ಅನಾಥ ಮಕ್ಕಳ ಆಶಾಕಿರಣ ಸಿಂಧುತಾಯಿ

Update: 2022-01-05 18:33 GMT

ಪ್ರತಿ ಮಗುವಿನ ಬಾಲ್ಯ ಅನನ್ಯ. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ಮುದ್ದಿಸುತ್ತಾರೆ. ತಮ್ಮ ಮಕ್ಕಳನ್ನೇ ಪ್ರಪಂಚದ ಕೇಂದ್ರ ಬಿಂದುಗಳನ್ನಾಗಿ ಮಾಡಿ ಖುಷಿಪಡುತ್ತಾರೆ. ಆದರೆ ಪೋಷಕರೇ ಇಲ್ಲದ ಮಕ್ಕಳ ಬಾಲ್ಯದಲ್ಲಿ ಇದೆಲ್ಲವನ್ನೂ ಊಹಿಸಿಕೊಳ್ಳಲು ಸಾಧ್ಯವೇ? ತಂದೆ ತಾಯಿ ಇಲ್ಲದ ಮಕ್ಕಳು ಅನಾಥವಾಗಿ ಆಶ್ರಯವಿಲ್ಲದ ಜೀವನ ನಡೆಸುವುದು ಘೋರ ದುರಂತ. ಇಂತಹ ಅನಾಥ ಮಕ್ಕಳನ್ನು ಒಬ್ಬ ಸಾಮಾನ್ಯ ಮಹಿಳೆ ಸಾಕಿದ್ದಾಳೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು ಇದು ನಂಬಲೇಬೇಕಾದ ವಾಸ್ತವ ಸತ್ಯ. ಈ ವಾಸ್ತವ ಸತ್ಯ ವಿದೇಶದಲ್ಲಿ ನಡೆದಿಲ್ಲ. ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ನಡೆದಿದೆ. ಒಬ್ಬ ಸಾಮಾನ್ಯ ಮಹಿಳೆ ಎಷ್ಟು ಅನಾಥ ಮಕ್ಕಳನ್ನು ಸಾಕಬಹುದು? ಐದು, ಹತ್ತು, ಇಪ್ಪತ್ತು. ಬಹಳ ಎಂದರೆ ಐವತ್ತು ಎಂಬುದು ನಿಮ್ಮ ಲೆಕ್ಕಾಚಾರ. ಆದರೆ ಆ ಎಲ್ಲಾ ಲೆಕ್ಕಾಚಾರಗಳು ಇಲ್ಲಿ ತಲೆಕೆಳಗಾಗುತ್ತವೆ. ಏಕೆಂದರೆ ಈಕೆ ಸಾಕಿದ್ದು 2,000ಕ್ಕೂ ಹೆಚ್ಚು ಅನಾಥ ಮಕ್ಕಳನ್ನು. ಇದು ಸಾಧ್ಯವೇ? ಎಂದು ಹುಬ್ಬೇರಿಸಬೇಡಿ. ಇದೂ ಸಾಧ್ಯ! ಎಂದು ಸಾಧಿಸಿದ ಆ ಮಹಾನ್ ತಾಯಿಯೇ ಸಿಂಧುತಾಯಿ. ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ತಾಯಿರೂಪದ ದೇವತೆಯಾದ ಸಿಂಧುತಾಯಿಯ ಕಥೆ ಬಹಳ ರೋಚಕ. ಇದನ್ನು ಓದುತ್ತಾ ಹೋದಂತೆ ನಮ್ಮ ಕಣ್ಣಾಲಿಗಳು ತೇವಗೊಳ್ಳುತ್ತವೆ ಜೊತೆಗೆ ನಿಮ್ಮಲ್ಲಿ ಹೊಸ ಸಂಚಲನವೊಂದು ಖಂಡಿತವಾಗಿ ರೂಪುಗೊಳ್ಳುತ್ತದೆ.

ಯಾರು ಈ ಸಿಂಧುತಾಯಿ?

