ನವೋದಯ ಗುಂಪಿಗೆ 20 ಲಕ್ಷ ರೂ. ಸಾಲ ನೀಡುವ ಯೋಜನೆ: ಡಾ.ಎಂ.ಎನ್.ರಾಜೇಂದ್ರ ಕುಮಾರ್

Update: 2022-01-04 12:11 GMT

ಕುಂದಾಪುರ, ಜ.4: ನವೋದಯ ಗುಂಪಿನ ಮಹಿಳೆಯರು ಪಡೆದ ಸಾಲ ವನ್ನು ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ. ಈಗಾಗಲೇ ಇರುವ 40 ಸಾವಿರ ಗುಂಪುಗಳನ್ನು 80ಸಾವಿರಕ್ಕೆ ಏರಿಸಲಾಗುವುದು. ಅದೇ ರೀತಿ ಮುಂದಿನ ದಿನಗಳಲ್ಲಿ ಈ ಗುಂಪಿನವರಿಗೆ 20ಲಕ್ಷ ರೂ. ಸಾಲ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಕುಂದಾಪುರ ವಡರಹೋಬಳಿಯ ಪಿ.ವಿ.ಎಸ್.ಕಾಂಪ್ಲೆಕ್ಸ್ ಕಟ್ಟಡದ ನೆಲ ಅಂತಸ್ತ್ತಿಗೆ ಸ್ಥಳಾಂತರಗೊಂಡ ದ.ಕ. ಜಿಲ್ಲಾ ಕೇಂದ್ರದ ಸಹಕಾರಿ ಬ್ಯಾಂಕಿನ ವಡೇರ ಹೋಬಳಿ ಶಾಖೆಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಡೀ ರಾಷ್ಟ್ರದಲ್ಲಿ ಕೃಷಿ ಸಾಲವನ್ನು ನೀಡಿ 26 ವರ್ಷಗಳ ಕಾಲ ನೂರಕ್ಕೆ ನೂರು ಮರುಪಾವತಿಯನ್ನು ಪಡೆದ ಏಕೈಕ ಜಿಲ್ಲಾ ಕೇಂದ್ರದ ಬ್ಯಾಂಕ್ ನಮ್ಮದಾಗಿದೆ. ಈ ಬ್ಯಾಂಕ್ 121 ಕೋಟಿ ಡಿಪಾಸಿಟ್ ಹೊಂದಿದ್ದು, 30 ಕೋಟಿ 23ಲಕ್ಷ ರೂ. ಸಾಲ ನೀಡಿದೆ ಎಂದರು.

ಈಗಾಗಲೇ ಮಂಗಳೂರಿನಲ್ಲಿ ಆರಂಭಗೊಂಡಿರುವ ವಾಹನ ಬ್ಯಾಂಕ್‌ನ್ನು ಕೆಲವೇ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲೂ ಆರಂಭಿಸಿ, ಗ್ರಾಹಕರ ಸೇವೆ ಮಾಡ ಲಾಗುವುದು. ಇದರ ಉದ್ದೇಶ ಜನರಲ್ಲಿ ಬ್ಯಾಂಕಿನ ಬಗ್ಗೆ ತಿಳುವಳಿಕೆ ಮೂಡಿ ಸುವುದು ಮತ್ತು ಆರ್ಥಿಕವಾಗಿ ಬ್ಯಾಂಕಿನಿಂದ ಸಾಲ ಪಡೆದುಕೊಂಡು ಯಾವ ರೀತಿಯಾಗಿ ಬೆಳವಣಿಗೆಯಾಗಬಹುದು ಎಂಬುದರ ಬಗ್ಗೆ ಮಾಹಿತಿ ನೀಡುವು ದಾಗಿದೆ ಎಂದು ಅವರು ಹೇಳಿದರು.

ಜನರಿಗೆ ಬೇಕಾದಂತಹ ಆರ್ಥಿಕ ಸೌಲಭ್ಯಗಳನ್ನು ನೀಡಿ, ಸ್ವಾವಲಂಬಿ ಜೀವನ ಮಾಡುವಂತ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಅಂತ್ಯದೊಳಗೆ ಉಪ್ಪೂರು ಹಾಗೂ ಕಂಡ್ಲೂರು ಭಾಗದಲ್ಲಿ ನಮ್ಮ ಹೊಸ ಶಾಖೆಯನ್ನು ತೆರೆಯಲಾಗುವುದು. ಅಲ್ಲದೆ 2022ರ ಇಸವಿ ಅಂತ್ಯದೊಳಗೆ 125 ಶಾಖೆ ಹೊಂದುವ ಗುರಿಯನ್ನು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಟ್ಟಡ ಮಾಲಕ ಎನ್.ಬಾಲಕೃಷ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ವಿ.ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಎಂ.ಮಹೇಶ್ ಹೆಗ್ಡೆ ಸ್ವಾಗತಿಸಿದರು. ಇನ್ನೋರ್ವ ನಿರ್ದೇಶಕ ರಾಜು ಪೂಜಾರಿ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News