ಕಂಟೆಂಟ್ ಸಿನೆಮಾ ಅಂದರೇನು?

Update: 2022-01-04 04:57 GMT

ಮೂಲತಃ ಚಿತ್ರಕಲಾವಿದರು. ಚಿತ್ರರಂಗದತ್ತ ಆಕರ್ಷಿತರಾಗಿ, 2014ರಲ್ಲಿ ಮೊತ್ತ ಮೊದಲ ಬಾರಿಗೆ ನಿರ್ದೇಶಿಸಿದ ‘ಹರಿವು’ ಚಿತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಪುರಸ್ಕಾರ. 2018ರಲ್ಲಿ ಹೆಣ್ಣನ್ನು ಕೇಂದ್ರವಾಗಿಸಿ ‘ನಾತಿಚರಾಮಿ’ ಚಿತ್ರ ನಿರ್ದೇಶಿಸಿ ರಾಜ್ಯ ಪ್ರಶಸ್ತಿಗೆ ಭಾಜನರಾದರು. 2020ರಲ್ಲಿ ‘ಆ್ಯಕ್ಟ್ 1978’ ಎಂಬ ಚಿತ್ರ ಮಾಡಿ, ಭ್ರಷ್ಟ ವ್ಯವಸ್ಥೆಗೆ ಕನ್ನಡಿ ಹಿಡಿದರು. ಬರಲಿರುವ ‘ಅಬ್ಬಕ್ಕ’ ಚಿತ್ರವನ್ನು ನಿರ್ದೇಶಿಸಿರುವ ಮಂಸೋರೆ, ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕರಲ್ಲೊಬ್ಬರು.

ಮಂಸೋರೆ

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ಆಶಾದಾಯಕ ಬೆಳವಣಿಗೆ ಎಂದರೆ ‘ಕಂಟೆಂಟ್ ಸಿನೆಮಾ’ ಬಗ್ಗೆ ಚರ್ಚೆ ಮಾಡುತ್ತಿರುವುದು. ಅದರಲ್ಲೂ ಸಾಮಾಜಿಕ ತಾಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವ ದೊಡ್ಡ ಪ್ರೇಕ್ಷಕ ವರ್ಗ ‘ಕಂಟೆಂಟ್’ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿರುವುದು ಕನ್ನಡ ಸಿನೆಮಾದ ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯದೇ. ಇದಕ್ಕೆ ಮೊದಲು ಧನ್ಯವಾದ ಹೇಳಬೇಕಿರುವುದು ಓಟಿಟಿ ಹಾಗೂ ಡಬ್ಬಿಂಗಿಗೆ. ಈ ಎರಡೂ ಕಾರಣಗಳಿಂದಾಗಿ ಪರಭಾಷೆಯ ಅತ್ಯುತ್ತಮ ಸಿನೆಮಾಗಳನ್ನು ಕನ್ನಡದ ಹೆಚ್ಚು ಮಂದಿ ನೋಡುವಂತಾಗಿದೆ. ಅದರಲ್ಲೂ ಕೊರೋನ ಕಾರಣದಿಂದಾಗಿ ಎಲ್ಲರೂ ಮನೆಯಲ್ಲೇ ಕುಳಿತಿದ್ದರಿಂದ ಹೆಚ್ಚು ಸಮಯ ಸಿನೆಮಾ ನೋಡಲು ದೊರೆತಿದ್ದರಿಂದ ಪರಭಾಷೆ ಎಂದರೆ ಮೂಗು ಮುರಿಯುತ್ತಿದ್ದವರೆಲ್ಲಾ ಮುಗಿಬಿದ್ದು ಬೇರೆ ಭಾಷೆಯ ಸಿನೆಮಾಗಳನ್ನು ಹುಡುಕಿ ಹುಡುಕಿ ನೋಡಿದ್ದಾರೆ. ಇದೆಲ್ಲಾ ಕನ್ನಡ ಸಿನೆಮಾ ರಂಗಕ್ಕೆ ಹೇಗೆ ಸಹಾಯವಾಗುತ್ತದೆ ಎಂದರೆ, ಪ್ರೇಕ್ಷಕ ಹೆಚ್ಚು ಪ್ರಬುದ್ಧನಾಗುತ್ತಾನೆ, ಪ್ರೇಕ್ಷಕ ಹೆಚ್ಚು ಪ್ರಬುದ್ಧನಾದಷ್ಟೂ ತಾನು ನೋಡುವ ಸಿನೆಮಾಗಳ ಬಗ್ಗೆ ಹೆಚ್ಚು ಚರ್ಚಿಸುತ್ತಾನೆ. ಚರ್ಚೆಗಳು ಹೆಚ್ಚಾದಷ್ಟೂ ನಮ್ಮಲ್ಲಿ ಸಿನೆಮಾ ಮಾಡುವ ನಿರ್ದೇಶಕನ ಜವಾಬ್ದಾರಿ ಹೆಚ್ಚುತ್ತದೆ, ಜವಾಬ್ದಾರಿ ಹೆಚ್ಚಿದಷ್ಟೂ ತನ್ನ ಸಿನೆಮಾಗಳ ಬಗ್ಗೆ ಹೆಚ್ಚು ಜಾಗರೂಕನಾಗುತ್ತಾನೆ ಎಂಬ ಆಶಾಭಾವನೆ ಹುಟ್ಟುತ್ತದೆ.

ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸಿನೆಮಾರಂಗಕ್ಕೆ ಸಂಬಂಧಿಸಿದ ಯಾವುದೋ ಪೋಸ್ಟಿಗೆ ನಾನು ಪ್ರತಿಕ್ರಿಯೆ ಬರೆಯುತ್ತಾ ‘ಕಂಟೆಂಟ್ ಓರಿಯೆಂಟೆಡ್’ ಪದವನ್ನು ಬಳಸಿದ್ದೆ. ಅದಕ್ಕೆ ಸ್ನೇಹಿತರೊಬ್ಬರು ಕಾಲೆಳೆಯುವ ನೆಪದಲ್ಲಿ ಗಂಭೀರವಾಗಿ ಪ್ರಶ್ನೆ ಕೇಳಿದ್ದರು, ‘ಈ ಕಂಟೆಂಟ್ ಓರಿಯೆಂಟೆಡ್’ ಅಂದರೆ ಏನು? ಯಾವುದು ‘ಕಂಟೆಂಟ್ ಓರಿಯೆಂಟೆಡ್ ಅಲ್ಲ’? ಎಂದು ಪ್ರಶ್ನಿಸಿದ್ದರು. ಆಗ ನಕ್ಕು ಸುಮ್ಮನಾಗಿದ್ದೆ, ಆನಂತರ ಈ ಪದದ ಬಗ್ಗೆ ಹೆಚ್ಚು ಚಿಂತಿಸಲು ಆರಂಭಿಸಿದೆ. ಈಗಲೂ ನನಗೆ ಇದು ಸಂಪೂರ್ಣವಾಗಿ ಅರ್ಥವಾಗಿದೆ ಎಂಬ ನಂಬಿಕೆ ಇಲ್ಲವಾದರೂ, ನನ್ನ ಗ್ರಹಿಕೆಯಲ್ಲಿ ನಾನು ಹಾಗೂ ನನ್ನಂತೆ ಉಳಿದವರು ತಮ್ಮ ಚರ್ಚೆಯಲ್ಲಿ ಈ ಪದವನ್ನು ಬಳಸುತ್ತಿರುವುದರ ಹಿನ್ನೆಲೆಯನ್ನು ಗಮನಿಸಿದಾಗ ಈ ಕೆಳಗಿನ ಕೆಲವು ಅಂಶಗಳನ್ನು ಗುರುತಿಸಿದ್ದೇನೆ.

ಮೊದಲಿಗೆ ನಾನು ಗಮನಿಸಿರುವ ಹೆಚ್ಚು ಚರ್ಚೆಗಳಲ್ಲಿ ಎಲ್ಲೂ ‘ಕಂಟೆಂಟ್ ಓರಿಯೆಂಟೆಡ್’ ಎಂದರೆ ಸಮಾಜಕ್ಕೆ ಸಂದೇಶ ನೀಡುವ ಸಿನೆಮಾಗಳೆಂದು ಎಲ್ಲೂ ಯಾರೂ ಭಾವಿಸಿದಂತಿಲ್ಲ, ತಯಾರಾಗುವ ಎಲ್ಲಾ ಸಿನೆಮಾಗಳಿಗೂ, ಸಿನೆಮಾ ನಿರ್ಮಾತೃಗಳಿಗೆ ಅವರಿಗೆ ಅವರದೇ ಆದ ಉದ್ದೇಶ ಹಾಗೂ ಅದಕ್ಕೊಂದು ಕಥೆ ಎಂಬುದು ಇದ್ದೇ ಇರುತ್ತದೆ. ಆ ಕಥೆಯ ಮೇಲೆ ಆಧಾರಿತ ಸಿನೆಮಾಗಳಾದ್ದರಿಂದ, ಅವೆಲ್ಲವೂ ಆ ಅರ್ಥದಲ್ಲಿ ‘ಕಂಟೆಂಟ್ ಓರಿಯೆಂಟೆಡ್’ ಸಿನೆಮಾಗಳೇ ಎಂದು ಭಾವಿಸಬಹುದು. ಆದರೆ ಈ ಚರ್ಚೆಗಳಲ್ಲಿ ಬಳಸುತ್ತಿರುವ ‘ಕಂಟೆಂಟ್ ಓರಿಯೆಂಟೆಡ್’ ಎಂಬ ಪದದ ಉದ್ದೇಶ ಬೇರೆಯದೇ ಅರ್ಥ ವ್ಯಾಪ್ತಿಯನ್ನು ಹೊಂದಿದೆ ಎಂಬುದನ್ನು ಬಹುತೇಕ ಚರ್ಚೆಗಳಲ್ಲಿ ಗಮನಿಸಬಹುದು.

