ಕಾಸರಗೋಡು | ಮಿಲಿಟರಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಯೋಧನಿಗೆ ಅಂತಿಮ ನಮನ

Update: 2023-06-05 06:40 GMT

ಕಾಸರಗೋಡು, ಅ.24: ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಮೃತಪಟ್ಟ ಯೋಧ ಕೆ.ವಿ.ಅಶ್ವಿನ್(24) ಅವರ ಪಾರ್ಥಿವ ಶರೀರ ಇಂದು (ಸೋಮವಾರ) ಹುಟ್ಟೂರಾದ ಕಾಸರಗೋಡಿನ ಚೆರ್ವತ್ತೂರಿಗೆ ತಲುಪಿದ್ದು, ಕಿಯಕ್ಕಮುರಿಯ ಮನೆಯ ಪರಿಸರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವಿಮಾನ ಮೂಲಕ ಕಣ್ಣೂರಿಗೆ ತರಲಾಗಿದ್ದ ಮೃತದೇಹವನ್ನು ಬಳಿಕ  ಚೆರ್ವತ್ತೂರಿಗೆ ತರಲಾಯಿತು. ಸೇನಾಪಡೆಯ ಅಧಿಕಾರಿಗಳು ಜೊತೆಗಿದ್ದರು.
ಚೆರ್ವತ್ತೂರು ಕಿಯಕ್ಕಮುರಿಯ ವಾಚನಾಲಯದ ಪರಿಸರದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಿಡಲಾಗಿದ್ದು, ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
  ರಾಜ್ಯ ಸರಕಾರದ ಪರ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಪರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್  ಪುಷ್ಪಚಕ್ರ ಅರ್ಪಿಸಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಇ.ಚಂದ್ರಶೇಖರನ್, ಸಿ.ಎಚ್.ಕುಞ೦ಬು, ಟಿ.ಐ.ಮಧುಸೂದನನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ನೀಲೇಶ್ವರ ಬ್ಲಾಕ್ ಪಂಚಾಯತ್  ಅಧ್ಯಕ್ಷ ಮಾಧವನ್ ಮಣಿಯಾರ, ಮಾಜಿ ಸಂಸದ ಪಿ.ಕರುಣಾಕರನ್, ಪಿ.ಕೆ.ಶ್ರೀಮತಿ, ಮಾಜಿ ಶಾಸಕ ಮಾರಯ್ಯ ಕೆ.ಕುಂಞಿರಾಮನ್ ಕೆ.ಪಿ.ಸತೀಶ್ಚಂದ್ರನ್, ಟಿ.ವಿ.ರಾಜೇಶ್, ಕೆ.ಪಿ.ಕುಂಞಿಕಣ್ಣನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, ಚೆರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ  ವೈಭವ್ ಸಕ್ಸೇನಾ, ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ತಹಶೀಲ್ದಾರ್ ಎನ್.ಮಣಿರಾಜ್ , ಕಿನಾನೂರ್ ಕರಿಂದಳ ಮಿಲಿಟರಿ ಅಸೋಸಿಯೇಶನ್ ಮಿಲಿಟರಿ ಅಸೋಸಿಯೇಶನ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು, ಯುವಕರು ಮತ್ತು ಸ್ವಯಂಸೇವಕ ಸಂಘಟನೆಗಳ ಮುಖಂಡರು ಸೇರಿದಂತೆ ಸಮಾಜದ ವಿವಿಧ ವಲಯಗಳ  ಸಾವಿರಾರು ಮಂದಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಪಾರ್ಥಿವ ಶರೀರವನ್ನು ಸ್ವಗೃಹಕ್ಕೆ ತರಲಾಯಿತು.  
ಮಿಲಿಟರಿ ಅಂತ್ಯಕ್ರಿಯೆಯ ವಿಧಿಗಳ ನಂತರ, ಮನೆಯ ಪರಿಸರದಲ್ಲಿ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭಗೊಂಡಿತು. ಸೇನಾ ಅಧಿಕಾರಿಗಳು ರಾಷ್ಟ್ರಧ್ವಜ ಹಾಗೂ ಸೈನಿಕರ ಸಮವಸ್ತ್ರವನ್ನು ಪೋಷಕರಾದ ಕೌಸಲ್ಯ ಮತ್ತು ಅಶೋಕ್  ಅವರಿಗೆ ಹಸ್ತಾಂತರಿಸಿದರು. ಡಿಎಸ್‌ಸಿ ಸ್ಟೇಷನ್ ಕಮಾಂಡೆಂಟ್ ಕರ್ನಲ್ ಲೋಕೇಂದ್ರ ಸಿಂಗ್ ನೇತೃತ್ವದಲ್ಲಿ ಯೋಧರು ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.

 ಕೆ.ವಿ.ಅಶ್ವಿನ್ ಅವರಿಗೆ ಸೇರಿದ ಸೇನೆಯ ಎಇಎನ್ ಕಾರ್ಪ್ಸ್ ಕ್ಯಾಪ್ಟನ್ ಆರ್.ಯುವರಾಜ್ ನೇತೃತ್ವದಲ್ಲಿ ಆರು ಯೋಧರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News