ನಮ್ಮ ಜೊತೆಗೇ ನಡೆಯುತ್ತಿರುವ ಐಸಾಕ್ ನ್ಯೂಟನ್
ಭೂಮಿ ತಿರುಗುತ್ತಿರುವಾಗ, ನಾವು ಮಲಗಿ ಎದ್ದೇಳುವಾಗ, ಎದ್ದು ನಡೆದಾಡಿದಾಗ, ಜಿಗಿದಾಗ, ಓಡಿದಾಗ, ಬಿದ್ದಾಗ, ಎದ್ದಾಗ ಒಬ್ಬ ಮನುಷ್ಯ ಬರೆದ ಸಿದ್ಧಾಂತವೊಂದು ನಮ್ಮ ಜೊತೆಗೇ ಇರುತ್ತದೆ. ಪ್ರಳಯದ ಬಗ್ಗೆ ಟಿ.ವಿ.ಗಳು ಬೊಬ್ಬೆ ಹಾಕಿದಾಗ, ಫ್ರಿಜ್ ತೆರೆದಾಗ, ರಾಕೆಟ್ ಹಾರಿದಾಗ... ಆತನೇ ಬರೆದ ಸಿದ್ಧಾಂತವೇ ಇರುತ್ತದೆ. ಆತನೇ ಸರ್ ಐಸಾಕ್ ನ್ಯೂಟನ್. ಈ ಚಿಕ್ಕ ದೇಹದ ದೈತ್ಯ ವಿಜ್ಞಾನಿಯ ಹುಟ್ಟು ದಿನವಾದ ಜನವರಿ 4ರಂದು ಒಬ್ಬ ವಿದ್ಯಾರ್ಥಿಯ ಚಿಂತನೆ.
ಸ್ವಲ್ಪ ಶಾಲೆ ಕಲಿತವರಿಗೆ ಐಸಾಕ್ ನ್ಯೂಟನ್ ಯಾರು ಎಂದು ಕೇಳಿದರೆ, ಗುರುತ್ವಾಕರ್ಷಣೆ ಕಂಡುಹಿಡಿದವನು ಎಂದು ಹೇಳುತ್ತಾರೆ. ಗುರುತ್ವಾಕರ್ಷಣೆಯು ಹಿಂದೆಯೂ ಇತ್ತು. ಅದನ್ನು ನ್ಯೂಟನ್ ಕಂಡುಹಿಡಿದ ಮಾತ್ರ ಎಂದೂ ಕೆಲವರು ಹೇಳಬಹುದು. ಮತ್ತೆ ಕೆಲವರು ದೇವರು ಇದ್ದಾನೆ; ಅವನನ್ನು ನಾವು ಕಂಡುಕೊಳ್ಳಬೇಕು ಎಂದೂ ವಾದವನ್ನು ವಿಸ್ತರಿಸಬಹುದು. ದೇವರನ್ನು ಕಂಡುಹಿಡಿದು, ಅವನು ಎಲ್ಲೆಲ್ಲೂ ಇದ್ದಾನೆ; ಸದಾ ನಮ್ಮ ಜೊತೆ ಇರುತ್ತಾನೆ ಎಂದು ಹೇಳುವವರೂ ದೇವರನ್ನು ಮರೆತುಬಿಡುವಂತೆ ನಾವು ನ್ಯೂಟನ್‌ನನ್ನೂ ಮರೆತುಬಿಡುತ್ತೇವೆ. ಯಾಕೆಂದರೆ, ಭೂಮಿ ತಿರುಗುತ್ತಿರುವಾಗ, ನಾವು ಮಲಗಿ ಎದ್ದೇಳುವಾಗ, ಎದ್ದು ನಡೆದಾಡಿದಾಗ, ಜಿಗಿದಾಗ, ಓಡಿದಾಗ, ಬಿದ್ದಾಗ, ಎದ್ದಾಗ ಒಬ್ಬ ಮನುಷ್ಯ ಬರೆದ ಸಿದ್ಧಾಂತವೊಂದು ನಮ್ಮ ಜೊತೆಗೇ ಇರುತ್ತದೆ. ಪ್ರಳಯದ ಬಗ್ಗೆ ಟಿ.ವಿ.ಗಳು ಬೊಬ್ಬೆ ಹಾಕಿದಾಗ, ಫ್ರಿಜ್ ತೆರೆದಾಗ, ರಾಕೆಟ್ ಹಾರಿದಾಗ... ಆತನೇ ಬರೆದ ಸಿದ್ಧಾಂತವೇ ಇರುತ್ತದೆ. ಆದರೂ ನಾವಾತನನ್ನು ಮರೆತಿದ್ದೇವೆ.