ಈ ರೀತಿಯ ಕಂಟೆಂಟ್ ಬಗ್ಗೆ ಚರ್ಚೆ ಮಾಡುತ್ತಿರುವುದು ಕನ್ನಡ ಚಿತ್ರರಂಗದ ಭವಿಷ್ಯದ ದೃಷ್ಟಿಕೋನದಲ್ಲಿ ಆಶಾದಾಯಕ ಬೆಳವಣಿಗೆ ಎಂದು ಈ ಮೊದಲೇ ಹೇಳಿದ್ದೆನಲ್ಲಾ, ಆ ಮಾತನ್ನು ವಿಸ್ತರಿಸುವುದಾದರೆ, ಈ ಮೊದಲು ಜನಪ್ರಿಯ ಮನರಂಜನಾತ್ಮಕ (ಮನರಂಜನೆ ಎಂದರೆ ಯಾವುದು? ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಅದರ ವ್ಯಾಪ್ತಿ ವಿಷಯ ಬೇರೆ ಹಾದಿ ಹಿಡಿಯುವುದರಿಂದ ಸದ್ಯಕ್ಕೆ ಮನರಂಜನೆ ಎಂಬುದನ್ನು ಬಹುಸಂಖ್ಯಾತ ಪ್ರೇಕ್ಷಕ ವರ್ಗ ಬಳಸುವ ಅರ್ಥದಲ್ಲೇ ಬಳಸಿದ್ದೇನೆ) ಸಿನೆಮಾಗಳ ಆಚೆಗಿನ ಅತ್ಯುತ್ತಮ ಸಿನೆಮಾಗಳನ್ನು ಅಂತರ್‌ರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಅಥವಾ ಅಪರೂಪಕ್ಕೆ ಮಲ್ಟಿಪ್ಲೆಕ್ಸಲ್ಲಿ ಮಾತ್ರ ನೋಡಲು ಅವಕಾಶ ಸಿಗುತ್ತಿತ್ತು. ಆನ್‌ಲೈನ್ ಟೋರೆಂಟ್ಸ್ ಬಗ್ಗೆ ತಿಳಿದಿದ್ದವರು, ಅವರಿಗೆ ಆ ಅಪರೂಪದ ಸಿನೆಮಾಗಳ ಬಗ್ಗೆ ಮಾಹಿತಿ ಇದ್ದವರು ಮಾತ್ರ ಅಂತಹ ಸಿನೆಮಾಗಳನ್ನು ಡೌನ್ಲೋಡ್ ಮಾಡಿ ವೀಕ್ಷಿಸುತ್ತಿದ್ದರು ಹಾಗೂ ಚರ್ಚಿಸುತ್ತಿದ್ದರು.

ಥಿಯೇಟರಿಗೆ ಬರುತ್ತಿದ್ದ ಬೇರೆ ಭಾಷೆಯ ಸಿನೆಮಾಗಳ ಆಚೆಗೆ ಅಲ್ಲೂ ಪರ್ಯಾಯ ಸಿನೆಮಾಗಳು ತಯಾರಾಗುತ್ತವೆ ಎಂಬ ವಿಷಯ ಬಹುತೇಕ ಕನ್ನಡ ಪ್ರೇಕ್ಷಕರ ಅರಿವಿಗೆ ಬರುತ್ತಿರಲಿಲ್ಲ ಹಾಗೂ ಪ್ರತೀ ಚಿತ್ರರಂಗವನ್ನು ಆ ಭಾಷೆಯಲ್ಲಿ ಜನಪ್ರಿಯವಾಗುವ ಸಿನೆಮಾಗಳ ಮೂಲಕವೇ ಗುರುತಿಸುವ ಪದ್ಧತಿ ಇಂದಿಗೂ ಜೀವಂತವಾಗಿದೆ.

