ಮಂಗಳೂರು; ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ; ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಪ್ರತಿಭಟನೆ

Update: 2022-01-06 17:41 GMT

ಮಂಗಳೂರು, ಜ.6: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ಆಗಿರುವುದನ್ನು ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಹಮ್ಮಿಕೊಂಡ ಪ್ರತಿಭಟನೆ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು.

ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ಆರಂಭಿಸಿದಾಗ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಏಕಾಂಕಿಯಾಗಿ ಕಾಂಗ್ರೆಸ್ ಧ್ವಜ ಹಿಡಿದು ತನ್ನ ಪ್ರತಿರೋಧ ತೋರಿಸಿದ್ದು, ಬಳಿಕ ನಾಲ್ಕೈದು ಮಂದಿ ಕಾಂಗ್ರೆಸ್ ಕಾರ್ಯಕತರು ಆತನಿಗೆ ಜತೆಯಾಗಿದ್ದು, ಕಾರ್ಪೋರೇಟರ್ ಎ.ಸಿ. ವಿನಯ್ ರಾಜ್ ಅವರೂ ಸೇರಿಕೊಂಡು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಬಿಜೆಪಿ ಕಾರ್ಯಕರ್ತರು ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ, ದೇಶಾದ್ಯಂತ ತನ್ನ ಅಧಿಕಾರ ವಿಸ್ತರಿಸಿಕೊಳ್ಳುತ್ತಿರುವ ಬಿಜೆಪಿಯನ್ನು ಪಂಜಾಬ್‌ನಲ್ಲಿ ತಡೆ ಹಿಡಿಯಬೇಕು ಎನ್ನುವ ಷಡ್ಯಂತ್ರ, ಆ ಮೂಲಕ ನರೇಂದ್ರ ಮೋದಿಯವರ ತೇಜೋವಧೆ ಮಾಡಬೇಕು ಎನ್ನುವ ಉದ್ದೇಶ ಇದರಲ್ಲಿ ಅಡಗಿದೆ. ಮೋದಿಯವರನ್ನು ನೇರವಾಗಿ ಎದುರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಅಡ್ಡದಾರಿಯ ಮೂಲಕ ಮುಗಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ವೇತಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜಾ, ಸೂರಜ್ ಜೈನ್ ಮಾರ್ನಾಡ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಿಜೆಪಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ 

ಬಿಜೆಪಿ ಪ್ರತಿಭಟನೆ ಮುಗಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿಕೊಂಡು ಬಿಜೆಪಿ ಕಚೇರಿ ಬಳಿ ಪ್ರತಿಭಟನೆಗೆ ಮುಂದಾದರು. ಪೊಲೀಸರು ತಕ್ಷಣ ಮಾಹಿತಿ ರವಾನಿಸಿ, ಬಿಜೆಪಿ ಕಚೇರಿ ಬಳಿ ರಸ್ತಗೆ ಯಾರೂ ಪ್ರವೇಶಿಸದಂತೆ ಬ್ಯಾರಿಕೇಡ್ ಅಳವಡಿಸಿದರು. ಸಾಕಷ್ಟು ಮಂದಿ ಬಿಜೆಪಿ ಕಾರ್ಯಕರ್ತರೂ ಅಲ್ಲಿ ಸೇರಿದ್ದರು. ಕಾಲ್ನಡಿಗೆಯಲ್ಲಿ ಬಿಜೆಪಿ ಕಚೇರಿಗೆ ಸಾಗುತ್ತಿದ್ದ ಐವನ್ ಡಿಸೋಜಾ ನೇತೃತ್ವದ ತಂಡವನ್ನು ಬಂಟ್ಸ್ ಹಾಸ್ಟೆಲ್ ಬಳಿಯಲ್ಲೇ ಪೊಲೀಸರು ವಶಕ್ಕೆ ಪಡೆದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News