‘ಬೀದಿಪಾಲು ಮಾಡಿದರೆ ಉಡುಪಿ ಡಿಸಿ ಕಚೇರಿ ಎದುರೇ ವಿಷ ಸೇವಿಸುತ್ತೇವೆ’

Update: 2022-01-07 11:43 GMT

ಉಡುಪಿ, ಜ.7: ‘ಕಲೆ ಹಾಗೂ ಕಲಾವಿದರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು. ದ್ರೋಹ ಮಾಡಿದರೆ ನಮ್ಮ ಇಡೀ ಕುಟುಂಬ ಬೀದಿಪಾಲಾಗುತ್ತದೆ. ನಾವು ಬೀದಿ ಪಾಲಾದರೆ ಇದೇ ಜಿಲ್ಲಾಧಿಕಾರಿ ಕಚೇರಿ ಎದುರು ನಾವೆಲ್ಲ ವಿಷ ತೆಗೆದುಕೊಳ್ಳುತ್ತೇವೆ. ನಮಗೆ ಸಹಾಯ ಮಾಡುವರು ಯಾರು ಇಲ್ಲ. ಕಲಾವಿದರ ಕೈಬಿಡಬೇಡಿ. ಕಲಾವಿದರ ಕೈಬಿಟ್ಟರೆ ನಮ್ಮ ಆತ್ಮಹತ್ಯೆಗೆ ಸರಕಾರವೇ ನೇರ ಹೊಣೆಯಾಗುತ್ತದೆ’

ಇದು ನೈಟ್ ಹಾಗೂ ವಾರಾಂತ್ಯ ಕರ್ಫ್ಯೂನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವೃತ್ತಿಪರ, ಹವ್ಯಾಸಿ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರು ಹಮ್ಮಿಕೊಂಡ ಧರಣಿಯಲ್ಲಿ ಧರ್ಮಸ್ಥಳ ಮೇಳದ ಕಲಾವಿದ ಶರತ್ ಶೆಟ್ಟಿ ತೀರ್ಥಹಳ್ಳಿ ಅವರಿಂದ ವ್ಯಕ್ತವಾದ ಆಕ್ರೋಶದ ನುಡಿ.

‘ಎರಡು ವರ್ಷಗಳಿಂದ ಕೊರೋನ ಲಾಕ್‌ಡೌನ್‌ನಿಂದ ನಾವು ಬಹಳಷ್ಟು ನೋವನ್ನು ಅನುಭವಿಸಿದ್ದೇವೆ. ಕಲಾವಿದರ ನೋವನ್ನು ಸರಕಾರ ಕೇಳುತ್ತಿಲ್ಲ. ಈ ವರ್ಷ ಲಾಕ್‌ಡೌನ್ ಮಾಡಿದರೆ ಕಲಾವಿದರ ಪರಿಸ್ಥಿತಿ ಇನ್ನಷ್ಟು ಚಿಂತಾಜನಕ ಆಗಬಹುದು. ಸರಕಾರದ ನಿಬಂಧನೆಗಳಿಗೆ ಅನುಗುಣವಾಗಿ ನಾವು ಕೆಲಸ ಮಾಡಲು ಸಿದ್ಧರಿದ್ದೇವೆ’ ಎಂದು ಅವರು ತಿಳಿಸಿದರು.

'ಯಕ್ಷಗಾನಕ್ಕೆ ಅವಕಾಶ ಕಲ್ಪಿಸಿ'

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಕರ್ಫ್ಯೂ, ಲಾಕ್‌ಡೌನ್ ಘೋಷಣೆ ಮಾಡಿದಾಗ ವೃತ್ತಿಪರ ಯಕ್ಷಗಾನ ಕಲಾವಿದರ ಹಿತವನ್ನು ಕಡೆಗಣಿಸಬಾರದು. ರಾಜ್ಯದಲ್ಲಿ ಕರ್ಫ್ಯೂ ವಿಧಿಸುವುದಾದರೆ ರಾತ್ರಿ 12 ಗಂಟೆಯವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಬೇಕು. ಕರ್ಫ್ಯೂವಿನಂತಹ ಕಠಿಣ ನಿರ್ಧಾರ ಕೈಗೊಳ್ಳುವಾಗ ಕಲಾವಿದರ ಜೀವನಕ್ಕೆ ಭದ್ರತೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ವಿಧಿಸಿರುವ ಕರ್ಫ್ಯೂನಿಂದ ಯಕ್ಷಗಾನ ಮೇಳಗಳಲ್ಲಿ ವೃತ್ತಿಪರ ಕಲಾವಿದರಾಗಿ ಹಾಗೂ ನೇಪಥ್ಯ ಕೆಲಸಗಾರರಾಗಿ ದುಡಿಯುತ್ತಿರುವವರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಯಕ್ಷಗಾನ ಮೇಳಗಳು ಡಿಸೆಂಬರ್ ತಿಂಗಳಲ್ಲಿ ತಿರುಗಾಟ ಪ್ರಾರಂಭಿಸಿ, ಒಂದು ತಿಂಗಳು ಪೂರ್ಣಗೊಳ್ಳುವ ಮುಂಚಿತವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಕಲಾವಿದರು ದೂರಿದರು.