 ಇಂತಹ ಸಂದರ್ಭದಲ್ಲೇ ಪ್ರೇಕ್ಷಕರ ಪಾಲಿಗೆ ವರವಾಗಿ ಬಂದಿರುವುದು ಓಟಿಟಿ ವೇದಿಕೆ. ಈ ವೇದಿಕೆ ಪೂರ್ಣವಾಗಿ ಅಲ್ಲದಿದ್ದರೂ ಒಂದು ರೀತಿಯಲ್ಲಿ ‘ಪ್ರಜಾಸತ್ತಾತ್ಮಕ’ ಮಾದರಿ ಥಿಯೇಟರ್. ಇಲ್ಲಿ ಪ್ರೇಕ್ಷಕ ಒಮ್ಮೆ ಹಣ ನೀಡಿ ಒಳಗೆ ಹೋದರೆ, ತನ್ನಿಷ್ಟದ ಸಿನೆಮಾವನ್ನು, ತನ್ನಿಷ್ಟದ ಮಾದರಿಯಲ್ಲಿ, ಅಂದರೆ, ಫಾಸ್ಟ್ ಫಾರ್ವರ್ಡ್ ಮಾಡಿಯಾದರೂ ನೋಡಬಹುದು ಅಥವಾ ರಿವರ್ಸ್ ಮಾಡಿ ಬೇಕಾದರೂ ನೋಡಬಹುದು, ಇಲ್ಲಾ, ಸಿನೆಮಾ ಇಷ್ಟವಾಗಲಿಲ್ಲ ಎಂದಾದರೆ, ಅದನ್ನು ಅಲ್ಲಿಗೇ ನಿಲ್ಲಿಸಿ ಬೇರೆ ಸಿನೆಮಾ ನೋಡಬಹುದು. ಇದು ಪ್ರೇಕ್ಷಕನಿಗೆ ಸಿಗುವ ಅತ್ಯುನ್ನತ ಸವಲತ್ತು. ಇಂತಹ ಅವಕಾಶ ಪ್ರೇಕ್ಷಕನಿಗೆ ಸಿಕ್ಕಿರುವುದರಿಂದ, ತಾನು ಇಲ್ಲಿಯವರೆಗೂ ನೋಡಿರುವ ಮಾದರಿಯ ಸಿನೆಮಾಗಳ ಏಕತಾನತೆಯಿಂದ ಹೊರಬರಲು ಅನ್ಯ ಭಾಷೆಯ ಸಿನೆಮಾಗಳನ್ನು ಇಂದು ಹುಡುಕುತ್ತಾ ಹೊರಟಿದ್ದಾನೆ. ಅಲ್ಲಿನ ಜನಪ್ರಿಯ ಸಿನೆಮಾಗಳಾಚೆಗಿನ ಹೊಸ ಮಾದರಿಯ ಕಥೆಗಳನ್ನು ಕಂಡು ಬೆರಗುಗೊಂಡಿದ್ದಾನೆ. ಆ ಬೆರಗು ಪ್ರೇಕ್ಷಕನ ಹಸಿವನ್ನು ವಿಸ್ತರಿಸಿದೆ. ವಿಸ್ತರಿಸಿದ ಹಸಿವೇ ಇಂದು, ಈ ಮಾದರಿಯ ಕಥೆಗಳು ನಮ್ಮಲ್ಲಿ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸುವಂತೆ ಮಾಡಿದೆ. ಇಂತಹ ಪ್ರೇಕ್ಷಕರು ಹೆಚ್ಚಾದಂತೆಲ್ಲಾ ಹೊಸ ಮಾದರಿಯ ಕಥೆಯುಳ್ಳ ಸಿನೆಮಾಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಆಶಾದಾಯಕ ಬೆಳವಣಿಗೆ ಎಂದು ಹೇಳಿರುವುದು.

