ನಾಯಕತ್ವದ ಹೊಸ ಇನ್‌ಕ್ಯುಬೇಟರ್ ಡಾ. ರುಹಾ ಶಾದಾಬ್

Update: 2022-01-06 10:04 GMT

ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಫರ್ಹಾನಾಝ್ ತಮ್ಮ ಕವಿತೆ, ಲೇಖನಗಳ ಮೂಲಕ ಇತ್ತೀಚೆಗೆ ಜನಪ್ರಿಯರಾಗುತ್ತಿದ್ದಾರೆ. ಪ್ರಸ್ತುತ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಯೋಜನೆಯಡಿಯಲ್ಲಿ ‘ಮೌನ ಮನದ ಮಾತುಗಳು ಕವನಗಳಾದಾಗ’ ಸಂಕಲನ ಆಯ್ಕೆಯಾಗಿದೆ. ವಿದ್ಯಾರ್ಥಿ ಜೀವನದಿಂದಲೇ ಸಾಹಿತ್ಯಾಸಕ್ತರಾಗಿದ್ದ ಫರ್ಹಾನಾಝ್, ಅವರ ಕವನ, ಲೇಖನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

ಫರ್ಹಾನಾಝ್ ಮಸ್ಕಿ

"ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಮಹಿಳೆಯರನ್ನು ಸಬಲೀಕರಿಸಲು ಶಿಕ್ಷಣವೊಂದೇ ಅತ್ಯುತ್ತಮ ಆಧಾರ. ಅದರ ಜೊತೆಗೆ ಸೂಕ್ತ ನಾಯಕತ್ವ ತರಬೇತಿಗಳಿಂದಾಗಿ ಅವರ ಸ್ಥಾನಮಾನಗಳನ್ನು ಹೆಚ್ಚಿಸಲು ಸಾಧ್ಯವಾಗಿದ್ದು ಅದಕ್ಕೆ ಡಾ.ರುಹಾ ಅವರ ಲೆಡ್‌ಬೈ ಫೌಂಡೇಶನ್ ಸಹ ಕೈ ಜೋಡಿಸಿದೆ."

ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ನನ್ನ ಬಗ್ಗೆ ಏನು ಹೇಳಿಕೊಳ್ಳುತ್ತಾರೆ? ಜನ ಏನು ಚಿಂತಿಸುತ್ತಾರೆ? ಅಂತ ನಾನು ತಲೆ ಕೆಡಿಸಿಕೊಳ್ಳುವವಳಲ್ಲ. ನನಗೇನು ಒಳ್ಳೆಯದೆನಿಸುತ್ತದೋ ಅದನ್ನೇ ಮಾಡಲು ಮುಂದಾಗುತ್ತೇನೆ. ನಾನು ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾಗಲಿಲ್ಲ. ಮೆಡಿಕಲ್ ಕಾಲೇಜು ಸೇರಲೂ ನನಗೆ ಮೂರು ಬಾರಿ ಪ್ರಯತ್ನಿಸಬೇಕಾಯಿತು. ನಮಸ್ತೆ, ಸಲಾಂ ನನ್ನ ಹೆಸರು ಡಾ. ರುಹಾ ಶಾದಾಬ್. ನಾನೊಬ್ಬ ಡಾಕ್ಟರ್, ಸೋಷಿಯಲ್ ಎಂಟ್ರಪ್ರೇನರ್ ಮತ್ತು ಲೆಡ್‌ಬೈ ಫೌಂಡೇಶನ್‌ನ ಸಂಸ್ಥಾಪಕಿ ಹಾಗೂ ಸಿಇಒ ಆಗಿದ್ದೇನೆ’ ಎಂದು ತಮ್ಮನ್ನು ತಾವು ಟಾಕ್ ಶೋಗಳಲ್ಲಿ ಎಲ್ಲೆಡೆ ಪರಿಚಿಯಿಸಿಕೊಳ್ಳುವ ಡಾ. ರುಹಾ ಶಾದಾಬ್ ಪ್ರಸ್ತುತ ಜಗತ್ತಿನಲ್ಲಿ ಯಾರೂ ಚಿಂತಿಸದ ಅಮೋಘವಾದ ಐಡಿಯಾಗಳನ್ನು ಕಾರ್ಯರೂಪಕ್ಕೆ ತಂದ ವಿಶೇಷತೆ ಹೊಂದಿದವರಾಗಿದ್ದಾರೆ. ತಾನು ಚಿಕ್ಕಂದಿನಿಂದಲೇ ವಿಭಿನ್ನ ಚಿಂತನೆಗಳನ್ನು ಹೊಂದಿದ್ದು, ಒಮ್ಮೆ ಅವರ ಮನೆಗೆ ಬಂದಿದ್ದ ಅಂಕಲ್ ಒಬ್ಬರು ರುಹಾರವರಿಗೆ ನೀನು ದೊಡ್ಡವಳಾಗಿ ಏನಾಗುತ್ತೀಯಾ? ಎಂದು ಕೇಳಿದಾಗ ಎಲ್ಲಾ ಮಕ್ಕಳಂತೆ ತಾನು ಡಾಕ್ಟರ್, ಆಫೀಸರ್ ಆಗುತ್ತೇನೆನ್ನುವ ಬದಲು ‘‘ನಾನು ವಿಶ್ವ ಶಾಂತಿ ತರುತ್ತೇನೆಂದು’’ ಹೇಳಿದ್ದರಂತೆ. ಅದನ್ನು ಕೇಳಿದ ಎಲ್ಲರೂ ನಕ್ಕು ಬಿಟ್ಟರು. ಆದರೆ ರುಹಾರವರಿಗೆ ಆ ಅತಿಥಿಗಳೆಲ್ಲಾ ತಮ್ಮ ಉತ್ತರ ಕೇಳಿ ನಗುತ್ತಿದ್ದಾರೆಂದು ತಿಳಿಯಲಿಲ್ಲ. ಅವರೆಲ್ಲಾ ತನ್ನ ಕನಸಿನ ಮೇಲೆ ನಗುತ್ತಿದ್ದಾರೆ ಎಂದು ನೋವಾಯಿತಂತೆ. ಆಗ ರುಹಾ ತನ್ನ ಕನಸಿನಂತೆ ತಾನು ಅಸಹಾಯಕರಿಗೆ ಸಹಾಯ ಮಾಡಬೇಕು, ಜನರ ಜೀವನವನ್ನು ಉತ್ತಮಗೊಳಿಸಬೇಕು. ಆದರೆ ಇದು ಸುಲಭವೇ ಎಂದು ಚಿಂತಿಸಲಾರಂಭಿಸಿದರು. ಅವರ ತಂದೆ ಡಾಕ್ಟರ್, ತಂದೆಯ ಸ್ನೇಹಿತರೆಲ್ಲಾ ಡಾಕ್ಟರ್, ಡಾಕ್ಟರ್ ಕಾಲನಿಯಲ್ಲೇ ಅವರ ವಾಸ. ಅದರಂತೆ ಜನ ಸೇವೆ ಮಾಡುವ ಅತ್ಯಂತ ಒಳ್ಳೆಯ ದಾರಿ ಡಾಕ್ಟರ್ ಆಗುವುದಾಗಿದೆ ಎಂದು ಅರಿತು ರುಹಾ 2014-15ರಲ್ಲಿ ಡಾಕ್ಟರ್ ಆದರು. ಆದರೆ, ಯಾವಾಗ ಅವರು ಡಾಕ್ಟರ್‌ಗಳ ಪ್ರಸ್ತುತ ಸ್ಥಿತಿ ಹಾಗೂ ಸರಕಾರಿ ಆಸ್ಪತ್ರೆಗಳ ನೈಜ ಪರಿಸ್ಥಿತಿಯನ್ನು ನೋಡಿದರೋ ಆಗ ಅವರಿಗೆ ಅರಿವಾಯಿತು. ತಾನು ಹೇಳಿಕೊಂಡಂತೆ ಜನರ ಜೀವನ ಸುಧಾರಿಸಬೇಕೆಂದರೆ ಮೊದಲು ವ್ಯವಸ್ಥೆಯನ್ನು ಮತ್ತು ಆಸ್ಪತ್ರೆಗಳನ್ನು ಸುಧಾರಿಸಬೇಕಾಗಿದೆ. ಇದರಿಂದಾಗಿ ಅವರು ಸಾರ್ವಜನಿಕ ಆರೋಗ್ಯದತ್ತ ತೆರಳಿದರು. ತನ್ನ ಎಮ್‌ಡಿ ಪದವಿಯನ್ನು ಪೂರ್ಣಗೊಳಿಸದೆ.