ಕಲಾವಿದರುಗಳಿಗೆ ಯಕ್ಷಗಾನ ಪ್ರದರ್ಶನದಿಂದಲೇ ದುಡಿಮೆಯಾಗ ಬೇಕಾಗಿದೆ. ಕುಟುಂಬ, ಮಕ್ಕಳ ವಿದ್ಯಾಭ್ಯಾಸ, ಮಾಡಿಕೊಂಡಿರುವ ಸಾಲದ ಹೊರೆ ತೀರಿಸುವುದಕ್ಕೆ ಅನ್ಯಮಾರ್ಗವಿಲ್ಲದಂತಾಗಿದೆ. ಕರಾವಳಿ ಭಾಗದ ಜನರ ಜೀವನದ ಅವಿಭಾಜ್ಯ ಅಂಗವಾಗಿ ಯಕ್ಷಗಾನ ಗುರುತಿಸಿಕೊಂಡಿದ್ದು, ಸಾವಿರಾರು ಕಲಾವಿದರು ಜೀವನ ಕಟ್ಟಿಕೊಂಡಿದ್ದಾರೆ ಎಂದು ಕಲಾವಿದ ಸಂದೇಶ್ ಶೆಟ್ಟಿ ತಿಳಿಸಿದರು.

ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತ ನಾಡಿ, ಹರಕೆ ಯಕ್ಷಗಾನವನ್ನು ಮನೆಯವರೇ ಸೇರಿ ಮಾಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಹೆಚ್ಚು ಜನ ಸೇರಿ ಯಕ್ಷಗಾನ ಮಾಡುವಂತಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಲಾವಿದರುಗಳಾದ ಕೃಷ್ಣಯ್ಯ ಆಚಾರಿ, ಚಂದ್ರಶೇಖರ್ ಧರ್ಮಸ್ಥಳ, ಸತೀಶ್ ಗೌಡ ನೀರ್ಕೆರ, ಗೌತಮ್ ಶೆಟ್ಟಿ ಬೆಳ್ಳಾರಿ, ಮಂಜುನಾಥ್, ದೇವೇಂದ್ರ ಜಿ. ಮೊದಲಾದವರು ಉಪಸ್ಥಿತರಿದ್ದರು.

''ಎರಡು ವರ್ಷಗಳ ವಿಧಿಸಿದ್ದ ಲಾಕ್‌ಡೌನ್‌ನಿಂದ ನಾಟಕ ಮಾಡದೆ ಎಲ್ಲ ನೋವನ್ನು ಸಹಿಸಿಕೊಂಡಿದ್ದೇವೆ. ಇದೀಗ ಮೂರನೇ ವರ್ಷ ಕೂಡ ಕರ್ಫ್ಯೂ ವಿಧಿಸಿರುವುದರಿಂದ ಕಲಾವಿದರಿಗೆ ತುಂಬಾ ತೊಂದರೆ ಆಗುತ್ತಿದೆ. ಲಾಕ್‌ಡೌನ್ ಸಡಿಲಿಕೆ ಮಾಡಬೇಕು. ನಾವು ಸರಕಾರದಿಂದ ಯಾವುದೇ ಪರಿಹಾರ ಕೇಳುತ್ತಿಲ್ಲ. ನಮ್ಮ ನಾಟಕಗಳ ಪ್ರದರ್ಶನಕ್ಕೆ ಅವಕಾಶ ಕೊಡಿ ಮತ್ತು ನಮ್ಮ ಬದುಕಲು ಬಿಡಿ''

-ಸತೀಶ್ ಪೈ, ರಂಗಭೂಮಿ ಕಲಾವಿದರು

''ಸರಕಾರ ಮತ್ತೆ ವಿಧಿಸಿರುವ ವಾರಾಂತ್ಯ ಕರ್ಫ್ಯೂವನ್ನು ಕೂಡಲೇ ತೆರವು ಗೊಳಿಸಬೇಕು. ಕಲಾವಿದರ ಬದುಕು ನಡೆಯುವುದೇ ರಾತ್ರಿಯ ನಂತರ. ಆ ಬದುಕಿಗೆ ಕಲ್ಲು ಹಾಕುವ ಕಾರ್ಯವನ್ನು ಸರಕಾರ ಮಾಡಬಾರದು. ರಾತ್ರಿ 10ಗಂಟೆಯವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಿ, ನಾಟಕ, ಯಕ್ಷಗಾನ ಪ್ರದರ್ಶನ ನೀಡಲು ಅವಕಾಶ ಮಾಡಿಕೊಡಬೇಕು''

-ಜಯಕರ ಬೈಲೂರು, ಮೇಕಪ್ ಕಲಾವಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News