ಸಾಹಿತಿ ಎನ್.ಎಸ್. ದೇವಿಪ್ರಸಾದ್ ಸಂಪಾಜೆ ನಿಧನ

Update: 2022-01-10 09:09 GMT

ಸುಳ್ಯ, ಜ.10: ಹಿರಿಯ ಸಾಹಿತಿ, ಸಿನಿಮಾ ನಿರ್ಮಾಪಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್(79) ಸಂಪಾಜೆಯಲ್ಲಿರುವ ಸ್ವಗೃಹದಲ್ಲಿಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಅವರು ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು.

ಜ.3 ರಂದು ಸುಳ್ಯದ ಅಮರ ಶ್ರೀ ಭಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು 2019-20ನೇ ಸಾಲಿನ ಕರ್ನಾಟಕ ಅರೆಭಾಷೆ ಅಕಾಡಮಿಯ ಗೌರವ ಪ್ರಶಸ್ತಿ ಸ್ವೀಕರಿಸಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ‌ ಮತ್ತು ಸಾಹಿತ್ಯ ಅಕಾಡಮಿಯ ಪ್ರಥಮ ಅಧ್ಯಕ್ಷರಾಗಿದ್ದ ಎನ್.ಎಸ್.ದೇವಿಪ್ರಸಾದ್ ಸಾಹಿತಿಯಾಗಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದರು.

ಸಂಘಟಕರಾಗಿ, ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕೇಸ್ತರರಾಗಿದ್ದರು.

ಸಂಪಾಜೆಯಲ್ಲಿ ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರಗಳ ಬೆಳವಣಿಗೆಗೆ ದೇವಿಪ್ರಸಾದ್ ಕೊಡುಗೆ ಅಪಾರವಾಗಿತ್ತು. ಸಂಪಾಜೆಯಲ್ಲಿ ಲಯನ್ಸ್  ಕ್ಲಬ್ ಸ್ಥಾಪನೆಗೂ ದೇವಿಪ್ರಸಾದ್ ಕಾರಣರಾಗಿದ್ದರು. ಸಾಹಿತ್ಯ ಅಭಿಮಾನಿಯಾಗಿದ್ದ ಲೇಖಕರು ಆಗಿದ್ದ ದೇವಿಪ್ರಸಾದ್ ಮನೆ ಅಪೂರ್ವ ಗ್ರಂಥಾಲಯವನ್ನು ಹೊಂದಿತ್ತು.
ದೇವಿ  ಪ್ರಸಾದ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ , ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗಳು ಸಂದಿವೆ.
ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡಮಿ ವತಿಯಿಂದ ದೇವಿಪ್ರಸಾದ್ ಕುರಿತ ಸಾಕ್ಷ್ಯಚಿತ್ರ ನಿರ್ಮಾಣಗೊಂಡಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News