ಸಿಂಧುತಾಯಿ ಸಪ್ಕಾಲ್ ಮಹಾರಾಷ್ಟ್ರದ ಒಬ್ಬ ಖ್ಯಾತ ಮತ್ತು ಶ್ರದ್ಧಾಭರಿತ ಸಮಾಜ ಸೇವಕಿಯಾಗಿದ್ದಾರೆ. ಅನಾಥ ಮಕ್ಕಳ ಜೀವನಕ್ಕೆ ಬೆಂಗಾವಲಾಗಿ ನಿಂತು ಅವರ ಭವಿಷ್ಯಕ್ಕೆ ಬೆಳಕಾದವರು. ಬಾಲ್ಯದಲ್ಲಿ ಅನುಭವಿಸಿದ ಕಹಿ ಘಟನೆಗಳು ಅವರನ್ನು ಇಲ್ಲಿಗೆ ತಂದು ನಿಲ್ಲಿಸಿವೆ. ನಿರ್ಗತಿಕರು ಎಂಬ ಪದವನ್ನು ಶಬ್ದಕೋಶದಿಂದ ತೆಗೆದುಹಾಕುವುದೇ ತನ್ನ ಉದ್ದೇಶ ಎಂಬಂತೆ ಸಾವಿರಾರು ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆಲ್ಲಾ ಮಹಾತಾಯಿಯಾಗಿದ್ದಾರೆ. ಸಿಂಧುತಾಯಿ 1948ರ ನವೆಂಬರ್ 14ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪಿಂಪ್ರಿ ಬಳಿಯ ಮೆಘೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದಳು. ತಂದೆ ಜಾನುವಾರು ಮೇಯಿಸುವ ಬಡ ಕಾಯಕ ಮಾಡುತ್ತಿದ್ದನು. ತಂದೆ ಶಿಕ್ಷಣ ಕೊಡಿಸಲು ಉತ್ಸುಕರಾಗಿದ್ದರು. ಆದರೆ ಮನೆಯ ಪರಿಸರ ಅದಕ್ಕೆ ಪೂರಕವಾಗಿರಲಿಲ್ಲ. ಇದಕ್ಕೆ ತಾಯಿಯ ವಿರೋಧವಿತ್ತು. ಆದಾಗ್ಯೂ ಜಾನುವಾರು ಮೇಯಿಸುವ ನೆಪದಲ್ಲಿ ಅವಳನ್ನು ಶಾಲೆಗೆ ಕಳಿಸುತ್ತಿದ್ದ. ಹಣಕಾಸಿನ ತೊಂದರೆಯಿಂದ ಬರೆಯಲು ಸ್ಲೇಟ್‌ನ ಬದಲಿಗೆ ಎಲೆಗಳನ್ನು ಬಳಸುತ್ತಿದ್ದಳು. ನಾಲ್ಕನೇ ತರಗತಿಯವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದ ಸಿಂಧುತಾಯಿ, ಒಂಭತ್ತನೇ ವಯಸ್ಸಿಗೆ ಪಕ್ಕದ ಹಳ್ಳಿಯ ಇಪ್ಪತ್ತೊಂದು ವಯಸ್ಸಿನ ತರುಣನೊಡನೆ ಮದುವೆಯಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಲ್ಪಪ್ರಾಪಂಚಿಕ ಪ್ರಜ್ಞೆಯುಳ್ಳ ತಾನು ಒಂದು ಪಂಜರದೊಳಗೆ ಬಂದಿಯಾಗುತ್ತಿದ್ದೇನೆ ಎಂಬ ಕಲ್ಪನೆಯೂ ಇಲ್ಲದ ಸಿಂಧುತಾಯಿ ಮದುವೆಯಾಗಿ ಗಂಡನ ಮನೆ ಸೇರಿದಳು. ಆದರೆ ಭವಿಷ್ಯದಲ್ಲಿ ಎಲ್ಲವನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತ ಅವಳ ಜೀವನ ಇಂದಿನ ಯುವಜನತೆಗೆ ಮಾದರಿ ಎಂದೇ ಹೇಳಬಹುದು.

ಹೋರಾಟದ ಮುನ್ನುಡಿ

ಗಂಡನ ಮನೆಯಲ್ಲಿನ ನೋವು ಹಿಂಸೆಗಳು ಕ್ರಮೇಣವಾಗಿ ಅವಳನ್ನು ಹೋರಾಟಕ್ಕೆ ಇಳಿಯುವಂತೆ ಮಾಡಿದವು. ಗಂಡನೂ ತಂದೆಯಂತೆ ಜಾನುವಾರು ಮೇಯಿಸುತ್ತಿದ್ದನು. ಪ್ರತಿದಿನವೂ ಕಾಡಿನಲ್ಲಿ ಸುತ್ತಾಡಿ ಜಾನುವಾರುಗಳ ಸೆಗಣಿ ಸಂಗ್ರಹಿಸಿ ಗುಡ್ಡೆ ಹಾಕಬೇಕಾಗಿತ್ತು. ಹಗಲು ಸೆಗಣಿ ಒಟ್ಟು ಮಾಡುವ ಕೆಲಸ, ರಾತ್ರಿ ಮನೆಯ ಇನ್ನಿತರ ಕೆಲಸಗಳ ಒತ್ತಡ. ಇವುಗಳಿಗಿಂತ ಅವಳನ್ನು ಕಾಡುತ್ತಿದ್ದ ಬಹುದೊಡ್ಡ ನೋವೆಂದರೆ ಜಾನುವಾರು ಮಾಲಕನ ವರ್ತನೆ. ಜಾನುವಾರುಗಳ ಮಾಲಕ ಪದೇ ಪದೇ ಮನೆಗೆ ಕರೆಸಿಕೊಂಡು ಅಸಹ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಸಿಂಧುತಾಯಿ ಅವನ ವಿರುದ್ಧ ಮಾತನಾಡಿದಳು. ಇದನ್ನು ಸಹಿಸದ ಮಾಲಕ ಗಂಡನಿಗೆ ಇಲ್ಲಸಲ್ಲದ ಚಾಡಿ ಹೇಳಿದ. ದಾಂಪತ್ಯ ದ್ರೋಹದ ಅಸಹ್ಯಕರ ವದಂತಿ ಹರಡಿಸಿದ. ಇದು ಗಂಡ ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಯಿತು. ಈ ಸುದ್ದಿಯಿಂದ ಇಡೀ ಸಮುದಾಯ ಅವಳನ್ನು ತಿರಸ್ಕರಿಸಿತು. ಇಪ್ಪತ್ತು ವರ್ಷ ತುಂಬುವುದರೊಳಗೆ ಮೂರು ಗಂಡು ಮಕ್ಕಳ ತಾಯಿಯಾಗಿದ್ದಳು. ಇಪ್ಪತ್ತೊಂದನೇ ವಯಸ್ಸಿನಲ್ಲಿ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದಾಗ ಗಂಡನಿಂದ ಘೋರವಾದ ನೋವನ್ನು ಅನುಭವಿಸಬೇಕಾಯಿತು. ಒಂದು ದಿನ ರಾತ್ರಿ ಅವಳ ಗಂಡ ಸಿಕ್ಕಾಪಟ್ಟಿ ಥಳಿಸಿ ಮನೆಯಿಂದ ಹೊರಹಾಕಿದ. ಅಂದು ಸಾಯುವ ಸ್ಥಿತಿಯಲ್ಲಿದ್ದ ಸಿಂಧುತಾಯಿಗೆ ಸ್ವಂತ ತಾಯಿಯೂ ಕೂಡ ಆಶ್ರಯ ನೀಡಲು ನಿರಾಕರಿಸಿದಳು. ಒಂದು ದನದ ಕೊಟ್ಟಿಗೆಯಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದಳು.

