ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆ

Update: 2022-01-04 15:14 GMT
ಸುಬ್ಬಯ್ಯ ಶೆಟ್ಟಿ

ಮಂಗಳೂರು, ಜ.4: ಹಿರಿಯ ಲೇಖಕ ಮತ್ತು ಉದ್ಯಮಿ ಡಾ.ಡಿ.ಕೆ. ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ‘ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ 2020-21 ನೇ ಸಾಲಿನಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಇದಿರು ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕಾಸರಗೋಡಿನ ದಡ್ಡಂಗಡಿಯಲ್ಲಿ 1943ರಲ್ಲಿ ಜನಿಸಿದ ಸುಬ್ಬಯ್ಯ ಶೆಟ್ಟರು ಮಂಗಳೂರಿನ ಬೋಳಾರದಲ್ಲಿ ಹೋಟೆಲ್ ನಡೆಸಿ ಬೋಳಾರ ಸುಬ್ಬಯ್ಯ ಶೆಟ್ಟರೆಂದೇ ಖ್ಯಾತರಾದರು. ತೆಂಕುತಿಟ್ಟು ಯಕ್ಷರಂಗದ ‘ಅಭಿನವ ಕೋಟಿ’ ಬಿರುದಾಂಕಿತ ದಿ. ಬೋಳಾರ ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಮೇಳದ ತಿರುಗಾಟಕ್ಕೆ ತೊಡಗಿದ ಸುಬ್ಬಯ್ಯ ಶೆಟ್ಟರು ಸುಂಕದಕಟ್ಟೆ ಮಧೂರು, ಕದ್ರಿ, ಕರ್ನಾಟಕ, ಪುತ್ತೂರು, ಕುಂಟಾರು, ಕಳವಾರು ಮೇಳಗಳಲ್ಲಿ 55 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 79ರ ಇಳಿವಯಸ್ಸಿನಲ್ಲೂ ಕಳವಾರು ಶ್ರೀ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.

ಪ್ರಶಸ್ತಿಯು 20,000 ರೂ.ನಗದು ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ. ಜ.8ರಂದು ನಗರದ ಮೋತಿಮಹಲ್ನಲ್ಲಿ ನಡೆಯುವ ಜಾಗತಿಕ ಬಂಟ ಪ್ರತಿಷ್ಠಾನದ ವಾರ್ಷಿಕ ಸಮಾವೇಶದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಜಿ.ಆರ್. ರೈ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಯಕ್ಷಗಾನ ಬಯಲಾಟ ಅಕಾಡಮಿಯ ಮಾಜಿ ಸದಸ್ಯ, ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನಂತೆ ಜಾಗತಿಕ ಬಂಟ ಪ್ರತಿಷ್ಠಾನವು ಸುಬ್ಬಯ್ಯ ಶೆಟ್ಟರನ್ನು ಪ್ರಶಸ್ತಿಗೆ ಪರಿಗಣಿಸಿದೆ ಎಂದು ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ವೈ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News