ಕುಂದಾಪುರ: ಸಾಲ ತೀರಿಸಲಾಗದ ಚಿಂತೆ; ಯುವಕ ಆತ್ಮಹತ್ಯೆ

Update: 2021-12-30 14:37 GMT

ಕುಂದಾಪುರ, ಡಿ. 30: ಮೊಬೈಲ್ ಆ್ಯಪ್ ಮೂಲಕ ಪಡೆದ ಸಾಲ ಮರು ಪಾವತಿಸಲಾಗದ ಚಿಂತೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಮ್ಮಾಡಿಯ ಹರೆಗೋಡು ಎಂಬಲ್ಲಿಂದ ವರದಿಯಾಗಿದೆ.

ಹೆಮ್ಮಾಡಿ ಹರೆಗೋಡು ಕೊಳಹಿತ್ತು ನಿವಾಸಿ ಸಂಜೀವ ದೇವಾಡಿಗ ಹಾಗೂ ಕನಕ ಎಂಬವರ ಪುತ್ರ ವಿಘ್ನೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ವಿಘ್ನೇಶ್ ಇಂದು ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಘ್ನೇಶ್ ತಾಯಿ ಇಂದು ಬೆಳಗ್ಗೆ ಎದ್ದು ನೋಡುವಾಗ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡು ಹೊರಗಡೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ವಿಘ್ನೇಶ್ ಉದ್ಯಮ ಪ್ರಾರಂಭಿಸಲು ಮೊಬೈಲ್ ಆ್ಯಪ್ ಮೂಲಕ ಸಾಲ ಪಡೆದಿದ್ದ. ಆದರೆ ಲಾಕ್‌ಡೌನ್‌ನಿಂದ ಉದ್ಯಮದಲ್ಲಿ ನಷ್ಟ ಉಂಟಾಗಿ ಪಡೆದು ಕೊಂಡ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಸಾಲ ಕೊಟ್ಟವರು ಸಾಲ ಮರುಪಾವತಿಸುವಂತೆ ತೀವ್ರ ಒತ್ತಡ ಹೇರಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ವಿಘ್ನೇಶ್ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿದ್ದು, ಅದರಲ್ಲಿ ’ಮೊಬೈಲ್ ಆ್ಯಪ್’ನಲ್ಲಿ ಮಾಡಿಕೊಂಡ ಸಾಲ ನನಗೆ ತೀರಿಸಲು ಆಗುತ್ತಿಲ್ಲ. ಆದ್ದರಿಂದ ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ಸಾಲ ಕೇಳಿ ಯಾರಾದರೂ ಕರೆ ಮಾಡಿದರೆ ಅವನು ನಮಗೆ ಗೊತ್ತಿಲ್ಲ ಅಥವಾ ಸತ್ತು ಹೋದ ಎಂದು ಹೇಳಿ ಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿ ಬಿಡಿ’ ಎಂಬ ಪತ್ರ ಬರೆದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News