ಒಂದು ಮಸೀದಿಯ ಕಥೆ

Update: 2022-01-03 10:26 GMT

ಬ್ಯಾರಿ, ಕನ್ನಡ, ತುಳು ಮೂರುಭಾಷೆಗಳಲ್ಲೂ ಕೈಯಾಡಿಸಿರುವಮುಹಮ್ಮದ್ ಕುಳಾಯಿಯವರು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಥೆಗಾರರು, ಕಾದಂಬರಿಗಾರರು. ‘ಕಾಡಂಕಲ್‌ಲ್ ಮನೆ’ ಇವರ ಜನಪ್ರಿಯ ಕಾದಂಬರಿ. ಇವರ ‘ಮಿತ್ತ ಬೈಲು ಯಮುನಕ್ಕ’ ಅನುವಾದಿತ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ದೊರಕಿದೆ. ಇವರಿಗೆ ದೊರಕಿರುವ ಲಂಕೇಶ್ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ನಿರತ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿಯ ಪ್ರಶಸ್ತಿಗಳೇ ಇವರ ಸಾಹಿತ್ಯ ಬರಹಗಳ ಹಿರಿಮೆಗಳನ್ನು ಹೇಳುತ್ತವೆ. ‘ಕದನ ಕುತೂಹಲ’, ‘ಕುಚ್ಚ್ಚಿ ಕಾಡಿನ ಕಪ್ಪು ಹುಡುಗ’, ‘ನನ್ನ ಇನ್ನಷ್ಟು ಕತೆಗಳು’, ‘ರಂಗನೋ ಮಲೆ ಮಂಗನೋ’ (ಅನುವಾದ), ‘ಪೆರ್ನಾಲ್’ ಬ್ಯಾರಿ ಕಥಾ ಸಂಕಲನ ಇತರ ಕೃತಿಗಳು. ಬ್ಯಾರಿ ಭಾಷೆಯಲ್ಲಿ ‘ಅರೇಬಿಯನ್ ನೈಟ್ಸ್’ ಕಥೆಗಳನ್ನು ತಂದ ಹೆಗ್ಗಳಿಕೆ ಇವರದು.

ಮುಹಮ್ಮದ್ ಕುಳಾಯಿ

ಅದೊಂದು ನಗರ. ನಗರವೆಂದರೆ ದೊಡ್ಡ ನಗರವೇನೂ ಅಲ್ಲ, ಚಿಕ್ಕ ನಗರವೂ ಅಲ್ಲ. ಅಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಕೆಎಸ್ಸಾರ್ಟಿಸಿಯ ದೊಡ್ಡ ಬಸ್ ನಿಲ್ದಾಣ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಹೆಸರಾಂತ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳು, ಹಲವಾರು ದೇವಸ್ಥಾನ, ಚರ್ಚ್, ಮಸೀದಿಗಳು ಎಲ್ಲವೂ ಇವೆ. ಹಲವಾರು ಪ್ರೇಕ್ಷಣೀಯ ಸ್ಥಳಗಳೂ ಇವೆ.