ನ್ಯೂಟನ್ ಹೆಸರು ಕೇಳಿದಾಗ, ಅವರ ಬಗ್ಗೆ ಒಂದು ಕತೆಯೂ ನೆನಪಿಗೆ ಬರಬಹುದು. ಒಬ್ಬ ಶಾಲೆಯಲ್ಲಿ ಸರಿಯಾಗಿ ಕಲಿಯದ ಹುಡುಗ ಒಂದು ದಿನ ಸೇಬಿನ ಮರದ ನೆರಳಿನಲ್ಲಿ ಕುಳಿತು ನಿದ್ದೆ ಮಾಡುತ್ತಿರುತ್ತಾನೆ. ಕೆಲವರು ಇದನ್ನು ತಪಸ್ಸು ಎಂದೂ ಕರೆಯಬಹುದು. ಆಗ ಒಂದು ಸೇಬು ಅವನ ನೆತ್ತಿಯ ಮೇಲೆಯೇ ಬೀಳುತ್ತದೆ. ಅವನಿಗೆ ಜ್ಞಾನೋದಯವಾಗುತ್ತದೆ. ಈ ಸೇಬು ಕೆಳಗೆ ಏಕೆ ಬಿತ್ತು? ಮೇಲೆ ಯಾಕೆ ಹೋಗಲಿಲ್ಲ... ಇಂತಹ ಕೆಲವು ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಮೂಡುತ್ತವೆ. ಸೇಬನ್ನು ಎತ್ತಿಕೊಂಡು ಮತ್ತೆ ಮೇಲಕ್ಕೆ ಎಸೆಯುತ್ತಾನೆ. ಅದು ಮತ್ತೆ ನೆಲಕ್ಕೇ ಬೀಳುತ್ತದೆ. ಆ ಬಳಿಕ ಬದಲಾದ ಹುಡುಗನಾದ ನ್ಯೂಟನ್ ಭಯಂಕವಾದ ಮೇಧಾವಿಯಾಗಿ ಗುರುತ್ವಾಕರ್ಷಣೆಯ ಕುರಿತು ಕೆಲವು ಸಿದ್ಧಾಂತಗಳನ್ನು ಮಂಡಿಸುತ್ತಾನೆ. ಮಂದೆ ಭೌತಶಾಸ್ತ್ರದ ಹಲವಾರು ಸಿದ್ಧಾಂತಗಳಿಗೆ ತಳಹದಿಯಾಗುತ್ತದೆ. ಇಂದಿನ ತನಕವೂ ಗುರುತ್ವಾಕರ್ಷಣೆಯ ಕುರಿತ ಆತನ ಸಿದ್ಧಾಂತ ಸರಿಯಿಲ್ಲ ಎಂದು ಹೇಳಲು ಯಾರಿಗೂ ಸಾಧ್ಯವಾಗಿಲ್ಲ. ನ್ಯೂಟನ್ ಬಗ್ಗೆ ಈ ಕತೆಯೊಂದೇ ನೆನಪಿಗೆ ಬಂದರೆ, ಬೇರೇನೂ ನಮಗೆ ಹೊಳೆಯದಿದ್ದರೆ, ಪ್ರಶ್ನಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಅವನ ವ್ಯಕ್ತಿತ್ವದ ಬಗ್ಗೆ ಏನೂ ಗೊತ್ತಿಲ್ಲದಿಲ್ಲದಿದ್ದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ಏನೋ ತಪ್ಪಿತ್ತು ಎಂದೇ ಅರ್ಥ. ನಿಜವಾಗಿಯೂ ಇದೊಂದು ದಂತ ಕತೆ. ಮೂರ್ಖರಿಗೆ ಬುದ್ಧಿವಂತರು ಅರ್ಥವಾಗದಾಗ ಕಟ್ಟುವ ದಂತಕತೆ.