ಅದರಲ್ಲೂ ಇಂದು ಹೆಚ್ಚು ಚರ್ಚೆಯಾಗುತ್ತಿರುವ ಸಿನೆಮಾಗಳಲ್ಲಿ ಮಲಯಾಳಂ ಸಿನೆಮಾಗಳು ಅಗ್ರಸ್ಥಾನದಲ್ಲಿದ್ದರೆ, ತಮಿಳು, ಮರಾಠಿ ಸಿನೆಮಾಗಳು ನಂತರದ ಸ್ಥಾನದಲ್ಲಿವೆೆ. ಅಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಹೆಚ್ಚು ಚರ್ಚಿಸಲ್ಪಡುತ್ತಿರುವ ಕಥೆಗಳು ಆ ನೆಲದ ಮೂಲದ ಕಥೆಗಳು. ಆ ಸಿನೆಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಬಳಸುವ ಜನಪ್ರಿಯ ಮಾದರಿಗಳಾದ ಹೀರೋ ವಿಜೃಂಭಣೆ, ಹಾಡು, ಹೊಡೆದಾಟ, ಹಾಸ್ಯ ಸನ್ನಿವೇಶಗಳ ರೆಗ್ಯುಲರ್ ಫಾರ್ಮೆಟ್ ಬಳಕೆಯಾಗದೆ, ನೈಜ ಮಾದರಿಯಲ್ಲಿ ವಾಸ್ತವತೆಗೆ ಹೆಚ್ಚು ಒತ್ತುಕೊಟ್ಟು ನಿರ್ಮಿಸಿರುವ ಸಿನೆಮಾಗಳಾಗಿರುತ್ತವೆ, ಅದರಲ್ಲಿನ ಕಥಾನಾಯಕಿ/ನಾಯಕ ಸೂಪರ್ ಪವರ್ ಇರುವವರಾಗಿರದೆ, ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯರಾಗಿರುತ್ತಾರೆ. ಅವರ ಆಯ್ಕೆಯ ಕಥೆಗಳು ಸಮಾಜದೊಳಗಿನ ಹುಳುಕುಗಳನ್ನು ಚರ್ಚಿಸುತ್ತವೆ ಅಥವಾ ಕನ್ನಡಿ ಹಿಡಿಯುತ್ತವೆ, ನೋಡುವ ಪ್ರೇಕ್ಷಕನನ್ನು ಕಾಡುತ್ತವೆ ಅಥವಾ ಚಿಂತಿಸುವಂತೆ ಮಾಡುತ್ತವೆ. ಆ ಕಥೆಗಳು ಪ್ರೇಕ್ಷಕನಿಗೆ ತನ್ನ ಸುತ್ತಲಿನ ತಾನು ಕಾಣದ ಅಥವಾ ಕಂಡರೂ ತನಗೆ ಅನುಭವಕ್ಕೆ ಬಾರದಿರುವ ಇನ್ನೊಂದು ಮುಖದ ಅನಾವರಣವಾಗಿರುತ್ತವೆ. ಹಾಗಾಗಿಯೇ ಅವು ಹೆಚ್ಚು ಚರ್ಚೆಗೆ ಬರುತ್ತವೆ. ಈ ರೀತಿಯಲ್ಲಿ ತನ್ನನ್ನು ಕೇವಲ ‘ಪ್ರೇಕ್ಷಕ’ನಾಗಿ ಉಳಿಸದೇ, ಕಥೆಯೊಳಗೆ ಒಳಗೊಳ್ಳುವಿಕೆಯನ್ನೇ ಬಹುಶಃ ಪ್ರೇಕ್ಷಕ ‘ಕಂಟೆಂಟ್ ಓರಿಯೆಂಟೆಡ್’ ಸಿನೆಮಾಗಳು ಎಂದು ಎಲ್ಲರೂ ಚರ್ಚಿಸುತ್ತಿದ್ದಾರೆ ಎಂದು ನನ್ನ ಗ್ರಹಿಕೆ. ಹಾಗಂತ ‘ಜನಪ್ರಿಯ ಮಾದರಿಯ’ ಸಿನೆಮಾಗಳು ಪ್ರೇಕ್ಷಕರನ್ನು ಒಳಗೊಳ್ಳುವಿಕೆಯ ಕೆಲಸ ಮಾಡುವುದಿಲ್ಲವೇ ಎಂದರೆ, ಇಲ್ಲ ಎಂದು ಹೇಳಲಾಗುವುದಿಲ್ಲ, ಅಲ್ಲೂ ಒಳಗೊಳ್ಳುವಿಕೆ ಇದ್ದೇ ಇರುತ್ತದೆ. ತನ್ನ ನಿಜಜೀವನದಲ್ಲಿ ದುರ್ಬಲನಾಗಿರುವ, ಬಲಹೀನ ಪ್ರೇಕ್ಷಕ ವಿಲನ್‌ನನ್ನು ಹೀರೋ ಹೊಡೆಯುವ ಸಂದರ್ಭದಲ್ಲಿ ತಾನೇ ಅಲ್ಲಿ ಹೀರೋ ಆಗಿಬಿಡುತ್ತಾನೆ. ತನ್ನ ವಾಸ್ತವ ಲೋಕದಲ್ಲಿ ಈಡೇರಿಸಿಕೊಳ್ಳಲು ಅಸಾಧ್ಯವಾದದ್ದನ್ನೆಲ್ಲಾ ಆ ಎರಡೂವರೆ ಗಂಟೆಯಲ್ಲಿ ಹೀರೋನ ನೆಪದಲ್ಲಿ ಆತ್ಮ ತೃಪ್ತಿಗೊಳಿಸಿಕೊಂಡು ಥಿಯೇಟರಿನಿಂದ ಹೊರಬರುತ್ತಾನೆ. ಹೊರಬಂದನಂತರ ಎಂದಿನ ತನ್ನ ಜಂಜಡಮಯ ಜೀವನದಲ್ಲೇ ಮುಳುಗಿ ಹೋಗುತ್ತಾನೆ.

