ಕರಾವಳಿ ಜಿಲ್ಲೆಗಳ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕೇಂದ್ರ ಅನುಮೋದನೆ

Update: 2022-01-07 16:33 GMT

ಉಡುಪಿ, ಜ.7: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ, ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ (ಎಂಎಸ್‌ಪಿ) ಖರೀದಿ ಮಾಡಿ ಪಡಿತರದ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಈ ವಿಷಯವನ್ನು ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಈ ಮೂಲಕ ಕರಾವಳಿ ಜಿಲ್ಲೆಗಳ ರೈತರ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಪಡಿತರದ ಮೂಲಕ ಕುಚ್ಚಲ್ಲಕ್ಕಿಯನ್ನು ವಿತರಿಸುವಂತೆ ಕೆಲ ಸಮಯದಿಂದ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆ ಸಲ್ಲಿಸುತಿದ್ದರು. ಇದೀಗ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದ ಕರ್ನಾಟಕ ಸರ್ಕಾರ ಈ ಬೇಡಿಕೆಯನ್ನು ಅನುಮೋದಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಈ ಕುರಿತು ಶೋಭಾ ಕರಂದ್ಲಾಜೆ, ಕೇಂದ್ರದ ಸದರಿ ಇಲಾಖಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಪ್ರಸ್ತಾವನೆ ಅನುಮೋದಿ ಸುವಂತೆ ಕೋರಿದ್ದರು. ಮನವಿಯನ್ನು ಪರಿಗಣಿಸಿದ ಪಿಯೂಷ್ ಗೋಯಲ್ ಜ.6ರಂದು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು, ಜಿಲ್ಲೆಯ ಆರು ಕುಚ್ಚಲಕ್ಕಿ ಪ್ರಭೇದಗಳನ್ನು ಎಂಎಸ್‌ಪಿ ಮೂಲಕ ಖರೀದಿ ಮಾಡಿ ಪಡಿತರದ ಮೂಲಕ ವಿತರಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಕೇಂದ್ರದ ಈ ಅನುಮತಿಯಿಂದ ಉಡುಪಿ-ದಕ್ಷಿಣಕನ್ನಡದ ರೈತರ ಕೃಷಿ ಉತ್ಪಾದನೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾ ಗಿದೆ. ಅದಲ್ಲದೇ, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಸಾರ್ವಜನಿಕರ ಬೇಡಿಕೆಯಾದ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸುವ ಬೇಡಿಕೆಗೂ ಈಗ ಬಲ ಬಂದಂತಾಗಿದೆ. ಇದಕ್ಕಾಗಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News