ಎನ್‌ಜಿಒಗಳತ್ತ ಮುಖ ಮಾಡಿದ್ದು ಅವರ ‘‘ಇಷ್ಟ ನೆಂಟರ’’ ಸಿಟ್ಟಿಗೆ ಗುರಿ ಮಾಡಿತು. ಆದರೆ ‘‘ನನಗೆ ಅದರ ಪರಿವೇ ಇರಲಿಲ್ಲ’’ ಎಂದು ರುಹಾ ತಮ್ಮ ಟಾಕ್ ಶೋನಲ್ಲಿ ಹೇಳಿಕೊಳ್ಳುತ್ತಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಐಎಎಸ್ ಅಧಿಕಾರಿಗಳಿಗೆ ವಿದ್ಯಾರ್ಥಿ ವೇತನದೊಂದಿಗೆ ಅಧ್ಯಯನ ಮಾಡಲು ಅವಕಾಶಗಳಿವೆ ಎಂಬುದನ್ನು ಅರಿತು ಯುಪಿಎಸ್‌ಸಿಗಾಗಿ ತಯಾರಿ ನಡೆಸಿದರು. ರುಹಾ ನೀತಿ ಆಯೋಗದಲ್ಲಿ ಆಯ್ಕೆಯಾದರು. ಅಲ್ಲಿ ಅವರು ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದರು. ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನಕ್ಕೆ ಆಯ್ಕೆಯಾದರು. ಆದರೆ ತನ್ನ ಬಾಲ್ಯದ ಕನಸನ್ನೇ ನನಸು ಮಾಡುವ ಛಲ ಹೊಂದಿದ್ದರು ರುಹಾ. 2019ರ ಮಾರ್ಚ್‌ನಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಒಂದು ಸಾಮಾಜಿಕ ಉದ್ಯಮ ಶೀಲತೆಯ ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ಯಾರೂ ಹೊಸ ಚಿಂತನೆಯನ್ನು ಮಂಡಿಸುವರೋ ಅಂತಹವರಿಗೆ ಧನ ಸಹಾಯದಿಂದ ಹಿಡಿದು ಕನಸಿನ ಉದ್ಯಮವನ್ನು ಆರಂಭಿಸಲು ಬೇಕಾದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ. ರುಹಾ ಈ ಸ್ಪರ್ಧೆಯಲ್ಲಿ ‘‘ಭಾರತೀಯ ಮುಸ್ಲಿಮ್ ಮಹಿಳೆಯರ ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳನ್ನು ಹೆಚ್ಚಿಸುವ ಹೊಸ ಚಿಂತನೆಯನ್ನು ಮಂಡಿಸಿದರು. ಅವರಿಗೆ ಸ್ಪರ್ಧೆ ಏರ್ಪಡಿಸಿದವರು ಸಂದರ್ಶನಕ್ಕೆ ಕರೆದರು. ಅದೊಂದು ಬಾಲ್ಯದ ಕನಸಾಗಿತ್ತು ಆದ್ದರಿಂದ ಸಂದರ್ಶನಕ್ಕೆ ಹೋದಾಗ ಯಾವ ಪ್ರಶ್ನೆಗಳ ಬಗ್ಗೆಯೂ ಭಯವಾಗಲಿಲ್ಲ. ಕೊನೆಗೆ ರುಹಾ ಈ ಸ್ಪರ್ಧೆಯಲ್ಲಿ ಆಯ್ಕೆ ಆಗಿಯೇ ಬಿಟ್ಟರು. ತದನಂತರ ಅವರು ತಮ್ಮ ಸ್ನಾತಕೋತ್ತರ ಪದವಿ ಮುಗಿಸಲು ಭಾರತಕ್ಕೆ ಹಿಂದಿರುಗಿದರು.