‘‘ನಾನು ಹೊಕ್ಕಳ ಬಳ್ಳಿಯನ್ನು ಸಮೀಪದಲ್ಲಿದ್ದ ಕಲ್ಲಿನಿಂದ ಕತ್ತರಿಸಿಕೊಂಡೆ’’ ಎಂದು ಕೇಳುವಾಗ ಕರುಳು ಕಿತ್ತುಬರುವ ವೇದನೆಯಾಗುತ್ತದೆ. ಆನಂತರದಲ್ಲಿ ಆ ಮಗುವಿಗೆ ಮಮತಾ ಎಂದು ಹೆಸರಿಸಿದಳು. ಮಗು ಜೀವಂತವಾಗಿರಲು ಅದಕ್ಕೆ ಆಹಾರ ನೀಡುವುದು ಅನಿವಾರ್ಯವಾಗಿತ್ತು. ಬತ್ತಿದ ಎದೆಯಲ್ಲಿ ಮಗುವಿನ ಪೋಷಣೆಗೆ ಹಾಲು ಹೇಗೆ ಬಂದೀತು? ಅದಕ್ಕಾಗಿ ರೈಲ್ವೆ ಫ್ಲಾಟ್‌ಫಾರ್ಮ್‌ಗಳಲ್ಲಿ ಭಿಕ್ಷೆ ಬೇಡಿ ಮಗುವಿನ ಪೋಷಣೆ ಮಾಡಿಕೊಂಡಳು. ರಾತ್ರಿವೇಳೆ ಗುಡಿಗುಂಡಾರಗಳಲ್ಲಿ ಕಾಲಕಳೆಯುತ್ತಿದ್ದಳು. ಇದೂ ಅಸುರಕ್ಷಿತ ಎಂದು ತಿಳಿದೊಡನೆ ಸ್ಮಶಾನದಲ್ಲಿ ವಾಸಿಸತೊಡಗಿದಳು. ರಾತ್ರಿವೇಳೆ ಸ್ಮಶಾನದಲ್ಲಿ ಇವಳ ಓಡಾಟ ಕಂಡ ಜನ ಭೂತ ಎಂದು ಹೆಸರಿಸಿದರು. ಗಂಡನ ಮನೆಯಲ್ಲಿ ನೆಮ್ಮದಿಯಿಂದ ಜೀವಿಸಬೇಕಾಗಿದ್ದ ಜೀವ ಸ್ಮಶಾನದಲ್ಲಿ ಜೀವಂತ ಹೆಣದಂತೆ ಬದುಕಬೇಕಾಯಿತು. ಅದೆಷ್ಟೋ ರಾತ್ರಿಗಳನ್ನು ಸ್ಮಶಾನದಲ್ಲಿಯೇ ಕಳೆದಳು. ಒಂದು ರಾತ್ರಿ ಮಗಳು ಹಸಿವಿನಿಂದ ಅಳುವಾಗ ತಿನ್ನಲು ಕೊಡಲೂ ಏನೂ ಇಲ್ಲದಿರುವಾಗ ಹೆಣದ ಸಮೀಪ ಇಟ್ಟಿದ್ದ ಹಿಟ್ಟಿನಿಂದ ರೊಟ್ಟಿ ತಯಾರಿಸಿ ಮಗಳ ಹಸಿವನ್ನು ನೀಗಿಸಿದ್ದನ್ನು ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾಳೆ. ಭಿಕ್ಷಾಟನೆಯ ವೇಳೆ ರೈಲ್ವೇ ಫ್ಲಾಟ್‌ಫಾರ್ಮ್ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಅನಾಥ ಮಕ್ಕಳು ಇವಳ ಗಮನಕ್ಕೆ ಬಂದಿದ್ದರು.