ಈ ಮಾದರಿಗೆ ತದ್ವಿರುದ್ಧವಾದ ಮಾದರಿ ಈಗಿನ ಹೊಸ ಮಾದರಿಯ ಪರ್ಯಾಯ ಸಿನೆಮಾಗಳಾದ್ದರಿಂದ, ಅವು ನಿರೂಪಣೆಯಲ್ಲಿ ಹೆಚ್ಚು ಎಂಗೇಜಿಂಗ್ ಆಗಿರುತ್ತವಾದ್ದರಿಂದ, ಆ ಸಿನೆಮಾಗಳಲ್ಲಿ ಕಥೆಯ ವಿಷಯಕ್ಕೆ ಹೆಚ್ಚು ಮಹತ್ವಕೊಡುವುದರಿಂದ ಅವು ‘ಕಂಟೆಂಟ್ ಓರಿಯೆಂಟೆಡ್’ ಸಿನೆಮಾಗಳು ಎಂದು ಚರ್ಚೆಯಾಗುತ್ತಿವೆ. ಇಲ್ಲಿ ಆ ನಿರ್ದಿಷ್ಟ ಪದದ ಬಳಕೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕಿಂತ ಆ ಪದಗಳ ಹಿಂದಿರುವ ಚರ್ಚೆಯ ಉದ್ದೇಶದ ಕಡೆಗೆ ಹೆಚ್ಚು ಗಮನ ಕೊಡಬೇಕಾದದ್ದು, ನನ್ನ ಹಾಗೂ ನನ್ನ ಓರಗೆಯ ಸಿನೆಮಾ ಮಂದಿಯ ಜವಾಬ್ದಾರಿ ಎಂದು ನನ್ನ ಭಾವನೆ.

ಅದರ ಜೊತೆಗೆ ಮುಂದಿನ ಸಿನೆಮಾ ವೀಕ್ಷಿಸುವ ವೇದಿಕೆಗಳು ಹೆಚ್ಚು ತಂತ್ರಜ್ಞಾನ ಆಧಾರಿತವಾಗಿದ್ದು, ಪ್ರೇಕ್ಷಕನ ತುದಿ ಬೆರಳಿನಲ್ಲಿ (ಫಾರ್ವರ್ಡ್, ರಿವರ್ಸ್, ಫಾಜ್, ಎಕ್ಸಿಟ್) ಸಿನೆಮಾವೊಂದರ ಮೌಲ್ಯಮಾಪನ ನಡೆಯುವುದರಿಂದ, ತನ್ನ ಸಿನೆಮಾ ಒಮ್ಮೆ ಆರಂಭವಾದರೆ ಕೊನೆಯವರೆಗೂ ಪ್ರೇಕ್ಷಕ ತನ್ನ ಬೆರಳ ತುದಿಗೆ ಕೆಲಸ ಕೊಡದೆ ಪೂರ್ತಿ ಸಿನೆಮಾ ವೀಕ್ಷಿಸುವಂತೆ ಮಾಡುವುದೂ ಒಂದು ಸವಾಲಿನ ಕೆಲಸ. ಆ ಸವಾಲನ್ನು ಸ್ವೀಕರಿಸುತ್ತಲೇ ಸಿನೆಮಾ ಹೆಚ್ಚು ಜನರನ್ನು ತಲುಪಲು, ಆ ಪ್ರೇಕ್ಷಕರು ಮತ್ತಷ್ಟು ಪ್ರೇಕ್ಷಕರಿಗೆ ಶಿಫಾರಸು ಮಾಡುವಂತಾಗಬೇಕಾದರೆ, ಕಥೆಯೊಳಗಿನ ವಿಷಯ ಹಾಗೂ ಅದರ ಪ್ರಸ್ತುತಿಯ ಬಗ್ಗೆಯೂ ಹೆಚ್ಚು ಜವಾಬ್ದಾರಿಯುತವಾಗಿ ಸಿನೆಮಾ ನಿರ್ಮಾಣದಲ್ಲಿ ನಮ್ಮ ಸಿನೆಮಾ ಮಂದಿ ತೊಡಗಬೇಕಿದೆ.