ಇಲ್ಲಿಯ ರೈಲು ನಿಲ್ದಾಣದಲ್ಲಿ ಇಳಿದು ಗೇಟಿನ ಹೊರಗೆ ಬಂದು ಎಡಕ್ಕೆ ತಿರುಗಿ ಕಾಂಕ್ರಿಟ್ ರಸ್ತೆಯಲ್ಲಿ ಸುಮಾರು 1/2 ಕಿ.ಮೀ.ನಷ್ಟು ನಡೆದರೆ ಒಂದು ಸುಂದರ, ದೊಡ್ಡ, ಭವ್ಯ, ಆಕರ್ಷಕ ಮಸೀದಿ ಸಿಗುತ್ತದೆ. ಈ ನಗರಕ್ಕೆ ಬಂದ ಪ್ರವಾಸಿಗರು ಯಾರೂ ಈ ಮಸೀದಿಯನ್ನೊಮ್ಮೆ ನೋಡದೆ ಹಿಂದಿರುಗುವುದಿಲ್ಲ. ಬಿಳಿ ಬಣ್ಣ ಬಳಿದು ಶಿಲೆ ಕಲ್ಲಿನಿಂದ ಕೆತ್ತಲ್ಪಟ್ಟಂತೆ ಜಗಜಗಿಸುವ ಈ ಮಸೀದಿಯ ನೆತ್ತಿಯಲ್ಲಿ ದೊಡ್ಡ ಗುಂಬಝ್. ಅದರ ಪಕ್ಕದಲ್ಲೇ ಆಕಾಶಕ್ಕೆ ತಲೆಕೊಟ್ಟು ನಿಂತಿರುವ ಎರಡು ಮಿನಾರಗಳು. ಅದರ ಬುಡದಲ್ಲೇ ಅದರ ಮರಿಗಳೇನೋ ಎಂಬಂತೆ ಮತ್ತೆರಡು ಪುಟ್ಟ ಮಿನಾರಗಳು. ಈ ಮಸೀದಿಯಲ್ಲಿ ಒಮ್ಮೆಗೆ ಸುಮಾರು ಐದು ಸಾವಿರ ಮಂದಿಗೆ ಸಾಮೂಹಿಕ ನಮಾಝ್ ನಿರ್ವಹಿಸುವಷ್ಟು ಸ್ಥಳಾವಕಾಶವಿದೆ. ವಿಮಾನ, ಬಸ್ಸು, ರೈಲಿನಲ್ಲಿ ಬರುವ ಪ್ರವಾಸಿಗರು, ವ್ಯಾಪಾರಿಗಳು ನಮಾಝಿಗೆಂದು ಬಂದರೆ ಅವರಿಗೆ ಸ್ನಾನ ಮಾಡಲು, ಬಟ್ಟೆ ಬದಲಿಸಲು ಮಸೀದಿಯ ಪಕ್ಕದಲ್ಲೇ ಪ್ರತ್ಯೇಕವಾಗಿ ಬಚ್ಚಲು ಮನೆ, ಪಾಯಿಖಾನೆ ಎಲ್ಲವೂ ಇದೆ. ಮಹಿಳೆಯರಿಗೆ ನಮಾಝ್‌ಗೆ ಪ್ರತ್ಯೇಕ ಸ್ಥಳಾವಕಾಶವಿದೆ. ಇಡೀ ನಗರಕ್ಕೆ ಕಳೆ ಕಟ್ಟಿದಂತಿರುವ ಈ ಮಸೀದಿ ಇತ್ತೀಚೆಗೆ ಅಂದರೆ ಐದು ವರ್ಷಗಳಷ್ಟು ಹಿಂದೆ ಕಟ್ಟಿಸಿದ್ದು. ನಾನು ಹೇಳ ಹೊರಟಿರುವುದು ಈ ಮಸೀದಿಯ ಕಥೆ.

