ಜ.10ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಗಾಗಿ ಶೇ.75ರಷ್ಟು ಬೆಡ್ ಮೀಸಲು: ಉಡುಪಿ ಡಿಸಿ ಕೂರ್ಮಾರಾವ್

Update: 2022-01-06 14:45 GMT

ಉಡುಪಿ, ಜ.6: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ಈವರೆಗೆ ಶೇ.30, ಜ.7ರಿಂದ ಶೇ.50 ಹಾಗೂ ಜ.10ರಿಂದ ಶೇ.75ರಷ್ಟು ಬೆಡ್‌ಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿರಿಸಬೇಕು. ಈ ಸಂಬಂಧ ಜ.7ರಂದು ಎಲ್ಲ ಖಾಸಗಿ ಆಸ್ಪತ್ರೆ ಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯಲ್ಲಿ ಕೊರೋನ ಪಾಸಿಟಿವಿಟಿ ದರವು ನಿಧಾನವಾಗಿ ಏರಿಕೆಯಾಗುತ್ತಿದ್ದು, ಕಳೆದ 14 ದಿನಗಳಲ್ಲಿ ಸರಾಸರಿ ಶೇ.0.7 ಇದ್ದು, ಕಳೆದ ಏಳು ದಿನಗಳಲ್ಲಿ ಶೇ.1ಕ್ಕೆ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 4820ರಂತೆ ಒಟ್ಟು 33179 ಮಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದರು.

ಕೋವಿಡ್ ಸಂಭಾವ್ಯ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ನಿಗದಿಪಡಿಸಿದ ಒಟ್ಟು ಗುರಿಯಲ್ಲಿ ಶೇ.50 ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮತ್ತು ಉಳಿದ ಶೇ.50 ಗ್ರಾಮೀಣ ಪ್ರದೇಶದಲ್ಲಿ ಪರೀಕ್ಷೆ ಮಾಡಲಾಗುವುದು. ಒಟ್ಟು ಪರೀಕ್ಷಾ ಗುರಿಯಲ್ಲಿ ಶೇ.10ರಷ್ಟು ಮಕ್ಕಳನ್ನು ಪರೀಕ್ಷೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಏಳು ಕಂಟೈಮೆಂಟ್ ಝೋನ್ ಮಾಡಿದ್ದೇವೆ. ಆಯಾ ಝೋನ್‌ಗಳಲ್ಲಿ ಸಾಕಷ್ಟು ಮಟ್ಟದಲ್ಲಿ ಪರೀಕ್ಷೆಗಳನ್ನು ಮಾಡಿದ್ದೇವೆ. ಅಲ್ಲಿ ಕೆಲವು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅವರೆನ್ನಲ್ಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಅವರು ತಿಳಿಸಿದರು.

ಸೋಮವಾರ ನಡೆಯಲಿರುವ ಕೃಷ್ಣಾಪುರ ಸ್ವಾಮೀಜಿಯ ಪುರಪ್ರವೇಶಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಡಿಸಿ, ಸಾಂಪ್ರದಾಯಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಹೆಚ್ಚಿವ ಜನ ಸೇರುವುದು ಅವಕಾಶ ಇರುವುದಿಲ್ಲ. ಎಷ್ಟು ಜನ ಸೇರಿಸಬಹುದು ಮತ್ತು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಪರ್ಯಾಯ ಸಮಿತಿ ಜೊತೆ ಚರ್ಚೆ ನಡೆಸಲಾಗುವುದು ಎಂದರು.

ವೀಕೆಂಡ್ ಕರ್ಫ್ಯೂ: ಕಟ್ಟುನಿಟ್ಟಿನ ಕ್ರಮ

ನಾಳೆ ರಾತ್ರಿಯಿಂದ ಜಾರಿಯಾಗಲಿರುವ ವಾರಾಂತ್ಯ ಕರ್ಫ್ಯೂ ಬಗ್ಗೆ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ತುರ್ತು ಹಾಗೂ ಅವಶ್ಯಕ ಸೇವೆ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಉದ್ಯಾವನಗಳನ್ನು ಮುಚ್ಚಲಾಗುತ್ತದೆ. ಬೀದಿಬದಿ ವ್ಯಾಪಾರ, ಆಹಾರ, ದಿನಸಿ, ತರಕಾರಿ, ಹಾಲಿನ ಬೂತುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೊಟೇಲ್‌ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗದಿಯಾದ ಮದುವೆಯನ್ನು ಮಾರ್ಗಸೂಚಿಯಂತೆ ನಡೆಸ ಬಹುದಾಗಿದೆ. ವಿಮಾನ, ರೈಲು ಹಾಗೂ ಸ್ಥಳೀಯ ಸಾರಿಗೆಯಲ್ಲಿ ವೈದ್ಯಕೀಯ ಹಾಗೂ ಅಗತ್ಯ ವಿಚಾರಗಳಿಗೆ ಅಂತರ್ ಜಿಲ್ಲಾ ಸಂಚರಿಸುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.

ಮದುವೆಗಾಗಿ ಅಂತರ್ ಜಿಲ್ಲಾ ಸಂಚಾರ ಮಾಡುವವರು ಆಮಂತ್ರಣ ಪತ್ರಿಕೆ ತೋರಿಸಬೇಕು. ಬಸ್‌ಗಳ ಓಡಾಟ ನಿರ್ಬಂಧ ಇಲ್ಲ. ಆದರೆ ಕಡಿಮೆ ಸಂಖ್ಯೆ ಯಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಅವಕಾಶ ನೀಡಲಾಗುತ್ತದೆ. ಕಾರ್ಮಿಕರು ತಮ್ಮ ಕೆಲಸಗಳಿಗೆ ಐಡೆಂಟಿ ಕಾರ್ಡ್ ತೋರಿಸಿ ಹೋಗಬಹುದು. ರಿಕ್ಷಾ ಟ್ಯಾಕ್ಸಿ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News