ಭಾರತೀಯ ಮುಸ್ಲಿಮ್ ಮಹಿಳೆಯರಿಗಾಗಿ ಉಪಕ್ರಮವನ್ನು ಆರಂಭಿಸುವ ಅಗತ್ಯವನ್ನು ಡಾ. ರುಹಾ ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ಅರ್ಥಮಾಡಿಕೊಳ್ಳಲು, ಅವರ ಮೇಲೆ ಆದ ಹಲವು ಪ್ರಭಾವಗಳೂ ಕಾರಣವಾಗಿವೆ.

ಡಾ.ರುಹಾ ಮೂಲತಃ ಭಾರತದವರಾಗಿದ್ದರೂ, ಅವರು ಸೌದಿ ಅರೇಬಿಯಾದಲ್ಲಿ ಹುಟ್ಟಿ ಬೆಳೆದರು ಮತ್ತು ದಿಲ್ಲಿಗೆ ತೆರಳುವ ಮೊದಲು ಅವರು ತಮ್ಮ ಜೀವನದ ಮೊದಲ ದಶಕವನ್ನು ಸೌದಿಯಲ್ಲೇ ಕಳೆದರು. ಅಲ್ಲಿ ಅವರು ಏಕ ಪ್ರಕಾರದ ಸಾಂಸ್ಕೃತಿಕ ಹಿನ್ನೆಲೆಯ ಸಮಾಜವನ್ನು, ಅವರ ಆಚರಣೆ ಹಬ್ಬ ಹರಿದಿನಗಳನ್ನು ನೋಡಿದ್ದರು. ಆದರೆ ಭಾರತದಂತಹ ಬಹುಸಂಸ್ಕೃತಿಯ ಸಮಾಜದಲ್ಲಿ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರೆಲ್ಲರೂ ತಮ್ಮ ಹಬ್ಬಗಳನ್ನು ಮುಕ್ತವಾಗಿ ಒಟ್ಟಿಗೆ ಆಚರಿಸುವ ದೃಶ್ಯಗಳನ್ನು ನೋಡಿ ತುಂಬಾ ಪ್ರಭಾವಿತರಾದರು. ಆದ ಕಾರಣ ಅವರಿಗೆ ಭಾರತದ ಬಗ್ಗೆ ವಿಶೇಷ ಅಭಿಮಾನ ಹುಟ್ಟಿಕೊಂಡಿತು.

ಆದರೆ ಭಾರತದಂತಹ ಬಹುಸಂಸ್ಕೃತಿಯ ಸಮಾಜದಲ್ಲಿ ಸುಮಾರು 100 ಮಿಲಿಯನ್ ಮುಸ್ಲಿಮ್ ಮಹಿಳೆಯರು ಇದ್ದಾರೆ. ಹೌದು, ಅವರು ಎಲ್ಲಿದ್ದಾರೆ ಎಂಬುದು ಮಾತ್ರ ತಿಳಿಯದು. ಏಕೆಂದರೆ ಸಾಕಷ್ಟು ಮುಸ್ಲಿಮ್ ಮಹಿಳೆಯರು ಮುಖ್ಯ ವಾಹಿನಿಯಲ್ಲಿ ಕಂಡು ಬರುವುದಿಲ್ಲ. ಆದ್ದರಿಂದ ಅವರನ್ನು ಹುಡುಕುವುದೂ ಕಷ್ಟವಾಗಿದೆ ಎಂದು ರುಹಾ ಸಂಶೋಧನೆಗಳಿಂದ ತಿಳಿದುಕೊಂಡಿದ್ದಾರೆ. ತಮ್ಮ ಶಾಲೆ, ಕಾಲೇಜು, ಕೆಲಸದ ಸ್ಥಳದಲ್ಲಿ ತಾನೊಬ್ಬಳೇ ಮುಸ್ಲಿಮ್ ಮಹಿಳೆಯಾಗಿರುವುದು ಒಂದು ಹಂತದ ನಂತರ ರುಹಾ ಬೇಸರ ತರಿಸಿತು. ಅವರ ಜೊತೆಗೆ ತನ್ನಂತೆಯೇ ಸಮಾನವಾದ ಹಿನ್ನೆಲೆಯನ್ನು ಹಂಚಿಕೊಂಡವರು ಯಾರೂ ಇರಲಿಲ್ಲ. ಆದ್ದರಿಂದ ಈ ಪರಿಸ್ಥಿತಿಯನ್ನೇ ಬದಲಾಯಿಸಲು ಇಚ್ಛಿಸಿದ್ದರು. ಇವೆಲ್ಲಾ ಘಟನೆಗಳು ರುಹಾರವರಿಗೆ ತಮ್ಮ ಕನಸಿನ ಲೆಡ್‌ಬೈ ಫೌಂಡೇಷನ್ ಅನ್ನು 2019ರಲ್ಲಿ ಆರಂಭಿಸಲು ದಾರಿ ಮಾಡಿದವು. ಇದೊಂದು ಹೊಸ ಚಿಂತನೆ, ಹೊಸ ಆರಂಭ. ಆದ್ದರಿಂದ ಜನರಿಗೆ ತಿಳಿಸಿ ಹೇಳುವುದೂ ಕಷ್ಟಕರವಾಗಿತ್ತು.