ಐದು ವರ್ಷಗಳ ಹಿಂದೆ ಈ ಭವ್ಯ ಮಸೀದಿ ಇರುವ ಜಾಗದಲ್ಲಿ ಒಂದು ಪುರಾತನ ಪುಟ್ಟ ಮಸೀದಿ ಇತ್ತು. ಇದು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂಬುದು ಪ್ರತೀತ. ಹಾಗೆಯೇ ಅದಕ್ಕೆ ಸುಲ್ತಾನ್ ಮಸೀದಿ ಎಂದು ಹೆಸರೂ ಇತ್ತು. ಈ ಮಸೀದಿಯ ಸುತ್ತಲೂ ಮಣ್ಣಿನ ಗೋಡೆ. ಮಸೀದಿಯ ಒಳಗೆ ಹೋಗಲು ಪುಟ್ಟ ಬಾಗಿಲು. ಪುಟ್ಟ ಪುಟ್ಟ ಕಿಟಕಿಗಳು. ಕಂಬದಂತೆ ಕಾಣುವ ಒಂದು ಪುಟ್ಟ ಮಿನಾರ. ಸುಮಾರು ಎರಡು ಎಕರೆ ಜಾಗದ ಮಧ್ಯೆ ಇದ್ದ ಈ ಪುರಾತನ ಮಸೀದಿ ಹೊರಗಿನಿಂದ ನೋಡುವವರಿಗೆ ಒಂದು ಸಾಮಾನ್ಯ ಮಣ್ಣಿನ ಕಟ್ಟಡದಂತೆ ಕಾಣುತ್ತಿತ್ತು. ಆದರೆ ಅದರ ಒಳಗೆ ಹೊಕ್ಕರೆ ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತಿತ್ತು. ಯಾವುದೋ ಒಂದು ಗುಹೆಯೊಳಗೆ ಹೊಕ್ಕಂತೆ.ಅದರ ಸೌಂದರ್ಯ, ಆಕರ್ಷಣೆಗೆ ಹೃದಯದಲ್ಲಿ ಭಕ್ತಿಯ ಭಾವ ಉಕ್ಕಿ ನಮ್ಮನ್ನೇ ನಾವು ಮರೆತುಬಿಡುತ್ತಿದ್ದೆವು. ಒಳಗೆ ಕಾಲಿಡುತ್ತಿದ್ದಂತೆಯೇ ಎಡಗಡೆ ಪುಟ್ಟ ಕೊಳದಂತಿರುವ ನೀರಿನ ತೊಟ್ಟಿ. ಅದರ ಸುತ್ತ ಅಂಗಸ್ನಾನ ಮಾಡಲು ಕುಳಿತುಕೊಳ್ಳಲು ಸ್ಟೂಲ್‌ನಂತಹ ಕಲ್ಲಿನ ಆಸನಗಳು. ನೆಲ ತುಂಬಾ ಹಾಸಿದ ಈಚಲು