ವೈಯಕ್ತಿಕ ಬದುಕಿನ ನಿರಂತರ ಹೋರಾಟದ ಜೊತೆಜೊತೆಗೆ ಸಾಮುದಾಯಿಕ ಹೋರಾಟಕ್ಕೂ ಇಳಿದಿದ್ದು ಸಿಂಧುತಾಯಿಯ ಬದುಕಿಗೆ ತಿರುವನ್ನು ನೀಡಿತು. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಚಿಕಲ್ದಾರಾ ಎಂಬಲ್ಲಿ ಹುಲಿ ಸಂರಕ್ಷಣಾ ಯೋಜನೆಗಾಗಿ 84 ಬುಡಕಟ್ಟು ಹಳ್ಳಿಗಳನ್ನು ಸ್ಥಳಾಂತರಿಸಲಾಯಿತು. ಈ ಗೊಂದಲದ ಮಧ್ಯೆ ಪ್ರಾಜೆಕ್ಟ್ ಅಧಿಕಾರಿಯೊಬ್ಬರು ಆದಿವಾಸಿ ಗ್ರಾಮಸ್ಥರ 132 ಹಸುಗಳನ್ನು ತಮ್ಮ ವಶಕ್ಕೆ ಪಡೆದರು ಮತ್ತು ಇದರಲ್ಲಿ ಕೆಲವು ಹಸುಗಳು ಆಹಾರವಿಲ್ಲದೆ ಪ್ರಾಣಬಿಟ್ಟವು. ಅಸಹಾಯಕ ಬುಡಕಟ್ಟು ಗ್ರಾಮಸ್ಥರ ಪುನರ್ವಸತಿಗಾಗಿ ಹೋರಾಡಲು ಸಿಂಧುತಾಯಿ ನಿರ್ಧರಿಸಿದಳು. ಈ ಪ್ರಯತ್ನದಲ್ಲಿ ಯಶಸ್ವಿಯಾಗಿ ಅರಣ್ಯ ಸಚಿವರು ನಿರಾಶ್ರಿತ ಬುಡಕಟ್ಟು ಕುಟುಂಬಗಳಿಗೆ ಸೂಕ್ತ ಆಶ್ರಯ ವ್ಯವಸ್ಥೆ ಮಾಡಿದರು. ಅಲ್ಲಿನ ಗ್ರಾಮಸ್ಥರು ಈಗಲೂ ಅವಳನ್ನು ಆರಾಧಿಸುತ್ತಾರೆ.

ಬುಡಕಟ್ಟು ಜನರ ಪುನರ್ವಸತಿ ಹೋರಾಟದ ಸಮಯದಲ್ಲಿ ಭಿಕ್ಷಾಟನೆಯಲ್ಲಿ ಗಮನಿಸಿದ್ದ ಅನಾಥ ಹಾಗೂ ನಿರ್ಗತಿಕ ಮಕ್ಕಳ ಸಂಕಷ್ಟ ಅರಿವಿಗೆ ಬಂದಿತು. ಇಂತಹ ಮಕ್ಕಳಿಗೆ ಏನಾದರೂ ವ್ಯವಸ್ಥೆ ಕಲ್ಪಿಸಬೇಕೆಂಬ ಅದಮ್ಯ ಬಯಕೆ ಮೊಳಕೆಯೊಡೆಯಿತು. ಮೊದಲು ರೈಲ್ವೇ ಹಳಿಗಳಲ್ಲಿ ತಿರುಗಾಡಿಕೊಂಡಿದ್ದ ದೀಪಕ್ ಎಂಬ ಗಂಡು ಮಗುವನ್ನು ದತ್ತು ಪಡೆದು ಸಾಕತೊಡಗಿದಳು. ಆನಂತರ ಹದಿನಾರು ಮಕ್ಕಳು ಸಿಂಧುತಾಯಿಯ ಮಡಿಲ ಆಶ್ರಯ ಪಡೆದರು. ಚಿಕಲ್ದಾರದಲ್ಲೇ ಒಂದು ಆಶ್ರಯಮನೆಯಲ್ಲಿ ಈ ಮಕ್ಕಳಿಗೆ ಆಶ್ರಯ ನೀಡಿದಳು. ಆದರೆ ಈ ಎಲ್ಲಾ ಮಕ್ಕಳಿಗೆ ಆಹಾರ ಒದಗಿಸುವುದು ಒಂದಿಷ್ಟು ತೊಂದರೆ ಆಯಿತು. ಅವರಿವರ ಬಳಿ ಹಣಕ್ಕಾಗಿ ಬೇಡತೊಡಗಿದಳು. ದಾನದ ರೂಪದಲ್ಲಿ ಕೆಲವರು ಹಣ ನೀಡಲು ಮುಂದಾದರು. ಆದರೆ ರಸೀದಿ ನೀಡಿದರೆ ಮಾತ್ರ ಹಣ ನೀಡುವುದಾಗಿ ತಿಳಿಸಿದರು. ಅದು ಅವರಿಗೆ ಅಗತ್ಯವೂ ಇತ್ತು. ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ದಾನ ನೀಡಿದ ವಿವರಗಳನ್ನು ಇಲಾಖೆಗೆ ಸಲ್ಲಿಸಲು ರಸೀದಿ ಅವಶ್ಯಕ. ವ್ಯಕ್ತಿಯಾಗಿ ರಸೀದಿ ನೀಡಲು ಅವಕಾಶ ಇಲ್ಲ. ಆದ್ದರಿಂದ ಸಿಂಧುತಾಯಿ ಎನ್‌ಜಿಒ ಪ್ರಾರಂಭಿಸುವ ಅಗತ್ಯವನ್ನು ಅರಿತುಕೊಂಡಳು. ಅಮರಾವತಿಯ ಚಿಕಲ್ದಾರಾದಲ್ಲಿ ‘ಸಾವಿತ್ರಿಬಾಯಿ ಫುಲೆ ಬಾಲಕಿಯರ ಹಾಸ್ಟಲ್’ನ್ನು ಒಂದು ಫೌಂಡೇಶನ್‌ನ ಅಡಿಯಲ್ಲಿ ಪ್ರಾರಂಭಿಸಿದಳು.