ನ್ಯೂಟನ್ ಸಿದ್ಧಾಂತ ಸರಳವಾಗಿ ಕಂಡರೂ ಸಂಕೀರ್ಣವಾದುದು. ಸೇಬಾಗಿರಲಿ, ಭೂಮಿಯಾಗಿರಲಿ, ನಾವೇ ಆಗಿರಲಿ, ಒಂದು ಭೌತಿಕ ವಸ್ತು ಇತರ ವಸ್ತುಗಳ ಮೇಲೆ ನಿರ್ದಿಷ್ಟ ಪ್ರಮಾಣದ ಬಲ ಪ್ರಯೋಗ ಮಾಡುತ್ತದೆ. ಆ ಶಕ್ತಿಯು ಒಂದು ವಸ್ತುವನ್ನು ದೂಡುತ್ತದೆ ಅಥವಾ ಎಳೆಯುತ್ತದೆ. ವಸ್ತು ದೊಡ್ಡದು ಮತ್ತು ಹೆಚ್ಚು ಸಾಂದ್ರತೆ ಉಳ್ಳದ್ದು ಆಗಿದ್ದರೆ, ಆ ಶಕ್ತಿಯು ಹೆಚ್ಚಾಗುತ್ತದೆ. ಹಲವು ರೀತಿಯ ಬಲಗಳಿರುತ್ತವೆ. ಆದರಲ್ಲಿ ಒಂದು ಗುರುತ್ವಾಕರ್ಷಣಾ ಶಕ್ತಿ. ಅವನು ಯೋಚಿಸಿದ್ದು ಇಷ್ಟೇ! ಆ ಸೇಬು ತೊಟ್ಟು ಕಳಚಿದಾಗ ನೇರ ಏಕೆ ಕೆಳಗೇ ಬಿತ್ತು? ಯಾಕೆ ನನ್ನ ತಲೆಗೇ ಬಿತ್ತು? ಅಡ್ಡಡ್ಡ ಹೋಗಿ ಪಕ್ಕದವನ ಮುಸುಡಿಗೆ ಹೇಗೆ ಬಡಿಯಲಿಲ್ಲ? ಇಂತಹ ಪ್ರಶ್ನೆಗಳನ್ನು ಕೇಳುವುದೇ ನ್ಯೂಟನ್ ನಮಗೆಲ್ಲಾ ಕಲಿಸಿದ ಪಾಠ
ನಾವು ಶಾಲೆಯ ಮಕ್ಕಳಂತೆ ಅವನೂ ಕಲಿತ. ಆದರೆ, ನಮಗಿಂತ ತುಂಬಾ ಮೊದಲ ಹುಟ್ಟಿದ. 1643ನೇ ಜನವರಿ ತಿಂಗಳಿನ ನಾಲ್ಕನೇ ತಾರೀಕಿನಂದು ಹುಟ್ಟಿದ. ಇಂದಿಗೆ ಎಷ್ಟು ವರ್ಷ? ನೀವೇ ಲೆಕ್ಕಹಾಕಿ! ಬುದ್ಧಿವಂತ ಓದುಗರಿಗೆ ಚಮಚದಿಂದ ತಿನ್ನುವುದು ಆಗದು. ಮಕ್ಕಳಿಗಾಗಿ ಒಂದಿಷ್ಟು ಹೇಳಬಹುದು. ಈಗ ಕೊರೋನ ನೆವನ ಹೇಳಿಕೊಂಡು ಶಾಲೆ ಮುಚ್ಚಿದಂತೆ, ಲಕ್ಷ, ಕೋಟಿ ಜನರನ್ನು ಕೊಂದ ಬುಬೋನಿಕ್ ಪ್ಲೇಗ್ ಕಾರಣದಿಂದ ಲಾಕ್‌ಡೌನ್ ಆಗಿ ಶಾಲೆ ಮುಚ್ಚಿತ್ತು. ಅವನೇನೂ ಮಾಷ್ಟ್ರು ಹೇಳಿದ್ದೇ ಕಲಿಯುವಂತಹ, ನಾಗರಬೆತ್ತದ ಪೆಟ್ಟು ತಿಂದು ಸುಮ್ಮನೇ ಇರುವ ಬ್ರಾಹ್ಮಣ, ಶೂದ್ರ, ದಲಿತ, ಮುಸ್ಲಿಂ ಬಾಲಕನಾಗಿರಲಿಲ್ಲ. ಅವನು ಮೇಷ್ಟ್ರುಗಳನ್ನು ನಿಂದಿಸಿದ್ದ. ಅವನ ತಾಯಿ ಎರಡನೇ ಮದುವೆಯಾದಾಗ ಮಲತಂದೆಯನ್ನೂ ದ್ವೇಷಿಸಿದ್ದ. ‘‘19ರ ಮೊದಲ ಪಾಪ ನಿವೇದನೆ’’ಯಲ್ಲಿ ಈ ವಿಕ್ಷಿಪ್ತ ಮನುಷ್ಯ ತನ್ನ ತಾಯಿ ಮತ್ತು ಮಲತಂದೆಯನ್ನು ಹೊತ್ತಿಸಿ ಅದರ ಮೇಲೆ ಮನೆಕಟ್ಟುವೆ ಎಂದೂ ಬರೆದಿದ್ದ. ಇಂತಹ ವಿಕ್ಷಿಪ್ತ ಮನುಷ್ಯ ಹೊಸಬೆಳಕು, ಹೊಸ ಶಕ್ತಿ ನೋಡಿದ್ದು ಹೇಗೆ?