ಚಾಪೆಗಳು. ಎಲ್ಲಕ್ಕಿಂತ ಆಕರ್ಷಣೆ ಎಂದರೆ ಬೀಟೆ ಮರದಿಂದ ಕೆತ್ತನೆ ಮಾಡಿದ ದೊಡ್ಡ ವೇದಿಕೆಯಂತಿರುವ ನಮಾಝ್ ಮಾಡುವ ಸ್ಥಳ. ಸುತ್ತ ದೊಡ್ಡ ದೊಡ್ಡ ಕಂಬಗಳು. ಅದು ನೆಲದಿಂದ ಸುಮಾರು ಎರಡು ಅಡಿಯಷ್ಟು ಎತ್ತರವಿತ್ತು. ಅದಕ್ಕೆ ಹತ್ತಲು ಎಡ-ಬಲ ಎರಡು ಕಡೆ ಮೆಟ್ಟಿಲುಗಳು. ಆಧಾರವಾಗಿ ಹಿಡಿಯಲು ಸುತ್ತ 5-6 ಕಡೆ ದಪ್ಪ ಹುರಿ ಹಗ್ಗವನ್ನು ಗಂಟು ಹಾಕಿ ಇಳಿಬಿಡಲಾಗಿತ್ತು. ವೇದಿಕೆಯ ಮೇಲೆಯೇ ಪ್ರವಚನ(ಖುತ್ಬಾ) ನೀಡುವ ಮಿಂಬರ್. ಸುಮಾರು ನೂರು ಜನ ಆ ವೇದಿಕೆಯ ಮೇಲೆ ಸಾಮೂಹಿಕ ನಮಾಝ್ ನಿರ್ವಹಿಸಬಹುದಾಗಿತ್ತು. ಶುಕ್ರವಾರದ ಜುಮಾ, ಹಬ್ಬದ ದಿನಗಳಂದು ವೇದಿಕೆ ತುಂಬಿ, ಅದರ ಎಡ, ಬಲ ಹಾಗೂ ಮುಂದೆ ನೆಲದ ಮೇಲೆ ನಮಾಝ್ ನಿರ್ವಹಿಸುತ್ತಿದ್ದರು. ವೇದಿಕೆಯ ಸುತ್ತ ಗೂಡು ದೀಪದಂತಹ ಪುರಾತನ ಲಾಟೀನಿನಂತೆ ಕಾಣುವ ನೇತಾಡಿಸಿದ 5-6 ದೀಪಗಳು. ಅರೇಬಿಯನ್ ಶೈಲಿಯ ಕೆತ್ತನೆಗಳಿಂದ ಕೂಡಿದ ಆ ವೇದಿಕೆ ಎಂತಹವರನ್ನೂ ಒಮ್ಮೆ ನಿಂತು ನೋಡುವಂತೆ ಮಾಡುತ್ತಿತ್ತು. ಕಣ್ಣು ಮುಚ್ಚಿ ಒಮ್ಮೆ ಎಲ್ಲವನ್ನೂ ಹೀರಿ ಬಿಡಬೇಕು ಎನ್ನುವಂತಹ ಹಿತವಾದ ಅತ್ತರಿನ ಸುವಾಸನೆ. ಹೀಗೆ ಆ ಪುರಾತನ ಮಸೀದಿಯನ್ನು ಒಮ್ಮೆ ಹೊಕ್ಕರೆ ಎಂತಹವರನ್ನೂ ಆಕರ್ಷಿಸಿ ಮನಸ್ಸಿಗೆ ಮುದ ಕೊಡುತ್ತಿತ್ತು.