ಇಂದು ಆಕೆಯ ಮಕ್ಕಳು ಒಟ್ಟು ನಾಲ್ಕು ಎನ್‌ಜಿಒಗಳನ್ನು ಹಾಗೂ ಆರು ಅನಾಥಮಕ್ಕಳ ಕೇಂದ್ರಗಳನ್ನು ನಡೆಸು ತ್ತಿದ್ದಾರೆ. ಒಂದು ದತ್ತುಪುತ್ರ ದೀಪಕ್ ಹೆಸರಿನಲ್ಲಿ ಇನ್ನೊಂದು ತನ್ನ ಮಗಳ ಹೆಸರಿನ ಮಮತಾ ಬಾಲ ಭವನಗಳು ನಡೆಯುತ್ತಿವೆ. ಮುದಿ ಹಸುಗಳನ್ನು ಸಂರಕ್ಷಿಸಲು ಸಿಂಧುತಾಯಿ ಗೋಪಿಕಾ ಗೋವು ರಕ್ಷಣಾ ಕೇಂದ್ರವನ್ನು ತೆರೆದಳು. ಅನಾಥ ಹಾಗೂ ನಿರ್ಗತಿಕ ಮಕ್ಕಳನ್ನು ಸಾಕುವ ಮೂಲಕ ಸಿಂಧುತೈ ಸಿಂಧುತಾಯಿಯಾಗಿ ರೂಪಾಂತರಗೊಂಡಳು. ಅರವತ್ತು ವರ್ಷಗಳ ಸಾರ್ಥಕ ಮಕ್ಕಳ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಿಂಧುತಾಯಿ ನಿಜಕ್ಕೂ ಜಗತ್ತಿನ ತಾಯಿ ಎಂದರೆ ತಪ್ಪಲ್ಲ. ಇದುವರೆಗೂ ಒಟ್ಟು 2,000ಕ್ಕೂ ಹೆಚ್ಚು ಮಕ್ಕಳನ್ನು ಸಾಕಿ ಸಲಹಿ ಅವರ ಭವಿಷ್ಯದ ಜೀವನಕ್ಕೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿದ್ದಾಳೆ. ಈ ಮಹಾನ್ ತಾಯಿ ಬೆಳೆಸಿದ ಬಹುತೇಕ ಮಕ್ಕಳು ವೈದ್ಯರು, ಇಂಜಿನಿಯರ್, ಲಾಯರ್, ಉಪಾಧ್ಯಾಯರು, ಹೀಗೆ ವಿವಿಧ ಇಲಾಖೆಗಳಲ್ಲಿ ತಮ್ಮದೇ ಆದ ಕರ್ತವ್ಯ ನಡೆಸುತ್ತಾ ಇದ್ದಾರೆ. ಜೊತೆಗೆ ಇವಳು ಸಾಕಿದ ಕೆಲ ಮಕ್ಕಳು ಅನಾಥಾಶ್ರಮ ನಡೆಸುತ್ತಿದ್ದಾರೆ. ತನ್ನ ಬದುಕಿನ ಹೋರಾಟ 360 ಡಿಗ್ರಿ ತಿರುವು ಪಡೆಯುತ್ತದೆ ಎಂದು ಅವಳೆಂದೂ ಎಣಿಸಿರಲೇ ಇಲ್ಲ.

ಮಾನವೀಯತೆ ಮತ್ತು ಪ್ರೀತಿಯ ಜೀವಂತ ಉದಾಹರಣೆ:

ಬುದ್ಧ, ಬಸವ, ಅಂಬೇಡ್ಕರ್‌ರಂತಹವರ ಜೀವಿಸಿದ ದೇಶದಲ್ಲಿ ಮಾನವೀಯತೆ ಮತ್ತು ಪ್ರೀತಿಗೆ ಕೊರತೆಯಿಲ್ಲ ಎಂಬುದನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಸಾಧಿಸಿ ತೋರಿಸಿದ ಧೀಮಂತ ಮಹಿಳೆ ಸಿಂಧುತಾಯಿ. ಪ್ರತಿಕೂಲ ಸಂದರ್ಭದಲ್ಲೂ ಸಾವಿರಾರು ಮಕ್ಕಳನ್ನು ಸಾಕಿ ಸಲಹುವುದು ಸುಲಭದ ಮಾತಲ್ಲ.
ಒಂದು ಕುಟುಂಬದಲ್ಲಿ ಎರಡು ಅಥವಾ ಮೂರು ಮಕ್ಕಳನ್ನು ಆರೈಕೆ ಮಾಡಿ ಪಾಲನೆ ಮಾಡುವುದೇ ದುಸ್ತರವಾದ ಸಂದರ್ಭದಲ್ಲಿ ತನ್ನದಲ್ಲದ ಸಾವಿರಾರು ಮಕ್ಕಳನ್ನು ಬೆಳೆಸಿದ್ದು ನಿಜಕ್ಕೂ ಸೋಜಿಗ ಎನಿಸದೇ ಇರದು.