ಈ ಚರ್ಚೆಗಳೆಲ್ಲವೂ ಕೇವಲ ಸಾಮಾಜಿಕ ತಾಣದಲ್ಲಷ್ಟೇ ನಡೆಯುತ್ತಿರುವುದರಿಂದ ಕೂಡಲೇ ಕನ್ನಡ ಚಿತ್ರರಂಗದಲ್ಲಿ ಸಮಗ್ರ ಬದಲಾವಣೆಯನ್ನು ನಿರೀಕ್ಷೆ ಮಾಡುವಂತಿಲ್ಲ, ಅದಕ್ಕೆ ಮುಖ್ಯ ಕಾರಣ, ಈ ಚರ್ಚೆಗಳನ್ನು ಚಿತ್ರರಂಗದ ಬಹುತೇಕರು ಅದರಲ್ಲೂ ಈಗ ಕ್ರಿಯಾಶೀಲರಾಗಿ, ಕೂಡಲೇ ನಿರ್ಮಾಣ ಮಾಡುವಷ್ಟು ಶಕ್ತರಾಗಿರುವ ಚಿತ್ರಮಂದಿಯ ಕಣ್ಣಿಗೆ ಬೀಳುತ್ತಿಲ್ಲ, ಅವರೂ ಭಾಗವಹಿಸುತ್ತಿಲ್ಲ. ಆ ಚರ್ಚೆಗಳನ್ನು ಗಮನಿಸಿ ಕಥೆಗಳ ಬಗ್ಗೆ ತಲೆಕೆಡಿಸಿಕೊಂಡು ಚಿತ್ರರಂಗವನ್ನು ‘ಅವರ (ಪರ ಭಾಷೆಯವರ)’ ಲೆವೆಲ್‌ಗೆ ತೆಗೆದುಕೊಂಡು ಹೋಗಲು ತಲೆಕೆಡಿಸಿಕೊಂಡಿರುವ ನಿರ್ದೇಶಕರಿಗೆ ಅವರಿಗೆ ‘ಸೂಕ್ತ’ವಾಗು ವಂತಹ ನಿರ್ಮಾಪಕರು ಸಿಗುತ್ತಿಲ್ಲ. ಈ ಚರ್ಚೆಗಳ ಆಚೆಗೆ ಇಂದಿಗೂ ಹಳೇ ಮಾದರಿಯ ಕಥೆಗಳು ಆಗಾಗ ಕನ್ನಡ ಚಿತ್ರರಂಗದಲ್ಲಿ ಗೆಲ್ಲುತ್ತಿರುವುದರಿಂದ ಸದ್ಯದ ಕ್ರಿಯಾಶೀಲ ನಿರ್ಮಾಪಕರೂ ಕೂಡ ಹೊಸ ಮಾದರಿಯ ಕಥೆಗಳ ನಿರ್ಮಾಣದಲ್ಲಿ ಆಸಕ್ತಿ ತೋರಿಸುತ್ತಿಲ್ಲ.

ಇನ್ನು ಓಟಿಟಿಗಳ ವಿಚಾರದಲ್ಲಿ ಹೇಳುವುದಾದರೆ, ಇಂತಹ ಪರ್ಯಾಯ ಸಿನೆಮಾಗಳಿಗೆ ಅದು ಅತ್ಯುತ್ತಮ ವೇದಿಕೆ ಮಾಡಿಕೊಟ್ಟಿದೆಯೇ ಎಂದರೆ ಅದು ಸಂಪೂರ್ಣವಾಗಿ ಸತ್ಯವಲ್ಲ. ಈ ಓಟಿಟಿ ವೇದಿಕೆಗಳ ಆಯ್ಕೆಯೂ ಬೇರೆ ಮಾರ್ಕೆಟಿಂಗ್ ಮಾದರಿಯನ್ನು ಅನುಸರಿಸುತ್ತವೆ. ಅವು ತಮ್ಮ ವೇದಿಕೆಗೆ ಆಯ್ಕೆ ಮಾಡಿಕೊಳ್ಳುವ ಸಿನೆಮಾಗಳಲ್ಲಿ ಹೊಸ ಮಾದರಿಯ ಸಿನೆಮಾಗಳಿಗಿಂತ ಅವರ ಆದ್ಯತೆ ಏನಿದ್ದರೂ ತಮ್ಮ ವೇದಿಕೆಗೆ ಹೆಚ್ಚು ಸಬ್ ಸ್ಕ್ರಿಪ್ಷನ್ ತಂದು ಕೊಡಬಲ್ಲ ಸಿನೆಮಾಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ನನಗಾದ ಅನುಭವಗಳಲ್ಲೇ ಹೇಳುವುದಾದರೆ, ಈ ಓಟಿಟಿ ವೇದಿಕೆಗಳು ತಮ್ಮ ವಾರ್ಷಿಕ ಬಜೆಟ್‌ನಲ್ಲಿ, ಪ್ರತೀ ಭಾಷೆಗೆ ಇಂತಿಷ್ಟು ಹಣವನ್ನು ತೆಗೆದಿರಿಸುತ್ತಾರೆ. ಅದರಲ್ಲಿನ ಹೆಚ್ಚು ಮೊತ್ತ ಅವರು ವಿನಿಯೋಗಿಸುವುದು ದೊಡ್ಡ ಸ್ಟಾರ್ ಸಿನೆಮಾಗಳಿಗೆ. ಈ ಅನುದಾನದಲ್ಲಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ಚಿತ್ರರಂಗದಲ್ಲಿ ಅತೀ ಕಡಿಮೆ ಅನುದಾನ ನಿಗದಿಯಾಗಿರುವುದು ಕನ್ನಡ ಭಾಷೆಯ ಸಿನೆಮಾಗಳಿಗೆ. ಆ ಅನುದಾನವೂ ದೊಡ್ಡ ಸ್ಟಾರ್ ನಟರ ಹಾಗೂ ಪ್ರಭಾವಿ ನಿರ್ಮಾಣ ಸಂಸ್ಥೆಗಳಿಗೆ ಹೋಗುವುದರಿಂದ, ಮಧ್ಯಮ ಹಾಗೂ ಸಣ್ಣ ಬಜೆಟ್‌ನ ಉತ್ತಮ ಸಿನೆಮಾಗಳು ಆ ವೇದಿಕೆಯಲ್ಲಿ ಕಾಣಿಸುವುದು ಅಪರೂಪವಾಗಿಬಿಡುತ್ತವೆ. ವೇದಿಕೆ ಸಿಕ್ಕರೂ ಪೇ ಪರ್ ವೀವ್ ಮಾದರಿಯನ್ನು ವಿಧಿ ಇಲ್ಲದೇ ಒಪ್ಪಿಕೊಳ್ಳಬೇಕು ಅಥವಾ ಆ ವೇದಿಕೆಯವರು ನಿಗದಿ ಮಾಡುವ ಚಿಲ್ಲರೆ ಮೊತ್ತಕ್ಕೆ ನೀಡಿ ಕೈತೊಳೆದುಕೊಳ್ಳಬೇಕು.

