ದ.ಕ. ಜಿಲ್ಲೆಯಲ್ಲಿ ಜ.10ರಿಂದ ಕೋವಿಡ್ ಬೂಸ್ಟರ್ ಡೋಸ್: ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2022-01-03 11:15 GMT

ಮಂಗಳೂರು, ಜ.3: ದ.ಕ. ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜ.10ರಂದು ಜಿಲ್ಲಾಡಳಿತ ಚಾಲನೆ ನೀಡಲಿದೆ. ಈ ಕುರಿತ ಮಾರ್ಗಸೂಚಿ ಇನ್ನಷ್ಟೇ ಬರಬೇಕಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಥಬೀದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರಿಗೆ 16 ಲಕ್ಷ ಮಂದಿಗೆ ಮೊದಲ ಡೋಸ್ ಸಂಪೂರ್ಣವಾಗಿದ್ದು, ಶೇ.94ರಷ್ಟು ಸಾಧನೆ ಮಾಡಲಾಗಿದೆ. ಶೇ.80ರಷ್ಟು ಮಂದಿ ಎರಡನೇ ಡೋಸ್ ಕೂಡಾ ಪಡೆದಿದ್ದಾರೆ. ಇಲ್ಲಿಯವರೆಗೆ ಯಾರಿಗೂ ವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಕಂಡುಬಂದಿಲ್ಲ. 1 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿ ಇದ್ದು, ವಿದ್ಯಾರ್ಥಿಗಳು 10 ಮನೆಗಳ ಜವಾಬ್ದಾರಿ ತೆಗೆದುಕೊಂಡು ವ್ಯಾಕ್ಸಿನೇಶನ್ ಹಾಕಿಸುವ ಮೂಲಕ ಜಿಲ್ಲಾಡಳಿತದ ಏಜೆಂಟ್ ಆಗಿ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್, ಜೀವ ರಕ್ಷಣೆಯ ಕೆಲಸ ಸರಕಾರ, ಜಿಲ್ಲಾಡಳಿತ ಮಾಡುವಾಗ ಅದಕ್ಕೆ ಸಹಕಾರ ನೀಡುವುದೂ ಸಾರ್ವಜನಿಕರ ಕರ್ತವ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯುವ ನಿಟ್ಟಿನಲ್ಲಿ ಉಪನ್ಯಾಸಕರು ಗಮನ ಹರಿಸಬೇಕು ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್‌ಗಳಾದ ಝೀನತ್ ಸಂಶುದ್ದೀನ್, ಪೂರ್ಣಿಮಾ, ದಿವಾಕರ್ ಪಾಂಡೇಶ್ವರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ., ಡಿಡಿಪಿಯು ಸಿ.ಡಿ.ಜಯಣ್ಣ, ಸಾರ್ವಜನಿಕ ಶಿಕ್ಷ ಇಲಾಖೆ ಉಪನಿರ್ದೇಶಕ ಕೆ.ಸುಧಾಕರ್, ಪಾಲಿಕೆ ಕೋವಿಡ್ ನೋಡಲ್ ಅಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಮೊದಲಾದವರಿದ್ದರು.

ಪ್ರಾಂಶುಪಾಲೆ ಭಾರತಿ ಬಾಯಿ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ.ವಂದಿಸಿದರು.


ಕಾಲೇಜುಗಳು ಸೇರಿದಂತೆ ಹೆಚ್ಚು ಜನ ಸಂದಣಿ ಇರುವ ಜಾಗಗಳಲ್ಲಿ ಜಾಗಗಳಲ್ಲಿ ಟೆಸ್ಟಿಂಗ್ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು. ಇಲ್ಲಿಯವರೆಗೆ 9 ಒಮೈಕ್ರಾನ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಎಲ್ಲವೂ ಸೌಮ್ಯ ಲಕ್ಷಣ ಹೊಂದಿದೆ. ಆದರೂ ಒಮೈಕ್ರಾನ್ ಹರಡದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
-ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News