ಮೇಕೆದಾಟು ಪಾದಯಾತ್ರೆ ನಿಗದಿಯಂತೆ ನಡೆಯಲಿದೆ: ಶಾಸಕ ಹರೀಶ್ ಕುಮಾರ್

Update: 2022-01-07 10:54 GMT

ಬೆಳ್ತಂಗಡಿ, ಜ.7: ಕಾಂಗ್ರೆಸ್ ರಾಜ್ಯ ಸಮಿತಿಯಿಂದ ಜ.9ರಿಂದ 19ರವರೆಗೆ ಹಮ್ಮಿಕೊಂಡಿರುವ 160 ಕಿ.ಮೀ ದೂರದ 11 ದಿನಗಳ ಮೇಕೆದಾಟು ಬೃಹತ್ ಪಾದಯಾತ್ರೆಯ ಎಲ್ಲ ಸಿದ್ಧತೆಗಳು ನಡೆದಿದ್ದು, ಈ ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.

ಬೆಳ್ತಂಗಡಿ ಪತ್ರಿಕಾ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕೋವಿಡ್ ನೆಪದಲ್ಲಿ ಲಾಕ್ ಡೌನ್ ಮೂಲಕ ರಾಜ್ಯಕ್ಕೆ ಪ್ರೇರಿತವಾಗಿ ಈ ಜಾಥಾವನ್ನು ಹತ್ತಿಕ್ಕಲು ರಾಜಕೀಯ ಪ್ರಹಸನ ಮಾಡುತ್ತಿದೆ ಎಂದು ಆರೋಪಿಸಿದರು.

ಜ.19 ರಂದು ದ.ಕ. ಜಿಲ್ಲೆಯಿಂದಲೂ ಸುಮಾರು 2500 ಕಾರ್ಯಕರ್ತರು 5 ಕಿ.ಮೀ. ಪಾದಯಾತ್ರೆಯಲ್ಲಿ ಭಾಗವಹಿಸಲು ಬದ್ಧರಾಗಿದ್ದೇವೆ ಎಂದವರು ತಿಳಿಸಿದರು.

ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ದಾಂಧಲೆ ನಡೆಸಿರುವುದು ಖಂಡನೀಯ. ಈ ಪಕ್ಷ ಇತ್ತೀಚೆಗೆ ನಡೆದ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸೋಲುಂಡು ಕೆಲವು ಸ್ಥಾನಗಳನ್ನು ಕಳೆದುಕೊಂಡಿರುವುದರಿಂದ ಹತಾಷರಾಗಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪಂಜಾಬ್ ನಲ್ಲಿ ನಡೆದ ಘಟನೆಯಲ್ಲಿ ಅಲ್ಲಿಯ ಸರಕಾರ ಪ್ರಧಾನ ಮಂತ್ರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಲೋಪ ಎಸಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇಂದ್ರದ ಯಾವುದೇ ನಾಯಕರಿಗೂ ಭದ್ರತೆ ನೀಡುವುದು ಕೇಂದ್ರ ಸರಕಾರದ ಎಸ್.ಪಿ.ಜಿ ಯವರ ಕೈಯಲ್ಲಿದೆ. ಅಲ್ಲಿಯ ಮಾರ್ಗ ಬದಲಾವಣೆ ಮತ್ತು ಎಸ್.ಪಿ.ಜಿ.ಯ ವೈಫಲದಿಂದ ಸಮಸ್ಯೆಯಾಗಿರಬಹುದು. ರಾಜ್ಯ ಪೊಲೀಸರ ವೈಫಲ್ಯವಲ್ಲ ಇದು ಕೇಂದ್ರದ ವೈಫಲ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ಎಸ್ಸಿ ಘಟಕ ಮುಖಂಡ ವಸಂತ ಬಿ.ಕೆ., ಬೆಳ್ತಂಗಡಿ ನಗರ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ್ ವಿ.ಜಿ., ಯುತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News