ಭಾರತೀಯ ಮುಸ್ಲಿಮ್ ಮಹಿಳೆಯರಲ್ಲಿ ಸಾಕಷ್ಟು ಪ್ರತಿಭೆಗಳಿವೆ ಎಂದು ಡಾ. ರುಹಾ ಕಂಡುಕೊಂಡಿದ್ದಾರೆ. ಆದರೆ ಭಾರತೀಯ ಮುಸ್ಲಿಮ್ ಮಹಿಳೆಯರಲ್ಲಿ 3ಗಳ ಕೊರತೆ ಇದೆ. ಅವೇನೆಂದರೆ Agency,  Access ಮತ್ತು Avenue. ಲೆಡ್‌ಬೈ ಈ ಕೊರತೆಗಳನ್ನು ನೀಗಿಸುವತ್ತ ಗಮನ ಹರಿಸಿದೆ ಎಂದು ರುಹಾ ಹೇಳುತ್ತಾರೆ.

ಲೆಡ್ ಬೈ ಫೌಂಡೇಶನ್ ಏನು ಮಾಡುತ್ತದೆ?

ಸಹಯೋಗದ ನೆಟ್‌ವರ್ಕಿಂಗ್ ಮತ್ತು ಆರ್ಥಿಕ ಬೆಂಬಲದೊಂದಿಗೆ ಭಾರತೀಯ ಮುಸ್ಲಿಮ್ ಮಹಿಳೆಯರು ಭಾರತಕ್ಕೆ ಸಬಲೀಕರಣದ ಮೂಲಕ ಬೆಳವಣಿಗೆಯ ಇಂಜಿನ್ ಆಗಲು ಸಹಕರಿಸುತ್ತದೆ. ಪರಿಣಾಮಕಾರಿ ಮಾರ್ಗದರ್ಶನದೊಂದಿಗೆ, ಭಾರತೀಯ ಮುಸ್ಲಿಮ್ ಮಹಿಳೆಯರು ದೇಶದ ಒಗ್ಗಟ್ಟಿನ ಮೇಲೆ ಧನಾತ್ಮಕ ಮತ್ತು ದೊಡ್ಡ ಪರಿಣಾಮವನ್ನು ಬೀರಬಹುದು. ಫೌಂಡೇಶನ್ ನೇತೃತ್ವದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪದವಿ ಪೂರ್ವ ಕಾಲೇಜು/ ಪದವಿ ಓದುತ್ತಿರುವವರಿಗೆ ಬೆಂಬಲಿತ ನಾಯಕತ್ವ ತರಬೇತಿ ಕಾರ್ಯಕ್ರಮದ ಮೂಲಕ ಜಾಗತಿಕ ಮಟ್ಟದಲ್ಲಿ ಬೆಳೆಯಲು ಮಾದರಿಗಳ ಅಗತ್ಯವಿದ್ದು, ಅಂತಹ ಬದಲಾವಣೆ ಮಾಡುವವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲಾಗುತ್ತದೆ.