ವಿಜ್ಞಾನದ ಗತಿ ತಿರುಗಿಸಿದ ಈ ಮನುಷ್ಯ ಕ್ಯಾಂಬ್ರಿಜ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದಾಗಲೇ ಆ ಸೇಬಿನ ದಂತಕತೆ ಹುಟ್ಟಿದ್ದು. ಪೋಕರಿಯಾಗಿದ್ದ, ಈ ವಿದ್ಯಾರ್ಥಿ ತನಗೆ ಹೊಡೆಯುತ್ತಿದ್ದ ಮೇಲ್ವರ್ಗದ ಸಹಪಾಠಿಯ ಕಾರಣದಿಂದಲೇ ಹೆಚ್ಚು ಕಲಿತ. ಮುಂದೆಯೂ ಈತ ಕ್ರೈಸ್ತನಾಗಿದ್ದರೂ ವಿರೋಧಿಸಲಿಲ್ಲ. ಇವನು ಕೊಪರ್ನಿಕಸ್, ಗೆಲಿಲಿಯೋ ರೀತಿ ಧರ್ಮವಧೆಗೆ ಒಳಗಾಗಲಿಲ್ಲ. ಈ ಗುರುತ್ವಾಕರ್ಷಣೆ ಮಾತ್ರ ಈ ಎಡೆಬಿಡಂಗಿ ಮನುಷ್ಯನ ಸಂಶೋಧನೆ ಎಂದು ತಿಳಿದರೆ ನಿಮಗೆ ಆಶ್ಚರ್ಯ ಆದೀತು. ಆ ಮಹಾನ್ ಸಂಶೋಧಕನಾಗಿರಬಹುದು. ಆದರೆ ಮಹಾ ಅಸೂಯೆಯ ಮನುಷ್ಯನೂ, ತಿಕ್ಕಲನೂ ಆಗಿದ್ದ.
ಅವನ ಸಂಶೋಧನೆಗಳು ಮತ್ತು ಅಧಿಕಪ್ರಸಂಗಗಳು ಒಂದೆರಡಲ್ಲ. ಅವನು ಫ್ಯಾಂಟಮ್‌ನಂತೆ ನಡೆದಾಡುವ ಭೂತ! ಅಂಕ, ಬೀಜ ಗಣಿತ ಕಲಿತ ವಿದ್ಯಾರ್ಥಿಗಳಿಗೆ ತಲೆನೋವಾಗಿದ್ದ ಕ್ಯಾಲ್ಕುಲಸ್ ಅಭಿವೃದ್ಧಿಪಡಿಸಿದ್ದೇ ಈ ತಲೆಕೆಟ್ಟ ಮನುಷ್ಯ! ನಾಲ್ಕಾರು ಮಸೂರಗಳನ್ನು ಜೋಡಿಸಿ, ಮಾಡುವ ಗೆಲಿಲಿಯೋ ದೂರದರ್ಶಕವನ್ನು ಪ್ರತಿಫಲನದ ರಿಫ್ಲೆಕ್ಟಿವ್ ದೂರದರ್ಶಕ ಮಾಡಿದವನು ಈತನೇ! ಈಗ ನೋನಾರ್ ಒಪ್ಟಿಕಲ್ ದೂರದರ್ಶಕಗಳೆಲ್ಲಾ ಬಂದಿವೆ. ಆದರೆ, ತಳಹದಿ ಆ 360 ಚಿಲ್ಲರೆ ವರ್ಷಗಳ ಹಿಂದೆ ಹುಟ್ಟಿದ ಆ ತಲೆ ಹರಟೆ ಹುಡುಗನದ್ದೇ ಆಗಿತ್ತು. ಆಫ್ಟಿಕ್ಸ್ ಇವನ ಮಹಾನ್ ಸಂಶೋಧನೆಯ ಕ್ಷೇತ್ರ. ಬೆಳಕು ಅವನ ಇನ್ನೊಂದು ಕ್ಷೇತ್ರ.