ಆ ಮಸೀದಿಯನ್ನು ನಡೆಸಿಕೊಂಡು ಬರಲು ಒಂದು ಸಮಿತಿ ಇತ್ತು. ಅದರಲ್ಲಿ ನಗರದ ಶ್ರೀಮಂತರು, ವ್ಯಾಪಾರಿಗಳೇ ಹೆಚ್ಚಾಗಿ ಸದಸ್ಯರಾಗಿದ್ದರು. ಕೆಲವರಿಗೆ ಹಲವು ವರ್ಷಗಳಿಂದಲೂ ಈ ಪುರಾತನ ಮಸೀದಿಯನ್ನು ಒಡೆದು ಅಲ್ಲೊಂದು ಸುಂದರ, ಭವ್ಯ ಮಸೀದಿಯನ್ನು ಕಟ್ಟಿಸಬೇಕು ಅಥವಾ ಆ ಮಸೀದಿಯ ಪಕ್ಕದಲ್ಲೇ ಇನ್ನೊಂದು ದೊಡ್ಡ ಮಸೀದಿಯನ್ನು ನಿರ್ಮಿಸಬೇಕು ಎಂಬ ಆಸೆ ಇತ್ತು. ಒಂದು ಮಸೀದಿಯ ಪಕ್ಕದಲ್ಲಿ ಇನ್ನೊಂದು ಮಸೀದಿಯನ್ನು ಕಟ್ಟಲು ಅವಕಾಶ ಇಲ್ಲ ಎಂದು ಕೆಲವರು ತಿಳಿದವರು ಹೇಳುತ್ತಾ ಬಂದಿದ್ದರು. ಆದರೆ ಈ ಸಮಿತಿಯಲ್ಲಿರುವ ಕೆಲವರು ಇಷ್ಟೊಂದು ಪುರಾತನ, ಸುಂದರ ಮಸೀದಿಯನ್ನು ಯಾವ ಕಾರಣಕ್ಕೂ ಒಡೆಯುವುದು ಬೇಡ, ಇನ್ನು ಕೆಲವರು ಇದೊಂದು ಬೆಳೆಯುತ್ತಿರುವ ನಗರ, ಇಲ್ಲಿ 2-3 ಸಾವಿರ ಮಂದಿ ಏಕಕಾಲಕ್ಕೆ ಸಾಮೂಹಿಕ ನಮಾಝ್ ನಿರ್ವಹಿಸುವ ಮಸೀದಿಯ ಅಗತ್ಯ ಇದೆ. ಇಲ್ಲಿ ಒಂದು ಭವ್ಯ ಮಸೀದಿಯನ್ನು ಕಟ್ಟಲೇಬೇಕು ಎಂದು ವಾದಿಸುತ್ತಲೇ ಬಂದಿದ್ದರು. ಹೀಗೆ ಈ ಯೋಜನೆ ಮುಂದೂಡುತ್ತಲೇ ಇತ್ತು. ವರ್ಷಗಳು ಕಳೆದು ಕಮಿಟಿಯ ಅಧ್ಯಕ್ಷರು, ಸದಸ್ಯರು ಬದಲಾಗುತ್ತಿದ್ದಂತೆಯೇ ಈ ಬೇಡಿಕೆ ಹೆಚ್ಚಾಗತೊಡಗಿತು. ಗಲ್ಫ್ ದೇಶಗಳಲ್ಲಿರುವ ಮನೆಯವರು ಸಮಿತಿಯ ಸದಸ್ಯರಾದ ಮೇಲಂತೂ ಈ ಬೇಡಿಕೆ ತಾರಕಕ್ಕೇರಿತು. ಇಲ್ಲೊಂದು ದೊಡ್ಡ ಮಸೀದಿ ಕಟ್ಟಲೇಬೇಕು ಎಂಬ ಒತ್ತಾಯ ಹೆಚ್ಚಾಗತೊಡಗಿತು. ಆಗ ಮಸೀದಿ ಸಮಿತಿಯ ಅಧ್ಯಕ್ಷರು ಒಂದು ವಿಶೇಷ ಸಭೆಯನ್ನು ಕರೆದರು.

ಅಂದಿನ ಸಭೆಯಲ್ಲಿ ಸಮಿತಿಯ ಎಲ್ಲ ಸದಸ್ಯರು ಹಾಜರಿದ್ದರು. ಎಲ್ಲರಿಗೂ ಕುತೂಹಲ. ಹಳೇ ಮಸೀದಿ ಒಡೆಯಲು ಬಿಡಬಾರದು, ಬೇಕಾದರೆ ಅದರ ಪಕ್ಕದಲ್ಲೇ ಇನ್ನೊಂದು ದೊಡ್ಡ ಮಸೀದಿ ಕಟ್ಟೋಣ ಎಂದು ಕೆಲವರು ಹಠ ತೊಟ್ಟಂತಿದ್ದರು. ಇನ್ನು ಕೆಲವರು ಏನೇ ಆಗಲಿ ಇಂದು ಒಂದು ತೀರ್ಮಾನ ಆಗಲೇಬೇಕು. ಈ ನಗರದಲ್ಲಿ ಒಂದು ಸುಂದರ, ಭವ್ಯ, ಸುಸಜ್ಜಿತ ಮಸೀದಿಯನ್ನು ಕಟ್ಟಬೇಕು. ರಾಜ್ಯದಲ್ಲಿ ಎಲ್ಲಿಯೂ ಇಂತಹ ಮಸೀದಿ ಇರಬಾರದು, ಅಂತಹ ಮಸೀದಿ ಕಟ್ಟಿಯೇ ಸಿದ್ಧ ಎಂಬ ತೀರ್ಮಾನಕ್ಕೆ ಬಂದವರಂತೆ ಸಿದ್ಧವಾಗಿ ಬಂದಿದ್ದರು. ಸಭೆ ಪ್ರಾರಂಭವಾಯಿತು. ಒಬ್ಬೊಬ್ಬರಾಗಿ ಎದ್ದು ನಿಂತು ತಮ್ಮ ಅಭಿಪ್ರಾಯ ಹೇಳತೊಡಗಿದರು. ಹೀಗೆ ಮಸೀದಿ ಒಡೆಯುವುದು ಮತ್ತು ಬೇಡ ಎಂಬ ಎರಡು ಗುಂಪುಗಳು ಸೃಷ್ಟಿಯಾದವು. ಚರ್ಚೆ, ಮಾತು ಮುಗಿದು ಯಾವುದೇ ತೀರ್ಮಾನಕ್ಕೆ ಬರಲು ಅಧ್ಯಕ್ಷರಿಗೆ ಸಾಧ್ಯವಾಗದಾಗ ಮಸೀದಿಯ ಗುರುಗಳನ್ನು ಕರೆಯಲಾಯಿತು. ಅವರು ಬಂದು ‘‘ಒಂದು ಮಸೀದಿಯ ಪಕ್ಕದಲ್ಲೇ ಇನ್ನೊಂದು ಮಸೀದಿಯನ್ನು ಕಟ್ಟಲು ಧರ್ಮದಲ್ಲಿ ಅವಕಾಶವಿಲ್ಲ. ಇನ್ನೂ ಒಂದು, ಹಳೇ ಮಸೀದಿಯನ್ನು ಒಡೆದರೆ ಅದರ ಮಣ್ಣು, ಕಲ್ಲು, ಅವಶೇಷಗಳನ್ನು ಹೊರಗೆಲ್ಲೂ ಸಾಗಿಸಿ ಸುರಿಯಬಾರದು. ಅದನ್ನು ನೂತನ ಮಸೀದಿಗೇ ಉಪಯೋಗಿಸಬೇಕು. ಹಾಗೆಯೇ ಒಡೆದ ಮಸೀದಿಯ ಕಿಟಕಿ, ಬಾಗಿಲು, ಇತರ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಅದನ್ನು ಹೊಸ ಮಸೀದಿಗೆ ಉಪಯೋಗಿಸಬೇಕು ಅಥವಾ ಯಾವುದಾದರೂ ಮಸೀದಿಯ ಜೀರ್ಣೋದ್ಧಾರ ಮಾಡುವವರಿಗೆ ದಾನವಾಗಿ ನೀಡಬೇಕು’’ ಎಂದು ಹೇಳಿ ಎರಡು ಗುಂಪಿನ ಮಧ್ಯೆಯೂ ಗುರುತಿಸಿಕೊಳ್ಳಲು ಇಷ್ಟಪಡದೆ ಅಲ್ಲಿಂದ ಎದ್ದು ಹೋದರು. ಕೊನೆಗೂ ಸಮಿತಿಯ ಸದಸ್ಯರೆಲ್ಲ ಒಂದು ಒಮ್ಮತದ ತೀರ್ಮಾನಕ್ಕೆ ಬಂದು, ಹಳೆ ಮಸೀದಿಯನ್ನು ಒಡೆದು ಅದೇ ಜಾಗದಲ್ಲಿ ಒಂದು ಹೊಸ ಮಸೀದಿಯನ್ನು ಕಟ್ಟುವುದು ಎಂದು ತೀರ್ಮಾನಿಸಿದರು. ಸಮಿತಿಯಲ್ಲಿದ್ದ ಶ್ರೀಮಂತರಿಗಂತೂ ಖುಷಿಯೋ ಖುಷಿ. ಎಷ್ಟು ಖರ್ಚಾದರೂ ಪರವಾಗಿಲ್ಲ, ಒಂದು ಸುಂದರ, ಭವ್ಯ ಮಸೀದಿಯನ್ನೇ ಕಟ್ಟಬೇಕು ಎಂದು ಹೇಳಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದರು. ಬಳಿಕ ಮಸೀದಿ ನಿರ್ಮಾಣ ಸಮಿತಿಯೊಂದನ್ನು ರಚಿಸಿ ಅಂದಿನ ಸಭೆಯನ್ನು ಬರ್ಖಾಸ್ತುಗೊಳಿಸಲಾಯಿತು.