ಭಾರತದಲ್ಲಿ 2 ಮಿಲಿಯನ್ ಮುಸ್ಲಿಮ್ ಮಹಿಳೆಯರು ಒಂದು ಹಾಗೂ ಒಂದಕ್ಕಿಂತ ಹೆಚ್ಚು ಪದವಿಗಳನ್ನು ಹೊಂದಿದ್ದಾರೆ. ಆದರೆ ಕೆಲವೇ ಮುಸ್ಲಿಮ್ ಮಹಿಳೆಯರು ನಾಯಕರಾಗಲು ಸಾಧ್ಯವಾಗಿದೆ. ಈ ಮಹಿಳೆಯರ ವಿಶಿಷ್ಟ ಹೋರಾಟಗಳಿಗೆ ಸೂಕ್ತ ಮಾದರಿಗಳ ಅವಶ್ಯಕತೆ ಇದೆ.

ವೃತ್ತಿಪರ ಏಣಿಗಳನ್ನು ಹತ್ತುವಲ್ಲಿ ಶಿಕ್ಷಣವು ಒಂದು ಪ್ರಮುಖ ಅಂಶವಾಗಿದ್ದರೂ, ಅದು ಯಾವಾಗಲೂ ವೃತ್ತಿ ಜೀವನದ ಯಶಸ್ಸಿಗೆ ಸಹಕರಿಸುವುದಿಲ್ಲ. ಫೌಂಡೇಶನ್ ನೇತೃತ್ವದಲ್ಲಿ ಭಾರತೀಯ ಮುಸ್ಲಿಮ್ ಮಹಿಳಾ ಶಿಕ್ಷಣವನ್ನು ಸಬಲೀಕರಣವನ್ನಾಗಿ ಪರಿವರ್ತಿಸಿ ಅವರಿಗೆ ನೈಜ ಜೀವನ ಕೌಶಲ್ಯ, ಬೆಂಬಲಿಸುವ ಪರಿಸರ ವ್ಯವಸ್ಥೆ ಮತ್ತು ಸರಿಯಾದ ಅವಕಾಶಗಳು ಹಾಗೂ ವೈವಿಧ್ಯಮಯ ನೆಟ್‌ವರ್ಕ್‌ಗಳಿಗೆ ಪ್ರವೇಶವನ್ನು ಒದಗಿಸಲಾಗುತ್ತದೆ.

ಲೆಡ್‌ಬೈ ಪ್ರೋಗ್ರಾಂ ಎಲ್-ಬಿ-ಎಫ್ ಮೇಲೆ ಕೇಂದ್ರೀಕರಿಸುತ್ತದೆ:

Logic: ಚಿಂತನೆ/ ಸ್ಪಷ್ಟತೆ/ ಗುರಿ-ಸೆಟ್ಟಿಂಗ್/ ವೃತ್ತಿಯೋಜನೆ.

Broadcast: ಪ್ರಸ್ತುತಿ/ ಕಥೆ ಹೇಳುವ/ ಬರೆಯುವ ಸಾಮರ್ಥ್ಯ

Feedback: ಅಪ್-ಡೌನ್‌ಮಾರ್ಗದರ್ಶನ/ ಮಿತ್ರತ್ವ / ತಂಡ ಬಲಪಡಿಸುವಿಕೆ/ ವ್ಯವಸ್ಥೆಗಳ ಸುಧಾರಣೆ.