ತನ್ನ ಇಡೀ ಜೀವನವನ್ನು ಅನಾಥ/ನಿರ್ಗತಿಕ ಮಕ್ಕಳ ಏಳಿಗೆಗಾಗಿ ಮೀಸಲಿಟ್ಟು, ಅವರೆಲ್ಲರ ಏಳಿಗೆಯೇ ನನ್ನ ಏಳಿಗೆ ಎಂಬುದನ್ನು ಸಾಧಿಸಿ ತೋರಿಸಿದ ಛಲಗಾರ್ತಿ ಸಿಂಧುತಾಯಿ. ಅನಾಥ ಮಕ್ಕಳ ಜೊತೆಗೆ ಅಸಂಖ್ಯಾತ ನೊಂದ, ಅನಾಥ, ನಿರ್ಗತಿಕ, ಪರಿತ್ಯಕ್ತ ಮಹಿಳೆಯರಿಗೂ ಆಶ್ರಯ ನೀಡಿದ್ದಾಳೆ. ಆ ಮೂಲಕ ಅವರೆಲ್ಲರಿಗೂ ಮಾನವೀಯ ಅಂತಃಕರಣದ ತಾಯಿಯಾಗಿ ಪ್ರೀತಿಯನ್ನು ಉಣಬಡಿಸಿದ್ದಾಳೆ. ಈ ಆಶ್ರಯ ಮನೆಗಳನ್ನು ನಡೆಸುವುದು ಸುಲಭದ ಕಾರ್ಯವಲ್ಲ. ತನ್ನೆಲ್ಲಾ ಅನಾಥಾಶ್ರಮಗಳಿಗೆ ಹಣ ಸಂಗ್ರಹಿಸಲು ಪ್ರತಿದಿನವೂ ಶ್ರಮಿಸಿದ್ದಾಳೆ. ಇಂದು ಬಹುತೇಕ ಎನ್‌ಜಿಒಗಳು ಸೇವೆಯ ಹೆಸರಿನಲ್ಲಿ ವಿದೇಶದಿಂದ ಹಣ ತರಿಸಿಕೊಳ್ಳುತ್ತಾರೆ. ಇಲ್ಲವೇ ಗೂಂಡಾಗಿರಿ ಮಾಡಿ ಹೆದರಿಸಿ ಹಣ ಕೀಳುತ್ತಾರೆ. ಅದರಲ್ಲಿ ಕೆಲವೊಂದಿಷ್ಟನ್ನು ಮಾತ್ರ ಬಳಸಿ ಉಳಿದಿದ್ದನ್ನು ಗುಳುಂ ಮಾಡುತ್ತಿರುವುದನ್ನು ನಿತ್ಯವೂ ನೋಡುತ್ತೇವೆ. ಆದರೆ ಸಿಂಧುತಾಯಿ ಹಣಕ್ಕಾಗಿ ಯಾರನ್ನೂ ಹೆದರಿಸಿಲ್ಲ ಬೆದರಿಸಿಲ್ಲ. ಬದಲಾಗಿ ಅಲ್ಲಲ್ಲಿ ಶಕ್ತಿಯುತವಾದ ಹಾಗೂ ಸ್ಫೂರ್ತಿದಾಯಕವಾದ ಭಾಷಣದ ರೂಪದಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾಳೆ.

ಭಾಷಣದ ಕೊನೆಗೆ ನಿರ್ಗತಿಕ ಮಕ್ಕಳ ಶಿಕ್ಷಣಕ್ಕಾಗಿ ಸೆರಗೊಡ್ಡಿ ಭಿಕ್ಷೆ ಬೇಡುತ್ತಾಳೆ. ಜನರು ನೀಡಿದಷ್ಟು ಹಣವನ್ನು ಪ್ರೀತಿಯಿಂದ ಸ್ವೀಕರಿಸಿ ಅದೆಲ್ಲವನ್ನೂ ಅನಾಥರ ಏಳಿಗೆಗೆ ಬಳಸಿದ್ದಾಳೆೆ. ಭಾಷಣದಲ್ಲಿ ತನ್ನ ಸಂಕಷ್ಟ ಮತ್ತು ಹೋರಾಟಗಳನ್ನು ಎಲ್ಲೆಡೆ ಪಸರಿಸಲು ವಿನಂತಿ ಮಾಡಿಕೊಳ್ಳುತ್ತಾಳೆ. ಆ ಮೂಲಕ ಇತರರಿಗೆ ಪ್ರೇರಣೆಯಾಗುತ್ತಾಳೆ. ''ದೇವರ ಅನುಗ್ರಹದಿಂದ ನನಗೆ ಉತ್ತಮ ಸಂವಹನ ಕೌಶಲ್ಯವಿತ್ತು. ನಾನು ಜನರ ಬಳಿ ಹೋಗಿ ನನ್ನ ಮಾತುಗಳಿಂದ ಅವರ ಮೇಲೆ ಪ್ರಭಾವ ಬೀರಿದೆ. ಅನಾಥ ಮಕ್ಕಳ ಹಸಿವು ನನ್ನನ್ನು ಮಾತನಾಡುವಂತೆ ಮಾಡಿತು. ನನ್ನ ಮಾತುಗಳೇ ಆದಾಯದ ಮೂಲಗಳಾದವು. ನಾನು ವಿವಿಧ ಸ್ಥಳಗಳಲ್ಲಿ ಭಾಷಣ ಮಾಡಿದ್ದೇನೆ. ಅಲ್ಲಿನ ಎಲ್ಲರೂ ಕನಿಷ್ಠ ಹಣವನ್ನು ನೀಡಿ ಅನಾಥ ಮಕ್ಕಳ ಪೋಷಣೆಗೆ ಸಹಕಾರ ನೀಡಿದ್ದಾರೆ'' ಎನ್ನುತ್ತಾರೆ ಸಿಂಧುತಾಯಿ. ತನ್ನ ಧ್ಯೇಯವನ್ನು ಪೂರೈಸಲು ಸಿಂಧುತಾಯಿ ಎದುರಿಸಿದ ಸರಣಿ ಹೋರಾಟಗಳು ಅಗಣಿತ. ಈ ಹೋರಾಟಗಳಿಂದ ಅವಳು ಯಾವುದೇ ಭೌತಿಕ ಸಿರಿವಂತಿಕೆ ಪಡೆಯಲಿಲ್ಲ ಬದಲಾಗಿ ಅಗಾಧವಾದ ಮಾನವೀಯತೆಯ ಸಿರಿತನ ಗಳಿಸಿದರು. ಜಗತ್ತಿನ ಬಹುದೊಡ್ಡ ಕುಟುಂಬವನ್ನು ಕಟ್ಟಿದರು. ಈಗ ಆಕೆಯ ಕುಟುಂಬದಲ್ಲಿ 207 ಮಕ್ಕಳು, 36 ಜನ ಅಳಿಯಂದಿರು, 1,050ಕ್ಕೂ ಹೆಚ್ಚು ಮೊಮ್ಮಕ್ಕಳು ಇದ್ದಾರೆ. ಅಂದರೆ ಇದುವರೆಗೂ 2,000ಕ್ಕೂ ಹೆಚ್ಚು ಜನ ಅವರ ಕೈತುತ್ತು ಉಂಡು ಬೆಳೆದಿದ್ದಾರೆ. ಅವರೆಲ್ಲ ಸಮಾಜದ ವಿವಿಧ ಸ್ಥರಗಳಲ್ಲಿ ತಮ್ಮದೇ ಆದ ಸ್ವತಂತ್ರ್ರ ಜೀವನ ನಡೆಸುತ್ತಿದ್ದಾರೆ.

ಪ್ರಶಸ್ತಿ ಮತ್ತು ಮನ್ನಣೆಗಳು

ಸಿಂಧುತಾಯಿ ಅವರ ಅನುಪಮ ಸೇವೆಯು ಕೇವಲ ಪ್ರಾದೇಶಿಕವಾಗಿ ಗುರುತಿಸಲ್ಪಟ್ಟಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿ ಅನಾಥರ ಬಾಳಿನ ಆಶಾಕಿರಣವಾದ ಸಿಂಧುತಾಯಿಯವರಿಗೆ 750ಕ್ಕೂ ಹೆಚ್ಚಿನ ಪ್ರಶಸ್ತಿ ಹಾಗೂ ಪುರಸ್ಕಾರಗಳು ಅರಸಿ ಬಂದಿವೆ ಎಂದರೆ ಅವರ ಶ್ರಮ ಹಾಗೂ ಸಾಮಾಜಿಕ ಕಳಕಳಿ ಎಷ್ಟಿರಬಹುದೆಂದು ನಮಗೆ ಅರ್ಥವಾಗುತ್ತದೆ. ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಎಲ್ಲ ಹಣವನ್ನು ಅನಾಥಾಶ್ರಮದ ಏಳಿಗೆಗೆ ಬಳಸಿದ್ದಾರೆ. ಬಡತನದಲ್ಲಿ ಜನಿಸಿ ಬದುಕಿನ ಸಂಕಷ್ಟಗಳನ್ನು ಅನುಭವಿಸಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಿಂಧುತಾಯಿ ಹಣ ಹಾಗೂ ಭೌತಿಕ ಆಸ್ತಿಯನ್ನು ಹೊರತುಪಡಿಸಿ ಇಂದು ಎಲ್ಲವನ್ನೂ ಗಳಿಸಿದ್ದಾರೆ. ಪ್ರತಿಷ್ಠಿತ ಮದರ್ ತೆರೆಸಾ ಪ್ರಶಸ್ತಿ, ದಿ ಮೈಂಡ್ ಆಫ್ ಸ್ಟೀಲ್, ಅಹಲ್ಯಾ ಬಾಯಿ ಹೋಲ್ಕರ್ ಪ್ರಶಸ್ತಿ, ಅಹ್ಮದಿಯಾ ಶಾಂತಿ ಅಂತರ್‌ರಾಷ್ಟ್ರೀಯ ಪುರಸ್ಕಾರ, ರಾಷ್ಟ್ರೀಯ ನಾರಿ ಪುರಸ್ಕಾರ, ಹೀಗೆ ವಿವಿಧ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪುರಸ್ಕಾರಗಳು ಬಂದಿವೆ. 2010ರಲ್ಲಿ ಸಿಂಧುತಾಯಿ ಜೀವನ ಆಧಾರಿತ 'ಮೀ ಸಿಂಧೂತೈ ಸಪ್ಕಾಲ್' ಎಂಬ ಮರಾಠಿ ಸಿನೆಮಾ ಬಿಡುಗಡೆಯಾಯಿತು ಹಾಗೂ ಅದು ಲಂಡನ್‌ನಲ್ಲಿ ನಡೆದ 54ನೇ ಚಲನಚಿತ್ರೋತ್ಸವದಲ್ಲಿ ವಿಶ್ವದ ಪ್ರಥಮ ಪ್ರದರ್ಶನಕ್ಕೆ ಆಯ್ಕೆಯಾಯಿತು.