ಸಿನೆಮಾ ರಂಗದಲ್ಲಿ ಹಣ ಕಳೆದುಕೊಳ್ಳಲೆಂದೇ ಯಾವ ನಿರ್ಮಾಪಕರೂ ಬರುವುದಿಲ್ಲವಲ್ಲ, ಕನ್ನಡದಲ್ಲಿ ನಿರ್ಮಾಣವಾಗುವ ಸಿನೆಮಾಗಳಲ್ಲಿ ಮೇಲೆ ಹೇಳಿರುವಂತಹ ‘ಕಂಟೆಂಟ್ ಓರಿಯೆಂಟೆಡ್’ ಸಿನೆಮಾಗಳ ಸಂಖ್ಯೆ ಕಡಿಮೆ ಇರುವುದರ ಹಿಂದೆ ಇನ್ವೆಸ್ಟ್ ಮಾಡಿದ ಹಣವನ್ನು ತಕ್ಕಮಟ್ಟಿಗೂ ಹಿಂಪಡೆಯಲಾಗದ ಪರಿಸ್ಥಿತಿ ಇರುವುದು ಕೂಡ ಮುಖ್ಯ ಕಾರಣ. ಸಾಮಾಜಿಕ ತಾಣದಲ್ಲಿ ಹೆಚ್ಚು ಚರ್ಚೆಯಾದರೂ ಸಹ ಅದು ಥಿಯೇಟರ್‌ನಲ್ಲಿ ಟಿಕೆಟ್ ರೂಪದಲ್ಲಿ ಹಣ ಸಂಗ್ರಹವಾಗುವುದು ಅತೀ ಕಡಿಮೆ. ಎಲ್ಲೋ ಕೆಲವು ಬೆರಳೆಣಿಕೆಯಷ್ಟು ಸಿನೆಮಾಗಳು ಇದಕ್ಕೆ ಅಪವಾದ ಎನ್ನಬಹುದಷ್ಟೇ. ಕನ್ನಡದಲ್ಲಿನ ಜನಪ್ರಿಯ ನಟರು, ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ತಮ್ಮ ಎಂದಿನ ಶೈಲಿಯ ಕಥೆಗಳಾಚೆಗೆ ಹೊಸ ಮಾದರಿಯ ಕಥೆಗಳಿಗೆ, ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡರೆ ಮುಂದಿನ ದಿನಗಳಲ್ಲಿ ಇಲ್ಲೂ ಆಶಾದಾಯಕ ಬದಲಾವಣೆಯನ್ನು ಕಾಣಬಹುದು. ಅದಕ್ಕೆ ಒಟ್ಟಾರೆ ಚಿತ್ರರಂಗ ಮನಸ್ಸು ಮಾಡಬೇಕಷ್ಟೇ.

ಸಿನೆಮಾ ರಂಗದಲ್ಲಿ ಹಣ ಕಳೆದುಕೊಳ್ಳಲೆಂದೇ ಯಾವ ನಿರ್ಮಾಪಕರೂ ಬರುವುದಿಲ್ಲವಲ್ಲ, ಕನ್ನಡದಲ್ಲಿ ನಿರ್ಮಾಣವಾಗುವ ಸಿನೆಮಾಗಳಲ್ಲಿ ಮೇಲೆ ಹೇಳಿರುವಂತಹ ‘ಕಂಟೆಂಟ್ ಓರಿಯೆಂಟೆಡ್’ ಸಿನೆಮಾಗಳ ಸಂಖ್ಯೆ ಕಡಿಮೆ ಇರುವುದರ ಹಿಂದೆ ಇನ್ವೆಸ್ಟ್ ಮಾಡಿದ ಹಣವನ್ನು ತಕ್ಕಮಟ್ಟಿಗೂ ಹಿಂಪಡೆಯಲಾಗದ ಪರಿಸ್ಥಿತಿ ಇರುವುದೂ ಕೂಡ ಮುಖ್ಯ ಕಾರಣ.

Writer - ಮಂಸೋರೆ

contributor

Editor - ಮಂಸೋರೆ

contributor

Similar News

ಬೀಗ