ಇದರ ಜೊತೆಗೆ ಮೂರು ವಿಷಯಗಳನ್ನು ಪೂರೈಸುತ್ತಿದೆ. ನಾಯಕತ್ವದ ಕಾರ್ಯಾಗಾರಗಳು, ಸಲಹಾ ಮತ್ತು ಕಾರ್ಯನಿರ್ವಾಹಕ ತರಬೇತಿ. ಈ ಮೂರು ವಿಷಯಗಳಿಗಾಗಿ ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡಲು, ವೈವಿಧ್ಯ ಪ್ರದೇಶಗಳಿಂದ ಮತ್ತು ಧಾರ್ಮಿಕ ಹಿನ್ನೆಲೆಯ ಹಾಗೂ ನುರಿತ ಮಹಿಳಾ ತಂಡವನ್ನು ರೂಪಿಸಲಾಗಿದೆ. ಈ ಫೌಂಡೇಶನ್‌ನಲ್ಲಿ ಪ್ರಪಂಚದಾದ್ಯಂತ ಪರಿಣಿತರನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿ ನಿರಂತರ ತರಬೇತಿಗಳ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡಲಾಗುತ್ತದೆ. ಇದೊಂದು ನಾಲ್ಕು ತಿಂಗಳ ಬೇಸಿಗೆ ಕಾರ್ಯಕ್ರಮವಾಗಿದ್ದು,ಇದರಲ್ಲಿ 24 ಮಹಿಳೆಯರನ್ನು ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಲು, ಭಾರತೀಯ ಮುಸ್ಲಿಮ್ ಮಹಿಳೆ ಎಂದು ಗುರುತಿಸಿಕೊಳ್ಳಬೇಕು, ಯುವ ಭಾರತೀಯ ಮುಸ್ಲಿಮ್ ಮಹಿಳೆಯರಿಗಾಗಿ ಒಂದು ಅನನ್ಯ ನಾಯಕತ್ವ ಕಾರ್ಯಕ್ರಮವು ಅನುಭವದ ಕಲಿಕೆಯ ಮೇಲೆ ಕೇಂದ್ರೀಕರಿಸುತ್ತಿರುವ ಲೆಡ್‌ಬೈ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಮಹಿಳೆಯರಿಗೆ ಉಚಿತವಾಗಿಯೂ ಫೌಂಡೇಶನ್‌ನ ಸೌಲಭ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಲೆಡ್‌ಬೈಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಗ್ರಾಜುವೇಷನ್ ಕಾರ್ಯಕ್ರಮವನ್ನು ಸೆಪ್ಟಂಬರ್ 13, 2020ರಂದು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೌಕರಿ.ಕಾಂ ಸ್ಥಾಪಕರಾದ ಸಂಜೀವ್ ಬಿಕ್ ಚಂದಾನಿ, ನಟಿ ಹಾಗೂ ಕಾರ್ಯಕರ್ತೆಯಾದ ಶಬಾನಾ ಅಜ್ಮಿ ಹಾಗೂ ವಿಶ್ವದ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಮ್ ಮಹಿಳೆ ಶಿರಿನ್ ಇಬಾದಿಯಂತಹ ಧೀಮಂತ ವ್ಯಕ್ತಿಗಳು ಭಾಗವಹಿಸಿದ್ದರು. ಕೇವಲ ಒಂದೆರಡು ವರ್ಷಗಳಲ್ಲೇ ಇಷ್ಟೊಂದು ಜನ ಮನ್ನಣೆ ಹಾಗೂ ಜನಪ್ರಿಯ ಚಿಂತನೆಯೊಂದಿಗೆ ಬೆಳೆಯುತ್ತಿರುವ ಈ ಫೌಂಡೇಶನ್ ಡಾ. ರುಹಾರ ಕನಸಿನ ಕೂಸಾಗಿದೆ. ನಿಜಕ್ಕೂ ಭಾರತೀಯ ಮುಸ್ಲಿಮ್ ಮಹಿಳೆಯರಲ್ಲಿರುವ ನ್ಯೂನತೆಗಳನ್ನೇ ಗಮನದಲ್ಲಿರಿಸಿಕೊಂಡು ಅವರ ಅವಶ್ಯಕತೆಗಳಿಗೆ ತಕ್ಕ ಕಾರ್ಯಕ್ರಮಗಳನ್ನು ಹಾಗೂ ತರಬೇತಿಯನ್ನು ಆಯೋಜಿಸುತ್ತಿರುವ ಡಾ. ರುಹಾರ ಪ್ರತಿಭೆಗೊಂದು ಸಲಾಂ.