ಸ್ಫೂರ್ತಿಯ ಚಿಲುಮೆ

ಸಿಂಧುತಾಯಿ ಇಡೀ ಜಗತ್ತಿಗೆ ಬಹು ದೊಡ್ಡ ಸ್ಫೂರ್ತಿ. ಒಬ್ಬ ಸಾಮಾನ್ಯ ವ್ಯಕ್ತಿ ಸಾಮಾಜಿಕ ಬದ್ಧತೆ ಮತ್ತು ಸ್ಥೈರ್ಯ ಮೈಗೂಡಿಸಿಕೊಂಡರೆ ಉನ್ನತ ಸಾಧನೆ ಮಾಡಬಹುದು ಎಂಬುದಕ್ಕೆ ಸಿಂಧುತಾಯಿ ಜೀವನ ಮಾದರಿಯಾಗುತ್ತದೆ. ಸಿಂಧುತಾಯಿ ಕೇವಲ ಹೆಸರು ಮಾತ್ರ. ಆದರೆ ಆ ವ್ಯಕ್ತಿತ್ವದ ಹಿಂದಿನ ಪರಿಶ್ರಮ ಹಾಗೂ ಉತ್ಸಾಹಗಳು ಅವಳ ನೋವನ್ನು ಮರೆಮಾಡಿದವು. ಕುಟುಂಬದಲ್ಲಿ ಉದ್ಭವಿಸುವ ಸಣ್ಣ ಸಣ್ಣ ಸಮಸ್ಯೆಗಳಿಗೆ ಹೆದರಿ ಹತಾಶೆಯಿಂದ ನಮ್ಮ ಜೀವನಕ್ಕೆ ನಾವೇ ಕಂಟಕ ತಂದುಕೊಳ್ಳುತ್ತಿರುವ ದಿನಗಳಲ್ಲಿ ಸಿಂಧುತಾಯಿ ಅವರು ಕಷ್ಟಗಳನ್ನು ಎದುರಿಸಿದ ರೀತಿ ನಮಗೆಲ್ಲಾ ಬದುಕಿನ ಭರವಸೆ ಮೂಡಿಸುತ್ತದೆ. ಎಂಟು ದಶಕಗಳಿಗೂ ಅಧಿಕ ಜೀವನಾನುಭವ ಹೊಂದಿದ್ದ ಆ ಜೀವಿಯ ಮುಖದಲ್ಲಿ ಸದಾ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ''ನಾನು ನನ್ನ ಅನುಭವಗಳನ್ನು ಜನರೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಎಲ್ಲಾ ವಿಲಕ್ಷಣಗಳ ನಡುವೆಯೂ ಬದುಕುವುದನ್ನು ಕಲಿತಿದ್ದೇನೆ'' ಎಂದು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರ ಪ್ರಶ್ನೆಯೊಂದಕ್ಕೆ ಮುಗುಳ್ನಗುತ್ತಾ ಉತ್ತರಿಸಿದ್ದರು. ಈ ಮಾತು ಕೇಳಿದ ಅಲ್ಲಿನ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಆ ಮಾತೆಗೆ ಗೌರವ ಸಲ್ಲಿಸಿದ್ದರು. ಅವರ ಈ ಮಾತು ನಮಗೆಲ್ಲಾ ಜೀವನೋತ್ಸಾಹ ನೀಡುತ್ತದೆ. ಮಹಿಳೆಯ ಜೀವನ ಎಂದಿಗೂ ಸೂಪ್ ಅಲ್ಲ. ಸಾಮಾಜಿಕ ಬೂಟಾಟಿಕೆಯ ದೃಷ್ಟಿಯಿಂದ ಸಮಾಜದಲ್ಲಿನ ಪ್ರತಿಯೊಬ್ಬ ಮಹಿಳೆಯೂ ಸಾಕಷ್ಟು ನೋವು ಮತ್ತು ಹಿಂಸೆ ಅನುಭವಿಸುತ್ತಿದ್ದಾಳೆ. ಶತಶತಮಾನಗಳಿಂದಲೂ ದೌರ್ಜನ್ಯವನ್ನು ಸಹಿಸಿಕೊಂಡೇ ಇದ್ದಾಳೆ. ಈ ದೌರ್ಜನ್ಯದಿಂದ ಹೊರಬಂದಾಗ ಮಾತ್ರ ಸುಂದರ ಜೀವನ ನಡೆಸಲು ಸಾಧ್ಯ ಎಂಬುದನ್ನು ಸಿಂಧುತಾಯಿ ತೋರಿಸಿದ್ದಾರೆ. ಸ್ವಭಾವದಲ್ಲಿ ಮೇಣದಬತ್ತಿಯಾಗಿದ್ದ ಸಿಂಧುತಾಯಿ ತನ್ನನ್ನು ತಾನು ಸುಟ್ಟುಕೊಂಡು ಅನಾಥ ಹಾಗೂ ನಿರ್ಗತಿಕ ಮಕ್ಕಳ ಬಾಳಿನ ಕತ್ತಲೆಯನ್ನು ಓಡಿಸುವ ಆಶಾಕಿರಣವಾಗಿ ಮೂಡಿಬಂದರು. ಇಂತಹ ಭವಿಷ್ಯದ ಆಶಾಕಿರಣವೊಂದು ಜನವರಿ 4ರ ರಾತ್ರಿ ನಂದಾದೀಪವಾಯಿತು. ಇಂತಹ ಇನ್ನಷ್ಟು ನಿಸ್ವಾರ್ಥ ಕಾಯಕ ಜೀವಿಗಳು ನಾಡಿನಲ್ಲಿ ಉದಯಿಸಲಿ, ದೀನ ದಲಿತರ ಉದ್ಧಾರಕ್ಕೆ ಕೈಜೋಡಿಸಲಿ ಎಂಬ ಆಶಯ ನಮ್ಮದು.

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News