ಕಾಂಗ್ರೆಸ್ ಪಕ್ಷ ದೇಶದ ಸರ್ವಸ್ವ: ಟಿ.ಸಿದ್ದೀಕ್

Update: 2022-01-07 17:43 GMT

ಬಂಟ್ವಾಳ, ಜ.7: ಕಾಂಗ್ರೆಸ್ ಪಕ್ಷ ದೇಶದ ಸರ್ವಸ್ವವಾಗಿದ್ದು ದೇಶದಲ್ಲಿ ಸಂವಿಧಾನ, ಜಾತ್ಯತೀತ ಸಿದ್ಧಾಂತ ಇನ್ನೂ ಬಲಿಷ್ಠವಾಗಿದ್ದರೆ ಅದು ಈ ದೇಶಕ್ಕೆ ಕಾಂಗ್ರೆಸ್ ನೀಡಿದ ಮಹಾ ಕೊಡುಗೆಯಾಗಿದೆ ಎಂದು ಕೇರಳ ಕಲ್ಪೆಟ್ಟ ಶಾಸಕ, ಕೆಪಿಸಿಸಿ ಕಾರ್ಯಧ್ಯಕ್ಷ ಅಡ್ವಕೇಟ್ ಟಿ.ಸಿದ್ದೀಕ್ ಹೇಳಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಾಣೆಮಂಗಳೂರು ಸಾಗರ್ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ನಡೆದ‌ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ ನಾವು ಉತ್ತರಿಸುವ ಅಗತ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದೇ ಕಾಂಗ್ರೆಸ್. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೊದಲಾದ ಮಹಾನ್ ನಾಯಕರ ಸಮೂಹವನ್ನು ಈ ದೇಶಕ್ಕೆ ಕೊಟ್ಟಿರುವುದು ಕಾಂಗ್ರೆಸ್ ಆಗಿದೆ ಎಂದರು.

ದೇಶದಲ್ಲಿರುವ ಪ್ರಮುಖ ಅಣೆಕಟ್ಟುಗಳು, ಅಣುಸ್ಥಾವರಗಳು, ಕೃಷಿಕ್ರಾಂತಿ, ನರೇಗಾ, ಆಹಾರ ಭದ್ರತೆ, ವಿಮಾನ ನಿಲ್ದಾಣ, ರೈಲ್ವೆ, ಬಂದರುಗಳು, ರಾಷ್ಟ್ರೀಕರಣ, ಆರ್.ಟಿ.ಐ., ಆರ್.ಟಿ.ಇ. ಹೀಗೆ ಸಾಲು ಸಾಲು ಜನಪರ ಕಾಯ್ದೆಗಳು, ಸಂಸ್ಥೆಗಳನ್ನು ಕಾಂಗ್ರೆಸ್ ಈ ದೇಶಕ್ಕೆ ಕೊಟ್ಟಿದೆ. ಇವುಗಳನ್ನೆಲ್ಲ ಉಪಯೋಗಿಸಿ ಇಂದು ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ 70 ವರ್ಷದಲ್ಲಿ ದೇಶಕ್ಕೆ ನೀಡಿದ ಸಂಪತ್ತನ್ನು 7 ವರ್ಷದಲ್ಲಿ ಮಾರಾಟ ಮಾಡಿರುವುದೇ ಬಿಜೆಪಿಯ ಅತ್ಯಮೂಲ್ಯ ಸಾಧನೆ ಎಂದು ಅವರು ವ್ಯಂಗ್ಯವಾಡಿದರು.

ಸರ್ವ ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳನ್ನು ಒಂದುಗೂಡಿಸಿ ಕಾಂಗ್ರೆಸ್ ನಿರ್ಮಿಸಿದ ಬಲಿಷ್ಠ ಸೌಹಾರ್ದ ಭಾರತವನ್ನು ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಹಗೆತನ, ದ್ವೇಷ, ಕಂದಕವನ್ನು ಸೃಷ್ಟಿಸಿ ದೇಶವನ್ನು ವಿಭಜಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ದೇಶವನ್ನು ನರಕವನ್ನಾಗಿ ಮಾಡಲು ಹೊರಟಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ದೇಶ ಇನ್ನಷ್ಟು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಗಿದೆ. ಹಾಗಾಗಿ ಬಿಜೆಪಿಯಿಂದ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು.

