ್ ಕುಂದರ್, ವಾಸು ಪೂಜಾರಿ, ರಾಬರ್ಟ್ ರೋಡ್ರಿಗಸ್, ರವೀಂದ್ರ ತಿಂಗಳಾಯ, ಸರಸ್ವತಿ, ಜ್ಯೋತಿ, ವಿದ್ಯಾ ಎಸ್. ಸಾಲ್ಯಾನ್, ಸಾಯಿರಾ ಬಾನು, ಪೂಜಾ‌ ಹಂದಟ್ಟು, ನ್ಯಾಯವಾದಿ ಶ್ಯಾಮಸುಂದರ ನಾಯರಿ, ಮಂಜುನಾಥ್ ಗಿಳಿಯಾರು, ಸ್ಥಳೀಯರಾದ ರತ್ನಾಕರ ಬಾರಿಕೆರೆ, ಜೀವನ್ ಮಿತ್ರ ನಾಗರಾಜ್ ಪುತ್ರನ್, ಸುರೇಶ ಕೋಟ, ರಂಜಿತ್ ಕುಮಾರ್ ಕೋಟ, ಪ್ರಸಾದ್ ಬಿಲ್ಲವ,  ಐಟಿಡಿಪಿ ಅಧಿಕಾರಿಗಳು ಇದ್ದರು.

ಹಿಂದೂ ಜಾಗರಣೆ ವೇದಿಕೆಯ ಮುಖಂಡರು, ಕೊರಗ ಮುಖಂಡರುಗಳಾದ ಗಣೇಶ ಕುಂಬಾಶಿ, ಗಣೇಶ ಬಾರ್ಕೂರು, ಶೇಖರ್ ಮರವಂತೆ,  ಉದಯ ಕುಮಾರ್ ತಲ್ಲೂರು,  ಮಾಧವ ಕುಂಜಿಬೆಟ್ಟು ಕಾರ್ಕಡ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News