ಚಲನೆ ಮತ್ತು ಸ್ಥಾಗಿತ್ಯದ ನಾಲ್ಕು ಸಿದ್ಧಾಂತಗಳನ್ನು ಆತ ಬರೆದಿದ್ದಾನೆ. ‘ಲಾ ಆಫ್ ಮೋಶನ್ ಆ್ಯಂಡ್ ಇನರ್ಷಿಯಾ’ ಎಂಬುದು ನಿಮಗೆ ಅರಿವಾಗದಿದ್ದಲ್ಲಿ ಪುಸ್ತಕ ಓದಬಹುದು! (Philosophiae Naturalis Principia Mathematica) ಈ ಮನುಷ್ಯನ ಕುತೂಹಲ ಎಷ್ಟರ ಮಟ್ಟಿಗೆ ಇತ್ತೆಂದರೆ, ಸಾಂಪ್ರದಾಯಿಕವಾಗಿ ಆಂಗ್ಲ್ಲನೋ ಕ್ರೈಸ್ತನಾಗಿದ್ದರೂ ವಿಜ್ಞಾನಿ ಆಗಿದ್ದರೂ, ತನ್ನ ಕೆಲವನ್ನು ಮುಚ್ಚಿಟ್ಟಿದ್ದ. ನಾವು ಇಂದು ಬಳಸುವ ಏರ್ ಕಂಡಿಷನ್ ಮತ್ತು ಫ್ರಿಜ್ ಬಗ್ಗೆ ಅವನ ತಿಯರಿಯೇ ಮೂಲ. ಸೇಬಿನಂತೆಯೇ ಸುಮ್ಮನೇ ಕುಳಿತಿದ್ದಾಗ ಯಾಕೆ ನಮ್ಮ ದೇಹ ತಣ್ಣಗಾಗುತ್ತದೆ ಯಾಕೆ ಬಿಸಿಯಾಗುತ್ತದೆ ಎಂದು ನೋಡುವ ಕುತೂಹಲವೇ ಈ ಸೇಬಿನಂತೆ ಆ ಸಂಶೋಧನೆಗೆ ಕಾರಣ.
ಇವನ ಕುತೂಹಲ ಎಷ್ಟರ ಮಟ್ಟಿಗೆ ಎಂದರೆ, ಚಿನ್ನ ಮಾಡುವ ರಸ ವಿದ್ಯೆಯ ಬಗ್ಗೆಯೂ ಸಂಶೋಧನೆ ನಡೆಸಿ ಸೋತಿದ್ದ. ಅಷ್ಟು ಮಟ್ಟಿಗೆ ವಿಕ್ಷಿಪ್ತನಾಗಿದ್ದ ಧಾರ್ಮಿಕವಾದ ಈ ಮಹಾನ್ ವ್ಯಕ್ತಿಯನ್ನು ನಮ್ಮಿಳಗಿನ ವ್ಯಕ್ತಿಗೋ, ಮನುಷ್ಯನಿಗೋ ಹೋಲಿಸಿ ನೋಡಿ!
ಅವನು ಒಮ್ಮೆ ಬೈಬಲಿನ ಪ್ರಳಯದ ಬಗ್ಗೆ ಸಂಶೋಧನೆ ಮಾಡಲು ಹೋಗಿ, ಪ್ರಳಯ ಆಗುವುದಿದ್ದರೆ 2060ರ ನಂತರ ಎಂದು ಹೇಳಿದ್ದಾನೆ. ಅವನು ಹೇಳಿದ ಯಾವುದೂ ಸುಳ್ಳಾಗಿಲ್ಲ! ನಿಜ ಮಾಧ್ಯಮದ ಬಗ್ಗೆ ನಂಬಿಕೆ ಇರುವವರು ಕೆಲವು ಟಿವಿಯವರಿಗೆ ಹೇಳಬೇಡಿ. ಯಾಕೆಂದರೆ, ನಾಳೆ: ‘‘2060ರಲ್ಲಿ ಪ್ರಳಯ ಎಂದು ಪ್ರಖ್ಯಾತ ವಿಜ್ಞಾನಿ ನ್ಯೂಟನ್ ಹೇಳಿದ್ದಾನೆ’’ ಎಂದು ಸುದ್ದಿಯಾಗಬಹುದು.