ಕೋಮುವಾದ ದೇಶಕ್ಕೆ ಮಾರಕವಾಗಿದೆ. ಆರೆಸ್ಸೆಸ್, ಬಿಜೆಪಿ, ಎಸ್.ಡಿ.ಪಿ.ಐ. ಸಮಾನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೆಸ್ಸೆಸ್, ಎಸ್.ಡಿ.ಪಿ.ಐ. ಶಾಂತಿ, ಸೌಹಾರ್ದ, ಸಹೋದರತೆಯಿಂದ ಬಾಳುವ ಜನರ ನಡುವೆ ಕ್ರೂರತೆಯನ್ನು ತರುತ್ತಿದೆ. ವಿಭಜಿಸುವ ಕೆಲಸ ಅವರಿಂದ ನಡೆಯುತ್ತಿದ್ದರೆ, ಒಂದುಗೂಡಿಸುವ ಕೆಲಸ ಕಾಂಗ್ರೆಸ್ ನಿಂದ ಆಗಬೇಕು. ಅದಕ್ಕಾಗಿ ಆರೆಸ್ಸೆಸ್, ಎಸ್.ಡಿ.ಪಿ.ಐ. ಅನ್ನು ಬಲಹೀನಗೊಳಿಸಲು ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಈ ಮಣ್ಣಿನ ಜಾತ್ಯಾತೀತ ಸಿದ್ಧಾಂತದ ರಕ್ಷಕ. ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಸಮಾವೇಶಕ್ಕೆ ನಾನು ನನ್ನ ಎಲ್ಲಾ ಕೆಲಸ ಕಾರ್ಯಗಳಿಗೆ ಬಿಡುವು ನೀಡಿ ಬಂದಿದ್ದೇನೆ. ಜಾತ್ಯಾತೀತ ಸಿದ್ಧಾಂತ ಇನ್ನೂ ಈ ಮಣ್ಣಿನಲ್ಲಿ ಉಳಿಯಬೇಕಾದರೆ ರಮಾನಾಥ ರೈ ರಾಜಕೀಯವಾಗಿ ಉಳಿಯಬೇಕು. ಒಂದೇ ಒಂದು ಮತಗಳು ವಿಭಜನೆ ಆಗದಂತೆ ಅಲ್ಪಸಂಖ್ಯಾತ ನಾಯಕರು ಕಾರ್ಯಪ್ರವೃತ್ತರಾಗಬೇಕು ಎಂದು ಟಿ.ಸಿದ್ದೀಕ್ ಹೇಳಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ. ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ನೆಲೆಯಾಗಿದೆ. ಜಾತಿ, ಧರ್ಮಗಳ ನಡುವೆ ದ್ವೇಷ, ಅಪನಂಬಿಕೆ ಸೃಷ್ಟಿಸುವ ರಾಜಕೀಯದಿಂದ ಕಾಂಗ್ರೆಸ್ ಗೆ ಸೋಲಾಗಿರಬಹುದು. ಕೋಮುವಾದಿ, ಮತೀಯವಾದಿಗಳಿಗೆ ಇದು ತಾತ್ಕಾಲಿಕ ಜಯ ಅಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ನೆಲೆಯೂರಲಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಭಿವೃದ್ಧಿಯ ಬಗ್ಗೆ ಗಮನ ಹರಿಸದೆ ಕೇವಲ ಭಾವನಾತ್ಮಕ ವಿಷಯವನ್ನು ಮುಂದಿಟ್ಟು ಓಟು ಪಡೆಯುತ್ತಿವೆ. ದೇಶದಲ್ಲಿ ಬಲಿಷ್ಠವಾಗಿರುವ ಕೋಮುವಾದಿ, ಮತೀಯವಾದಿ ಶಕ್ತಿಗಳನ್ನು ಸೋಲಿಸಲು ಅಷ್ಟೇ ಬಲಿಷ್ಠವಾದ ಜಾತ್ಯಾತೀತ ಶಕ್ತಿಯ ಅಗತ್ಯವಿದೆ. ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಮಾಡುವ ಕೆಲಸ ಆಗಬೇಕು ಎಂದರು.

ಇಂದು ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆ ಕೂಗುತ್ತಿದೆ. ಆದರೆ ಅದು ಕೇವಲ ಘೋಷಣೆಯಾಗಿ ಉಳಿದಿದೆ. ದೇಶದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಶ್ ಆಗಿದ್ದರೆ ಅದು ಕಾಂಗ್ರೆಸ್ ಆಡಳಿತದಲ್ಲಿ. ಮುಂದೆಯೂ ಕಾಂಗ್ರೆಸ್ ನಿಂದ ಮಾತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಶ್ ಸಾಧ್ಯ. ದೇಶದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಆಗದಂತೆ ಎಚ್ಚರವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಮಾನಾಥ ರೈ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ‌.ಕೆ.ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿಸೋಜ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಸುರೈಯ್ಯ ಅಂಜುಮ್ ಮಾತನಾಡಿದರು.

ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಿಯೋಜಿತ ಅಧ್ಯಕ್ಷರಾದ ಅರ್ಶದ್ ಸರವು, ಕೆ.ಮುಹಮ್ಮದ್ ಶರೀಫ್ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಇವರಿಗೆ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. 

ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ‌.ಬಾವಾ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲ್, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಚೋರ, ರಾಜ್ಯ ಅಲ್ಪಸಂಖ್ಯಾತ ಘಟಕದ ಸಂಯೋಜಕ ಮುಹಮ್ಮದ್ ನಂದರಬೆಟ್ಟು, ಆಲ್ಬರ್ಟ್ ಮಿನೇಜಸ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸಹಕಾರಿ ಸಂಘ ಒಕ್ಕೂಟದ ಜಿಲ್ಲಾಧ್ಯಕ್ಷ ಸುದರ್ಶನ್ ಜೈನ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಇದಿನಬ್ಬ ಕಲ್ಲಡ್ಕ, ಅರ್ಷದ್ ವರ್ಕಾಡಿ, ಮಾಯಿಲಪ್ಪ ಸಾಲ್ಯಾನ್, ಉದ್ಯಮಿಗಳಾದ ಹಾಜಿ ಪಿ.ಎಸ್.ಅಬ್ದುಲ್ ಹಮೀದ್, ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಇಸ್ಮಾಯೀಲ್ ಸಿದ್ದೀಕ್ ಕಾವಳಕಟ್ಟೆ, ಬಂಟ್ವಾಳ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಮುಹಮ್ಮದ್ ಸಂಗಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಿಯಾಝ್ ಬಂಟ್ವಾಳ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News