ಮಸೀದಿ ನಿರ್ಮಾಣ ಸಮಿತಿಯಲ್ಲಿ ನಗರದ ಶ್ರೀಮಂತರು, ದೊಡ್ಡ ದೊಡ್ಡ ಉದ್ಯಮಿಗಳು, ಗಲ್ಫ್ ದೇಶಗಳಲ್ಲಿ ದುಡಿಯುವ ಕೆಲವು ಯುವಕರೇ ಹೆಚ್ಚಾಗಿದ್ದರು. ಮೊದಲ ಸಭೆಯಲ್ಲಿಯೇ ಎಲ್ಲರಿಂದಲೂ ದೇಣಿಗೆಗಳು ಹರಿದು ಬಂದವು. ಗಲ್ಫ್ ದೇಶದಲ್ಲಿರುವ ಯುವಕರಂತೂ ನಾವು ಇಡೀ ಗಲ್ಫ್ ಸುತ್ತಿ ದೇಣಿಗೆ ಸಂಗ್ರಹಿಸಿ ಕೊಡುವುದಾಗಿ ಮಾತು ಕೊಟ್ಟರು. ಸಭೆಯ ಕೊನೆಯಲ್ಲಿ ಮಸೀದಿಯ ವಿನ್ಯಾಸದ ಬಗ್ಗೆ ಬಹಳಷ್ಟು ಚರ್ಚೆಯಾಯಿತು. ಆಗ ಅಲ್ಲಿದ್ದ ಇಂಜಿನಿಯರ್ ಒಬ್ಬರು, ಹೈದರಾಬಾದ್‌ನಲ್ಲಿ ಪ್ರಸನ್ನ ಕುಮಾರ್ ಎಂಬ ಒಬ್ಬ ಪ್ರಖ್ಯಾತ ಆರ್ಕಿಟೆಕ್ಟ್ ಇದ್ದಾರೆ. ಅವರು ದೇಶಾದ್ಯಂತ 60ಕ್ಕೂ ಹೆಚ್ಚು ಮಸೀದಿಗಳಿಗೆ ವಿನ್ಯಾಸ ಮಾಡಿದ್ದಾರೆ. ಅವರ ಫೀಸು ಸ್ವಲ್ಪ ಜಾಸ್ತಿ. ಆದರೆ ಬಹಳ ಸುಂದರವಾದ ವಿನ್ಯಾಸ ಮಾಡುತ್ತಾರೆ. ಅವರು ವಿನ್ಯಾಸಗೊಳಿಸಿದ ಮಸೀದಿಗಳ ಚಿತ್ರಗಳು ಬೇಕಾದರೆ ವೆಬ್‌ಸೈಟ್‌ನಲ್ಲಿ ನೋಡಬಹುದು ಎಂದರು. ಅಂತೂ ಅವರಿಂದಲೇ ಮಸೀದಿಯ ವಿನ್ಯಾಸ ಮಾಡಿಸುವುದೆಂದೂ, ಸಮಿತಿಯ ನಾಲ್ವರು ಸದಸ್ಯರು ಹೈದರಾಬಾದ್‌ಗೆ ಹೋಗುವುದೆಂದೂ ತೀರ್ಮಾನಿಸಲಾಯಿತು. ಬಹಳ ಬ್ಯುಸಿಯ ವ್ಯಕ್ತಿಯಾದುದರಿಂದ ಬಹಳ ಪ್ರಯತ್ನದ ನಂತರ ಪ್ರಸನ್ನ ಕುಮಾರ್ ಭೇಟಿಗೆ ಅವರಿಗೆ ದಿನ ನಿಗದಿಯಾಯಿತು.

ಹೈದರಾಬಾದ್‌ನ ಪ್ರಸನ್ನ ಕುಮಾರ್‌ರ ಕಚೇರಿಗೆ ಹೋದಾಗ ಅವರಿಗೆ ಆಶ್ಚರ್ಯವಾಗಿತ್ತು. ಬಹಳ ದೊಡ್ಡ ಅತ್ಯಾಧುನಿಕ ಕಚೇರಿ. ಸುಮಾರು 30-35 ಮಂದಿ ಸಿಬ್ಬಂದಿ. ಅಲ್ಲಲ್ಲಿ ಅವರು ವಿನ್ಯಾಸಗೊಳಿಸಿರುವ ಮಸೀದಿ, ಕಟ್ಟಡಗಳ ಮಾದರಿ ವಿನ್ಯಾಸಗಳು, ಚಿತ್ರಗಳು. ಅವರು ಹೋಗಿ ಕೆಲವು ನಿಮಿಷಗಳ ನಂತರ ಅವರಿಗೆ ಪ್ರಸನ್ನ ಕುಮಾರ್‌ರ ಕೋಣೆಯ ಒಳಗೆ ಹೋಗಲು ಅನುಮತಿ ಸಿಕ್ಕಿತು. ಮಾತು�

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News

ಬೀಗ