ಮಹಿಳಾ ನಾಯಕರ ಕೊರತೆ ಇನ್ನೂ ತಾರಕಕ್ಕೇರಿದೆ ಮತ್ತು ಭಾರತೀಯ ಮುಸ್ಲಿಮ್ ಮಹಿಳೆ  ಯರು ದೇಶದ ಕಾರ್ಯಪಡೆಗಳಲ್ಲಿ ಪ್ರಾಯೋಗಿಕವಾಗಿ ನಾಪತ್ತೆಯಾಗಿದ್ದಾರೆ. ದೇಶದಲ್ಲಿ ಸರಿಸುಮಾರು 70 ಮಿಲಿಯನ್ ವಿದ್ಯಾವಂತ ಮುಸ್ಲಿಮ್ ಮಹಿಳೆಯರಿದ್ದಾರೆ. ಒಂದು ಅಧ್ಯಯನದ ಪ್ರಕಾರ, ಭಾರತದ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್‌ಎಫ್‌ಪಿಆರ್) ಕುಸಿಯುತ್ತಿದೆ. ಮತ್ತೊಂದು ಅಧ್ಯಯನದ ಪ್ರಕಾರ, ವಿದ್ಯಾವಂತ ಮುಸ್ಲಿಮ್ ಮಹಿಳೆಯರನು ್ನಕೆಲಸಕ್ಕೆ ತರುವುದು ದೇಶದ ಜಿಡಿಪಿಯನ್ನು ಹಲವು ಬಿಲಿಯನ್ ಡಾಲರ್‌ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದು. ಆದರೆ ದುರದೃಷ್ಟವಶಾತ್, ಭಾರತೀಯ ಮುಸ್ಲಿಮ್ ಮಹಿಳೆಯರು ತಾವು ಮಹಿಳೆ ಮತ್ತು ಮುಸ್ಲಿಮ್ ಎಂಬ ಎರಡು ಅನನುಕೂಲತೆಗಳಿಂದಾಗಿ ಮುಖ್ಯ ವಾಹಿನಿಯತ್ತ ಮುಖ ಮಾಡಲು ಅವಕಾಶ ವಂಚಿತರಾಗಿದ್ದಾರೆ.

ಮತ್ತೊಂದೆಡೆ ಹೆಚ್ಚುವರಿಯಾಗಿ, ಮುಸ್ಲಿಮ್ ಸಮುದಾಯದಲ್ಲಿನ ಬಡತನ, ಅನಕ್ಷರತೆಯ ಜೊತೆಗೆ ಭಾರತದಲ್ಲಿ ಮುಸ್ಲಿಮ್ ಮಹಿಳೆಯರ ಕುರಿತ ವರದಿಗಳು ಅವರ ಹಿಂದುಳಿದಿರುವಿಕೆಗೆ ಸಂಪ್ರದಾಯಗಳು, ಅನಾಚಾರಗಳು ಕಾರಣವಾಗಿವೆ ಎಂದೂ ಹೇಳುತ್ತವೆ. ಈ ಪರಿಸ್ಥಿತಿಯಿಂದ ಅವರನ್ನು ಮೇಲೆತ್ತಲು ಶಿಕ್ಷಣವೊಂದೇ ಅತ್ಯುತ್ತಮ ಆಧಾರವಾಗಿದ್ದು, ಅದರ ಜೊತೆಗೆ ಸೂಕ್ತ ನಾಯಕತ್ವ ತರಬೇತಿಗಳಿಂದಾಗಿ ಅವರ ಸ್ಥಾನಮಾನಗಳನ್ನು ಹೆಚ್ಚಿಸಲು ಸಾಧ್ಯವಾಗಿದೆ. ಅದಕ್ಕೆ ಡಾ.ರುಹಾ ಅವರ ಲೆಡ್‌ಬೈ ಫೌಂಡೇಶನ್ ಸಹ ಒಂದು ಬುನಾದಿಯನ್ನು ಹಾಕಿದೆ ಎಂದರೆ ತಪ್ಪಲ್ಲ. ರುಹಾ ರೂಪಿಸಿರುವ ಈ ವಿಶಿಷ್ಟ ಮಾದರಿ ಎಲ್ಲರಿಗೂ ಪ್ರೇರಣೆಯಾಗಲಿ.

Writer - ಫರ್ಹಾನಾಝ್ ಮಸ್ಕಿ

contributor

Editor - ಫರ್ಹಾನಾಝ್ ಮಸ್ಕಿ

contributor

Similar News

ಬೀಗ